RR vs DC: ಕ್ರಿಸ್ ಮೋರಿಸ್ ಸಿಡಿಲಬ್ಬರಕ್ಕೆ ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್
ಕೇವಲ 18 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ನೊಂದಿಗೆ 36 ರನ್ ಬಾರಿಸಿದ ಕ್ರಿಸ್ ಮೋರಿಸ್ ಗೆಲುವಿನ ರುವಾರಿಯಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ 4 ಓವರ್ನಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದ ಅವೇಶ್ ಖಾನ್ ಯಶಸ್ವಿ ಬೌಲರ್ ಎನಿಸಿಕೊಂಡರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಕ್ರಿಸ್ ಮೋರಿಸ್ ಅವರ 4 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಡೆಲ್ಲಿ ನೀಡಿದ 148 ರನ್ಗಳ ಟಾರ್ಗೆಟ್ನ್ನು ರಾಜಸ್ಥಾನ್ 19.4 ಓವರ್ನಲ್ಲಿ ಚೇಸ್ ಮಾಡಿತು.
ಇದಕ್ಕೂ ಮುನ್ನ 148 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಇನಿಂಗ್ಸ್ನ 3ನೇ ಓವರ್ನಲ್ಲಿ ಕ್ರಿಸ್ ವೋಕ್ಸ್ ಮನನ್ ವೋಹ್ರಾ (9) ಹಾಗೂ ಜೋಸ್ ಬಟ್ಲರ್ (2) ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಡೆಲ್ಲಿಗೆ ಮೊದಲೆರಡು ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ನಾಲ್ಕನೇ ಓವರ್ನಲ್ಲಿ ರಬಾಡ ಸಂಜು ಸ್ಯಾಮ್ಸನ್ (4) ವಿಕೆಟ್ ಪಡೆದು ಮೂರನೇ ಯಶಸ್ಸಿಗೆ ಕಾರಣರಾದರು.
ಪವರ್ಪ್ಲೇನಲ್ಲಿ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಡೆಲ್ಲಿ ಬೌಲರುಗಳು ಸಂಪೂರ್ಣ ಹಿಡಿತ ಸಾಧಿಸಿದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ ಮೊದಲ 6 ಓವರ್ನಲ್ಲಿ ಕೇವಲ 26 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು 8ನೇ ಓವರ್ನಲ್ಲಿ ಶಿವಂ ದುಬೆ (2) ಅವೇಶ್ ಖಾನ್ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಬಂದ ವೇಗದಲ್ಲೇ ರಿಯಾನ್ ಪರಾಗ್ (2) ಕೂಡ ವಿಕೆಟ್ ಒಪ್ಪಿಸಿ ಹೊರನಡೆದರು.
ಮೊದಲ 10 ಓವರ್ನಲ್ಲಿ ಪ್ರಮುಖ ಐದು ವಿಕೆಟ್ಗಳನ್ನು ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ಈ ಹಂತದಲ್ಲಿ ಕೇವಲ 52 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಮಿಲ್ಲರ್-ತಿವಾಠಿಯಾ 33 ಎಸೆತಗಳಲ್ಲಿ 48 ರನ್ ಕಲೆಹಾಕಿ ತಂಡಕ್ಕೆ ಆಸರೆಯಾದರು.
ಈ ವೇಳೆ ದಾಳಿಗಿಳಿದ ರಬಾಡ ತಿವಾಠಿಯಾ (19) ವಿಕೆಟ್ ಪಡೆಯುವ ಮೂಲಕ ಮತ್ತೆ ರಾಜಸ್ಥಾನ್ಗೆ ಶಾಕ್ ನೀಡಿದರು. ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಡೇವಿಡ್ ಮಿಲ್ಲರ್ 40 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. ಅಲ್ಲದೆ 16ನೇ ಓವರ್ನಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
ಅರ್ಧಶತಕದ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಅಬ್ಬರಿಸಿದ ಡೇವಿಡ್ ಮಿಲ್ಲರ್ (62) ಅವೇಶ್ ಖಾನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಕೊನೆಯ 3 ಓವರ್ನಲ್ಲಿ 34 ರನ್ಗಳ ಅವಶ್ಯಕತೆಯಿತ್ತು. 18ನೇ ಓವರ್ನಲ್ಲಿ ಟಾಮ್ ಕರನ್ 7 ರನ್ಗಳನ್ನು ನೀಡಿದರು. ಅದರಂತೆ 2 ಓವರ್ನಲ್ಲಿ 27 ರನ್ಗಳು ಬೇಕಿತ್ತು.
ರಬಾಡ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲೇ ಕ್ರಿಸ್ ಮೋರಿಸ್ ಸಿಕ್ಸ್ ಸಿಡಿಸಿದರು. 2ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಮೂರನೇ ಎಸೆತದಲ್ಲೂ ರನ್ ನೀಡಿಲ್ಲ. 4ನೇ ಎಸೆತದಲ್ಲಿ 2 ರನ್. 5ನೇ ಎಸೆತದಲ್ಲಿ ಮೋರಿಸ್ ಬ್ಯಾಟ್ನಿಂದ ಮತ್ತೊಂದು ಸಿಕ್ಸ್. 6ನೇ ಎಸೆತದಲ್ಲಿ 1 ರನ್.
ಕೊನೆಯ ಓವರ್ನಲ್ಲಿ ರಾಜಸ್ಥಾನ್ಗೆ ಗೆಲ್ಲಲು 12 ರನ್ಗಳ ಅಗತ್ಯವಿತ್ತು. ಟಾಮ್ ಕರನ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ಮೋರಿಸ್ 2 ರನ್. 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ತಂದುಕೊಟ್ಟರು.
ಕೇವಲ 18 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ನೊಂದಿಗೆ 36 ರನ್ ಬಾರಿಸಿದ ಕ್ರಿಸ್ ಮೋರಿಸ್ ಗೆಲುವಿನ ರುವಾರಿಯಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ 4 ಓವರ್ನಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದ ಅವೇಶ್ ಖಾನ್ ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೊದಲ ಓವರ್ನಲ್ಲಿ 2 ರನ್ ಕಲೆಹಾಕಿದರು. 2ನೇ ಓವರ್ ಎಸೆದ ಜಯದೇವ್ ಉನಾದ್ಕಟ್ ಪೃಥ್ವಿ ಶಾ (2) ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್ಗೆ ಮೊದಲ ಯಶಸ್ಸು ತಂದುಕೊಟ್ಟರು. ಉನಾದ್ಕಟ್ ಅವರ 4ನೇ ಓವರ್ನ ಮೊದಲ ಎಸೆತದಲ್ಲೇ ಶಿಖರ್ ಧವನ್ (9) ಬಾರಿಸಿದ ಚೆಂಡನ್ನು ಅದ್ಭುತವಾಗಿ ಹಿಡಿಯುವ ಮೂಲಕ ಸಂಜು ಸ್ಯಾಮ್ಸನ್ ಗಬ್ಬರ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು 6ನೇ ಓವರ್ನಲ್ಲಿ ಅಜಿಂಕ್ಯ ರಹಾನೆ (8) ಕೂಡ ವಿಕೆಟ್ ಒಪ್ಪಿಸಿದರು.
ಪವರ್ಪ್ಲೇನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಜಯದೇವ್ ಉನಾದ್ಕಟ್ 3 ಓವರ್ನಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಉರುಳಿಸಿದರು. ಪರಿಣಾಮ 6 ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 36 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು 7ನೇ ಓವರ್ನಲ್ಲಿ ಮುಸ್ತಫಿಜುರ್ಗೆ ವಿಕೆಟ್ ಒಪ್ಪಿಸಿ ಶೂನ್ಯದೊಂದಿಗೆ ಮಾರ್ಕಸ್ ಸ್ಟೋಯಿನಿಸ್ ಪೆವಿಲಿಯನ್ ಕಡೆ ಮುಖ ಮಾಡಿದರು.
ಈ ಹಂತದಲ್ಲಿ ನಾಯಕ ರಿಷಭ್ ಪಂತ್ ಜೊತೆಗೂಡಿದ ಯುವ ಆಟಗಾರ ಲಿಲಿತ್ ಯಾದವ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ 10 ಓವರ್ ಮುಕ್ತಾಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ಕಲೆಹಾಕಿದ್ದು ಕೇವಲ 57 ರನ್ಗಳು ಮಾತ್ರ. ಆದರೆ ಹತ್ತು ಓವರ್ಗಳ ಬಳಿಕ ಅಬ್ಬರಿಸಲಾರಂಭಿಸಿದ ರಿಷಭ್ ಪಂತ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಈ ಹಂತದಲ್ಲಿ ರನೌಟ್ ಆಗುವ ಮೂಲಕ ಪಂತ್ (51) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.
ಇದಾಗ್ಯೂ 15ನೇ ಓವರ್ನಲ್ಲಿ 100 ರನ್ ಗಡಿದಾಟಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ಗಳು ಅಂತಿಮ ಓವರ್ನಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಈ ವೇಳೆ ಮೋರಿಸ್ ಎಸೆತದಲ್ಲಿ ಲಲಿತ್ ಯಾದವ್ (20) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಇಂಗ್ಲೆಂಡ್ ಆಟಗಾರರಾದ ಟಾಮ್ ಕರನ್ ಹಾಗೂ ಕ್ರಿಸ್ ವೋಕ್ಸ್ 28 ರನ್ಗಳ ಜೊತೆಯಾಟವಾಡಿದರು. 19ನೇ ಓವರ್ನಲ್ಲಿ ಟಾಮ್ ಕರನ್ (21) ಮುಸ್ತಫಿಜುರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ 7 ರನ್ಗಳಿಸಿ ಅಶ್ವಿನ್ ರನೌಟ್ ಆಗಿ ಹೊರನಡೆದರು.
ಚೇತನ್ ಸಕರಿಯಾ ಎಸೆದ ಅಂತಿಮ ಓವರ್ನಲ್ಲಿ 11 ರನ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿತು. ರಾಜಸ್ಥಾನ್ ರಾಯಲ್ಸ್ ಪರ 4 ಓವರ್ನಲ್ಲಿ 15 ರನ್ ನೀಡಿ 3 ವಿಕೆಟ್ ಉರುಳಿಸಿದ ಜಯದೇವ್ ಉನಾದ್ಕಟ್ ಯಶಸ್ವಿ ಬೌಲರ್ ಎನಿಸಿಕೊಂಡರು.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ