ನವದೆಹಲಿ, ಜ. 11: ಇನ್ನೆರಡು ವರ್ಷ ನೀವು ವಿವೊ ಐಪಿಎಲ್ (Vivo IPL) ಇರಲ್ಲ. ಟಾಟಾ ಐಪಿಎಲ್ ಪ್ರತ್ಯಕ್ಷವಾಗುತ್ತಿದೆ. ಕಾರಣ, ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಾಯೋಜಕತ್ವದಿಂದ (IPL Title Sponsorship) ಚೀನಾದ ಮೊಬೈಲ್ ತಯಾರಕ ಸಂಸ್ಥೆ ವಿವೋ (Vivo) ಹಿಂದೆ ಸರಿದಿದೆ. ದೇಶದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದೆನಿಸಿದ ಟಾಟಾ ಗ್ರೂಪ್ಗೆ (Tata Group) ಐಪಿಎಲ್ ಸ್ಪಾನ್ಸರ್ಶಿಪ್ ಹಕ್ಕನ್ನು ವಿವೊ ಬಿಟ್ಟುಕೊಟ್ಟಿದೆ. ಈ ಸೀಸನ್ ಐಪಿಎಲ್ ಶೀರ್ಷಿಕೆಗೆ (IPL title sponsor) ಟಾಟಾ ಪ್ರಮುಖ ಸ್ಪಾನ್ಸರ್ ಆಗಲಿದೆ. ಈ ಒಂದು ಸೀಸನ್ನಲ್ಲಿ ಐಪಿಎಲ್ ಟಾಟಾ ಐಪಿಎಲ್ (Tata Indian Premier League) ಎಂದು ಕರೆಯಲ್ಪಡುತ್ತದೆ.
ಬೇರೆ ಬೇರೆ ಕಾರಣದಿಂದ ವಿವೋ ಸಂಸ್ಥೆ ಐಪಿಎಲ್ ಸ್ಪಾನ್ಸರ್ಶಿಪ್ನಿಂದ ಹಿಂದಕ್ಕೆ ಸರಿದಿದೆ. 2018ರಿಂದ 2022ರವರೆಗೆ ಐಪಿಎಲ್ ಟೈಟಲ್ ಸ್ಪಾನ್ಸರ್ಶಿಪ್ ಅನ್ನು ವಿವೋ ಸಂಸ್ಥೆ 2,200 ಕೋಟಿ ರೂ ಕೊಟ್ಟು ಖರೀದಿಸಿತ್ತು. ಆದರೆ, 2020ರಲ್ಲಿ ಚೀನಾ ಗಡಿ ಸಮೀಪದ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಮಾರಣಾಂತಿಕ ಹಲ್ಲೆ ಎಸಗಿದ ಘಟನೆ ಹಿನ್ನೆಲೆಯಲ್ಲಿ ಚೀನೀ ಕಂಪನಿ ವಿವೊ ಐಪಿಎಲ್ ಪ್ರಾಯೋಜಕತ್ವದ ವಿರುದ್ಧ ಟೀಕೆಗಳು ಕೇಳಿಬಂದವು. ಅದರ ಬೆನ್ನಲ್ಲೇ ವಿವೋ ಒಂದು ವರ್ಷ ಐಪಿಎಲ್ ಟೈಟಲ್ ಸ್ಪಾನ್ಸರ್ಶಿಪ್ನಿಂದ ಹಿಂದಕ್ಕೆ ಸರಿಯಿತು. ಡ್ರೀಮ್11 (Dream11) ಸಂಸ್ಥೆ ಆ ವರ್ಷದ ಟೈಟಲ್ ಸ್ಪಾನ್ಸರ್ ಆಯಿತು.
2021ರಲ್ಲಿ, ಅಂದರೆ ಕಳೆದ ಬಾರಿ ನಡೆದ ಐಪಿಎಲ್ನಲ್ಲಿ ವಿವೋ ಮತ್ತೊಮ್ಮೆ ಸ್ಪಾನ್ಸರ್ಶಿಪ್ ಹಕ್ಕು ಪಡೆಯಿತು. ಆದರೆ, ವಿವೊ ಉಪಸ್ಥಿತಿಯಿಂದ ಐಪಿಎಲ್ನ ಬ್ರ್ಯಾಂಡ್ ಇಮೇಜಿಗೆ ಹೊಡೆತಬಿದ್ದಿತ್ತು. ವಿವೊಗೂ ನೆಗಟಿವ್ ಪ್ರಚಾರ ಸಿಕ್ಕಿತು. ಹೀಗಾಗಿ, ವಿವೋ ಐಪಿಎಲ್ ಪ್ರಾಯೋಜಕತ್ವವನ್ನು ಬಿಟ್ಟುಕೊಡಲು ನಿರ್ಧರಿಸಿತು ಎನ್ನಲಾಗಿದೆ.
ಇದನ್ನೂ ಓದಿ: IPL 2022: ಕೋವಿಡ್ ಕಾರಣಕ್ಕೆ ಭಾರತದಲ್ಲಿ ಐಪಿಎಲ್ ಅಸಾಧ್ಯವಾದಲ್ಲಿ ಬಿಸಿಸಿಐ ಬಳಿ ಇದೆ ಪ್ಲಾನ್ ಬಿ
ಸ್ಪಾನ್ಸರ್ಶಿಪ್ ಹಕ್ಕನ್ನು ಟಾಟಾ ಸಂಸ್ಥೆಗೆ ಹಸ್ತಾಂತರಿಸಲು ವಿವೋ ನಿರ್ಧರಿಸಿ ಐಪಿಎಲ್ ಆಡಳಿತ ಮಂಡಳಿಗೆ ಮನವಿ ಮಾಡಿತ್ತು. ಇಂದು ನಡೆದ ಐಜಿಸಿ (IPL Governing Council) ಸಭೆಯಲ್ಲಿ ಇದಕ್ಕೆ ಸಮ್ಮತಿ ಕೂಡ ಸಿಕ್ಕಿದೆ. ಈ ಬಗ್ಗೆ ಮಾತನಾಡಿದ ಐಪಿಎಲ್ ಛೇರ್ಮನ್ ಹಾಗೂ ಕರ್ನಾಟಕದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಬ್ರಿಜೇಶ್ ಪಟೇಲ್ (IPL Chairman Brijesh Patel), ಮುಂದಿನ ವರ್ಷದ ಐಪಿಎಲ್ ಟೈಟಲ್ ಸ್ಪಾನ್ಸರ್ಶಿಪ್ ಅನ್ನು ವಿವೊ ಬದಲು ಟಾಟಾ ಗ್ರೂಪ್ ಮಾಡಲಿದೆ ಎಂದು ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಸಿಸಿಐಗೆ ನಷ್ಟವಿಲ್ಲ:
ವಿವೊ ಸಂಸ್ಥೆ ತನ್ನ ಪ್ರಾಯೋಕತ್ವದ ಹಕ್ಕನ್ನು ಟಾಟಾಗೆ ಹಸ್ತಾಂತರಿಸಿರುವುದರಿಂದ ಬಿಸಿಸಿಐಗೆ ನಷ್ಟ ಆಗುವುದಿಲ್ಲ. ಅದಕ್ಕೆ ವರ್ಷದಲ್ಲಿ ಬರಬೇಕಿರುವ ಹಣ ಸಂದಾಯ ಆಗಲಿದೆ. ಈ ಒಂದು ವರ್ಷದ ಐಪಿಎಲ್ ಟೈಟಲ್ ಸ್ಪಾನ್ಸರ್ಶಿಪ್ ಹಕ್ಕಿಗೆ ಟಾಟಾ ಗ್ರೂಪ್ 440 ಕೋಟಿ ರೂ ಕೊಡಲಿದೆ.
ಇದನ್ನೂ ಓದಿ: Harbhajan Singh: ಇಂದಿನಿಂದ 3ನೇ ಟೆಸ್ಟ್: ಕೊಹ್ಲಿ, ಪೂಜಾರ, ರಹಾನೆ ಬಗ್ಗೆ ಹರ್ಭಜನ್ ಅನಿಸಿಕೆ ಇದು
ಸ್ಪಾನ್ಸರ್ಶಿಪ್ ದುಡ್ಡಿನಲ್ಲಿ ಐಪಿಎಲ್ ತಂಡಗಳಿಗೂ ಪಾಲು:
ಪ್ರಾಯೋಜಕತ್ವದ ಹಕ್ಕಿನ ಮಾರಾಟದಿಂದ ಬಂದ ಹಣದಲ್ಲಿ ಶೇ. 50ರಷ್ಟು ಮೊತ್ತ ಬಿಸಿಸಿಐ ಖಜಾನೆಗೆ ಸೇರುತ್ತದೆ. ಉಳಿದ ಹಣವನ್ನು ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೂ ಹಂಚುತ್ತದೆ.
ಮುಂದಿನ ವರ್ಷದಿಂದ, ಅಂದರೆ 2023ರಿಂದ ಮುಂದಿನ ಐದು ವರ್ಷದ ಐಪಿಎಲ್ ಪ್ರಾಯೋಜಕತ್ವದ ಹಕ್ಕಿಗೆ ಬಿಸಿಸಿಐ ಹೊಸದಾಗಿ ಬಿಡ್ಗಳನ್ನ ಕರೆಯಲಿದೆ ಎಂದು ಮೂಲಗಳು ಹೇಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ