SRH vs PBKS- ಗೆಲುವಂಚಲಿ ಎಡವುವ ಕಿಂಗ್ಸ್ ಮತ್ತು ಸ್ಥಿರ ಪ್ರದರ್ಶನ ಮರೆತ ರೈಸರ್ಸ್ ಮಧ್ಯೆ ಗೆಲ್ಲೋದ್ಯಾರು?

IPL 2021, 37th Match: ಅಂಕಪಟ್ಟಿಯಲ್ಲಿ 7 ಮತ್ತು 8ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯೆ ಇಂದು ಶಾರ್ಜಾದಲ್ಲಿ ಹಣಾಹಣಿ ನಡೆಯಲಿದೆ.

ಪಂಜಾಬ್ ಕಿಂಗ್ಸ್ ತಂಡದ ಮಯಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್

ಪಂಜಾಬ್ ಕಿಂಗ್ಸ್ ತಂಡದ ಮಯಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್

  • Cricketnext
  • Last Updated :
  • Share this:
    ಶಾರ್ಜಾ, ಸೆ. 25: ಇಂದು ಸಂಜೆ 7:30ಕ್ಕೆ ಐಪಿಎಲ್​ನ 37ನೇ ಪಂದ್ಯ ನಡೆಯಲಿದೆ. ಪಾಯಿಂಟ್ ಟೇಬಲ್​ನಲ್ಲಿ ತಳದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಮಧ್ಯೆ ಹಣಾಹಣಿ ಇದೆ. ಇದು ಈ ಸೀಸನ್​ನ ಐಪಿಎಲ್​ನಲ್ಲಿ ಶಾರ್ಜಾದಲ್ಲಿ ನಡೆಯುವ ಎರಡನೇ ಪಂದ್ಯವಾಗಿದೆ. ನಿನ್ನೆಯಷ್ಟೇ ಇದೇ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್​ಸಿಬಿಯನ್ನ ಬಗ್ಗುಬಡಿದಿತ್ತು. ಪುಟ್ಟ ಬೌಂಡರಿಯಾದರೂ ಟ್ರಿಕಿ ಎನಿಸುವ ಪಿಚ್ ಇದು ಎಂಬುದು ನಿನ್ನೆಯ ಪಂದ್ಯ ತೋರಿಸಿಕೊಟ್ಟಿದೆ. ಇವತ್ತು ಈ ಪಿಚ್​ನಲ್ಲಿ ಕಣಕ್ಕಿಳಿದಿರುವ ಎರಡು ತಂಡಗಳಲ್ಲಿ ವಿಶೇಷತೆ ಇದೆ. ಎರಡೂ ತಂಡಗಳು ಅಂಕಪಟ್ಟಿಯಲ್ಲಿ ತಳದಲ್ಲಿವೆ. ಸನ್ ರೈಸರ್ಸ್ ಹೈದರಾಬಾದ ತಂಡ 8 ಪಂದ್ಯಗಳಿಂದ ಕೇವಲ 2 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡ 9 ಪಂದ್ಯಗಳಿಂದ 6 ಅಂಕ ಗಳಿಸಿ ಏಳನೇ ಸ್ಥಾನದಲ್ಲಿದೆ.

    ಪಂಜಾಬ್ ಕಿಂಗ್ಸ್ ತಂಡದ್ದು ವಿಚಿತ್ರ ಸ್ಥಿತಿ. ಇಡೀ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಗೆಲುವಿನ ಸಮೀಪ ಬಂದು ಸೋತ ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡವೂ ಒಂದು. ತೀರಾ ಸುಲಭವಾಗಿ ಗೆಲ್ಲಬಹುದಾದ ಪಂದ್ಯಗಳನ್ನ ಅದು ಕೈಚೆಲ್ಲಿದ್ದುಂಟು. ನಾಲ್ಕು ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲ್ಲಲು 2 ಓವರ್​ನಲ್ಲಿ ಕೇವಲ 8 ರನ್ ಅಗತ್ಯವಿತ್ತು. ಎಂಟು ವಿಕೆಟ್ ಕೈಲಿದ್ದ ಪಂಜಾಬ್ ಬಹಳ ಸುಲಭವಾಗಿ ಗೆಲ್ಲುತ್ತದೆಂದು ಯಾರು ಬೇಕಾದರೂ ಬೆಟ್ ಕಟ್ಟಬಹುದಿತ್ತು. ಆದರೆ, ಆಗಿದ್ದೇ ಬೇರೆ, ಆ ಪಂದ್ಯದಲ್ಲಿ ಪಂಜಾಬ್ ಮೂರು ರನ್​ಗಳಿಂದ ಸೋತಿತು. ರಾಯಲ್ಸ್​ನ ವೇಗಿ ಕಾರ್ತಿಕ್ ತ್ಯಾಗಿ ಹೀರೋ ಆದರು. ಇಂಥ ಕೆಲ ನಿದರ್ಶನಗಳು ಹಲವಿವೆ.

    ಇನ್ನೊಂದೆಡೆ, ಸನ್ ರೈಸರ್ಸ್ ಹೈದರಾಬಾದ್ ತಂಡದ್ದು ಐಪಿಎಲ್​ನಲ್ಲಿ ಯಾವಾಗಲೂ ದುರದೃಷ್ಟವೇ. ಒಳ್ಳೆಯ ಆರಂಭ ಸಿಕ್ಕರೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ಸತತ ವೈಫಲ್ಯ ಆಗುತ್ತಿದೆ. ಹೀಗಾಗಿ, ಹೈದರಾಬಾದ್​ನಿಂದ ಯಾವುದೇ ಸೀಸನ್​ನಲ್ಲೂ ಸ್ಥಿರ ಪ್ರದರ್ಶನ ಬಂದಿಲ್ಲ. ಇದು ಎಲ್ಲಾ ಸೀಸನ್​ನಲ್ಲೂ ಹೈದರಾಬಾದ್​ಗೆ ಕಾಡಿರುವ ಸಮಸ್ಯೆಯಾಗಿದೆ. ಅಂದಹಾಗೆ, ಪಂಜಾಬ್ ಕಿಂಗ್ಸ್ ವಿರುದ್ಧ ಆಡಿರುವ ಪಂದ್ಯಗಳಲ್ಲಿ ಹೆಚ್ಚಿನವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವೇ ಗೆದ್ದಿದೆ. ಹೀಗಾಗಿ, ಇವತ್ತಿನ ಪಂದ್ಯ ಬಹಳಷ್ಟು ಕುತೂಹಲ ಮೂಡಿಸಿದೆ.

    ಆರ್​ಸಿಬಿ ಫ್ಯಾನ್ಸ್​ಗೆ ಯಾರು ಗೆಲ್ಲಬೇಕು?

    ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮತ್ತೊಬ್ಬ ಕನ್ನಡಿಗ ಮಯಂಕ್ ಅಗರ್ವಾಲ್ ಇದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮನೀಶ್ ಪಾಂಡೆ ಅವರಿದ್ಧಾರೆ. ಎರಡೂ ತಂಡದಲ್ಲಿ ಕರ್ನಾಟಕದ ಕ್ರಿಕೆಟಿಗರಿದ್ದಾರೆ. ಆರ್​ಸಿಬಿಯ ಅಭಿಮಾನಿಗಳಿಗೆ ಸದ್ಯಕ್ಕೆ ಇದು ಮುಖ್ಯವಲ್ಲ. ಪಂಜಾಬ್ ಕಿಂಗ್ಸ್ ತಂಡ ಗೆದ್ದರೆ ನಾಕೌಟ್ ಆಸೆ ಜೀವಂತವಾಗುತ್ತದೆ. ಆರ್​ಸಿಬಿ ಜೊತೆ ಪೈಪೋಟಿಗೆ ಇಳಿಯುತ್ತದೆ. ಇದು ತಪ್ಪಬೇಕಾದರೆ ಸನ್ ರೈಸರ್ಸ್ ತಂಡ ಈ ಪಂದ್ಯ ಗೆಲ್ಲಬೇಕು ಎಂಬುದು ಆರ್​ಸಿಬಿ ದೃಷ್ಟಿಯಿಂದ ನಡೆಯುವ ಆಲೋಚನೆ.

    ಇದನ್ನೂ ಓದಿ: Dhoni craze in Karnataka- ಧೋನಿಗೆ ಕರ್ನಾಟಕದಲ್ಲಿ ಇಂಥ ಕ್ರೇಜಾ? ಸಿಎಸ್​ಕೆ ಫ್ಯಾನ್ಸೂ ಡಮ್ಮಿ

    ಸಂಭಾವ್ಯ ತಂಡಗಳು:

    ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ: ಕೆಎಲ್ ರಾಹುಲ್ (ನಾಯಕ), ಮಯಂಕ್ ಅಗರ್ವಾಲ್, ಏಡನ್ ಮರ್ಕ್ರಮ್, ನಿಕೊಲಾಸ್ ಪೂರನ್, ದೀಪಕ್ ಹೂಡ, ಫೇಬಿಯನ್ ಅಲನ್, ಅದಿಲ್ ರಷೀದ್, ಹರ್​ಪ್ರೀತ್ ಬ್ರಾರ್, ಅರ್ಶ್​ದೀಪ್ ಸಿಂಗ್, ಮೊಹಮ್ಮದ್ ಶಮಿ, ಇಶಾನ್ ಪೋರೆಲ್.

    ಸನ್​ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಕೇನ್ ರಿಚರ್ಡ್ಸನ್ (ನಾಯಕ), ಮನೀಶ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್.
    Published by:Vijayasarthy SN
    First published: