HOME » NEWS » Ipl » RR VS SRH IPL 2021 JOS BUTTLER MAIDEN TON POWERS RAJASTHAN ROYALS TO 220 ZP

RR vs SRH: ಬಟ್ಲರ್ ಸಿಡಿಲಬ್ಬರಕ್ಕೆ ನಲುಗಿದ ಸನ್​ರೈಸರ್ಸ್​​: ಹೈದರಾಬಾದ್​ಗೆ ಬೃಹತ್ ಟಾರ್ಗೆಟ್ ನೀಡಿದ ರಾಜಸ್ಥಾನ್

ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಜೋಸ್ ಬಟ್ಲರ್ ತಮ್ಮ ಆರ್ಭಟವನ್ನು ಮುಂದುವರೆಸಿದರು. ಪರಿಣಾಮ 19ನೇ ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮೊತ್ತ 200ರ ಗಡಿದಾಟಿತು.

news18-kannada
Updated:May 2, 2021, 5:28 PM IST
RR vs SRH: ಬಟ್ಲರ್ ಸಿಡಿಲಬ್ಬರಕ್ಕೆ ನಲುಗಿದ ಸನ್​ರೈಸರ್ಸ್​​: ಹೈದರಾಬಾದ್​ಗೆ ಬೃಹತ್ ಟಾರ್ಗೆಟ್ ನೀಡಿದ ರಾಜಸ್ಥಾನ್
jos buttler
  • Share this:
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 28ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸನ್​ರೈಸರ್ಸ್ ಹೈದರಾಬಾದ್​ಗೆ 221 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಜೋಸ್ ಬಟ್ಲರ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ಆರ್​ಆರ್ ಬೃಹತ್ ಮೊತ್ತ ಪೇರಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ತಂಡದ ಹೊಸ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಕಣಕ್ಕಿಳಿದ ಆರ್​ಆರ್ ತಂಡಕ್ಕೆ ಜೋಸ್ ಬಟ್ಲರ್ ಬಿರುಸಿನ ಆರಂಭ ಒದಗಿಸಿದರು. ಆದರೆ ಮತ್ತೊಂದು ತುದಿಯಲ್ಲಿದ್ದ ಯಶಸ್ವಿ ಜೈಸ್ವಾಲ್ (12) ರಶೀದ್ ಖಾನ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದಾಗ್ಯೂ ಸಂಜು ಸ್ಯಾಮ್ಸನ್ ಜೊತೆಗೂಡಿ ಬ್ಯಾಟ್ ಬೀಸಿದ ಬಟ್ಲರ್ ಹೈದರಾಬಾದ್ ಬೌಲರುಗಳ ಬೆಂಡೆತ್ತಿದರು.

ಮೊದಲ 10 ಓವರ್​ನಲ್ಲಿ 77 ರನ್​ ಕಲೆಹಾಕಿದ ಈ ಜೋಡಿ ಆ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಅದರಂತೆ 16ನೇ ಓವರ್​ ವೇಳೆಗೆ ತಂಡದ ಮೊತ್ತವನ್ನು 146ಕ್ಕೆ ತಂದು ನಿಲ್ಲಿಸಿದರು. ಈ ನಡುವೆ ಬಟ್ಲರ್ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಅಕ್ಷರಶಃ ಅಬ್ಬರಿಸಿದ ಇಂಗ್ಲೆಂಡ್ ಆಟಗಾರ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಹಂತದಲ್ಲಿ 48 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್​ ವಿಜಯ್ ಶಂಕರ್​ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಜೋಸ್ ಬಟ್ಲರ್ ತಮ್ಮ ಆರ್ಭಟವನ್ನು ಮುಂದುವರೆಸಿದರು. ಪರಿಣಾಮ 19ನೇ ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮೊತ್ತ 200ರ ಗಡಿದಾಟಿತು. ಈ ವೇಳೆ 64 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್​ನೊಂದಿಗೆ 124 ರನ್ ಬಾರಿಸಿದ ಬಟ್ಲರ್ ಸಂದೀಪ್ ಶರ್ಮಾಗೆ ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ಅಂತಿಮ ಓವರ್​ನಲ್ಲಿ ಭರ್ಜರಿ ಸಿಕ್ಸರ್​ ಬಾರಿಸುವುದರೊಂದಿಗೆ ಡೇವಿಡ್ ಮಿಲ್ಲರ್ ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತವನ್ನು 3 ವಿಕೆಟ್ ನಷ್ಟಕ್ಕೆ 220ಕ್ಕೆ ತಂದು ನಿಲ್ಲಿಸಿದರು.
Published by: zahir
First published: May 2, 2021, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories