RCB vs PBKS- ಪ್ಲೇ ಆಫ್​ಗೆ ಆರ್​ಸಿಬಿ; ಚೇಸಿಂಗ್​ನಲ್ಲಿ ಹಳಿತಪ್ಪಿದ ಪಂಜಾಬ್

IPL 2021, Match No. 48, PBKS vs RCB: ಪಂಜಾಬ್ ಕಿಂಗ್ಸ್ ವಿರುದ್ಧ ಶಾರ್ಜಾದಲ್ಲಿ ಗೆದ್ದು ಆರ್​ಸಿಬಿ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಸಾಧ್ಯತೆ ಈಗ ಅದೃಷ್ಟದಾಟದ ಮೇಲೆ ಅವಲಂಬಿತವಾಗಿದೆ.

ಆರ್​ಸಿಬಿ ತಂಡ

ಆರ್​ಸಿಬಿ ತಂಡ

 • Share this:
  ಶಾರ್ಜಾ, ಅ. 03: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಪ್ಲೇ ಆಫ್ ಪ್ರವೇಶಿಸಿದೆ. ಇಂದು ನಡೆದ ಐಪಿಎಲ್ 48ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ 6 ರನ್​ಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 12 ಪಂದ್ಯಗಳಿಂದ 16 ಅಂಕ ಗಳಿಸಿ ಮುಂದಿನ ಹಂತದ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇಂದು ಗೆಲ್ಲಲು ಆರ್​ಸಿಬಿ ಒಡ್ಡಿದ 165 ರನ್​ಗಳ ಪ್ರಬಲ ಸವಾಲನ್ನು ಭರ್ಜರಿಯಾಗಿ ಬೆನ್ನತ್ತುತ್ತಿದ್ದ ಪಂಜಾಬ್ ಕಿಂಗ್ಸ್ 11ನೇ ಓವರ್​ನಲ್ಲಿ ಹಳಿ ತಪ್ಪಿತು. ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಅವರ 91 ರನ್​ಗಳ ಆರಂಭಿಕ ಜೊತೆಯಾಟದ ಪ್ರಯೋಜನ ಪಡೆದು ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಉಳಿದ ಬ್ಯಾಟರ್ಸ್ ಯಶಸ್ವಿಯಾಗಲಿಲ್ಲ. ಕೊನೆಯಲ್ಲಿ ಶಾರುಕ್ ಖಾನ್ ಒಂದು ಸಿಕ್ಸರ್, ಒಂದು ಬೌಂಡರಿ ಭಾರಿಸಿ ಪಂಜಾಬ್​ಗೆ ಗೆಲುವಿನ ಆಸೆ ಚಿಗುರಿಸಿದರಾದರೂ ವಿಜಯಮಾಲೆ ಅಂತಿಮವಾಗಿ ಆರ್​ಸಿಬಿಗೆ ಸಿಕ್ಕಿತು.

  ಇದಕ್ಕೆ ಮುನ್ನ, ಗ್ಲೆನ್ ಮ್ಯಾಕ್ಸ್​ವೆಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಪಂಜಾಬ್ ತಂಡಕ್ಕೆ ಗೆಲ್ಲಲು 165 ರನ್ ಕಠಿಣ ಸವಾಲು ನೀಡಿತು. ನಿಧಾನಗತಿಯ ಈ ಪಿಚ್​ನಲ್ಲಿ ಆರ್​ಸಿಬಿ ಗಳಿಸಿದ ಸ್ಕೋರು ಬೃಹತ್ ಮೊತ್ತವೇ ಆಗಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರಿಬ್ಬರೂ ಮೊದಲ ವಿಕೆಟ್​ಗೆ 68 ರನ್ ಜೊತೆಯಾಟ ಆಡಿ ತಂಡದ ಇನಿಂಗ್ಸ್​ಗೆ ಬುನಾದಿ ಹಾಕಿದರು. ವಿರಾಟ್ ಕೊಹ್ಲಿ ನಿರ್ಗಮನದ ಬೆನ್ನಲ್ಲೇ ಡೇನಿಯಲ್ ಕ್ರಿಸ್ಟಿಯನ್ ಕೂಡ ಔಟಾದರು. ಸ್ವಲ್ಪ ಹೊತ್ತಿನ ಬಳಿಕ ದೇವದತ್ ಪಡಿಕ್ಕಲ್ ಔಟಾದರು. ಮೋಯ್ಸಸ್ ಹೆನ್ರಿಕ್ಸ್ ಅವರೇ ಈ ಮೂರು ವಿಕೆಟ್ ಕಿತ್ತರು. 5 ರನ್ ಅಂತರದಲ್ಲಿ 3 ವಿಕೆಟ್ ಉರುಳಿದರೂ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಎಬಿ ಡೀವಿಲಿಯರ್ಸ್ 4ನೇ ವಿಕೆಟ್​ಗೆ 73 ರನ್ ಜೊತೆಯಾಟ ಆಡಿ ತಂಡಕ್ಕೆ ದೊಡ್ಡ ಮೊತ್ತ ದೊರಕಿಸಿಕೊಟ್ಟರು. ಗ್ಲೆನ್ ಮ್ಯಾಕ್ಸ್​ವೆಲ್ 33 ಬಾಲ್​ನಲ್ಲಿ 57 ರನ್ ಗಳಿಸಿದರು. ಕೊನೆಯಲ್ಲಿ ಬಂದ ಶಹಬಾಜ್ ಅಹ್ಮದ್ ಕೂಡ ಸಿಕ್ಸರ್ ಸಿಡಿಸಿ ತಂಡದ ಸ್ಕೋರು ಉಬ್ಬುವಂತೆ ಮಾಡಿದರು.

  ಪಂಜಾಬ್ ಕಿಂಗ್ಸ್ ತಂಡದ ಮೋಯ್ಸಸ್ ಹೆನ್ರಿಕ್ಸ್ ಮತ್ತು ಮೊಹಮ್ಮದ್ ಶಮಿ ತಲಾ 3 ವಿಕೆಟ್ ಗಳಿಸಿ ಗಮನ ಸೆಳೆದರು. ಕೊನೆಯ ಓವರ್​ನಲ್ಲಿ ಶಮಿ ಸತತ 2 ವಿಕೆಟ್ ಪಡೆದರು. ಆರ್​ಸಿಬಿಯ 164 ರನ್ ಮೊತ್ತವು ಈ ಸೀಸನ್​ನಲ್ಲಿ ಆ ತಂಡದ ಗರಿಷ್ಠ ಸ್ಕೋರ್ ಆಗಿದೆ. ಈ ಪಿಚ್​ನಲ್ಲಿ ಇದು ಬೃಹತ್ ಮೊತ್ತವೆನಿಸಿದ್ದು, ಪಂಜಾಬ್ ತಂಡ ಗೆಲ್ಲಲು ಹರಸಾಹಸ ಮಾಡುವುದು ಅನಿವಾರ್ಯವಾಗಬಹುದು.
  RESULT DATA:
  ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಹಿಂದಿನ ಪಂದ್ಯಗಳಲ್ಲಿ ವರ್ಕೌಟ್ ಆಗಿದ್ದ ಕಾಂಬಿನೇಶನ್ ಅನ್ನು ಇವತ್ತೂ ಮುಂದುವರಿಸಲಾಯಿತು. ಆದರೆ, ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೂರು ಬದಲಾವಣೆಗಳನ್ನ ಮಾಡಲಾಯಿತು. ಫೇಬಿಯನ್ ಅಲನ್, ದೀಪಕ್ ಹೂಡ, ನೇಥನ್ ಎಲಿಸ್ ಬದಲು ಹರ್​ಪ್ರೀತ್ ಬ್ರಾರ್, ಸರ್ಫರಾಜ್ ಖಾನ್ ಮತ್ತು ಮೋಯ್ಸಸ್ ಹೆನ್ರಿಕ್ಸ್ ಅವರನ್ನ ಆಡಿಸಲಾಗುತ್ತಿದೆ. ಸರ್ಫರಾಜ್ ಖಾನ್ ಅವರು ಎರಡು ಕ್ಯಾಚ್ ಮತ್ತು ಒಂದು ರನ್ ಔಟ್ ಮಾಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ಧಾರೆ. ಮೋಯ್ಸಿಸ್ ಹೆನ್ರಿಕ್ಸ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಆರ್​ಸಿಬಿ ಬ್ಯಾಟಿಂಗ್ ಆರ್ಭಟವನ್ನು ಸಾಕಷ್ಟು ತಗ್ಗಿಸುವಲ್ಲಿ ಯಶಸ್ವಿಯಾದರು.
  POINTS TABLE:
  ಬೆಂಗಳೂರು ತಂಡ ಇದೀಗ 12 ಪಂದ್ಯಗಳಿಂದ 16 ಅಂಕಗಳನ್ನ ಹೊಂದಿ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ. ಅದರ ಕೆಳಗಿರುವ ನಾಲ್ಕು ತಂಡಗಳು 12 ಪಂದ್ಯಗಳಿಂದ ಕೇವಲ 10 ಅಂಕಗಳನ್ನ ಹೊಂದಿವೆ. ಬೆಂಗಳೂರು ತಂಡಕ್ಕೆ ತನಗೆ ಉಳಿದಿರುವ ಎರಡು ಪಂದ್ಯಗಳನ್ನ ಗೆದ್ದರೆ ಟಾಪ್-2ರಲ್ಲಿ ಸ್ಥಾನ ಪಡೆಯುವ ಅವಕಾಶ ಇದೆ.

  ಪಂಜಾಬ್​ಗೆ ಪ್ಲೇ ಆಫ್ ಅವಕಾಶ ಎಷ್ಟು?

  ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ 13 ಪಂದ್ಯಗಳಿಂದ 10 ಅಂಕಗಳನ್ನ ಹೊಂದಿದೆ. ಕೋಲ್ಕತಾ, ರಾಜಸ್ಥಾನ್ ಮತ್ತು ಮುಂಬೈ ತಂಡಗಳು ಇಷ್ಟೇ ಅಂಕಗಳನ್ನ ಹೊಂದಿವೆ. ಈಗ ಬೆಂಗಳೂರು ವಿರುದ್ಧ ಪಂಜಾಬ್ ಸೋತಿರುವುದರಿಂದ ಇತರ ಮೂರು ತಂಡಗಳ ಫಲಿತಾಂಶದ ಮೇಲೆ ಪಂಜಾಬ್ ಅವಲಂಬಿತವಾಗಬೇಕಾಗುತ್ತದೆ.

  ಇದನ್ನೂ ಓದಿ: CSK vs RR- ಶಿವಂ ದುಬೆ, ಜೈಸ್ವಾಲ್ ಅಮೋಘ ಆಟ; ಚೆನ್ನೈ ವಿರುದ್ಧ ರಾಯಲ್ಸ್​ಗೆ ಭರ್ಜರಿ ಜಯ

  ತಂಡಗಳು:

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡೀವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಸ್ಟಿಯನ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್.

  ಪಂಜಾಬ್ ಕಿಂಗ್ಸ್ ತಂಡ: ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ನಿಕೋಲಾಸ್ ಪೂರನ್, ಏಡನ್ ಮರ್ಕ್ರಮ್, ಸರ್ಫರಾಜ್ ಖಾನ್, ಶಾರುಕ್ ಖಾನ್, ಹರ್​ಪ್ರೀತ್ ಬ್ರಾರ್, ರವಿ ಬಿಷ್ಣೋಯ್, ಮೋಯ್ಸಸ್ ಹೆನ್ರಿಕ್ಸ್, ಅರ್ಷ್​ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

  ಸ್ಕೋರು ವಿವರ:

  ಆರ್​ಸಿಬಿ 20 ಓವರ್ 164/7
  (ಗ್ಲೆನ್ ಮ್ಯಾಕ್ಸ್​ವೆಲ್ 57, ದೇವದತ್ ಪಡಿಕ್ಕಲ್ 40, ವಿರಾಟ್ ಕೊಹ್ಲಿ 25, ಎಬಿ ಡೀವಿಲಿಯರ್ಸ್ 23 ರನ್ – ಮೋಯ್ಸಸ್ ಹೆನ್ರಿಕ್ಸ್ 12/3, ಮೊಹಮ್ಮದ್ ಶಮಿ 39/3)

  ಪಂಜಾಬ್ ಕಿಂಗ್ಸ್ 20 ಓವರ್ 158/6
  (ಮಯಂಕ್ ಅಗರ್ವಾಲ್ 57, ಕೆಎಲ್ ರಾಹುಲ್ 39, ಏಡನ್ ಮಾರ್ಕ್ರಮ್ 20, ಶಾರುಕ್ ಖಾನ್ 16, ಮೋಯ್ಸಸ್ ಹೆನ್ರಿಕ್ಸ್ ಅಜೇಯ 12 ರನ್ – ಯುಜವೇಂದ್ರ ಚಹಲ್ 29/3)
  Published by:Vijayasarthy SN
  First published: