ದುಬೈ, ಸೆ. 26: ಆರ್ಸಿಬಿ ತಂಡ ಒಡ್ಡಿದ 166 ರನ್ಗಳ ಸಾಧಾರಣ ಮೊತ್ತದ ಸವಾಲನ್ನ ಬೆನ್ನತ್ತುವಲ್ಲಿ ಮುಂಬೈ ಇಂಡಿಯನ್ಸ್ ವಿಫಲವಾಗಿದೆ. ಬೆಂಗಳೂರು ತಂಡದ ಬೌಲರ್ಗಳ ಮಾರಕ ಬೌಲಿಂಗ್ಗೆ ಸಿಲುಕಿದ ಮುಂಬೈ ತಂಡ ಕೇವಲ 111 ರನ್ಗೆ ಆಲೌಟ್ ಅಗಿ 54 ರನ್ಗಳಿಂದ ಪರಾಭವಗೊಂಡಿದೆ. ಎರಡು ಪಂದ್ಯಗಳ ಬಳಿಕ ಆರ್ಸಿಬಿ ಕೊನೆಗೂ ಗೆಲುವಿನ ನಗೆ ಬೀರಿತು. ಅತ್ತ ಮುಂಬೈ ಇಂಡಿಯನ್ಸ್ ತಂಡ ಸತತ ಮೂರನೇ ಸೋಲಿನಿಂದ ಕಂಗೆಟ್ಟಿದೆ. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಪಡೆದರು. ಒಟ್ಟಾರೆ ಹರ್ಷಲ್ 4 ವಿಕೆಟ್ ಪಡೆದು ಆರ್ಸಿಬಿ ಗೆಲುವಿನ ರೂವಾರಿ ಎನಿಸಿದರು. ಯುಜವೇಂದ್ರ ಚಹಲ್ ಅವರೂ 3 ವಿಕೆಟ್ ಪಡೆದರು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಆರಂಭ ಸಿಕ್ಕಿದ್ದು ಬಿಟ್ಟರೆ ಇನ್ನುಳಿದಂತೆ ನಿರಾಸೆಯೇ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕ್ವಿಂಟಾನ್ ಡೀಕಾಕ್ ಮೊದಲ ವಿಕೆಟ್ಗೆ 57 ರನ್ ಜೊತೆಯಾಟ ಆಡಿದರು. ಆ ಬಳಿಕ ಮುಂಬೈ ಇಂಡಿಯನ್ಸ್ ಚೇಸಿಂಗ್ ಕಳಪೆಯಾಯಿತು. ಒಂದು ಹಂತದಲ್ಲಿ ಒಂದು ವಿಕೆಟ್ಗೆ 79 ರನ್ ಗಳಿಸಿದ್ದ ಮುಂಬೈ 32 ರನ್ ಅಂತರದಲ್ಲಿ 9 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ಸ್ ಬಿಟ್ಟರೆ ಉಳಿದವರ್ಯಾರು ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ. ಆರ್ಸಿಬಿ ಬೌಲರ್ಗಳಾದ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರು ಉತ್ತಮ ಬೌಲಿಂಗ್ ಪ್ರದರ್ಶನ ತೋರಿ ಎಂಐ ಬ್ಯಾಟುಗಾರರನ್ನ ಕಟ್ಟಿಹಾಕಿದರು.
ಇದಕ್ಕೂ ಮುನ್ನವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 165 ರನ್ ಮೊತ್ತ ಕಲೆಹಾಕಿತು. ಮುಂಬೈ ಇಂಡಿಯನ್ಸ್ ಎದುರು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ಆರಂಭಿಕ ಆಘಾತ ಅನುಭವಿಸಿ ಬಳಿಕ ಚೇತರಿಸಿಕೊಂಡಿತು. ದೇವದತ್ ಪಡಿಕ್ಕಲ್ ಎರಡನೇ ಓವರ್ನಲ್ಲೇ ಔಟಾಗಿ ಹೋದರು. ಬಳಿಕ ವಿರಾಟ್ ಕೊಹ್ಲಿ ಮತ್ತು ಕೆಎಸ್ ಭರತ್ ಉತ್ತಮ ಬ್ಯಾಟಿಂಗ್ ಮಾಡಿ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಡಿ ದಾಟಿದ ಮೈಲಿಗಲ್ಲು ಮುಟ್ಟಿದರು. ಈ ಸಾಧನೆ ಮಾಡಿದ ಐದನೇ ಆಟಗಾರ ಅವರಾದರು. ಬಳಿಕ ಭರತ್ 32 ರನ್ ಗಳಿಸಿ ಔಟಾಗುವುದರೊಂದಿಗೆ 68 ರನ್ಗಳ ಎರಡನೇ ವಿಕೆಟ್ ಜೊತೆಯಾಟ ಅಂತ್ಯವಾಯಿತು. ವಿರಾಟ್ ಕೊಹ್ಲಿ ಎರಡು ಜೀವದಾನ ಪಡೆದೂ ಉತ್ತಮ ಆಟ ಮುಂದುವರಿಸಿ ಅರ್ಧಶತಕ ಗಳಿಸಿದ ಬಳಿಕ ಔಟಾದರು. ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಅರ್ಧಶತಕ ಭಾರಿಸಿದರು. ಆರ್ಸಿಬಿ 18 ಓವರ್ ಬಳಿಕ 3 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ 180ಕ್ಕೂ ಹೆಚ್ಚು ಮೊತ್ತ ಗಳಿಸುವ ನಿರೀಕ್ಷೆಯಲ್ಲಿತ್ತು. ಆದರೆ, ಬುಮ್ರಾ ಮಾಡಿದ 19ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಮತ್ತು ಎಬಿಡಿ ಇಬ್ಬರೂ ಬಲಿಯಾದರು. ಕೊನೆಯ ಎರಡು ಓವರ್ನಲ್ಲಿ ಕೇವಲ ಬಂದಿದ್ದು ಕೇವಲ 9 ರನ್ ಮಾತ್ರ. ಆದರೆ ಮೂರು ವಿಕೆಟ್ ಉರುಳಿಬಿದ್ದು ಅಂತಿಮವಾಗಿ ಆರ್ಸಿಬಿ 165 ರನ್ ಸ್ಕೋರಿಗೆ ತೃಪ್ತಿಪಡಬೇಕಾಯಿತು.
ಆರ್ಸಿಬಿ ಈ ಗೆಲುವಿನೊಂದಿಗೆ ಸತತ ಸೋಲುಗಳ ಸರಮಾಲೆಯಿಂದ ಹೊರಬಂದಿತು. ಅಲ್ಲದೇ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿತು. 10 ಪಂದ್ಯಗಳಿಂದ 12 ಅಂಕ ಗಳಿಸಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಮೇಲಾಗಿ ಅದರ ನೆಟ್ ರನ್ ರೇಟ್ ಮೈನಸ್ 0.7ರಿಂದ ಈಗ ಮೈನಸ್ 0.359ಕ್ಕೆ ಏರಿದೆ. ಆರ್ಸಿಬಿಗಿಂತ ಒಂದು ಸ್ಥಾನ ಹಿಂದಿರುವ ಕೆಕೆಆರ್ 4 ಪಾಯಿಂಟ್ಗಳಷ್ಟು ಹಿಂದುಳಿದಿದೆ. ಇದು ಆರ್ಸಿಬಿಯ ಪ್ಲೇ ಆಫ್ ಸಾಧ್ಯತೆಯನ್ನ ದಟ್ಟಗೊಳಿಸಿದಂತಾಗಿದೆ. ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನ ಸೆ. 29ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.
ಅತ್ತ, ಮುಂಬೈ ಇಂಡಿಯನ್ಸ್ ತಂಡ ಯುಎಇಯಲ್ಲಿ ಮುಗ್ಗರಿಸುವುದು ಮುಂದುವರಿದಿದೆ. ಇದು ತಂಡಕ್ಕೆ ಹ್ಯಾಟ್ರಿಕ್ ಸೋಲು. ಅಂಕಪಟ್ಟಿಯಲ್ಲಿ ಅದು ಈಗ 6ನೇ ಸ್ಥಾನಕ್ಕೆ ಕುಸಿದಿದೆ.