ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ತಂಡದ ಆಟಗಾರರಿಗೆ ಸದಾ ಸ್ಪಂದಿಸುವ ವ್ಯಕ್ತಿ. ಆದರೆ ವೈಯಕ್ತಿಕ ಬದುಕಿನ ವಿಚಾರಕ್ಕೆ ಬಂದರೆ ಸಹ ಆಟಗಾರರಿಂದ ಧೋನಿ ತುಸು ದೂರವೇ. ಆದರೆ, ಧೋನಿ ಜೊತೆ ವೈಯಕ್ತಿಕ ಬದುಕಿನಲ್ಲಿ ಆಪ್ತವಾಗಿರುವ ಏಕೈಕ ಕ್ರಿಕೆಟಿಗ ಯಾರೆಂದರೆ ಅದು ಸುರೇಶ್ ರೈನಾ ಮಾತ್ರವೇ. 40 ವರ್ಷದ ಮಹೇಂದ್ರ ಸಿಂಗ್ ಧೋನಿ ಮತ್ತು 34 ವರ್ಷದ ಸುರೇಶ್ ರೈನಾ ಒಟ್ಟಿಗೆ ಹಲವು ವರ್ಷಗಳು ಕ್ರಿಕೆಟ್ ಆಡಿದ್ದಾರೆ. ಇಬ್ಬರ ನಡುವಿನ ಸಂಬಂಧ ಗಾಢವಾದುದು. ಅದು ಗುರು ಶಿಷ್ಯನ ಸಂಬಂಧವಾ ಅಥವಾ ಆಪ್ತ ಸ್ನೇಹಿತರ ಸಂಬಂಧವಾ ಗೊತ್ತಿಲ್ಲ. ಆದರೆ, ಆಟ ಮತ್ತು ಆಟದಾಚೆ ಇಬ್ಬರ ನಡುವೆ ಅನ್ಯೋನ್ಯತೆ ಇರುವುದಕ್ಕೆ ಹಲವು ನಿದರ್ಶನಗಳಿವೆ. ಸಾಕ್ಷಿ ಧೋನಿ ತಾನು ಗರ್ಭಿಣಿಯಾದ ವಿಚಾರವನ್ನು ಮೊದಲು ಹೇಳಿದ್ದು ಸುರೇಶ್ ರೈನಾಗೆ ಅಂತೆ. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಧೋನಿ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಆದ್ದರಿಂದ ರೈನಾರನ್ನ ಸಂಪರ್ಕಿಸಿ ಪ್ರೆಗ್ನೆಂಟ್ ಆಗಿರುವ ವಿಚಾರವನ್ನ ಧೋನಿಗೆ ತಿಳಿಸುವಂತೆ ಸಾಕ್ಷಿ ಹೇಳಿದ್ದರು. ಇದು ಧೋನಿ ಮತ್ತು ರೈನಾ ನಡುವೆ ವೈಯಕ್ತಿಕ ಬದುಕಿನಲ್ಲೂ ಆಪ್ತತೆ ಇರುವುದಕ್ಕೆ ಒಂದು ಸಾಕ್ಷಿ.
ಹಾಗೆಯೇ, ಎಂಎಸ್ ಧೋನಿ ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬೆನ್ನಲ್ಲೇ ಸುರೇಶ್ ರೈನಾ ಕೂಡ ರಿಟೈರ್ಮೆಂಟ್ ಘೋಷಿಸಿದ್ದರು. ಪ್ರತೀ ಹಂತದಲ್ಲೂ ಧೋನಿ ಜೊತೆ ಇರಬೇಕೆಂದು ರೈನಾ ಬಯಸುತ್ತಲೇ ಬಂದಿದ್ದಾರೆ. ಔಟ್ ಆಫ್ ಫಾರ್ಮ್ನಲ್ಲಿರುವ ಸುರೇಶ್ ರೈನಾ ಯಾವಾಗ ಐಪಿಎಲ್ನಿಂದಲೂ ನಿವೃತ್ತರಾಗುತ್ತಾರೆ ಎಂಬ ಪ್ರಶ್ನೆಗೂ ಧೋನಿಯ ಹೆಸರೇ ಬರುತ್ತದೆ. ಎಂಎಸ್ ಧೋನಿ ಎಲ್ಲಿಯವರೆಗೆ ಐಪಿಎಲ್ ಆಡುತ್ತಾರೋ ಅಲ್ಲಿವರೆಗೆ ನಾನೂ ಆಡುತ್ತೇನೆ. ಅವರು ಆಟ ನಿಲ್ಲಿಸಿದ ಕೂಡಲೇ ನಾನೂ ನಿಲ್ಲಿಸುತ್ತೇನೆ ಎಂದು ಈ ಐಪಿಎಲ್ ಸೀಸನ್ ಶುರುವಾಗುವ ಮುನ್ನವೇ ಸುರೇಶ್ ರೈನಾ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
“ನಾನಿನ್ನೂ ನಾಲ್ಕೈದು ವರ್ಷ ಕ್ರಿಕೆಟ್ ಆಡಬಲ್ಲೆ. ಈ ವರ್ಷ ಐಪಿಎಲ್ ನಂತರ ಮುಂದಿನ ವರ್ಷ ಇನ್ನೂ ಎರಡು ಹೊಸ ತಂಡ ಬರುತ್ತವೆ. ನಾನು ಕೊನೆಯವರೆಗೆ ಸಿಎಸ್ಕೆ ಜೊತೆ ಮಾತ್ರ ಆಡುತ್ತೇನೆ ಎನಿಸುತ್ತದೆ. ಈ ವರ್ಷ ನಾವು ಉತ್ತಮ ಪ್ರದರ್ಶನ ತೋರುವ ವಿಶ್ವಾಸ ಇದೆ” ಎಂದು ಜುಲೈ ತಿಂಗಳಲ್ಲಿ ಸುರೇಶ್ ರೈನಾ ಹೇಳಿದ್ದರು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ 9ನೇ ಬಾರಿಗೆ ಐಪಿಎಲ್ ಫೈನಲ್ಗೆ ಲಗ್ಗೆ ಇಟ್ಟಿದೆ.
“ಧೋನಿ ಭಾಯ್ ಮುಂದಿನ ಸೀಸನ್ನ ಐಪಿಎಲ್ ಆಡದಿದ್ದರೆ ನಾನೂ ಆಡುವುದಿಲ್ಲ. ನಾವಿಬ್ಬರೂ 2008ರಿಂದಲೂ ಸಿಎಸ್ಕೆಯಲ್ಲಿ ಒಟ್ಟಿಗೆ ಆಡುತ್ತಿದ್ದೇವೆ. ಈ ವರ್ಷ ನಾವು ಕಪ್ ಗೆದ್ದರೆ ಮುಂದಿನ ವರ್ಷವೂ ಆಡುವಂತೆ ಅವರ ಮನವೊಲಿಸಲು ಪ್ರಯತ್ನಿಸುತ್ತೇನೆ. ಆದರೆ, ಅವರು ಆಡಲಿಲ್ಲವೆಂದರೆ ನಾನೂ ಆಡುವುದಿಲ್ಲ. ಯಾವ ತಂಡದಲ್ಲೂ ಆಡುವುದಿಲ್ಲ” ಎಂದು ರೈನಾ ಹೇಳಿದ್ದರು. ಈ ಮೂಲಕ ಎಂಎಸ್ ಧೋನಿ ಅವರು ಮುಂದಿನ ವರ್ಷ ಐಪಿಎಲ್ ಆಡದೇ ಇರುವ ಸಾಧ್ಯತೆ ಬಗ್ಗೆ ರೈನಾ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: Bad Umpiring- ಒಬ್ಬರೇ ಅಂಪೈರ್, ಮೂರು ತಪ್ಪು; ವಿರಾಟ್ ಕೊಹ್ಲಿ ಕೆರಳಿದ ವಿಡಿಯೋ
ಎಂಎಸ್ ಧೋನಿ ಅವರೂ ಕೂಡ ಹೆಚ್ಚೆಂದರೆ ಮುಂದಿನ ಒಂದು ವರ್ಷ ಮಾತ್ರ ಐಪಿಎಲ್ ಆಡುವುದಾಗಿ ಸುಳಿವು ನೀಡಿದ್ಧಾರೆ. “ನೀವು ಮುಂದಿನ ಸೀಸನ್ನಲ್ಲಿ ನನ್ನನ್ನು ನೋಡಬಹುದು. ಆದರೆ, ಸಿಎಸ್ಕೆಗೆ ಆಡುತ್ತೇನೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಎರಡು ಹೊಸ ತಂಡಗಳು ಬರುತ್ತಿರುವುದರಿಂದ ಹೊಸ ನಿಯಮಗಳು ಇತ್ಯಾದಿ ಬರಬಹುದು. ಹೀಗಾಗಿ ಎಲ್ಲವೂ ಅನಿಶ್ಚಿತವಾಗಿದೆ” ಎಂದು ಲೀಗ್ ಹಂತದ ಪಂದ್ಯವೊಂದರ ಸಂದರ್ಭ ಧೋನಿ ತಿಳಿಸಿದ್ದರು.
ಸುರೇಶ್ ರೈನಾ ಕೇವಲ ಎಂಎಸ್ ಧೋನಿ ಕೃಪೆಯಲ್ಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಬಂದವರಲ್ಲ. ಅತಿ ಹೆಚ್ಚು ಟಿ20 ಪಂದ್ಯಗಳನ್ನ ಆಡಿರುವ ಭಾರತೀಯ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ಇತ್ತೀಚಿನ ಕೆಲ ವರ್ಷಗಳಿಂದ ಅವರು ಫಾರ್ಮ್ ಕಳೆದುಕೊಂಡಿದ್ದಾರೆ. ಅದು ಬಿಟ್ಟರೆ ಟಿ20 ಕ್ರಿಕೆಟ್ನಲ್ಲಿ ರೈನಾ ಹಲವು ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಗೇಮ್ ಚೇಂಜರ್ ಆಗಿದ್ದವರು. ಐಪಿಎಲ್ನಲ್ಲಿ ಧೋನಿ ನೆರಳಿನಲ್ಲೇ ಇದ್ದರೂ ಎರಡು ಸೀಸನ್ನಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕನಾಗಿ ಛಾಪು ಮೂಡಿಸಿದವರು. 2015ರಲ್ಲಿ ಪ್ರಿಯಾಂಕಾ ಚೌಧರಿ ಅವರನ್ನ ವಿವಾಹವಾಗಿರುವ ಸುರೇಶ್ ರೈನಾಗೆ ಇಬ್ಬರು ಮಕ್ಕಳಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ