RCB vs RR- ರಾಯಲ್ಸ್ ವಿರುದ್ಧ ಆರ್​ಸಿಬಿಗೆ 7 ವಿಕೆಟ್ ಭರ್ಜರಿ ಜಯ; ಮ್ಯಾಕ್ಸ್​ವೆಲ್, ಭರತ್ ಅಮೋಘ ಬ್ಯಾಟಿಂಗ್

IPL 2021, Match No. 43rd, RR vs RCB- ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ 149/9; ಆರ್​ಸಿಬಿ ತಂಡ 17.1 ಓವರ್ 153/3. ಬೆಂಗಳೂರಿಗೆ 7 ವಿಕೆಟ್ ಜಯಭೇರಿ.

ಆರ್​ಸಿಬಿಯನ್ನ ಗೆಲುವಿನ ದಾರಿಗೆ ತಂದ ಭರತ್ ಮತ್ತು ಮ್ಯಾಕ್ಸ್​ವೆಲ್

ಆರ್​ಸಿಬಿಯನ್ನ ಗೆಲುವಿನ ದಾರಿಗೆ ತಂದ ಭರತ್ ಮತ್ತು ಮ್ಯಾಕ್ಸ್​ವೆಲ್

  • Cricketnext
  • Last Updated :
  • Share this:
    ದುಬೈ, ಸೆ. 29: ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್ ಬೌಲಿಂಗ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್, ಕೆಎಸ್ ಭರತ್ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ವಿರುದ್ಧ 7 ವಿಕೆಟ್​ಗಳಿಂದ ಜಯಭೇರಿ ಭಾರಿಸಿದೆ. ಗೆಲ್ಲಲು 150 ರನ್ ಸವಾಲು ಪಡೆದ ಆರ್​ಸಿಬಿ 17 ಬಾಲ್ ಬಾಕಿ ಇರುವಂತೆಯೇ ಗುರಿ ಮುಟ್ಟಿತು. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ 48 ರನ್ ಜೊತೆಯಾಟ ನೀಡಿ ಚೇಸಿಂಗ್​ಗೆ ಬುನಾದಿ ಹಾಕಿದರೆ, ಕೆಎಸ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ 3ನೇ ವಿಕೆಟ್​ಗೆ 69 ರನ್ ಜೊತೆಯಾಟ ನೀಡಿ ತಂಡದ ಗೆಲುವನ್ನ ಸುಗಮಗೊಳಿಸಿದರು. ಭರತ್ ನಿರ್ಗಮನದ ಬಳಿಕ ಮತ್ಯಾವುದೇ ಆತಂಕದ ಕ್ಷಣಗಳಿಗೆ ಆಸ್ಪದವಾಗದ ರೀತಿಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅವರು ಕ್ಷಿಪ್ರ ಗತಿಯಲ್ಲಿ ರನ್ ಗಳಿಸಿ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು. ಮ್ಯಾಕ್ಸ್​ವೆಲ್ 30 ಬಾಲ್​ನಲ್ಲಿ ಅಜೇಯ 50 ರನ್ ಭಾರಿಸಿದರು. ಭರತ್ 35 ಬಾಲ್​ನಲ್ಲಿ 44 ರನ್ ಗಳಿಸಿದರು.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸಲ್ಲಿ ಹೈಲೈಟ್ ಆಗಿದ್ದು ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಅಮೋಘ ಜೊತೆಯಾಟ. 8 ಓವರ್​ನಲ್ಲಿ ಅವರು 77 ರನ್​ಗಳ ಆರಂಭಿಕ ಜೊತೆಯಾಟ ಆಡಿದರು. ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ಜೈಸ್ವಾಲ್ 22 ಬಾಲ್​ನಲ್ಲಿ 31 ರನ್ ಗಳಿಸಿ ಔಟಾದರು. ಬಳಿಕ ಅರ್ಧಶತಕ ಪೂರೈಸಿದ ಎವಿನ್ ಲೆವಿಸ್ 37 ಬಾಲ್​ನಲ್ಲಿ 58 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ ಕೇವಲ 19 ರನ್ ಗಳಿಸಿದರು. ಈ ಮೂವರು ಬಿಟ್ಟರೆ ರಾಯಲ್ಸ್ ಪಡೆಯ ಬೇರಾವ ಬ್ಯಾಟರ್ಸ್ ಹೆಚ್ಚು ರನ್ ಗಳಿಸಲಿಲ್ಲ. ಅಂತಿಮವಾಗಿ ರಾಯಲ್ಸ್ ತಂಡ 20 ಓವರ್​ನಲ್ಲಿ 149 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಬ್ಯಾಟಿಂಗ್​ಗೆ ಅನುಕೂಲಕರವಾಗಿದ್ದ ಈ ಪಿಚ್​ನಲ್ಲಿ ಆರ್​ಸಿಬಿ ಬೌಲರ್​ಗಳು ಅದ್ಭುತ ಪ್ರದರ್ಶನ ನೀಡಿದರು. ಮುಂಬೈ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದ ಹರ್ಷಲ್ ಪಟೇಲ್ ಈ ಪಂದ್ಯದಲ್ಲೂ ಸತತ 2 ವಿಕೆಟ್ ಪಡೆದು ಹ್ಯಾಟ್ರಿಕ್ ಹೊಸ್ತಿಲಲ್ಲಿದ್ದರು. ಅಂತಿಮವಾಗಿ ಹರ್ಷಲ್ 3 ವಿಕೆಟ್ ಪಡೆದರು. ಯುಜವೇಂದ್ರ ಚಹಲ್ ಮತ್ತು ಶಹಬಾಜ್ ಅಹ್ಮದ್ ತಲಾ 2 ವಿಕೆಟ್ ಪಡೆದರು.

    POINTS TABLE:

    ಇದನ್ನೂ ಓದಿ: MS Dhoni- ಎಂಎಸ್ ಧೋನಿಗೆ ಇದೇ ಕೊನೆಯ ಐಪಿಎಲ್ ಟೂರ್ನಿಯಾ? ಮಾಜಿ ಕ್ರಿಕೆಟಿಗರೊಬ್ಬರ ಅನುಮಾನ

    ಆರ್​ಸಿಬಿ ಈ ಗೆಲುವಿನೊಂದಿಗೆ ಪ್ಲೇ ಆಫ್ ಸಾಧ್ಯತೆಯನ್ನ ಇನ್ನಷ್ಟು ಗಟ್ಟಿಗೊಳಿಸಿಕೊಂಡಿತು. ಇದೀಗ ಆರ್​ಸಿಬಿ 11 ಪಂದ್ಯಗಳಿಂದ 14 ಅಂಕಗಳನ್ನ ಗಳಿಸಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ನಂತರದ ಸ್ಥಾನದಲ್ಲಿರುವ ಕೆಕೆಆರ್ ಮತ್ತು ಮುಂಬೈ 4 ಅಂಕ ಕಡಿಮೆ ಹೊಂದಿರುವುದು ಆರ್​ಸಿಬಿಗೆ ಹೆಚ್ಚು ಅವಕಾಶ ಒದಗಿಸಿದೆ. ಆರ್​ಸಿಬಿಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು ಒಂದರಲ್ಲಿ ಗೆದ್ದರೂ ಪ್ಲೇ ಆಫ್ ಸಾಧ್ಯತೆ ಬಹುತೇಕ ಖಚಿತಗೊಳ್ಳುತ್ತದೆ.

    ಅತ್ತ, ರಾಜಸ್ಥಾನ್ ರಾಯಲ್ಸ್ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಮಾಡು ಇಲ್ಲ ಮಡಿ ಎನ್ನುವ ಪರಿಸ್ಥಿತಿಗೆ ಬಂದಿದೆ. 8 ಅಂಕ ಹೊಂದಿರುವ ರಾಯಲ್ಸ್ ತಂಡ ಮುಂದಿನ ಮೂರೂ ಪಂದ್ಯಗಳನ್ನ ಗೆಲ್ಲಲೇ ಬೇಕಾಗುತ್ತದೆ. ಗೆದ್ದರೂ ಪ್ಲೇ ಆಫ್ ಅವಕಾಶ ಸಿಗುತ್ತದೆ ಎಂಬುದು ಖಾತ್ರಿ ಇಲ್ಲ.

    ತಂಡಗಳು:

    ಆರ್​ಸಿಬಿ ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡೀವಿಲಿಯರ್ಸ್, ಡೇನಿಯಲ್ ಕ್ರಿಸ್ಟಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಸಿರಾಜ್ ಅಹ್ಮದ್, ಯುಜವೇಂದ್ರ ಚಹಲ್.

    ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಎವಿನ್ ಲೆವಿಸ್, ಸಂಜು ಸ್ಯಾಮ್ಸನ್, ಲಿಯಾಮ್ ಲಿವಿಂಗ್​ಸ್ಟೋನ್, ಮಹಿಪಾಲ್ ಲೊಮ್ರೋರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮಾರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಾಫಿಜುರ್ ರಹಮಾನ್.

    ಸ್ಕೋರು ವಿವರ:

    ರಾಜಸ್ಥಾನ್ ರಾಯಲ್ಸ್ 20 ಓವರ್ 149/9
    (ಎವಿನ್ ಲೆವಿಸ್ 58, ಯಶಸ್ವಿ ಜೈಸ್ವಾಲ್ 31, ಸಂಜು ಸ್ಯಾಮ್ಸನ್ 19, ಕ್ರಿಸ್ ಮಾರಿಸ್ 14 ರನ್ – ಹರ್ಷಲ್ ಪಟೇಲ್ 34/3, ಶಹಬಾಜ್ ಅಹ್ಮದ್ 10/2, ಯುಜವೇಂದ್ರ ಚಹಲ್ 18/2)

    ರಾಯಲ್ ಚಾಲೆಂಜರ್ಸ್ ಬೆಂಗಳೂರು 17.1 ಓವರ್ 153/3
    (ಕೆಎಸ್ ಭರತ್ 44, ಗ್ಲೆನ್ ಮ್ಯಾಕ್ಸ್​​ವೆಲ್ ಅಜೇಯ 50, ವಿರಾಟ್ ಕೊಹ್ಲಿ 25, ದೇವದತ್ ಪಡಿಕ್ಕಲ್ 22)
    Published by:Vijayasarthy SN
    First published: