IPL 2021- ಇಂದು ಎರಡು ಬಿಗ್ ಮ್ಯಾಚ್; ಕೆಕೆಆರ್, ಆರ್ಸಿಬಿ, ಮುಂಬೈಗೆ ಮಹತ್ವದ ಪಂದ್ಯಗಳು
IPL 2021, 38th and 39th Matches- ಇಂದು ಭಾನುವಾರ ಮಧ್ಯಾಹ್ನ 3:30ಕ್ಕೆ ಅಬುಧಾಬಿಯಲ್ಲಿ ಚೆನ್ನೈ ಮತ್ತು ಕೋಲ್ಕತಾ ಮುಖಾಮುಖಿಯಾಗಲಿವೆ. ಸಂಜೆ 7:30ಕ್ಕೆ ದುಬೈನಲ್ಲಿ ಬೆಂಗಳೂರು ಹಾಗೂ ಮುಂಬೈ ಎದಿರುಬದಿರಾಗಲಿವೆ.
ಅಬುಧಾಬಿ, ಸೆ. 26: ಇಂದು ಸೂಪರ್ ಸಂಡೇ ಆಗಿದ್ದು, ಎರಡು ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಅಬುಧಾಬಿ ಮತ್ತು ದುಬೈನಲ್ಲಿ ಐಪಿಎಲ್ 2021ನ 38 ಮತ್ತು 39ನೇ ಪಂದ್ಯಗಳು ನಡೆಯುತ್ತಿವೆ. ಮಧ್ಯಾಹ್ನ 3:30ಕ್ಕೆ ಅಬುಧಾಬಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮಧ್ಯೆ ಪಂದ್ಯ ಇದೆ. ಸಂಜೆ 7:30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ಆರಂಭವಾಗುತ್ತದೆ. ಈ ಸೀಸನ್ನ 9-10 ಸುತ್ತುಗಳು ಮುಗಿಯುತ್ತಾ ಬಂದಿದ್ದು, ಎಲ್ಲಾ ತಂಡಗಳಿಗೂ ಕೆಲವೇ ಪಂದ್ಯಗಳು ಮಾತ್ರ ಬಾಕಿ ಇವೆ. ಹೀಗಾಗಿ, ಮುಂದಿನ ಒಂದೊಂದು ಪಂದ್ಯವೂ ಬಹುತೇಕ ನಿರ್ಣಾಯಕ ಎನಿಸಲಿವೆ. ಎರಡನೇ ಸ್ಥಾನದಲ್ಲಿ ಸುಭದ್ರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೊಂದು ಪಂದ್ಯ ಗೆದ್ದರೂ ಬಹುತೇಕ ಪ್ಲೇ ಆಫ್ ಚಾನ್ಸ್ ಗಟ್ಟಿಗೊಂಡಂತೆಯೇ. ಆದರೆ, ಉಳಿದ ಮೂರು ತಂಡಗಳು ಪ್ಲೇ ಆಫ್ಗಾಗಿ ಬಹಳಷ್ಟು ಹೆಣಗಾಡಬೇಕಾದ ಪರಿಸ್ಥಿತಿ ಇದೆ.
ಸಿಎಸ್ಕೆ ವರ್ಸಸ್ ಕೆಕೆಆರ್ ಬಿಗ್ ಫೈಟ್: ಅಬುಧಾಬಿಯಲ್ಲಿ ನಡೆಯುವ ಈ 38ನೇ ಪಂದ್ಯ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಹಳ ಮಹತ್ವದ್ದು. 9 ಪಂದ್ಯಗಳಿಂದ 8 ಅಂಕ ಹೊಂದಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಸದ್ಯ ಫೀನಿಕ್ಸ್ನಂತೆ ಮೇಲೇರುತ್ತಿದೆಯಾದರೂ ಪ್ಲೇ ಆಫ್ ಪ್ರವೇಶ ಖಾತ್ರಿಪಡಿಸಿಕೊಳ್ಳುವ ಹಾದಿ ದೂರವೇ ಇದೆ. ಯುಎಇಗೆ ಕಾಲಿಡುವ ಮೊದಲು 7ನೇ ಸ್ಥಾನದಲ್ಲಿದ್ದ ಕೆಕೆಆರ್ ಇದೀಗ ನಾಲ್ಕನೇ ಸ್ಥಾನದಲ್ಲಿ ಕೂತಿದೆ. ಅದರ ಬ್ಯಾಟಿಂಗ್ ಮತ್ತು ಬೌಲಿಂಗ್ ಒಳ್ಳೆಯ ಲಯಕ್ಕೆ ಬಂದಿದೆ.
ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಸತತ ಎರಡು ಗೆಲುವಿನ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಮುಂದುವರಿದಿದೆ. ಧೋನಿ ನೇತೃತ್ವದಲ್ಲಿ ಸಿಎಸ್ಕೆ ತಂಡ ಮುಂಬೈ ಹಾಗೂ ಆರ್ಸಿಬಿಯನ್ನ ಬಗ್ಗುಬಡಿದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಅದರ ಬ್ಯಾಟರ್ಸ್ ಮತ್ತು ಬೌಲರ್ಸ್ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ ಒಳ್ಳೆಯ ಫಾರ್ಮ್ನಲ್ಲಿರುವ ಎರಡು ತಂಡಗಳ ನಡುವಿನ ಹಣಾಹಣಿ ರೋಚಕತೆಯಿಂದ ಕೂಡಿರುವ ನಿರೀಕ್ಷೆ ಇದೆ.
ಈ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ್ದು ವಿಚಿತ್ರ ಸ್ಥಿತಿ ಇದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಮುಂಬೈ ತಂಡವನ್ನ ಈ ಸ್ಥಿತಿಯಲ್ಲಿ ನಾವು ನೋಡುವುದು ಬಹಳ ಅಪರೂಪವೇ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಎಂಐ ತಂಡ ಯುಎಇಯಲ್ಲಿ ಅದೇಕೋ ಮಂಕಾಗಿದೆ. ಮುಂಬೈನ ಬ್ಯಾಟರ್ಸ್ ಸ್ಟ್ರೋಕ್ ಪ್ಲೇಗೆ ಹೆಸರುವಾಸಿ, ಇವರು ಬಿಗ್ ಹಿಟ್ಟರ್ಸ್. ಆದರೆ, ಇಲ್ಲಿಯ ಪಿಚ್ಗಳಲ್ಲಿ ಶಾಟ್ ಹೊಡೆಲು ಹೆಚ್ಚು ಅವಕಾಶ ಸಿಗುತ್ತಿಲ್ಲ. ಇದು ಮುಂಬೈ ಇಂಡಿಯನ್ಸ್ ತಂಡ ನಿರಾಶದಾಯಕ ಪ್ರದರ್ಶನಕ್ಕೆ ಕಾರಣ ಇರಬಹುದು ಎಂದು ತರ್ಕಿಸಲಾಗಿದೆ. ಆದರೆ, ಇಂಥ ಕೆಲ ಸಂದರ್ಭಗಳಲ್ಲಿ ಮುಂಬೈ ಇಂಡಿಯನ್ಸ್ ಫೀನಿಕ್ಸ್ನಂತೆ ಮೇಲೇರಿದ ಉದಾಹರಣೆಗಳಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿಯೂ ಇದೇ ತೆರನದ್ದು. ವಿರಾಟ್ ಕೊಹ್ಲಿಯ ನಾಯಕತ್ವ ಗೊಂದಲ ವಿಚಾರವೂ ಆರ್ಸಿಬಿಯನ್ನ ಮಂಕಾಗಿಸಿರಬಹುದು. ಆದರೆ, ಎಬಿ ಡೀವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್ ಅವರು ಎಂಥ ಪಿಚ್ನಲ್ಲೂ ಸಿಡಿಯಬಲ್ಲ ಛಾತಿ ಹೊಂದಿದ್ಧಾರೆ. ಬಹುಶಃ ಯುಎಇಯ ನಿಧಾನಗತಿಯ ಪಿಚ್ಗಳನ್ನ ಅರ್ಥ ಮಾಡಿಕೊಳ್ಳಲು ಆರ್ಸಿಬಿಗೆ ತಡವಾಗಿದ್ದಿರಬಹುದು.
ಇವತ್ತಿನ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ನವದೀಪ್ ಸೈನಿ ಬದಲು ಶಹಬಾಜ್ ಅಹ್ಮದ್ ಬೌಲಿಂಗ್ ಮಾಡುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳುವ ನಿರೀಕ್ಷೆ ಇದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ