RCB vs RR- ಕುಗ್ಗಿಹೋಗಿರುವ ರಾಯಲ್ಸ್ ವಿರುದ್ಧ ಗೆದ್ದುಬೀಗುತ್ತಾರಾ ರಾಯಲ್ ಚಾಲೆಂಜರ್ಸ್? ಇಲ್ಲಿದೆ ಲೆಕ್ಕಾಚಾರ

IPL 2021, Match No. 42nd, RR vs RCB- ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದು ಆತ್ಮವಿಶ್ವಾಸದಲ್ಲಿರುವ ಆರ್​ಸಿಬಿ ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಯಲ್ಸ್ ತಂಡದ ಸವಾಲು ಎದುರಾಗಿದೆ. ದುಬೈನಲ್ಲಿ ಪಂದ್ಯ ನಡೆಯಲಿದೆ.

ಸಂಜು ಸ್ಯಾಮ್ಸನ್ ಮತ್ತು ವಿರಾಟ್ ಕೊಹ್ಲಿ

ಸಂಜು ಸ್ಯಾಮ್ಸನ್ ಮತ್ತು ವಿರಾಟ್ ಕೊಹ್ಲಿ

 • Cricketnext
 • Last Updated :
 • Share this:
  ದುಬೈ, ಸೆ. 29: ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಐಪಿಎಲ್ 2021ನ 43ನೇ ಪಂದ್ಯ ದುಬೈನಲ್ಲಿ ಸಂಜೆ 7:30ಕ್ಕೆ ಪ್ರಾರಂಭವಾಗುತ್ತಿದೆ. ಎರಡೂ ತಂಡಗಳಿಗೆ ತಲಾ ನಾಲ್ಕು ಪಂದ್ಯಗಳು ಬಾಕಿ ಇದ್ದು ಆರ್​ಸಿಬಿ 12 ಹಾಗೂ ರಾಜಸ್ಥಾನ್ 8 ಅಂಕಗಳನ್ನ ಹೊಂದಿವೆ. ಹೀಗಾಗಿ, ಪ್ಲೇ ಆಫ್ ರೇಸ್​ನಲ್ಲಿ ಬೆಂಗಳೂರಿಗರು ಬಹಳಷ್ಟು ಮುಂದಿದ್ದಾರೆ. ಇದರ ಜೊತೆಗೆ, ರಾಯಲ್ಸ್ ಪಡೆಗೆ ಹೋಲಿಸಿದರೆ ಬೆಂಗಳೂರಿಗರು ಹೆಚ್ಚು ಆತ್ಮವಿಶ್ವಾಸದಲ್ಲಿದ್ಧಾರೆ. ಬೆಂಗಳೂರು ತಂಡ ಇನ್ನೆರಡು ಪಂದ್ಯ ಗೆದ್ದರೆ ಪ್ಲೇ ಆಫ್ ಚಾನ್ಸ್ ಬಹುತೇಕ ಖಚಿತಗೊಂಡಂತಾಗುತ್ತದೆ. ದುರ್ಬಲಗೊಂಡಂತಿರುವ ರಾಯಲ್ಸ್ ವಿರುದ್ಧ ಗೆಲ್ಲಲು ಕೊಹ್ಲಿ ಪಡೆಗೆ ಇದೇ ಸುಸಂದರ್ಭವೆನಿಸಿದೆ.

  ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಸಮಸ್ಯೆಗಳನ ಸರಮಾಲೆಯನ್ನೇ ಹೊತ್ತುಕೊಂಡಂತಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಪಡೆದಿದೆ. ಅದೂ ಒಂದು ಪಂದ್ಯ ಕೊನೆಯ ಕ್ಷಣದಲ್ಲಿ ಕಾರ್ತಿಕ್ ತ್ಯಾಗಿ ಮಾಡಿದ ಬೌಲಿಂಗ್ ಮ್ಯಾಜಿಕ್​ನಿಂದ ಸಿಕ್ಕ ಗೆಲುವು ಅದು. ಅದು ಬಿಟ್ಟರೆ ಉಳಿದಂತೆ ರಾಯಲ್ಸ್ ತಂಡ ಎದುರಾಳಿಗಳ ಪಾಲಿಗೆ ಸುಲಭ ತುತ್ತೆಂಬಂತೆ ತೋರುತ್ತಿದೆ. ಜೋಸ್ ಬಟ್ಲರ್, ಆಂಡ್ರ್ಯೂ ಟೈ ಮತ್ತು ಜೋಫ್ರಾ ಆರ್ಚರ್ ಅವರ ಅನುಪಸ್ಥಿತಿ ಈಗ ರಾಯಲ್ಸ್​ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಡುತ್ತಿದೆ.

  ಬ್ಯಾಟಿಂಗ್​ನಲ್ಲಿ ಸಂಜು ಸ್ಯಾಮ್ಸನ್ ಬಿಟ್ಟರೆ ಉಳಿದವರಿಂದ ಸರಿಯಾದ ಆಟವೇ ಬಂದಿಲ್ಲ. ದೊಡ್ಡ ಮೊತ್ತಕ್ಕೆ ಖರೀದಿಸಿ ತಂದಿರುವ ಕ್ರಿಸ್ ಮಾರಿಸ್ ಮತ್ತು ಡೇವಿಡ್ ಮಿಲರ್ ಅವರು ಸಿಡಿಯುತ್ತಿಲ್ಲ. ಲಿಯಾಮ್ ಲಿವಿಂಗ್​​ಸ್ಟೋನ್ ಮತ್ತೆ ಲಯ ಕಳೆದುಕೊಂಡಂತಿದ್ದಾರೆ. ನಾಯಕ ಸಂಜು ಸ್ಯಾಮ್ಸನ್ ಮೇಲೆಯೇ ರಾಯಲ್ಸ್ ಬ್ಯಾಟಿಂಗ್ ಬಹುತೇಕ ಅವಲಂಬಿತವಾದಂತಿದೆ. ಬ್ಯಾಟಿಂಗ್​ಗೆ ಹೋಲಿಸಿದರೆ ರಾಯಲ್ಸ್ ಬೌಲಿಂಗ್ ಪರವಾಗಿಲ್ಲ. ಮುಸ್ತಾಫಿಜುರ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ ಅವರು ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.
  ORANGE CAP:
  ಅತ್ತ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಯುಎಇಯಲ್ಲಿ ನಡೆದಿರುವ ಮೂರು ಪಂದ್ಯಗಳಲ್ಲಿ ರಾಯಲ್ಸ್​ನಂತೆ ಒಂದರಲ್ಲಿ ಮಾತ್ರ ಗೆದ್ದಿದೆಯಾದರೂ ಆ ಗೆಲುವು ಆತ್ಮವಿಶ್ವಾಸದಿಂದ ಕೂಡಿದ್ದಾಗಿದೆ. ತಂಡದ ಪ್ರಮುಖ ಬ್ಯಾಟರ್ಸ್ ಆಗಿರುವ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಎಬಿ ಡೀವಿಲಿಯರ್ಸ್ ಒಳ್ಳೆಯ ಲಯದಲ್ಲಿದ್ದಾರೆ. ಅಗ್ರಕ್ರಮಾಂಕದಲ್ಲಿ ಕೊಹ್ಲಿ ಜೊತೆ ದೇವದತ್ ಪಡಿಕ್ಕಲ್ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. ಕೆಎಸ್ ಭರತ್ ಕೂಡ ಆತ್ಮವಿಶ್ವಾಸದಿಂದ ಆಡುತ್ತಿದ್ಧಾರೆ. ಡೇನಿಯಲ್ ಕ್ರಿಸ್ಟಿಯನ್ ಅವರ ಬ್ಯಾಟಿಂದ ರನ್​ಗಳು ಹರಿದುಬರತೊಡಗಿದರೆ ಆರ್​ಸಿಬಿ ಬ್ಯಾಟಿಂಗ್ ಅನ್ನು ಕಟ್ಟಿಹಾಕಲು ಕಷ್ಟಸಾಧ್ಯ ಎಂಬಂತಾಗುತ್ತದೆ.

  ಇದನ್ನೂ ಓದಿ: MI Skipper Spotted in Pakistan| ಸಸ್ತಾ ರೋಹಿತ್ ಶರ್ಮಾ; ಪಾಕಿಸ್ತಾನದಲ್ಲಿ ಕಾಣಿಸಿಕೊಂಡರಾ ಮುಂಬೈ ಇಂಡಿಯನ್ಸ್​ ನಾಯಕ?

  ಇನ್ನು ಆರ್​ಸಿಬಿ ಬೌಲಿಂಗ್ ಕೂಡ ಬಲಿಷ್ಠವಾಗಿ ತೋರುತ್ತಿದೆ. ಹರ್ಷಲ್ ಪಟೇಲ್ ಅವರು ಟೂರ್ನಿಯಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿ 4 ವಿಕೆಟ ಪಡೆದಿದ್ದಾರೆ. ಯುಜವೇಂದ್ರ ಚಹಲ್ ಕೂಡ ಒಳ್ಳೆಯ ಲಯಕ್ಕೆ ಮರಳಿದ್ದಾರೆ. ಗ್ಲೆನ್ ಮ್ಯಾಕ್ಸ್​ವೆಲ್ ಕಳೆದ ಪಂದ್ಯದಲ್ಲಿ ಬೌಲಿಂಗ್​ನಲ್ಲೂ ಮಿಂಚಿದ್ದರು. ಮೊಹಮ್ಮದ್ ಸಿರಾಜ್ ಮತ್ತು ಕೈಲ್ ಜೇಮೀಸನ್ ಅವರು ಬ್ಯಾಟರ್ಸ್ ಮೇಲೆ ಒತ್ತಡ ಹೇರಬಲ್ಲವರಾಗಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಮ್ಯಾಜಿಕಲ್ ಇನಿಂಗ್ಸ್ ಕಟ್ಟಿದ್ದ ಮ್ಯಾಕ್ಸ್​ವೆಲ್ ಅವರು ಇವತ್ತಿನ ಪಂದ್ಯದಲ್ಲಿ 18 ರನ್ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ ಏಳು ಸಾವಿರ ರನ್ ಮೈಲಿಗಲ್ಲು ಮುಟ್ಟಲಿದ್ದಾರೆ.

  ಪರಸ್ಪರ ಸೋಲು ಗೆಲುವು ಎಷ್ಟು?: ಐಪಿಎಲ್​ನ ಈವರೆಗಿನ 14 ಆವೃತ್ತಿಗಳಲ್ಲಿ ಆರ್​ಸಿಬಿ ಮತ್ತು ಆರ್​ಆರ್ ತಂಡಗಳು 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬೆಂಗಳೂರು 11 ಬಾರಿ ಗೆದ್ದರೆ, ರಾಜಸ್ಥಾನ್ 10 ಪಂದ್ಯಗಳನ್ನ ಗೆದ್ದಿದೆ. ಮೂರು ಪಂದ್ಯಗಳು ರದ್ದುಗೊಂಡಿವೆ. ಕಳೆದ ಐದು ಪಂದ್ಯಗಳಲ್ಲಿ ರಾಜಸ್ಥಾನ ಗೆದ್ದಿರುವುದು ಒಮ್ಮೆ ಮಾತ್ರವೇ. ರಾಯಲ್ಸ್ ವಿರುದ್ಧ ಕಳೆದ ಮೂರು ಬಾರಿ ಆಡಿದ ಪಂದ್ಯಗಳೆಲ್ಲವನ್ನೂ ಬೆಂಗಳೂರಿಗರೇ ಗೆದ್ದಿದ್ದಾರೆ. ಹೀಗಾಗಿ, ಇವತ್ತಿನ ಪಂದ್ಯದಲ್ಲಿ ಬೆಂಗಳೂರು ತಂಡವೇ ಹಾಟ್ ಫೇವರಿಟ್ ಎನಿಸಿದೆ.

  ತಂಡಗಳು:

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡೀ ವಿಲಿಯರ್ಸ್, ಡ್ಯಾನ್ ಕ್ರಿಸ್ಟಿಯನ್, ಶಹಬಾಜ್ ಅಹ್ಮದ್, ಕೈಲ್ ಜೇಮೀಸನ್/ವನಿಂದು ಹಸರಂಗ, ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್, ಮೊಹಮ್ಮದ್ ಸಿರಾಜ್.

  ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಡೇವಿಡ್ ಮಿಲ್ಲರ್/ಲಿಯಾಮ್ ಲಿವಿಂಗ್​ಸ್ಟೋನ್, ಮಹಿಪಾಲ್ ಲೊಮ್ರೋರ್, ರಿಯಾನ್ ಪರಗ್, ರಾಹುಲ್ ತೆವಾಟಿಯಾ, ಕ್ರಿಸ್ ಮಾರಿಸ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ/ಜಯದೇವ್ ಉನಾದ್ಕತ್, ಮುಸ್ತಾಫಿಜುರ್ ರಹಮಾನ್.
  Published by:Vijayasarthy SN
  First published: