ಸೂರ್ಯಕುಮಾರ್ ಯಾದವ್, ಇಶಾನ್ ಯಾಕೆ ವಿಫಲರಾಗುತ್ತಿದ್ದಾರೆ? ಕಾರಣ ಬಿಚ್ಚಿಟ್ಟ ಗವಾಸ್ಕರ್

Sunil Gavaskar- ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಬ್ಬರು ಶಾಟ್ ಸೆಲೆಕ್ಷನ್​ನಲ್ಲಿ ಎಡವುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರರೆಂದು ಅವರು ಮೈಮರೆತಿದ್ದಂತಿದೆ ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್

 • Share this:
  ಶಾರ್ಜಾ, ಅ. 05: ಅತೀ ಹೆಚ್ಚು ಐಪಿಎಲ್ ಟೂರ್ನಿಗಳನ್ನ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ಈಗ ಪ್ಲೇ ಆಫ್ ಪ್ರವೇಶಕ್ಕೂ ಹರಸಾಹಸ ನಡೆಸುವ ಸ್ಥಿತಿಗೆ ಈ ಸೀಸನ್​ನಲ್ಲಿ ಬಂದಿದೆ. ತಂಡದ ಪ್ರಮುಖ ಆಟಗಾರರು ವಿಫಲರಾಗಿರುವುದು ಒಂದು ಕಾರಣ. ಆಟದಲ್ಲಿ ಇದೆಲ್ಲಾ ಇದ್ದದ್ದೇ. ಆದರೆ, ಆಯ್ಕೆಗಾರರು, ಕ್ರಿಕೆಟ್ ಪ್ರೇಮಿಗಳು ಕಳವಳ ಪಡಲು ಇನ್ನೂ ಒಂದು ಕಾರಣ ಇದೆ. ಐಪಿಎಲ್ ನಂತರ ಶುರುವಾಗುವ ಟಿ20 ವಿಶ್ವಕಪ್​ನ ಭಾರತ ತಂಡದಲ್ಲಿ ಮುಂಬೈನ ಹಲವು ಆಟಗಾರರಿದ್ದಾರೆ. ಅವರಲ್ಲಿ ಮೂವರು ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರದೇ ಹೋಗಿರುವುದು ಚಿಂತೆಗೆ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಐಪಿಎಲ್​ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಇದರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ಈ ಆಟಗಾರರ ವೈಫಲ್ಯದ ಬಗ್ಗೆ ತಮ್ಮದೇ ಕಾರಣಗಳನ್ನ ಬಿಚ್ಚಿಟ್ಟಿದ್ದಾರೆ. ಸೂರ್ಯ ಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಬ್ಬರು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇವೆಂದು ಮೈಮರೆತಿದ್ದಂತಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

  ಸೂರ್ಯಕುಮಾರ್ ಯಾದವ್ ಅವರನ್ನ ಅತ್ಯಂತ ಉಜ್ವಲ ಭವಿಷ್ಯ ಇರುವ ಬ್ಯಾಟರ್ ಎಂದೇ ಪರಿಗಣಿಸಲಾಗಿದೆ. ಕಳೆದ ಬಾರಿಯ ಐಪಿಎಲ್, ದೇಶೀಯ ಕ್ರಿಕೆಟ್ ಹಾಗೂ ಕೆಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎಸ್ ಕೆ ಯಾದವ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಅವರನ್ನ ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ 2021ನ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ತೀರಾ ಕಳಪೆ ಪ್ರದರ್ಶನ ನೀಡಿದ್ದಾರೆ. ಭಾರತದಲ್ಲಿ ನಡೆದ ಪಂದ್ಯಗಳೂ ಸೇರಿ ಒಟ್ಟು 12 ಪಂದ್ಯಗಳಿಂದ ಅವರು ಗಳಿಸಿರುವುದು ಕೇವಲ 222 ರನ್ ಮಾತ್ರ. 56 ರನ್ ಗಳಿಸಿದ್ದೇ ಅಧಿಕ ಸ್ಕೋರು. ಇಶಾನ್ ಕಿಶನ್ ಅವರದ್ದು ಇನ್ನೂ ಕಳಪೆ ಪ್ರದರ್ಶನ. ಈಗ ಮುಂಬೈ ಇಂಡಿಯನ್ಸ್ ತಂಡದಿಂದಲೂ ಅವರನ್ನ ಕೈಬಿಡಲಾಗಿದೆ. ಅವರು 8 ಪಂದ್ಯಗಳಿಂದ 107 ರನ್ ಮಾತ್ರ ಗಳಿಸಿದ್ದಾರೆ.

  “ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಇಬ್ಬರೂ ಮೈಮರೆತಿದ್ದಾರೇನೋ ಎಂದನಿಸುತ್ತಿದೆ. ಹಾಗೇನಾದರೂ ಇಲ್ಲದೇ ಇರಬಹುದು, ಆದರೆ, ಅವರು ಹೊಡೆಯುತ್ತಿರುವ ಶಾಟ್​ಗಳು ಹಾಗೆ ಅನಿಸುವಂತೆ ಮಾಡುತ್ತವೆ. ಭಾರತ ತಂಡದ ಆಟಗಾರರಾದ್ದರಿಂದ ಈ ದೊಡ್ಡ ಶಾಟ್​ಗಳನ್ನ ಅವರು ಹೊಡೆಯುತ್ತಿದ್ದಾರೇನೋ ಎಂದಸಿಸುತ್ತದೆ” ಎಂದು ಸುನೀಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ಧಾರೆ.

  ಇದನ್ನೂ ಓದಿ: ಗುಡ್​ಬೈ ಹೇಳಲೂ ಆಗಲಿಲ್ಲ..! ಸೋದರಿ ಅಗಲಿಕೆಗೆ ಕ್ರಿಕೆಟಿಗನ ವ್ಯಥೆ; ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸ್ಪಂದನೆ

  ಯಾದವ್, ಇಶಾನ್​ಗೆ ಗವಾಸ್ಕರ್ ಸಲಹೆ ಇದು:

  ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಶಾಟ್ ಆಯ್ಕೆ ಸರಿಯಾಗಿಲ್ಲ. ಇದನ್ನ ಸರಿಮಾಡಿಕೊಳ್ಳಬೇಕು ಎಂದಿರುವ ಅವರು, “ಕೆಲವೊಮ್ಮೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಂತರ ನಿಮ್ಮ ಶಾಟ್ ಸೆಲೆಕ್ಷನ್ ಸರಿಯಾಗಬಹುದು… ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಂದ ಆಗಿರುವ ತಪ್ಪು ಅದೆಯೇ. ಅವರ ಶಾಟ್ ಸೆಲೆಕ್ಷನ್ ಸರಿಯಾಗುತ್ತಿಲ್ಲ. ಬಹಳ ಸುಲಭವಾಗಿ ಔಟಾಗುತ್ತಿರುವುದು ಇದೇ ಕಾರಣಕ್ಕೆ” ಎಂಬುದು ಗವಾಸ್ಕರ್ ಅವರ ಅನಿಸಿಕೆ.

  ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರುವುದು ದುರದೃಷ್ಟ:

  ಆಲ್​ರೌಂಡರ್ ಕಾರಣಕ್ಕೆ ಭಾರತ ತಂಡಕ್ಕೆ ಆಯ್ಕೆಯಾಗುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲಿ ಬೌಲಿಂಗ್ ಮಾಡುತ್ತಿಲ್ಲ. ಇದು ಭಾರತ ಟಿ20 ತಂಡಕ್ಕೆ ಹಿನ್ನಡೆ ಆಗಬಹುದು ಎಂದು ಅನೇಕ ಆಟಗಾರರ ಅಭಿಪ್ರಾಯಕ್ಕೆ ಗವಾಸ್ಕರ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ದೇಶದಲ್ಲಿ ಬೆನ್ನಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ಅದೇ ಕಾರಣಕ್ಕೆ ಬೌಲಿಂಗ್ ಮಾಡುತ್ತಿಲ್ಲ ಎನ್ನಲಾಗಿದೆ. ಆದರೆ, ಇದು ಭಾರತ ತಂಡಕ್ಕೆ ಹಿನ್ನಡೆಯಾಗಬಹುದು ಎನ್ನುತ್ತಾರೆ ಗವಾಸ್ಕರ್.
  ORANGE CAP:
  “ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರುವುದು ಮುಂಬೈ ಇಂಡಿಯನ್ಸ್​ಗೆ ಮಾತ್ರವಲ್ಲ ಭಾರತ ತಂಡಕ್ಕೂ ಆಘಾತಕಾರಿ ಆಗಿದೆ. ಯಾಕೆಂದರೆ ಅವರನ್ನ ತಂಡಕ್ಕೆ ಸೇರಿಸಿಕೊಂಡಿರುವುದು ಆಲ್​ರೌಂಡರ್ ಎಂಬ ಕಾರಣಕ್ಕೆ. ನೀವು 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೀರಿ, ಆದರೆ ಬೌಲಿಂಗ್ ಮಾಡಲು ಆಗುವುದಿಲ್ಲ ಎಂದಾದರೆ ಅದು ಕ್ಯಾಪ್ಟನ್​ಗೆ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗಿಸುತ್ತದೆ” ಎಂದು ಮಾಜಿ ಟೆಸ್ಟ್ ಓಪನರ್ ಸುನೀಲ್ ಗವಾಸ್ಕರ್ ಹೇಳಿದ್ಧಾರೆ.
  Published by:Vijayasarthy SN
  First published: