RCB Vs RR, IPL 2021: ಮಿಂಚಿದ ದುಬೆ, ತೆವಾಠಿಯಾ: ಆರ್​ಸಿಬಿಗೆ 178 ರನ್​ಗಳ ಟಾರ್ಗೆಟ್

RR ಹಾಗೂ RCB ಇದುವರೆಗೆ 23 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಉಭಯ ತಂಡಗಳು ತಲಾ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಮೂಡಿಬಂದಿಲ್ಲ.

RCB vs RR

RCB vs RR

  • Share this:
    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

    ಅದರಂತೆ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಮನನ್ ವೋಹ್ರಾ ಮೊದಲೆರಡು ಓವರ್​ನಲ್ಲಿ 12 ರನ್ ಕಲೆಹಾಕಿದರು. ಆದರೆ 3ನೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಬಟ್ಲರ್ (8)ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆರ್​ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟರು.

    ಇದರ ಬೆನ್ನಲ್ಲೇ ಕೈಲ್ ಜೇಮಿಸನ್ ಎಸೆತದಲ್ಲಿ ಮನನ್ ವೋಹ್ರಾ (7) ಕೇನ್ ರಿಚರ್ಡ್ಸನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು  ಬಂದ ವೇಗದಲ್ಲೇ ಡೇವಿಡ್ ಮಿಲ್ಲರ್​ರನ್ನು ಶೂನ್ಯಕ್ಕೆ ಸಿರಾಜ್ ಪೆವೆಲಿಯನ್​ ಕಡೆ ಕಳುಹಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಆರ್​ಆರ್​ಗೆ ಕೇವಲ 32 ರನ್​ಗಳಷ್ಟೇ ಕಲೆಹಾಕಲು ಸಾಧ್ಯವಾಯಿತು.

    ಇದಾಗ್ಯೂ ಆರ್​ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದರು. 18 ಎಸೆತಗಳಲ್ಲಿ 21 ರನ್​ಗಳಿಸಿದ್ದ ವೇಳೆ ಸ್ಯಾಮ್ಸನ್, ಸುಂದರ್ ಎಸೆತದಲ್ಲಿ  ಗ್ಲೆನ್ ಮ್ಯಾಕ್ಸ್​ವೆಲ್​ಗೆ ಕ್ಯಾಚ್ ನೀಡುವ ಮೂಲಕ ತಮ್ಮ ಇನಿಂಗ್ಸ್​ ಅಂತ್ಯಗೊಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ಶಿವಂ ದುಬೆ ಹಾಗೂ ರಿಯಾನ್ ಪರಾಗ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಪರಿಣಾಮ 10 ಓವರ್ ಮುಕ್ತಾಯದ ವೇಳೆಗೆ ರಾಜಸ್ಥಾನ್ ಮೊತ್ತ 70ಕ್ಕೇರಿತು. ಅಲ್ಲದೆ 5ನೇ ವಿಕೆಟ್​ಗೆ 30 ಎಸೆತಗಳಲ್ಲಿ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿದರು.

    ದುಬೆ-ಪರಾಗ್ ಅವರ ಉತ್ತಮ ಬ್ಯಾಟಿಂಗ್ ಪರಿಣಾಮ ರಾಜಸ್ಥಾನ್ ರಾಯಲ್ಸ್ ಮೊತ್ತವು 13ನೇ ಓವರ್​ನಲ್ಲಿ ನೂರರ ಗಡಿದಾಟಿತು. ಇದರ ಬೆನ್ನಲ್ಲೇ ರಿಯಾನ್ ಪರಾಗ್ (25) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಅಬ್ಬರ ಮುಂದುವರೆಸಿದ ಶಿವಂ ದುಬೆ 32 ಎಸೆತಗಳಲ್ಲಿ 2 ಸಿಕ್ಸ್ 5 ಬೌಂಡರಿಯೊಂದಿಗೆ 46 ರನ್ ಬಾರಿಸಿದರು. ಈ ವೇಳೆ ದಾಳಿಗಿಳಿದ ಕೇನ್ ರಿಚರ್ಡ್ಸನ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಮುಂದಾದ ಶಿವಂ ದುಬೆ ಮ್ಯಾಕ್ಸ್​ವೆಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

    ಈ ವೇಳೆಗೆ ರಾಜಸ್ಥಾನ್ ಮೊತ್ತ 16 ಓವರ್​ನಲ್ಲಿ 136ಕ್ಕೆ ಬಂದು ನಿಂತಿತ್ತು. ಈ ಹಂತದಲ್ಲಿ ಜೊತೆಯಾದ ರಾಹುಲ್ ತೆವಾಠಿಯ ಹಾಗೂ ಕ್ರಿಸ್ ಮೋರಿಸ್ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ 18ನೇ ಓವರ್​ನಲ್ಲಿ ತಂಡದ ಮೊತ್ತವನ್ನು 150 ರ ಗಡಿದಾಟಿಸಿದರು. ಸಿರಾಜ್ ಎಸೆದ 19ನೇ ಓವರ್​ನಲ್ಲಿ 13 ರನ್ ಕಲೆಹಾಕಿದ ರಾಹುಲ್ ತೆವಾಠಿಯಾ (40, 23ಎ) ಅಂತಿಮ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು.

    ಹರ್ಷಲ್ ಪಟೇಲ್ ಎಸೆತದ 20ನೇ ಓವರ್​ನ ಮೊದಲ ಎಸೆತದಲ್ಲಿ ಕ್ರಿಸ್ ಮೋರಿಸ್ (10) ವಿಕೆಟ್ ಒಪ್ಪಿಸಿದರೆ, 2ನೇ ಎಸೆತದಲ್ಲಿ ಚೇತನ್ ಸಕರಿಯಾ ಕ್ಯಾಚ್ ನೀಡಿದರು. ಅಂತಿಮ ಓವರ್​ನಲ್ಲಿ 7 ರನ್ ಕಲೆಹಾಕುವ ಮೂಲಕ ಶ್ರೇಯಸ್ ಗೋಪಾಲ್ ತಂಡದ ಮೊತ್ತವನ್ನು 9 ವಿಕೆಟ್ ನಷ್ಟಕ್ಕೆ 177ಕ್ಕೆ ತಂದು ನಿಲ್ಲಿಸಿದರು. ಆರ್​ಸಿಬಿ ಪರ 4 ಓವರ್​ನಲ್ಲಿ 27 ರನ್​ ನೀಡಿ 3 ವಿಕೆಟ್ ಕಬಳಿಸಿ ಮೊಹಮ್ಮದ್ ಸಿರಾಜ್ ಯಶಸ್ವಿ ಬೌಲರ್ ಎನಿಸಿಕೊಂಡರು.

    ಸ್ಕೋರ್: 177/9

    ಓವರ್: 20

    ಈಗಾಗಲೇ ಚೆನ್ನೈ ಪಿಚ್​ನಲ್ಲಿ ಸತತ ಮೂರು ಗೆಲುವು ದಾಖಲಿಸಿರುವ ಆರ್​ಸಿಬಿ ಮುಂಬೈನಲ್ಲೂ ಜಯದೊಂದಿಗೆ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ. ಅತ್ತ ಮೂರು ಪಂದ್ಯಗಳಲ್ಲಿ 2 ಸೋಲು ಕಂಡಿರುವ ರಾಜಸ್ಥಾನ್ ರಾಯಲ್ಸ್ ಆರ್​ಸಿಬಿ ವಿರುದ್ದ ಗೆಲ್ಲುವ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.

    IPL 2021 RCB vs RR playing 11: RCB ತಂಡದಲ್ಲಿ 1 ಮಹತ್ವದ ಬದಲಾವಣೆ: ಉಭಯ ತಂಡಗಳು ಹೀಗಿವೆ

    ಇನ್ನು ಆರ್​ಆರ್​ ಹಾಗೂ ಆರ್​ಸಿಬಿ ಇದುವರೆಗೆ 23 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಉಭಯ ತಂಡಗಳು ತಲಾ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಮೂಡಿಬಂದಿಲ್ಲ. ಇನ್ನು ಕೊನೆಯ 5 ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್​ ಆರ್​ಸಿಬಿ ವಿರುದ್ದ 3 ಗೆಲುವು ದಾಖಲಿಸಿದೆ. ಆದರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ರಾಜಸ್ಥಾನ್ ವಿರುದ್ದ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ.



    ಮುಂಬೈ ಪಿಚ್​ ಬ್ಯಾಟಿಂಗ್​ ಸಹಕಾರಿಯಾಗಿದ್ದು, ಹೀಗಾಗಿ ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಬಳಗದೊಂದಿಗೆ ಕಣಕ್ಕಿಳಿಯಲಿದೆ. ಏಕೆಂದರೆ ಈ ಮೈದಾನದಲ್ಲಿ ಇದುವರೆಗೆ 78 ಟಿ20 ಪಂದ್ಯಗಳನ್ನಾಡಲಾಗಿದೆ. ಅದರಲ್ಲಿ 37 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಆದರೆ ಚೇಸಿಂಗ್ ಮಾಡಿದ ತಂಡ ಗೆದ್ದಿರುವುದು 42 ಬಾರಿ ಎಂಬುದು ವಿಶೇಷ.
    Published by:zahir
    First published: