Calculating NRR- ಒಂದು ತಂಡದ ನೆಟ್ ರನ್ ರೇಟ್ ಲೆಕ್ಕ ಹಾಕುವ ಸರಳ ವಿಧಾನ ಇದು

IPL 2021- Formula for Net Run Rate- ಐಪಿಎಲ್ನಂಥ ಕ್ರಿಕೆಟ್ ಟೂರ್ನಮೆಂಟ್ಗಳಲ್ಲಿ ನೆಟ್ ರನ್ ರೇಟ್ ಪ್ರಮುಖ ಪಾತ್ರ ವಹಿಸುವುದು ಎಲ್ಲರಿಗೂ ಗೊತ್ತಿರುವುದೇ. ಅದನ್ನ ಲೆಕ್ಕ ಹಾಕುವ ಸರಳ ವಿಧಾನ ಮತ್ತು ಸೂತ್ರ ಇಲ್ಲಿದೆ.

ಐಪಿಎಲ್

ಐಪಿಎಲ್

 • Share this:
  ಪ್ರತಿಯೊಂದು ಪಂದ್ಯದಲ್ಲೂ ತಂಡವೊಂದರ ರನ್ ರೇಟ್ ಬದಲಾಗುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಸಮಾನ ಅಂಕ ಹೊಂದಿರುವ ತಂಡಗಳು ಅಂಕಪಟ್ಟಿಯಲ್ಲಿ ಬೇರೆ ಬೇರೆ ಸ್ಥಾನದಲ್ಲಿರಲು ನೆಟ್ ರನ್ ರೇಟ್ ಕಾರಣ. ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಬಹಳ ಅವಧಿಯವರೆಗೆ ಸಮಾನ ಅಂಕಗಳನ್ನ ಹೊಂದಿದ್ದವು. ಆದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡ ಉಳಿದ ಮೂರು ತಂಡಗಳಿಗಿಂತ ಮೇಲಿನ ಸ್ಥಾನದಲ್ಲಿತ್ತು. ಉತ್ತಮ ನೆಟ್ ರನ್ ರೇಟ್ ಇದ್ದ ಕಾರಣ ಕೋಲ್ಕತಾಗೆ ಲಾಭವಾಗಿದೆ. ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 70 ಬಾಲ್ ಬಾಕಿ ಇರುವಂತೆಯೇ ಸದೆಬಡಿದರೂ ಅಂಕಪಟ್ಟಿಯಲ್ಲಿ ಕೆಕೆಆರ್ ಅನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಹಿಂದಿನ ಪಂದ್ಯಗಳ ಫಲಿತಾಂಶಗಳು ಮುಂಬೈ ತಂಡದ ನೆಟ್ ರನ್ ರೇಟ್ ಅನ್ನು ಪ್ರಪಾತಕ್ಕೆ ತಳ್ಳಿದ್ದವು. ಇವತ್ತಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್​ರೈಸರ್ಸ್ ವಿರುದ್ಧ ಕನಿಷ್ಠ 171 ರನ್​ಗಳಿಂದ ಸೋಲಿಸಿದರೆ ಮಾತ್ರ ನೆಟ್ ರನ್ ರೇಟ್​ನಲ್ಲಿ ಕೆಕೆಆರ್ ಅನ್ನು ಹಿಂದಿಕ್ಕಿ ಪ್ಲೇ ಆಫ್ ಪ್ರವೇಶಿಸಬಹುದು. ಹಾಗಾದರೆ, ಈ ನೆಟ್ ರನ್ ರೇಟ್ ಲೆಕ್ಕ ಹಾಕುವುದು ಹೇಗೆ? ಅದಕ್ಕೆ ಸರಳ ಸೂತ್ರವೊಂದು ಇಲ್ಲಿದೆ:

  ನೆಟ್ ರನ್ ರೇಟ್ ಲೆಕ್ಕ ಹಾಕುವ ಸರಳ ಸೂತ್ರ: ಎ ತಂಡದ NRR = ಎ ತಂಡದ ರನ್ ರೇಟ್ – ಬಿ ತಂಡದ ರನ್ ರೇಟ್. ಅಂದರೆ, ಎ ತಂಡದ ರನ್ ರೇಟ್ = (ಎ ತಂಡ ಗಳಿಸಿದ ರನ್​ಗಳ ಮೊತ್ತ / ಎ ತಂಡ ಎದುರಿಸಿದ ಓವರ್​ಗಳು) – (ಎ ತಂಡದ ವಿರುದ್ಧ ಎದುರಾಳಿ ತಂಡ ಗಳಿಸಿದ ರನ್ / ಎ ತಂಡ ಮಾಡಿದ ಓವರ್​ಗಳು). ಇದು ನೆಟ್ ರನ್ ರೇಟ್ ಲೆಕ್ಕ ಹಾಕುವ ಸರಳ ವಿಧಾನ. ಅಂದರೆ ಎದುರಾಳಿ ತಂಡದ ಸಾಧನೆ ಎದುರು ಈ ತಂಡದ ಸಾಧನೆ ಹೇಗಿದೆ ಎಂಬುದನ್ನು ಈ ಸೂತ್ರದಿಂದ ಲೆಕ್ಕ ಹಾಕಬಹುದು.

  ಉದಾಹರಣೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವೆ ಮೊನ್ನೆ ನಡೆದ ಪಂದ್ಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಹೈದರಾಬಾದ್ ತಂಡ 20 ಓವರ್​ನಲ್ಲಿ 141 ರನ್ ಗಳಿಸಿತು. ಅಂದರೆ ಹೈದರಾಬಾದ್​ನ ರನ್ ರೇಟ್ 141/20 = 7.05 ಆಗುತ್ತದೆ. ಅದಕ್ಕೆ ಪ್ರತಿಯಾಗಿ ಬೆಂಗಳೂರು ತಂಡ 20 ಓವರ್​ನಲ್ಲಿ ಗಳಿಸಿದ್ದು 137 ರನ್. ಅಂದರೆ ಆರ್​ಸಿಬಿಯ ನೆಟ್ ರನ್ ರೇಟ್ 137/20 = 6.85 ಆಗುತ್ತದೆ.

  ಈಗ ಈ ಎರಡು ತಂಡಗಳ ರನ್ ರೇಟ್ ಲೆಕ್ಕ ಮಾಡಿದ್ದಾಯಿತು. ಈಗ ಆರ್​ಸಿಬಿಯ ನೆಟ್ ರನ್ ರೇಟ್ ಲೆಕ್ಕ ಹಾಕಲು ಆರ್​ಸಿಬಿಯ ರನ್ ರೇಟ್ ಮೈನಸ್ ಹೈದರಾಬಾದ್ ರನ್ ರೇಟ್ ಆಗುತ್ತದೆ. ಅಂದರೆ 6.85 - 7.05 = -0.2 ಆಗುತ್ತದೆ. ಅಂದರೆ ಆರ್​ಸಿಬಿಯ ನೆಟ್ ರನ್ ರೇಟ್ ಮೈನಸ್ 0.2. ಅದೇ ಹೈದರಾಬಾದ್ ನೆಟ್ ರನ್ ರೇಟ್ ಪ್ಲಸ್ 0.2 ಆಗುತ್ತದೆ.

  ಒಂದು ತಂಡದ ಹಿಂದಿನ ಪಂದ್ಯಗಳ ನೆಟ್ ರನ್ ರೇಟ್ 1.1 ಇದ್ದು ಈ ಪಂದ್ಯದಲ್ಲಿ ರನ್ ರೇಟ್ ಮೈನಸ್ 0.2 ಆಗಿದ್ದರೆ ಆಗ ಆ ತಂಡದ ನೆಟ್ ರನ್ ರೇಟ್ (1.1-0.2) = 0.9 ಆಗುತ್ತದೆ.

  ನಿಗದಿತ ಓವರ್​ಗಳು ಪೂರ್ಣಗೊಳ್ಳದೇ ಆಲೌಟ್ ಆದರೆ?: ಐಪಿಎಲ್ ಪಂದ್ಯದಲ್ಲಿ ಒಂದು ತಂಡ 20 ಓವರ್ ಪೂರ್ಣಗೊಳಿಸದೇ ಕಡಿಮೆ ಓವರ್​ಗೆ ಆಲೌಟ್ ಆದರೆ ಅದನ್ನ 20 ಓವರ್ ಎಂದೇ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ರಾಯಲ್ಸ್ ತಂಡ 16.1 ಓವರ್​ನಲ್ಲೇ 85 ರನ್​ಗೆ ಆಲೌಟ್ ಆಯಿತು. ಅದರ ರನ್ ರೇಟ್ ಲೆಕ್ಕ ಹಾಕಬೇಕಾದಾಗ 20 ಓವರ್ ಎಂದೇ ಪರಿಗಣಿಸಲಾಗುತ್ತದೆ. ಅಂದರೆ 85/20=4.25 ಆಗುತ್ತದೆ. ಅದೇ ಕೆಕೆಆರ್ ರನ್ ರೇಟ್ 171/20=8.55 ಆಗುತ್ತದೆ. ಆಗ ರಾಜಸ್ಥಾನ್ ರಾಯಲ್ಸ್ ತಂಡದ ನೆಟ್ ರನ್ ರೇಟ್ 4.25 - 8.55 = -4.30 ಆಗುತ್ತದೆ.

  ಆದರೆ, ಚೇಸಿಂಗ್ ಮಾಡುವ ತಂಡ 20 ಓವರ್​ನೊಳಗೆಯೇ ಬೆನ್ನತ್ತಿ ಗೆದ್ದಾಗ, ಅದು ಎಷ್ಟು ಓವರ್ ಆಡಿದೆಯೋ ಅದು ಮಾತ್ರ ಲೆಕ್ಕಕ್ಕೆ ಬರುತ್ತದೆ. ಹೀಗಾಗಿ, ಅದರ ರನ್ ರೇಟ್ ಅಧಿಕ ಇರುತ್ತದೆ.
  Published by:Vijayasarthy SN
  First published: