ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನ ಸ್ಥಾನದಿಂದ ಡೇವಿಡ್ ವಾರ್ನರ್ ಅವರನ್ನು ಕೆಳಗಿಸಲಾಗಿದೆ. ಅಲ್ಲದೆ ನೂತನ ನಾಯಕನಾಗಿ ಕೇನ್ ವಿಲಿಯಮ್ಸನ್ನ್ನು ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದ ಮೂಲಕ ಎಸ್ಆರ್ಹೆಚ್ ತಂಡದ ನಾಯಕನಾಗಿ ವಿಲಿಯಮ್ಸನ್ ಕಾರ್ಯಾರಂಭ ಮಾಡಿದ್ದಾರೆ.
2016 ರಲ್ಲಿ ಎಸ್ಆರ್ಹೆಚ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಡೇವಿಡ್ ವಾರ್ನರ್ ತಂಡದ ಖಾಯಂ ಸದಸ್ಯರಾಗಿದ್ದರು. ಇದಾಗ್ಯೂ ಕ್ರಿಕೆಟ್ನಿಂದ ಒಂದು ವರ್ಷ ಬ್ಯಾನ್ ಆಗಿದ್ದ ಕಾರಣ ವಾರ್ನರ್ 2019 ರಲ್ಲಿ ಐಪಿಎಲ್ ಆಡಿರಲಿಲ್ಲ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಪ್ಲೇ ಆಫ್ ಪ್ರವೇಶಿಸಿದ್ದರು. 2020 ರಲ್ಲಿ ಮತ್ತೆ ತಂಡಕ್ಕೆ ಆಗಮಿಸಿದ ವಾರ್ನರ್ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಕಳೆದ ಬಾರಿ ಪ್ಲೇಆಫ್ಗೆ ಪ್ರವೇಶಿಸಿದರೂ ಅಂತಿಮ ಸುತ್ತಿಗೆ ಎಂಟ್ರಿ ಕೊಡಲು ಸಾಧ್ಯವಾಗಿರಲಿಲ್ಲ.
ಇದೀಗ ದಿಢೀರಣೆ ನಾಯಕನ ಬದಲಾವಣೆಯೊಂದಿಗೆ ತಂಡದಿಂದಲೇ ಡೇವಿಡ್ ವಾರ್ನರ್ಗೆ ಗೇಟ್ ಪಾಸ್ ನೀಡಲಾಗಿದೆ. ಹೌದು, ತಂಡದ ಮಾಜಿ ನಾಯಕ, ಖಾಯಂ ಸದಸ್ಯನಾಗಿದ್ದ ಡೇವಿಡ್ ವಾರ್ನರ್ ಅವರನ್ನು ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಿಂದ ಕೈಬಿಡಲಾಗಿದೆ. ಎಸ್ಆರ್ಹೆಚ್ ತಂಡದ ಈ ದಿಢೀರ್ ಬೆಳವಣಿಗೆಯಿಂದ ಅಭಿಮಾನಿಗಳೂ ಕೂಡ ಅಚ್ಚರಿಗೊಂಡಿದ್ದಾರೆ. ಏಕೆಂದರೆ ವಾರ್ನರ್ ಚಾಂಪಿಯನ್ ಬ್ಯಾಟ್ಸ್ಮನ್. ಒಂದೇ ಒಂದು ಇನಿಂಗ್ಸ್ ಮೂಲಕ ಮರಳಿ ಫಾರ್ಮ್ ಪಡೆದುಕೊಳ್ಳುವ ಆಟಗಾರ. ಅಲ್ಲದೆ ವಿದೇಶಿ ಸ್ಟಾರ್ ಆಟಗಾರ. ಏಕಾಏಕಿ ತಂಡದ ನಾಯಕನ ಸ್ಥಾನದಿಂದ ಕೆಳಗಿಸಿ, ಇದೀಗ ತಂಡದಿಂದಲೇ ಹೊರಗಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಮತ್ತೊಂದೆಡೆ ಡೇವಿಡ್ ವಾರ್ನರ್ ಅರ್ಧದಲ್ಲೇ ಐಪಿಎಲ್ ತೊರೆದು ಆಸ್ಟ್ರೇಲಿಯಾಗೆ ಮರಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಚಾಂಪಿಯನ್ ಆಟಗಾರನನ್ನು ಎಸ್ಆರ್ಹೆಚ್ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ದ ಕಣಕ್ಕಿಳಿದ ಸನ್ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ: ಜಾನಿ ಬೈರ್ಸ್ಟೋವ್, ಕೇನ್ ವಿಲಿಯಮ್ಸನ್ (ನಾಯಕ) , ಮನೀಷ್ ಪಾಂಡೆ , ಕೇದರ್ ಜಾಧವ್ , ವಿಜಯ್ ಶಂಕರ್ , ಮೊಹಮ್ಮದ್ ನಬಿ , ಅಬ್ದುಲ್ ಸಮದ್ , ರಶೀದ್ ಖಾನ್ , ಭುವನೇಶ್ವರ್ ಕುಮಾರ್ , ಸಂದೀಪ್ ಶರ್ಮಾ , ಖಲೀಲ್ ಅಹ್ಮದ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ