ದುಬೈ, ಅ. 15: ಐಪಿಎಲ್ 2021 ಟೂರ್ನಿಯ ಆರೆಂಜ್ ಕ್ಯಾಪ್ ರೇಸ್ನಲ್ಲಿ ಚೆನ್ನೈ ತಂಡದ ಋತುರಾಜ್ ಗಾಯಕ್ವಡ್ ವಿಜೇತರಾಗಿದ್ಧಾರೆ. ಇಂದು ಕೆಕೆಆರ್ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಈ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಕೆಎಲ್ ರಾಹುಲ್ ಅವರನ್ನ ಚೆನ್ನೈ ತಂಡದ ಋತುರಾಜ್ ಗಾಯಕ್ವಡ್ ಮತ್ತು ಫ್ಯಾಫ್ ಡುಪ್ಲೆಸಿ ಇಬ್ಬರೂ ಹಿಂದಿಕ್ಕಿದರು. ಇವತ್ತು 32 ರನ್ ಗಳಿಸಿದ ಋತುರಾಜ್ ಈ ಸೀಸನ್ನಲ್ಲಿ ಒಟ್ಟಾರೆ ಗಳಿಸಿದ ರನ್ ಸಂಖ್ಯೆ 635 ಆಗಿದೆ. ಇಂದಿನ ಪಂದ್ಯದಲ್ಲಿ 86 ರನ್ ಚಚ್ಚಿದ ಫ್ಯಾಫ್ ಡುಪ್ಲೆಸಿ ಒಟ್ಟಾರೆ 633 ರನ್ ಗಳಿಸಿ ಎರಡನೇ ಸ್ಥಾನ ಪಡೆದರು.
ಇಂದು ಮನಮೋಹಕ ಆಟವಾಡಿದ ಡುಪ್ಲೆಸಿ ಅವರು ಆರೆಂಜ್ ಕ್ಯಾಪ್ ರೇಸ್ನಲ್ಲಿ ಗೆಲ್ಲುವ ಎಲ್ಲಾ ಸಾಧ್ಯತೆ ದಟ್ಟವಾಗಿತ್ತು. ಆದರೆ, ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಅವರು ಹೊಡೆದ ಶಾಟ್ ಕ್ಯಾಚ್ ಆಯಿತು. ಅಂತಿಮವಾಗಿ ರೇಸ್ ಗೆಲ್ಲುವುದರಿಂದ 3 ರನ್ಗಳಿಂದ ಡುಪ್ಲೆಸಿ ವಂಚಿತರಾದರು. ಈ ಸೀಸನ್ನಲ್ಲಿ 626 ರನ್ ಗಳಿಸಿರುವ ಕೆಎಲ್ ರಾಹುಲ್ ಸತತ ಎರಡು ಬಾರಿ ಆರೆಂಜ್ ಕ್ಯಾಪ್ ರೇಸ್ ಗೆಲ್ಲುವ ದಾಖಲೆಯಿಂದ ಸ್ವಲ್ಪದರಲ್ಲೇ ವಂಚಿತರಾದರು. ಕಳೆದ ಋತುವಿನಲ್ಲಿ ರಾಹುಲ್ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಗಿಟ್ಟಿಸಿದ್ದರು. ಕ್ರಿಸ್ ಗೇಲ್ 2011 ಮತ್ತು 2012ರ ಸೀಸನ್ನಲ್ಲಿ ಆರ್ಸಿಬಿಯಲ್ಲಿದ್ದಾಗ ಎರಡು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ರಾಹುಲ್ ಅವರಿಗೆ ಆ ದಾಖಲೆ ಸರಿಗಟ್ಟುವ ಅವಕಾಶ ಇತ್ತಾದರೂ ಸಿಎಸ್ಕೆ ಬ್ಯಾಟರ್ಸ್ ಅಡ್ಡಗಾಲು ಹಾಕಿದ್ದಾರೆ.
ಈ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು:
1) ಋತುರಾಜ್ ಗಾಯಕ್ವಡ್, ಸಿಎಸ್ಕೆ: 635 ರನ್
2) ಫ್ಯಾಫ್ ಡುಪ್ಲೆಸಿ, ಸಿಎಸ್ಕೆ: 633
3) ಕೆಎಲ್ ರಾಹುಲ್, ಪಂಜಾಬ್ ಕಿಂಗ್ಸ್: 626
4) ಶಿಖರ್ ಧವನ್, ಡೆಲ್ಲಿ ಕ್ಯಾಪಿಟಲ್ಸ್: 587
5) ಗ್ಲೆನ್ ಮ್ಯಾಕ್ಸ್ವೆಲ್, ಆರ್ಸಿಬಿ: 513 ರನ್
ಆರೆಂಜ್ ಕ್ಯಾಪ್ ದಾಖಲೆಗಳು:
ಒಂದು ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. 2016ರ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 973 ರನ್ಗಳನ್ನ ಗಳಿಸಿ ಆರೆಂಜ್ ಕ್ಯಾಪ್ ಜಯಿಸಿದ್ದರು. ನಮ್ಮ ಕನ್ನಡಿಗ ರಾಬಿನ್ ಉತ್ತಪ್ಪ ಅವರು 2014ರಲ್ಲಿ 660 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.
ಇದನ್ನೂ ಓದಿ: MS Dhoni milestone- 300 ಟಿ20 ಪಂದ್ಯಗಳಲ್ಲಿ ನಾಯಕನಾದ ವಿಶ್ವದ ಏಕೈಕ ಕ್ರಿಕೆಟಿಗ ಎಂಎಸ್ ಧೋನಿ
ಹರ್ಷಲ್ ಪಟೇಲ್ಗೆ ಪರ್ಪಲ್ ಕ್ಯಾಪ್:
ಇನ್ನು, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ಈ ಬಾರಿ ಆರ್ಸಿಬಿ ಬೌಲರ್ ಹರ್ಷಲ್ ಪಟೇಲ್ ಅವರ ಪಾಲಾಗಿದೆ. 32 ವಿಕೆಟ್ ಗಳಿಸಿರುವ ಹರ್ಷಲ್ ಕ್ಯಾಪ್ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಬಹಳ ಮುಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಕೇವಲ 24 ವಿಕೆಟ್ ಪಡೆದು ಓಟ ನಿಲ್ಲಿಸಿದ್ದಾರೆ. ಎರಡನೇ ಕ್ವಾಲಿಫಯರ್ಗೆ ಮುಂಚೆ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಹರ್ಷಲ್ ಪಟೇಲ್ ಅವರನ್ನ ಹಿಂದಿಕ್ಕುವ ಸಾಧ್ಯತೆ ಇದ್ದದ್ದು ಅವೇಶ್ ಖಾನ್ ಅವರಿಗೆ ಮಾತ್ರವೇ. ಆದರೆ, ಖಾನ್ಗೆ ಬಿದ್ದದ್ದು ಒಂದೇ ವಿಕೆಟ್. ಈಗ ಚೆನ್ನೈ ಮತ್ತು ಕೋಲ್ಕತಾ ತಂಡದ ಯಾವ ಬೌಲರ್ ಕೂಡ ಒಂದು ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರ ವಿಕೆಟ್ ಮೊತ್ತವನ್ನ ದಾಟಿ ಹೋಗುವ ಸಾಧ್ಯತೆ ಹೊಂದಿಲ್ಲ. ಹೀಗಾಗಿ, ಹರ್ಷಲ್ ಪಟೇಲ್ ಅವರಿಗೆ ಪರ್ಪಲ್ ಕ್ಯಾಪ್ ನಿಶ್ಚಿತವಾಗಿದೆ.
ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಗಿಸೋ ರಬಡ 30 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗಿಟ್ಟಿಸಿದ್ದರು. ಡ್ವೇನ್ ಬ್ರಾವೋ ಎರಡು ಬಾರಿ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ ಕೂಡ ಎರಡು ಬಾರಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಬೌಲರ್ವೊಬ್ಬ ಪರ್ಪಲ್ ಕ್ಯಾಪ್ ಪಡೆಯುತ್ತಿರುವುದು ಇದೇ ಮೊದಲು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ