ಶಾರ್ಜಾ, ಅ. 07: ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 86 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಪ್ಲೇ ಆಫ್ ಪ್ರವೇಶ ಗಟ್ಟಿಗೊಳಿಸಲು ಅತ್ಯಗತ್ಯವಾಗಿದ್ದ ಭಾರೀ ಅಂತರದ ಗೆಲುವು ಕೆಕೆಆರ್ಗೆ ಸಿಕ್ಕಿದೆ. ಶಾರ್ಜಾದಲ್ಲಿ ಮೊದಲು ಬ್ಯಾಟ್ ಮಾಡಿ 171 ರನ್ಗಳ ದಾಖಲೆ ಮೊತ್ತ ಕಲೆಹಾಕಿದ ಕೆಕೆಆರ್ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡವನ್ನು 85 ರನ್ಗಳ ಅಲ್ಪಮೊತ್ತಕ್ಕೆ ಆಲೌಟ್ ಮಾಡಿತು. ರಾಯಲ್ಸ್ ತಂಡದಲ್ಲಿ ಬಹುತೇಕ ಏಕಾಂಗಿ ಹೋರಾಟ ಮಾಡಿದ ತೆವಾಟಿಯಾ 44 ರನ್ ಗಳಿಸಿದರು. ಅವರನ್ನ ಬಿಟ್ಟರೆ ಶಿವಮ್ ದುಬೆ 18 ರನ್ ಗಳಿಸಿದ್ದೇ ಅತ್ಯಧಿಕ ಸ್ಕೋರ್ ಆಯಿತು.
ಇವತ್ತಿನ ಪಂದ್ಯದಲ್ಲಿ ಕೆಕೆಆರ್ ಬೌಲರ್ಗಳು ವಿಜೃಂಬಿಸಿದರು. ಮೊದಲ ಓವರ್ ಬೌಲ್ ಮಾಡಿದ ಶಾಕಿಬ್ ಆ ಓವರ್ನಲ್ಲೇ ಖಾತೆ ತೆರೆದರು. ನಂತರ, ಶಿವಮ್ ಮಾವಿ, ಲಾಕಿ ಫರ್ಗೂಸನ್ ಮತ್ತು ವರುಣ್ ಚಕ್ರವರ್ತಿ ಅವರು ವಿಕೆಟ್ ಬೇಟೆ ನಡೆಸಿದರು. ಸುನೀಲ್ ನರೈನ್ ಅವರೊಬ್ಬರು ಮಾತ್ರ ದುಬಾರಿ ಎನಿಸುವುದರ ಜೊತೆಗೆ ವಿಕೆಟ್ ಕೂಡ ಪಡೆಯಲು ವಿಫಲರಾಗಿದ್ದು. ಶಿವಮ್ ಮಾವಿ 21 ರನ್ನಿತ್ತು 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೆ ಮುನ್ನ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ 171 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಈ ಸೀಸನ್ಯ ಐಪಿಎಲ್ನಲ್ಲಿ ಶಾರ್ಜಾದ ಪಿಚ್ನಲ್ಲಿ ಯಾವುದೇ ತಂಡ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಕೆಆರ್ ತಂಡ ಈ ಪಂದ್ಯ ಗೆದ್ದರೆ ಅದರ ಪ್ಲೇ ಆಫ್ ಸಾಧ್ಯತೆ ಗಟ್ಟಿಗೊಳ್ಳಲಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ತಂಡಕ್ಕೆ ಶುಬ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ 79 ರನ್ಗಳ ಜೊತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಅದಾದ ಬಳಿಕ ಕೋಲ್ಕತಾದ ವಿಕೆಟ್ಗಳು ಆಗಾಗ ಉದುರುತ್ತಿದ್ದರೂ ಸ್ಕೋರ್ ಹೆಚ್ಚುತ್ತಲೇ ಹೋಯಿತು. ಗಿಲ್ ಅರ್ಧಶತಕ ಭಾರಿಸಿದರು. ಅಯ್ಯರ್ 38 ರನ್ ಗಳಿಸಿದರು.
ಕೆಕೆಆರ್ ತಂಡ ಇವತ್ತಿನ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿತು. ಟಿಮ್ ಸೌಥಿ ಬದಲು ಲಾಕೀ ಫರ್ಗ್ಯೂಸನ್ ಅವರನ್ನ ಕರೆತರಲಾಯಿತು. ಆದರೆ, ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ನಾಲ್ಕು ಬದಲಾವಣೆಗಳಾದವು. ಕಳೆದ ಪಂದ್ಯದಲ್ಲಿ ನಿರಾಸೆಯ ಪ್ರದರ್ಶನ ನೀಡಿದ್ದ ಶ್ರೇಯಸ್ ಗೋಪಾಲ್ ಅವರನ್ನ ಕೈಬಿಡಲಾಯಿತು. ಹಾಗೆಯೇ, ಎವಿನ್ ಲೆವಿಸ್ ಮತ್ತು ಡೇವಿಡ್ ಮಿಲ್ಲರ್ ಅವರನ್ನೂ ಕೈಬಿಡಲಾಯಿತು. ಈ ನಾಲ್ವರ ಸ್ಥಾನದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ಜಯದೇವ್ ಉನಾದ್ಕತ್, ಅನುಜ್ ರಾವತ್, ಕ್ರಿಸ್ ಮಾರಿಸ್ ಅವರು ಆಡಿದರು.
RESULT DATA:
ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಈ ದೊಡ್ಡ ಅಂತರದ ಗೆಲುವು ಕೆಕೆಆರ್ನ ಪ್ಲೇ ಆಫ್ ಪ್ರವೇಶ ಸಾಧ್ಯತೆಯನ್ನ ಗಟ್ಟಿಗೊಳಿಸಿದೆ. ರಾಜಸ್ಥಾನ್ ರಾಯಲ್ಸ್ ಜೊತೆಗೆ ಪಂಜಾಬ್ ಕಿಂಗ್ಸ್ ತಂಡವೂ ಪ್ಲೇ ಆಫ್ ರೇಸ್ನಿಂದ ನಿರ್ಗಮಿಸಿವೆ. ಈಗ ಒಂದು ಪ್ಲೇ ಆಫ್ ಸ್ಥಾನಕ್ಕೆ ರೇಸ್ನಲ್ಲಿ ಉಳಿದಿರುವುದು ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ಮಾತ್ರ. ನಾಳೆ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಇದರಲ್ಲಿ ಮುಂಬೈ ಭಾರೀ ದೊಡ್ಡ ಅಂತರದಿಂದ ಗೆಲುವು ಸಾಧಿಸಬೇಕಾಗುತ್ತದೆ. ಆ ಸಾಧ್ಯತೆ ಬಹುತೇಕ ಕಡಿಮೆ.
ಇದನ್ನೂ ಓದಿ: CSK vs PBKS: ಕೆಎಲ್ ರಾಹುಲ್ 42 ಬಾಲ್ನಲ್ಲಿ 98 ರನ್; ಸಿಎಸ್ಕೆ ವಿರುದ್ಧ ಪಂಜಾಬ್ಗೆ ಸುಲಭ ಜಯ; ಪ್ಲೇ ಆಫ್ ಆಸೆ ಜೀವಂತ
ರಾಜಸ್ಥಾನ್ ರಾಯಲ್ಸ್ ತಂಡ: ಲಿಯಾಮ್ ಲಿವಿಂಗ್ಸ್ಟೋನ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಮ್ ದುಬೇ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕ್ರಿಸ್ ಮಾರಿಸ್, ರಾಹುಲ್ ತೆವಾಟಿಯಾ, ಜಯದೇವ್ ಉನಾದ್ಕತ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕಾರಿಯಾ.
ಕೋಲ್ಕತಾ ನೈಟ್ ರೈಡರ್ಸ್: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಲಾಕೀ ಫರ್ಗೂಸನ್, ಶಿವಮ್ ಮಾವಿ, ವರುಣ್ ಚಕ್ರವರ್ತಿ.
ಸ್ಕೋರು ವಿವರ:
ಕೋಲ್ಕತಾ ನೈಟ್ ರೈಡರ್ಸ್ 20 ಓವರ್ 171/4
(ಶುಬ್ಮನ್ ಗಿಲ್ 56, ವೆಂಕಟೇಶ್ ಅಯ್ಯರ್ 38, ರಾಹುಲ್ ತ್ರಿಪಾಠಿ 21, ದಿನೇಶ್ ಕಾರ್ತಿಕ್ ಅಜೇಯ 14 ರನ್)
ರಾಜಸ್ಥಾನ್ ರಾಯಲ್ಸ್ 16.1 ಓವರ್ 85/10
(ರಾಹುಲ್ ತೆವಾಟಿಯಾ 44, ಶಿವಮ್ ದುಬೆ 18 ರನ್ – ಶಿವಮ್ ಮಾವಿ 21/4, ಲಾಕೀ ಫರ್ಗ್ಯೂಸನ್ 18/3)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ