MI vs SRH- ಸನ್​ರೈಸರ್ಸ್ ಟಾಸ್ ಗೆದ್ದರೂ ಮುಂಬೈ ಔಟ್; ಕಾತರದಲ್ಲಿ ಇತರ ಪ್ಲೇ ಆಫ್ ಪ್ರವೇಶಿಗರು

IPL 2021, Match 55, Hyderabad vs Mumbai- ಮುಂಬೈ ತಂಡ ಪ್ಲೇ ಆಫ್ ಪ್ರವೇಶಿಸಬೇಕಾದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕನಿಷ್ಠ 171 ರನ್​ಗಳ ಅಂತರದಿಂದ ಗೆಲುವು ಸಾಧಿಸಬೇಕಾಗುತ್ತದೆ. ಇದು ಸದ್ಯದ ಮಟ್ಟಿಗೆ ಬಹುತೇಕ ಅಸಾಧ್ಯದ ಮಾತು.

ಮುಂಬೈ ಇಂಡಿಯನ್ಸ್ ತಂಡ

ಮುಂಬೈ ಇಂಡಿಯನ್ಸ್ ತಂಡ

 • Share this:
  ಅಬುಧಾಬಿ, ಅ. 8: ಇದು ಇಂಡಿಯನ್ ಪ್ರೀಮಿಯರ್ ಲೀಗ್​ನ ರೋಚಕಗೆಗೆ ಒಂದು ಕನ್ನಡಿ. ಲೀಗ್ ಹಂತ ಮುಗಿಯಲು ಎರಡು ದಿನ ಇದ್ದರೂ ನಾಕೌಟ್ ಪ್ರವೇಶಿಸುವವರು ಯಾರು ಎಂಬುದ ಸ್ಪಷ್ಟವಾಗದಷ್ಟು ತೀವ್ರ ಪೈಪೋಟಿ ಕಾಣುವ ಟೂರ್ನಿ ಇದು. ಇಂದು ಲೀಗ್ ಹಂತದ ಕೊನೆಯ ದಿನ. ಆದರೂ ತಾರ್ಕಿಕವಾಗಿ ಅಂತಿಮಗೊಳ್ಳದ ಪ್ಲೇ ಆಫ್ ಪಟ್ಟಿ. ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವೆ ಅಬುಧಾಬಿಯಲ್ಲಿ ನಡೆಯುತ್ತಿರುವ ಪಂದ್ಯದತ್ತ ಹಲವರ ಚಿತ್ತ ನೆಟ್ಟಿದೆ. ಸನ್​ರೈಸರ್ಸ್ ಹೈದರಾಬಾದ್​ಗೆ ಇದು ಮಾನ ಹೆಚ್ಚಿಸಿಕೊಳ್ಳುವ ಪ್ರಶ್ನೆಗಿಂತ ಹೆಚ್ಚೇನೂ ಅಲ್ಲ, ಮುಂಬೈ ಇಂಡಿಯನ್ಸ್ ತಂಡದ ಮುಂದೆ ಅಸಾಧ್ಯದ ಸವಾಲು ಇದೆ. ಹಾಗೆಯೇ ಒಂದು ಸ್ಪಷ್ಟ ಗುರಿಯೂ ಇದೆ. ಕೋಲ್ಕತಾ ನೈಟ್ ರೈಡರ್ಸ್ ಅನ್ನ ಹಿಂದಿಕ್ಕಿ ಪ್ಲೇ ಆಫ್ ಪ್ರವೇಶಿಸಬೇಕಾದರೆ ಮುಂಬೈ ತಂಡ 171ಕ್ಕೂ ಹೆಚ್ಚು ರನ್​ಗಳ ಅಂತರದಿಂದ ಗೆಲುವು ಸಾಧಿಸಬೇಕಾಗುತ್ತದೆ. ಆದರೂ ಫೀನಿಕ್ಸ್​ನಂತೆ ಮೇಲೆದ್ದು ಬರುವ ಛಾತಿ ಉಳ್ಳ ಮುಂಬೈ ಇಂಡಿಯನ್ಸ್ ತಂಡದಿಂದ ಪವಾಡವೇ ಆದೀತೆಂದು ಇತರ ತಂಡಗಳು ಸ್ವಲ್ಪಮಟ್ಟಿಗಾದರೂ ನಡುಗುತ್ತಿರುವುದು ಹೌದು. ಪಂದ್ಯ ಸಂಜೆ 7:30ಕ್ಕೆ ಆರಂಭವಾಗುತ್ತದೆ.

  ಮುಂಬೈ ಇಂಡಿಯನ್ಸ್ ಈ ಹಿಂದೆ ಕೆಲ ಐಪಿಎಲ್​ಗಳಲ್ಲಿ ಆರಂಭಿಕ ಸೋಲುಗಳ ಬಳಿಕ ಗೆಲುವಿನ ಲಯ ಕಂಡುಕೊಂಡು ಪ್ಲೇ ಆಫ್ ಪ್ರವೇಶಿಸಿ, ಟೂರ್ನಿಯನ್ನೂ ಗೆದ್ದ ನಿದರ್ಶನಗಳಿವೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಪವಾಡ ಆದರೂ ಆದೀತೆಂದು ನಂಬುತ್ತಿರುವುವರೂ ಉಂಟು. ವಾಸ್ತವಿಕ ನೆಲಗಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಪ್ರವೇಶವಾಗಬೇಕಾದರೆ ಪವಾಡವೇ ನಡೆಯಬೇಕು. ಒಂದು ವೇಳೆ ಸನ್​ರೈಸರ್ಸ್ ಹೈದಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಕನಸು ಕಮರಿದಂತೆಯೇ. ಮೊದಲು ಬ್ಯಾಟಿಂಗ್ ಮಾಡಿದರೆ ಮುಂಬೈಗೆ ಪ್ಲೇ ಆಫ್ ಸಾಧ್ಯತೆ ತುಸು ಹೆಚ್ಚಿರುತ್ತದೆ.
  POINTS TABLE:
  ಮುಂಬೈ ಬಗ್ಗೆ ಭಯಕ್ಕೆ ಕಾರಣ ಇದೆ: ಮುಂಬೈ ಇಂಡಿಯನ್ಸ್ ತಂಡದಲ್ಲಿ ರಾಕ್ಷಸೀ ಶಕ್ತಿಯ ಆಟಗಾರರಿದ್ದಾರೆ. ಇಶಾನ್ ಕಿಶನ್ ಫಾರ್ಮ್​ಗೆ ಮರಳಿದ್ಧಾರೆ. ರೋಹಿತ್ ಶರ್ಮಾ, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಅವರಂಥ ಆಟಗಾರರು ಎಂಥ ಬೌಲಿಂಗ್ ದಾಳಿಯನ್ನೂ ಪುಡಿ ಮಾಡಬಲ್ಲರು. ಇವರೆಲ್ಲರೂ ಸಿಡಿಯತೊಡಗಿದರೆ ಎದುರಾಳಿಗಳು ಮೌನವಾಗಿರದೇ ಬೇರೆ ದಾಇ ಇಲ್ಲ. ಟ್ರೆಂಟ್ ಬೌಲ್ಟ್ ಹೊರತುಪಡಿಸಿ ಉಳಿದ ಮುಂಬೈ ಬೌಲರ್​ಗಳು ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ, ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಪ್ರವೇಶ ಮಾಡಿದ್ದೇ ಆದಲ್ಲಿ ಇತರ ಮೂರು ತಂಡಗಳಿಗೆ ಸಣ್ಣ ನಡುಕವಂತೂ ಇದ್ದೇ ಇರುತ್ತದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೂ ಆರ್ ಡೈ ಎಂಬಂಥ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಯಾವ ಪರಿ ಜಯ ಸಾಧಿಸಿತು ಎಂಬುದು ನಮ್ಮ ಕಣ್ಮುಂದೆ ಇದೆ. ತನ್ನ ರಾಕ್ಷಸೀ ಶಕ್ತಿಯ ಝಲಕ್ ಅನ್ನ ಆ ಪಂದ್ಯದಲ್ಲಿ ಮುಂಬೈ ತೋರಿಸಿಕೊಟ್ಟಿದೆ. ಹೀಗಾಗಿ, ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಡೆಲ್ಲಿ, ಚೆನ್ನೈ ಮತ್ತು ಬೆಂಗಳೂರು ತಂಡಗಳು ತಮ್ಮ ಎದುರಾಳಿಯಾಗಿ ಮುಂಬೈ ಬರದೇ ಇರಲಿ ಎಂದು ಪ್ರಾರ್ಥಿಸುತ್ತಿರಬಹುದು.

  ಹೈದರಾಬಾದ್ ಬೌಲಿಂಗ್ ವರ್ಸಸ್ ಮುಂಬೈ ಬ್ಯಾಟಿಂಗ್: ಇವತ್ತಿನ ಪಂದ್ಯ ಅಕ್ಷರಶಃ ಸನ್​ರೈಸರ್ಸ್​ನ ಬೌಲಿಂಗ್ ಮತ್ತು ಮುಂಬೈನ ಬ್ಯಾಟಿಂಗ್ ನಡುವಿನ ಹಣಾಹಣಿ ಎಂದರೆ ತಪ್ಪಲ್ಲ. ಸಣ್ಣ ಮೊತ್ತವನ್ನೂ ಡಿಫೆಂಡ್ ಮಾಡಿಕೊಳ್ಳಬಲ್ಲ ಸಮರ್ಥ ಬೌಲರ್​ಗಳು ಹೈದರಾಬಾದ್​ನಲ್ಲಿ ಇದ್ದಾರೆ. ಭುವನೇಶ್ವರ್ ಕುಮಾರ್ ಅದ್ಭುತ ಡೆತ್ ಬೌಲರ್. ರಷೀದ್ ಖಾನ್ ವಿಶ್ವದ ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರು. ಕಾಶ್ಮೀರದ ನವಪ್ರತಿಭೆ ಉಮ್ರಾನ್ ಮಲಿಕ್ ಬೆಂಕಿಯಂಥ ವೇಗದ ಬೌಲರ್. ಜೇಸನ್ ಹೋಲ್ಡರ್, ಸಿದ್ಧಾರ್ಥ್ ಕೌಲ್ ಅವರೂ ಉತ್ತಮ ಬೌಲರ್ಸ್.

  ಮುಂಬೈನ ಟ್ರಂಪ್ ಕಾರ್ಡ್ ಎಂದರೆ ಕೀರಾನ್ ಪೊಲಾರ್ಡ್. ಕಷ್ಟದ ಸಂದರ್ಭದಲ್ಲಿ ಕ್ರೀಸ್​ಗೆ ಬರುವ ಇವರು ನಿಮಿಷಮಾತ್ರದಲ್ಲಿ ಗೇಮ್ ಚೇಂಜ್ ಮಾಡಬಲ್ಲ ಸ್ಫೋಟಕ ಆಲ್​ರೌಂಡರ್. ಆದರೆ, ಪೊಲಾರ್ಡ್ ವಿರುದ್ಧ ಪ್ರಯೋಗಿಸಲು ಹೈದರಾಬಾದ್ ಬತ್ತಳಿಕೆಯಲ್ಲಿ ಎರಡು ಅಸ್ತ್ರಗಳಿವೆ. ಅದು ಭುವನೇಶ್ವರ್ ಕುಮಾರ್ ಮತ್ತು ರಷೀದ್ ಖಾನ್. ಈ ಇಬ್ಬರೂ ಬೌಲರ್​ಗಳು ಪೊಲಾರ್ಡ್ ಮೇಲೆ ಈ ಹಿಂದೆ ಮೇಲುಗೈ ಸಾಧಿಸಿದ್ಧಾರೆ. ಹಾಗೆಯೇ, ಹಾರ್ದಿಕ್ ಪಾಂಡ್ಯ ಅವರು ರಷೀದ್ ಖಾನ್ ಬೌಲಿಂಗ್ ಎದುರಿಸಲು ಬಹಳಷ್ಟು ಬಾರಿ ತಡವರಿಸಿದ್ಧಾರೆ. ಇದು ಈ ಹಣಾಹಣಿಯ ಕುತೂಹಲ ಹುಟ್ಟಿಸುವ ಕೆಲ ಅಂಶಗಳು.

  ಇದನ್ನೂ ಓದಿ: ಸಿಎಸ್​ಕೆ ಬೌಲರ್ ದೀಪಕ್ ಚಾಹರ್ ಪ್ರೊಪೋಸ್ ಮಾಡಿದ ಗರ್ಲ್​​ಫ್ರೆಂಡ್ ಜಯಾ ಯಾರು? ಬಿಗ್ ಬಾಸ್ ಸ್ಪರ್ಧಿಯ ಸೋದರಿಯಾ?

  ತಂಡಗಳು:

  ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಬ್ ತಿವಾರಿ, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನೇಥಮ್ ಕೌಲ್ಟರ್-ನೈಲ್, ರಾಹುಲ್ ಚಾಹರ್/ಜಯಂತ್ ಯಾದವ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.

  ಸನ್​ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ: ಜೇಸನ್ ರಾಯ್, ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವೃದ್ಧಿಮಾನ್ ಸಾಹಾ, ಜೇಸನ್ ಹೋಲ್ಡರ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಉಮ್ರಾನ್ ಮಲಿಕ್.
  Published by:Vijayasarthy SN
  First published: