Cottrell- ಕಳೆದ ವರ್ಷದ ಐಪಿಎಲ್​ನಲ್ಲಿ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದ ಈತ ಈಗ ನೆಟ್ ಬೌಲರ್

IPL 2021- ವೆಸ್ಟ್ ಇಂಡೀಸ್ ತಂಡದ ನಾಲ್ವರು ಬೌಲರ್​ಗಳು ಈ ಬಾರಿಯ ಐಪಿಎಲ್​ನಲ್ಲಿ ನೆಟ್ ಬೌಲರ್ಸ್ ಕೆಲಸ ಮಾಡಲು ಆಯ್ಕೆಯಾಗಿದ್ಧಾರೆ. ಇವರ ಪೈಕಿ ಕಾಟ್ರೆಲ್ ಮತ್ತು ರವಿ ರಾಮಪಾಲ್ ಅವರೂ ಇದ್ದಾರೆ. ಕಾಟ್ರೆಲ್ ಕಳೆದ ಸೀಸನ್​ನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದರು.

ಶೆಲ್ಡಾನ್ ಕಾಟ್ರೆಲ್

ಶೆಲ್ಡಾನ್ ಕಾಟ್ರೆಲ್

 • Cricketnext
 • Last Updated :
 • Share this:
  ಭಾರತದಲ್ಲಿ ಕ್ರಿಕೆಟ್​ಗೆ ಎಷ್ಟು ಕ್ರೇಜ್ ಇದೆಯೋ ಅಷ್ಟೇ ಹಣವೂ ಇಲ್ಲಿದೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತೂ ಸಿರಿತನಕ್ಕೆ ಸಾಕ್ಷಿಯಾಗಿದೆ. ಆಟಗಾರರಿಗೆ ಲಕ್ಷ, ಕೋಟಿಗಳಲ್ಲಿ ಬೆಲೆ ಇದೆ. ಅಂತೆಯೇ ವಿಶ್ವದ ಬಹುತೇಕ ಕ್ರಿಕೆಟಿಗರು ಐಪಿಎಲ್​ನಲ್ಲಿ ಪಾಲ್ಗೊಳ್ಳಲು ಹಾತೊರೆಯುತ್ತಾರೆ. ಐಪಿಎಲ್ ಮೂಲಕವೇ ವಿಶ್ವ ಪ್ರಸಿದ್ಧಿ ಪಡೆದ ಆಟಗಾರರುಂಟು. ಅಂತೆಯೇ ನಿನ್ನೆ ಅಷ್ಟೆತ್ತರಕ್ಕೆ ಹೋಗಿ ಇವತ್ತು ಇಷ್ಟೆತ್ತರಕ್ಕೆ ಕುಸಿದ ಆಟಗಾರರ ನಿದರ್ಶನ ಹಲವು ಇವೆ. ಅಂಥವರಲ್ಲಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಶೆಲ್ಡಾನ್ ಕಾಟ್ರೆಲ್ ಅವರೂ ಒಬ್ಬರು. ಕ್ರಿಕೆಟ್ ಕಾಂಪಿಟೀಶನ್ ಎನ್ನೋದೇ ಹಾಗೆ. ಇವತ್ತು ಚೆನ್ನಾಗಿ ಆಡಿದರೆ ನಾಳೆ ಅವಕಾಶ ಸಿಗುತ್ತದೆ. ಇವತ್ತು ಫೇಲ್ ಆದರೆ ನಾಳೆ ಬೆಂಚ್ ಕಾಯಬೇಕಾಗುತ್ತದೆ. ಕಳೆದ ವರ್ಷದ ಐಪಿಎಲ್​ನಲ್ಲಿ ಶೆಲ್ಡಾನ್ ಕಾಟ್ರೆಲ್ ಅವರನ್ನ ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 8.5 ಕೋಟಿ ರೂ ಕೊಟ್ಟು ಪಡೆದುಕೊಂಡಿತ್ತು. ಈ ವರ್ಷ ಹರಾಜಿನಲ್ಲಿ ಅವರನ್ನ ಕೊಳ್ಳುವವರೇ ಇಲ್ಲ. ಅವರು ಅನಿವಾರ್ಯವಾಗಿ ಯುಎಇಯಲ್ಲಿ ನೆಟ್ ಬೌಲರ್ ಆಗಿ ಕೆಲಸ ಮಾಡುತ್ತಿದ್ದಾರೆ.

  ನಾಲ್ವರು ಕೆರಿಬಿಯನ್ ಬೌಲರ್​ಗಳು: ಇದು ಕಾಟ್ರೆಲ್ ಅವರೊಬ್ಬರದ್ದೇ ಕಥೆಯಲ್ಲ. ವೆಸ್ಟ್ ಇಂಡೀಸ್ ತಂಡದ ಇತರ ಕೆಲ ಬೌಲರ್​ಗಳಿಗೂ ನೆಟ್ ಬೌಲಿಂಗ್ ಹಣೆಬರಹವೇ ಫಿಕ್ಸ್ ಆಗಿದೆ. ಶೆಲ್ಡಾನ್ ಕಾಟ್ರೆಲ್ ಜೊತೆ ಡಾಮಿನಿಕ್ ಡ್ರೇಕ್ಸ್, ಫಿಡೆಲ್ ಎಡ್ವೆರ್ಡ್ಸ್ ಮತ್ತು ರವಿ ರಾಮಪಾಲ್ ಅವರು ನೆಟ್ ಬೌಲಿಂಗ್ ಮಾಡಲು ಆಯ್ಕೆಯಾಗಿದ್ಧಾರೆ. ಆದರೆ, ಯಾವ ತಂಡಗಳೊಂದಿಗೆ ಇವರು ನೆಟ್ ಬೌಲರ್ ಆಗಿ ಕೆಲಸ ಮಾಡಲಿದ್ಧಾರೆ ಎಂಬುದು ನಿರ್ಧಾರವಾಗಿಲ್ಲ. ಅದು ಐಪಿಎಲ್ ಫ್ರಾಂಚೈಸಿಗಳಿಗೆ ಬಿಟ್ಟದ್ದು. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸದ್ಯ ಆಡುತ್ತಿರುವ ಇವರನ್ನ ನೆಟ್ ಬೌಲರ್ ಆಗಿ ಕೆಲಸ ಮಾಡಲೆಂದೇ ಕೊಂಡು ತರಲಾಗಿದೆ.

  ಇವರ್ಯಾರೂ ಸಾಧಾರಣ ಕ್ರಿಕೆಟಿಗರಲ್ಲ. ಶೆಲ್ಡಾನ್ ಕಾಟ್ರೆಲ್ ಬೆಂಕಿ ಚೆಂಡನ್ನುಗುಳುವ ಫಾಸ್ಟ್ ಬೌಲರ್ ಎಂದೇ ಖ್ಯಾತಿ ಪಡೆದವರು. ಆದರೆ, ಅವರ ದುರದೃಷ್ಟಕ್ಕೆ ನಿರೀಕ್ಷಿತ ಪ್ರದರ್ಶನ ಬರದೇ ಅವಕಾಶಗಳು ಕಡಿಮೆ ಆಗುತ್ತಿವೆ. ಕಳೆದ ಸೀಸನ್​ನಲ್ಲಿ ಇವರು ಪಂಜಾಬ್ ಕಿಂಗ್ಸ್ ಪರ ಆಡಿ ಆರು ಪಂದ್ಯಗಳಿಂದ ಆರು ವಿಕೆಟ್ ಪಡೆದಿದ್ದರು. ದೊಡ್ಡ ಮೊತ್ತ ಕೊಟ್ಟು ಖರೀದಿಸಿದ್ದ ಪಂಜಾಬ್​ಗೆ ಕಾಟ್ರೆಲ್ ಅವರಿಂದ ಒಳ್ಳೆಯ ಕೊಡುಗೆ ಸಿಕ್ಕಿರಲಿಲ್ಲ. ಹೀಗಾಗಿ, ಈ ಬಾರಿ ರಿಲೀಸ್ ಮಾಡಿತ್ತು. ಅದೇನೇ ಇದ್ದರೂ ಕಾಟ್ರೆಲ್ ಅವರ ಫಾಸ್ಟ್ ಬೌಲಿಂಗ್ ಈಗಲೂ ಮೊನಚು ಕಳೆದುಕೊಂಡಿಲ್ಲ.

  ಇದನ್ನೂ ಓದಿ: Lasith Malinga Retirement: T-20 ಸೇರಿದಂತೆ ಎಲ್ಲಾ ಆಯಾಮದ ಕ್ರಿಕೆಟ್​ಗೆ ವಿದಾಯ ಹೇಳಿದ ಯಾರ್ಕರ್​ ಸ್ಪೆಷಲಿಸ್ಟ್​ ಲಸಿತ್​ ಮಾಲಿಂಗ

  ರವಿ ರಾಮಪಾಲ್ ಒಳ್ಳೆಯ ಫಾರ್ಮ್: ಇದೇ ವೇಳೆ, ಹಿಂದೆ ಆರ್​ಸಿಬಿ ಪರ ಆಡಿದ್ದ ರವಿ ರಾಮಪಾಲ್ ಅವರು ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಟಿ20 ವಿಶ್ವಕಪ್​ಗೆ ವೆಸ್ಟ್ ಇಂಡೀಸ್ ತಂಡಕ್ಕೂ ಅವರು ಆಯ್ಕೆಯಾಗಿದ್ದಾರೆ. ಸಿಪಿಎಲ್ ಟಿ20 ಟೂರ್ನಿಯಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡದ ಪರ ಆಡಿದ ಇವರು 14 ಸರಾಸರಿಯಲ್ಲಿ 18 ವಿಕೆಟ್ ಪಡೆದು ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದಾರೆ. ಬೌಲಿಂಗ್ ಎಕನಾಮಿ ರೇಟ್ ಕೂಡ 7.26 ಮಾತ್ರ ಇದೆ. 2013ರ ಐಪಿಎಲ್ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದ ರವಿ ರಾಮಪಾಲ್ 21.19 ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದರು.

  ಫಿಡೆಲ್ ಎಡ್ವರ್ಡ್ಸ್ ಕೂಡ ವೆಸ್ಟ್ ಇಂಡೀಸ್ ರಾಷ್ಟ್ರೀಯ ತಂಡಕ್ಕೆ ಮರಳಿದ ಒಳ್ಳೆಯ ಬೌಲರ್. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲೂ ಅವರು ಜಮೈಕಾ ತಲ್ಲಾವಾಸ್ ಪರ ಆಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅವರು ಆಡಿದ್ದರು. ಅನುಭವಿ ಬೌಲರ್ ಆಗಿರುವ ಫಿಡೆಲ್ ಎಡ್ವರ್ಡ್ಸ್ ಅವರು 2009 ಮತ್ತು 2013ರ ಐಪಿಎಲ್ ಸೀಸನ್​ನಲ್ಲಿ ಅವರು ಡೆಕನ್ ಚಾರ್ಜರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಆಡಿದ್ದರು.

  ಡಾಮಿನಿಕ್ ಡ್ರೇಕ್ಸ್ ಕೂಡ ಪ್ರತಿಭಾನ್ವಿತ ಕೆರಿಬಿಯನ್ ಕ್ರಿಕೆಟಿಗ. ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ತಂಡದಲ್ಲಿ ರಿಸರ್ವ್ ಆಟಗಾರರ ಪೈಕಿ ಇದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
  Published by:Vijayasarthy SN
  First published: