ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಕಾರಣದಿಂದ ಅರ್ಧದಲ್ಲೇ ನಿಂತು ಹೋಗಿದೆ. 60 ಪಂದ್ಯಗಳಲ್ಲಿ 29 ಮ್ಯಾಚ್ಗಳನ್ನು ಮಾತ್ರ ಆಡಲಾಗಿದ್ದು, ಇನ್ನೂ 31 ಪಂದ್ಯಗಳನ್ನು ಆಯೋಜಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಹೀಗಾಗಿ ಟೂರ್ನಿಯನ್ನು ಮುಂದೂಡಲಾಗಿದ್ದು, ಖಂಡಿತವಾಗಿಯೂ ಪುನಾರಂಭವಾಗಲಿದೆ ಎಂಬುದನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದರು.
ಇದೀಗ ಈ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ ಕೂಡ ಐಪಿಎಲ್ ಮುಂದುವರೆಯುವುದನ್ನು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ ಗಂಗೂಲಿ. ಬಯೋಬಬಲ್ ವೈಫಲ್ಯದಿಂದಾಗಿ ಐಪಿಎಲ್ನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದಾಗ್ಯೂ ಮತ್ತೊಮ್ಮೆ ಟೂರ್ನಿಯನ್ನು ಸುರಕ್ಷಿತವಾಗಿ ಆಯೋಜಿಸುವುದಾಗಿ ಗಂಗೂಲಿ ತಿಳಿಸಿದ್ದಾರೆ.
ಇನ್ನು ಟಿ20 ವಿಶ್ವಕಪ್ಗೂ ಮುನ್ನ ಐಪಿಎಲ್ ನಡೆಯಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಐಪಿಎಲ್ ಮುಂದೂಡಿ ಕೆಲವು ದಿನಗಳು ಮಾತ್ರ ಆಗಿದೆ. ಇದೀಗ ಮತ್ತೊಮ್ಮೆ ಆಯೋಜಿಸುವುದರ ಬಗ್ಗೆ ಒಂದಷ್ಟು ರೂಪುರೇಷೆಗಳನ್ನು ಸಿದ್ಧಪಡಿಸಬೇಕಿದೆ. ಅದರಂತೆ ಟಿ20 ವಿಶ್ವಕಪ್ಗೂ ಮುನ್ನವೇ ಟೂರ್ನಿಯನ್ನು ಆಯೋಜಿಸುವ ಆಯ್ಕೆ ನಮ್ಮ ಮುಂದಿದೆ. ಇದಕ್ಕಾಗಿ ಎಲ್ಲಾ ದೇಶಗಳ ಕ್ರಿಕೆಟ್ ಬೋರ್ಡ್ಗಳ ಜೊತೆ ಮಾತುಕತೆ ನಡೆಸಬೇಕಿದೆ ಎಂದು ಗಂಗೂಲಿ ತಿಳಿಸಿದ್ದಾರೆ.
ಇದರೊಂದಿಗೆ ಟಿ20 ವಿಶ್ವಕಪ್ಗೂ ಮುನ್ನವೇ ಐಪಿಎಲ್ ನಡೆಯಲಿರುವುದು ಬಹುತೇಕ ಖಚಿತವಾದಂತಾಗಿದೆ. ಎಲ್ಲಾ ಕ್ರಿಕೆಟ್ ಬೋರ್ಡ್ಗಳು ಸಮ್ಮತಿಸಿದರೆ, ಭಾರತದಲ್ಲಿ ಟಿ20 ವಿಶ್ವಕಪ್ ನಡೆಯುವ ಮುನ್ನ ಐಪಿಎಲ್ ಜರುಗಲಿದೆ. ಏಕೆಂದರೆ ಟಿ20 ವಿಶ್ವಕಪ್ಗಾಗಿ ಎಲ್ಲಾ ತಂಡಗಳು ಭಾರತಕ್ಕೆ ಬರಲಿದ್ದು, ಇದೇ ಸಮಯದಲ್ಲಿ ಟೂರ್ನಿಯನ್ನು ಪೂರ್ಣಗೊಳಿಸುವುದು ಸುಲಭ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ