ಜಮ್ಮು-ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ಐಪಿಎಲ್ ಟೂರ್ನಿಯ ಅಂತ್ಯದ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದು ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ, ಆ ಮೂರು ಪಂದ್ಯಗಳಲ್ಲಿ ಅವರು ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ, 153 ಕಿಮೀ ವೇಗದಲ್ಲಿ ಬೌಲ್ ಮಾಡುವ ಮೂಲಕ ಅತೀ ವೇಗದ ಬೌಲರ್ ಎಂದು ಸೆನ್ಸೇಷನ್ ಆಗಿದ್ದರು. ಅವರ ಪ್ರದರ್ಶನಕ್ಕೆ ಅನೇಕ ಹಿರಿಯ ಆಟಗಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರ ಬೆನ್ನಿಗೆ ಇದೀಗ ಟಿ20 ವಿಶ್ವಕಪ್ ನಲ್ಲಿ ಆಡುವ ಭಾರತ ತಂಡಕ್ಕೆ ಉಮ್ರಾನ್ ಮಲಿಕ್ ಅವರನ್ನು ನೆಟ್ ಬೌಲರ್ ಆಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹೊರ ಬೀಳುತ್ತಿದೆ.
ಕಳೆದ ಒಂದೇ ತಿಂಗಳಲ್ಲಿ ಉಮ್ರಾನ್ ಮಲಿಕ್ ಅವರ ಕ್ರಿಕೆಟ್ ಜೀವನವೇ ಈಗ ಬದಲಾದಂತಾಗಿದೆ. ಹೆಚ್ಚು ದೇಶೀಯ ಕ್ರಿಕೆಟ್ನಲ್ಲಿ ಆಡದ ಉಮ್ರಾನ್ ಮಲಿಕ್ ಗೆ ಐಪಿಎಲ್ನಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ, ಕೇವಲ ಎರಡು ಪಂದ್ಯದಲ್ಲಿ ಅವರು ತೋರಿರುವ ನಿರ್ವಹಣೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ಭಾರತ ತಂಡದ ಜೊತೆಗೆ ಅವರನ್ನು ನೆಟ್ ಬೌಲರ್ ಆಗಿ ಯುಎಇ ಯಲ್ಲೇ ಉಳಿಸಿಕೊಳ್ಳುವಂತೆ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದಾರೆ.
ಉಮ್ರಾನ್ ಮಲಿಕ್ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ, "ಐಪಿಎಲ್ ಟೂರ್ನಿಯು ಪ್ರತಿ ವರ್ಷ ಹೊಸ ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿದೆ. ಒಬ್ಬ ವ್ಯಕ್ತಿ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವುದನ್ನು ನೋಡುವುದಕ್ಕೆ ಸಂತಸವಾಗುತ್ತದೆ. ಇಲ್ಲಿಂದ ವ್ಯಕ್ತಿಗಳ ಪ್ರಗತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
ವೇಗದ ಬೌಲರ್ಗಳ ಸಮೂಹವು ಭಾರತೀಯ ಕ್ರಿಕೆಟ್ಗೆ ಯಾವಾಗಲೂ ಒಳ್ಳೆಯ ಸಂಕೇತವಾಗಿದೆ. ನಾವು ಈ ರೀತಿಯ ಪ್ರತಿಭೆಯನ್ನು ನೋಡಿದಾಗಲೆಲ್ಲಾ ಅವರನ್ನು ಮತ್ತಷ್ಟು ಮೇಲೆತ್ತಲು ಪ್ರಯತ್ನಿಸುತ್ತೇವೆ. ಐಪಿಎಲ್ ಮಟ್ಟದಲ್ಲಿ ಈಗಾಗಲೇ ಕಾಣುತ್ತಿರುವ ಅವರ ಸಾಮರ್ಥ್ಯವನ್ನು ಮತ್ತಷ್ಟು ಗರಿಷ್ಟ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ" ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಹಣ್ಣಿನ ವ್ಯಾಪಾರಿಯ ಮಗನಾದ ಬೌಲರ್ ಉಮ್ರಾನ್ ಮಲಿಕ್ ಶೀಘ್ರದಲ್ಲೇ ಭಾರತ ತಂಡ ನೆಟ್ ಬೌಲರ್ ಆಗಿ ಬಯೋ ಬಬಲ್ ಪ್ರವೇಶಿಸಲಿದ್ದಾರೆ ಎಂದುಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮ್ಯಾನೆಜ್ಮೆಂಟ್ ಸಹ ಖಚಿತಪಡಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 150 ಕಿಮೀ ವೇಗದಲ್ಲಿ ಬೌಲ್ ಮಾಡುವವರು ತೀರಾ ವಿರಳ. ನ್ಯೂಜಿಲೆಂಡ್ನ ಲೂಕಿ ಫರ್ಗ್ಯೂಸನ್ ಮತ್ತು ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಟ್ಜೆ ಸೇರಿದಂತೆ ಈ ವೇಗದಲ್ಲಿ ಬೌಲ್ ಮಾಡುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಆದರೆ, ಐಪಿಎಲ್ ಟೂರ್ನಿಯಲ್ಲಿ 153 ಕಿಮೀ ವೇಗದಲ್ಲಿ ಬೌಲ್ ಮಾಡುವ ಮೂಲಕ ಉಮ್ರಾನ್ ಮಲಿಕ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಭಾರತ ತಂಡದ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: IPL 2021- ಐಪಿಎಲ್ನಲ್ಲಿ ಭರ್ಜರಿ ಆಟದ ಮೂಲಕ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ ಈ ಆಟಗಾರರು
ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಗರಾಸು ನಟರಾಜನ್ ಸಹ ನೆಟ್ ಬೌಲರ್ ಆಗಿಯೇ ಭಾರತ ತಂಡದ ಜೊತೆ ತೆರಳಿದ್ದರು. ಆದರೆ, ನಂತರ ಅವರು ಭಾರತಕ್ಕಾಗಿ ಪಾದಾರ್ಪಣೆ ಮಾಡಿ ಮೊದಲ ಟೂರ್ನಿಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಇದೀಗ ಭಾರತ ತಂಡದ ಖಾಯಂ ಬೌಲರ್ ಆಗಿದ್ದಾರೆ. ಹೀಗಾಗಿ ಉಮ್ರಾನ್ ಮಲಿಕ್ ಸಹ ಅದೇ ರೀತಿ ಭಾರತಕ್ಕಾಗಿ ಪಾದಾರ್ಪಣೆ ಮಾಡುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ಭಾರತವು ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ತನ್ನ ಟಿ 20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ