MI vs RR- ರಾಜಸ್ಥಾನ್ ಹಾದಿ ಸ್ಪಷ್ಟ; ಮುಂಬೈ ಗೆದ್ದರೂ ಪ್ಲೇ ಆಫ್ ಗ್ಯಾರಂಟಿ ಇಲ್ಲದ ಸ್ಥಿತಿ

IPL 2021, Match 51: Rajasthan Royals vs Mumbai Indians Match Preview: ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಎರಡೂ ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶ ನಿಶ್ಚಿತ. ಮುಂಬೈ ಇಂಡಿಯನ್ಸ್ ಎರಡೂ ಗೆದ್ದರೂ ಕೆಕೆಆರ್ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗಿರುತ್ತದೆ.

ಮುಂಬೈ ಇಂಡಿಯನ್ಸ್ ತಂಡ

ಮುಂಬೈ ಇಂಡಿಯನ್ಸ್ ತಂಡ

 • Share this:
  ಶಾರ್ಜಾ, ಅ. 05: ಈ ಸೀಸನ್​ನ 51ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳು 12 ಪಂದ್ಯಗಳಿಂದ 10 ಅಂಕಗಳನ್ನ ಹೊಂದಿ ಸಮಾನ ಸ್ಥಿತಿಯಲ್ಲಿವೆ. ಆದರೆ, ಮುಂದಿನ ಹಾದಿಯನ್ನ ನೋಡಿದಾಗ ರಾಜಸ್ಥಾನ್ ರಾಯಲ್ಸ್ ಮುಂದೆ ಸ್ಪಷ್ಟ ಗುರಿ ಇದೆ. ಅದರ ಹಣೆಬರಹ ಅದರ ಕೈಯಲ್ಲೇ ಇದೆ. ಆದರೆ, ಮುಂಬೈ ಇಂಡಿಯನ್ಸ್ ಈಗ ವಿಧಿಯ ಆಟದ ಕೈಗೊಂಬೆಯಂತಾಗಿದೆ. ಮುಂಬೈ ಇವತ್ತಿನ ಪಂದ್ಯ ಸೇರಿ ಮುಂದಿನ ಎರಡೂ ಪಂದ್ಯಗಳನ್ನ ಗೆದ್ದರೂ ಪ್ಲೇ ಆಫ್ ನಿಶ್ಚಿತ ಎಂದು ಹೇಳಲು ಅಸಾಧ್ಯ. ಅತ್ತ, ರಾಜಸ್ಥಾನ್ ರಾಯಲ್ಸ್ ತನ್ನ ಎರಡು ಪಂದ್ಯಗಳನ್ನ ಗೆದ್ದರೆ ಪ್ಲೇ ಆಫ್ ನಿಶ್ಚಿತ ಎಂಬುದು ಖಚಿತವಾಗಿದೆ. ಹೀಗಾಗಿ, ರಾಯಲ್ಸ್ ತಂಡಕ್ಕೆ ಆ ಎರಡೂ ಪಂದ್ಯಗಳು ಡೂ ಆರ್ ಡೈ ಆಗಿವೆ.

  ಐಪಿಎಲ್​ನ ಪ್ಲೇ ಆಫ್​ಗೆ ಚೆನ್ನೈ, ಡೆಲ್ಲಿ ಮತ್ತು ಬೆಂಗಳೂರು ತಂಡಗಳು ಪ್ರವೇಶ ಖಚಿತಪಡಿಸಿಕೊಂಡಿವೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಕೋಲ್ಕತಾ, ರಾಜಸ್ಥಾನ್, ಮುಂಬೈ ಮತ್ತು ಪಂಜಾಬ್ ತಂಡಗಳ ಮಧ್ಯೆ ಪೈಪೋಟಿ ಇದೆ. ಕೋಲ್ಕತಾ 13 ಪಂದ್ಯಗಳಿಂದ 12 ಅಂಕ ಹೊಂದಿದೆ. ರಾಜಸ್ಥಾನ್ ಮತ್ತು ಮುಂಬೈ 12 ಪಂದ್ಯಗಳಿಂದ 10 ಅಂಕ ಹೊಂದಿವೆ. ಪಂಜಾಬ್ 13 ಪಂದ್ಯಗಳಿಂದ 10 ಅಂಕ ಹೊಂದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಮುಂದಿನ ಪಂದ್ಯಗಳು ಮುಂಬೈ ಮತ್ತು ಕೋಲ್ಕತಾ ಮೇಲೆ ಇದೆ. ಒಂದು ವೇಳೆ ಈ ಎರಡೂ ಪಂದ್ಯವನ್ನ ಗೆದ್ದರೆ ರಾಯಲ್ಸ್ ತಂಡದ ಪ್ಲೇ ಆಫ್ ರೇಸ್​ನಲ್ಲಿ ಇಬ್ಬರು ಪ್ರತಿಸ್ಪರ್ಧಿಗಳು ಹೊರಬಿದ್ದಂತಾಗುತ್ತದೆ. ಪಂಜಾಬ್ ತಂಡ 12ಕ್ಕಿಂತ ಹೆಚ್ಚು ಅಂಕ ಗಳಿಸಲು ಸಾಧ್ಯವಿಲ್ಲ. ಹೀಗಾಗಿ, ರಾಯಲ್ಸ್ ತಂಡ 14 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶ ಗಿಟ್ಟಿಸಿಕೊಳ್ಳಬಹುದು.

  ಒಂದು ವೇಳೆ, ಇವತ್ತು ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ಸ್ ತಂಡ ಸೋತಿತು ಎಂದಿಟ್ಟುಕೊಳ್ಳಿ. ಆಗ ಅದು ಕೆಕೆಆರ್ ವಿರುದ್ಧ ಭಾರೀ ಅಂತರದಿಂದ ಗೆಲ್ಲಲೇ ಬೇಕು. ಹಾಗು, ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಭಾರೀ ಅಂತರದಿಂದ ಸೋಲಬೇಕು. ಇದೇ ವೇಳೆ, ಪಂಜಾಬ್ ತಂಡ ಸಿಎಸ್​ಕೆ ವಿರುದ್ಧ ಗೆದ್ದಾಗ ಪಂಜಾಬ್, ಕೆಕೆಆರ್, ಮುಂಬೈ ಮತ್ತು ರಾಜಸ್ಥಾನ್ ತಂಡಗಳು ತಲಾ 12 ಅಂಕಗಳೊಂದಿಗೆ ಸಮಾನ ಸ್ಥಿತಿಗೆ ಬರುತ್ತವೆ. ಆಗ ನೆಟ್ ರನ್ ರೇಟ್ ಗಣನೆಗೆ ಬರುತ್ತದೆ. ಇದು ಕೆಕೆಆರ್​ಗೆ ತುಸು ಅನುಕೂಲಕರವಾಗುತ್ತದೆ.

  ಒಂದು ವೇಳೆ, ಮುಂಬೈ ಇಂಡಿಯನ್ಸ್ ತಂಡ ಇವತ್ತು ರಾಯಲ್ಸ್ ಸೇರಿ ತನ್ನೆ ಎರಡೂ ಪಂದ್ಯವನ್ನ ಗೆದ್ದರೆ 14 ಅಂಕಗಳನ್ನ ಹೊಂದುತ್ತದೆ. ಆದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಯಲ್ಸ್ ವಿರುದ್ಧ ಗೆದ್ದರೆ ಮುಂಬೈ ಆಸೆ ಬಹುತೇಕ ಕಮರಿದಂತೆಯೇ.
  POINTS TABLE:
  ಅದೇನೇ ಲೆಕ್ಕಾಚಾರ ಇರಲಿ, ಇವತ್ತಿನ ಪಂದ್ಯದ ವಿಚಾರಕ್ಕೆ ಬಂದರೆ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಸೊರಗಿದಂತೆ ತೋರುತ್ತಿದೆ. ಮುಂಬೈನ ಇಡೀ ಬ್ಯಾಟಿಂಗ್ ಈಗ ರೋಹಿತ್ ಶರ್ಮಾ ಮೇಲೆ ಅವಲಂಬಿತವಾಗಿದೆ. ಕ್ವಿಂಟಾನ್ ಡೀಕಾಕ್ ಅವರಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಪರದಾಡುತ್ತಿದ್ಧಾರೆ. ಇಶಾನ್ ಕಿಶನ್​ಗೆ ತಂಡದಲ್ಲಿ ಸ್ಥಾನ ಪಡೆಯಲೂ ವಿಫಲರಾಗುತ್ತಿದ್ದಾರೆ. ಸೌರಭ್ ತಿವಾರಿ ಆಕರ್ಷಕ ಬ್ಯಾಟಿಂಗ್​ನ ಸುಳಿವು ನೀಡಿದ್ದಾರಾದರೂ ಅದು ಮುಂಬೈಗೆ ಸಾಕಾಗುತ್ತಿಲ್ಲ. ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಅವರಿಂದ ಹೆಚ್ಚು ರನ್ ಬರುತ್ತಿಲ್ಲ. ಇವೆಲ್ಲದರ ಮಧ್ಯೆ ಕೀರಾನ್ ಪೊಲಾರ್ಡ್ ಮುಕ್ತವಾಗಿ ಬ್ಯಾಟ್ ಮಾಡಲು ಆಗುತ್ತಿಲ್ಲ. ಇಲ್ಲಿ ಸೂರ್ಯಕುಮಾರ್ ಒಳ್ಳೆಯ ಲಯಕ್ಕೆ ಬಂದರೆ ಪೊಲಾರ್ಡ್ ಅವರಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಬಹುದು. ಇನ್ನು, ಬ್ಯಾಟಿಂಗ್​ಗೆ ಹೋಲಿಸಿದರೆ ಮುಂಬೈ ಬೌಲಿಂಗ್ ಇದ್ದುದರಲ್ಲಿ ಪರವಾಗಿಲ್ಲ. ಬುಮ್ರಾ, ಬೌಲ್ಟ್, ರಾಹುಲ್ ಚಾಹರ್, ಕೌಲ್ಟರ್-ನೈಲ್, ಜಯಂತ್ ಯಾದವ್ ಉತ್ತಮವಾಗಿ ಬೌಲ್ ಮಾಡುತ್ತಿದ್ಧಾರೆ.

  ಇದನ್ನೂ ಓದಿ: MS Love- ಎಂಎಸ್ ಧೋನಿಗೆ ಪತ್ನಿ ಕಣ್ಣೆದುರಲ್ಲೇ ಯುವತಿಯೊಬ್ಬಳು ಲವ್ ಪ್ರೊಪೋಸ್ ಮಾಡಿದ ಘಟನೆ

  ಈ ವಿಚಾರದಲ್ಲಿ ಮುಂಬೈಗೆ ಹೋಲಿಸಿದರೆ ರಾಜಸ್ಥಾನ್ ರಾಯಲ್ಸ್ ಸ್ಥಿತಿ ಪರವಾಗಿಲ್ಲ. ಯುಎಇಯಲ್ಲಿ ಮೊದಮೊದಲು ನಾಯಕ ಸಂಜು ಸ್ಯಾಮ್ಸನ್ ಮೇಲೆಯೇ ರಾಯಲ್ಸ್ ಬ್ಯಾಟಿಂಗ್ ಅವಲಂಬಿತವಾಗಿತ್ತು. ಈಗ ಎವಿನ್ ಲೆವಿಸ್ ಸಿಡಿಯಲು ಆರಂಭಿಸಿದ್ದಾರೆ. ಯಶಸ್ವಿ ಜೈಸ್ವಾಲ್, ಶಿವಮ್ ದುಬೇ ಅವರಿಂದಲೂ ರನ್​ಗಳು ಬರುತ್ತಿವೆ. ರಾಹುಲ್ ತೆವಾಟಿಯಾ ಯಾವತ್ತಿದ್ದರೂ ಉಪಯೋಗಕ್ಕೆ ಬರುವ ಆಲ್​ರೌಂಡರ್.

  ತಂಡಗಳು:

  ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕ್ವಿಂಟಾನ್ ಡೀಕಾಕ್, ಸೂರ್ಯಕುಮಾರ್ ಯಾದವ್, ಸೌತಭ್ ತಿವಾರಿ, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ನೇಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ರಾಹುಲ್ ಚಾಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.

  ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಮ್ ದುಬೇ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲರ್, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್/ಜಯದೇವ್ ಉನಾದ್ಕತ್, ಮಯಂಕ್ ಮರ್ಕಂಡೆ, ಮುಸ್ತಾಫಿಜುರ್ ರಹಮಾನ್, ಚೇತನ್ ಸಕಾರಿಯಾ.
  Published by:Vijayasarthy SN
  First published: