HOME » NEWS » Ipl » RCB VS KKR LIVE SCORE IPL 2021 RCB WON BY 38 ZP

RCB vs KKR: ಕೊಹ್ಲಿ ಪಡೆಯ ಭರ್ಜರಿ ಪ್ರದರ್ಶನ: ಆರ್​ಸಿಬಿಗೆ ಹ್ಯಾಟ್ರಿಕ್ ಗೆಲುವು

ಉಭಯ ತಂಡಗಳು ಇದುವರೆಗೆ 27 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್​ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ 13 ಬಾರಿ ವಿಜಯದ ನಗೆ ಬೀರಿದೆ.

news18-kannada
Updated:April 18, 2021, 8:49 PM IST
RCB vs KKR: ಕೊಹ್ಲಿ ಪಡೆಯ ಭರ್ಜರಿ ಪ್ರದರ್ಶನ: ಆರ್​ಸಿಬಿಗೆ ಹ್ಯಾಟ್ರಿಕ್ ಗೆಲುವು
rcb
  • Share this:
ಚೆನ್ನೈನಲ್ಲಿ ನಡೆದ ಐಪಿಎಲ್​ನ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್​ ವಿರುದ್ದ 38 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್ ಸೀಸನ್ 14ನಲ್ಲಿ ಮೊದಲ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಹೆಗ್ಗಳಿಕೆ ಕೊಹ್ಲಿ ಪಡೆಯ ಪಾಲಾಗಿದೆ. ಆರ್​ಸಿಬಿ ನೀಡಿದ 205 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್​ 8 ವಿಕೆಟ್ ನಷ್ಟಕ್ಕೆ 166 ರನ್​ಗಳಿಸಲಷ್ಟೇ ಶಕ್ತರಾದರು.

ಈ ಕಠಿಣ ಗುರಿ ಬೆನ್ನತ್ತಿದ ಕೆಕೆಆರ್​ಗೆ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. 2ನೇ ಓವರ್​ನಲ್ಲಿ ಕೈಲ್ ಜೇಮಿಸನ್​ಗೆ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಈ ಓವರ್​ನ 5ನೇ ಎಸೆತದಲ್ಲಿ ಸಬ್ಸ್​ಟ್ಯೂಟ್ ಫೀಲ್ಡರ್ ಡೇನಿಯಲ್ ಕ್ರಿಶ್ಚಿಯನ್ ಹಿಡಿದ ಡೈವಿಂಗ್ ಕ್ಯಾಚ್​ನಿಂದ ಗಿಲ್ (21) ಹೊರ ನಡೆದರು.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಆಟಗಾರ ನಿತೀಶ್ ರಾಣಾ ಕೂಡ ಉತ್ತಮ ಸಾಥ್ ನೀಡಿದರು. ಪರಿಣಾಮ 6ನೇ ಓವರ್​ ವೇಳೆಗೆ ಕೆಕೆಆರ್​ ತಂಡದ ಮೊತ್ತ 50ರ ಗಡಿದಾಟಿತು. ಆದರೆ 6ನೇ ಓವರ್​ನ ಅಂತಿಮ ಎಸೆತದಲ್ಲಿ ರಾಹುಲ್ ತ್ರಿಪಾಠಿ (25) ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಚಹಲ್ ಎಸೆತದಲ್ಲಿ ರಾಣಾ (18) ಕ್ಯಾಚ್ ನೀಡಿದರು.

ಇನ್ನು ಬಂದ ವೇಗದಲ್ಲಿ ದಿನೇಶ್ ಕಾರ್ತಿಕ್ (2) ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಈ ವೇಳೆ ಮೇಲುಗೈ ಸಾಧಿಸಿದ ಆರ್​ಸಿಬಿ ಬೌಲರುಗಳು ರನ್​ಗತಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಕೆಕೆಆರ್​ ಮೊದಲ ಹತ್ತು ಓವರ್​ಗಳಲ್ಲಿ 83 ರನ್​ಗಳಿಸಲಷ್ಟೇ ಶಕ್ತರಾದರು.

ಈ ವೇಳೆ ಜೊತೆಗೂಡಿದ ಇಯಾನ್ ಮೋರ್ಗನ್ ಹಾಗೂ ಶಕೀಬ್ ಅಲ್ ಹಸನ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು. ಅದರಂತೆ 13ನೇ ಓವರ್​ ವೇಳೆ ತಂಡದ ಮೊತ್ತ 100ರ ಗಡಿದಾಟಿತು. ಇದರ ಬೆನ್ನಲ್ಲೇ ಬಿರುಸಿನ ಆಟಕ್ಕೆ ಮುಂದಾದ ಮೋರ್ಗನ್  (29) ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಆಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಚಹಲ್ ಒಂದೇ ಓವರ್​ನಲ್ಲಿ 1 ಸಿಕ್ಸ್, 3 ಬೌಂಡರಿ ಬಾರಿಸುವ ಮೂಲಕ ಅಬ್ಬರಿಸಿದರು. ಪರಿಣಾಮ ಕೊನೆಯ ಮೂರು ಓವರ್​ಗಳಲ್ಲಿ 58 ರನ್​ಗಳ ಅವಶ್ಯಕತೆಯಿತ್ತು.

ಈ ವೇಳೆ 18ನೇ ಓವರ್ ಎಸೆದ ಕೈಲ್ ಜೇಮಿಸನ್ ಶಕೀಬ್ ಅಲ್ ಹಸನ್ (25) ಹಾಗೂ ಪ್ಯಾಟ್ ಕಮಿನ್ಸ್ (6) ವಿಕೆಟ್ ಪಡೆಯುವ ಮೂಲಕ ಆರ್​​ಸಿಬಿಗೆ 2 ಯಶಸ್ಸು ತಂದುಕೊಟ್ಟರು. ಇದಾಗ್ಯೂ ಕೊನೆಯ 12 ಎಸೆತಗಳಲ್ಲಿ ಕೆಕೆಆರ್​ಗೆ 44 ರನ್​ಗಳ ಅವಶ್ಯಕತೆಯಿತ್ತು.

19ನೇ ಓವರ್ ಎಸೆದ ಮೊಹಮ್ಮದ್ ಸಿರಾಜ್ ಆಂಡ್ರೆ ರಸೆಲ್ ಅವರನ್ನು ಸಂಪೂರ್ಣ ನಿಯಂತ್ರಿಸಿ ಕೇವಲ 1 ರನ್ ಮಾತ್ರ ನೀಡಿದರು. ಅದರಂತೆ ಅಂತಿಮ ಓವರ್​ನಲ್ಲಿ 43 ರನ್​ಗಳು ಬೇಕಿತ್ತು. 20 ಓವರ್​ ಎಸೆದ ಹರ್ಷಲ್ ಪಟೇಲ್ ಮೊದಲ ಎಸೆತದಲ್ಲೇ ರಸೆಲ್ (31) ವಿಕೆಟ್ ಪಡೆದರು. ಅಲ್ಲದೆ ಕೇವಲ 4 ರನ್​ ನೀಡಿ ಕೆಕೆಆರ್​ ತಂಡವನ್ನು 166 ಕ್ಕೆ ನಿಯಂತ್ರಿಸಿದರು. ಇದರೊಂದಿಗೆ ಆರ್​ಸಿಬಿ ಸತತ ಮೂರು ದಾಖಲಿಸುವ ಮೂಲಕ ಹ್ಯಾಟ್ರಿಕ್ ಗೆಲುವು ತನ್ನದಾಗಿಸಿಕೊಂಡಿತು.ಆರ್​ಸಿಬಿ ಪರ 3 ಓವರ್​ನಲ್ಲಿ 41 ರನ್ ನೀಡಿ ಕೈಲ್ ಜೇಮಿಸನ್ 3 ವಿಕೆಟ್ ಪಡೆದರೆ, ಯುಜುವೇಂದ್ರ ಚಹಲ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು.ಅದರಂತೆ ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ 2ನೇ ಓವರ್​ನಲ್ಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ವರುಣ್ ಚಕ್ರವರ್ತಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು. ಈ ವೇಳೆ ರಾಹುಲ್ ತ್ರಿಪಾಠಿ ಹಿಡಿದ ಅತ್ಯುತ್ತಮ ಕ್ಯಾಚ್​​ಗೆ ಕೊಹ್ಲಿ (5) ಔಟಾದರು. ಇದರ ಬೆನ್ನಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ರಜತ್ ಪಾಟಿದಾರ್ (1) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ 3 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್​ ಸಿಡಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಆರ್​ಸಿಬಿ ಮೊತ್ತ 45ಕ್ಕೆ ಬಂದು ನಿಂತಿತು. 6 ಓವರ್ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸ್​ವೆಲ್ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಅವರ 2ನೇ ಅರ್ಧಶತಕ. ಅಲ್ಲದೆ ಮೊದಲ 10 ಓವರ್​ನಲ್ಲಿ ಆರ್​ಸಿಬಿ 84 ರನ್​ ಕಲೆಹಾಕಿತು.

ಪ್ರಸಿದ್ಧ್ ಕೃಷ್ಣ ಎಸೆದ 12ನೇ ಓವರ್​ನಲ್ಲಿ ತ್ರಿಪಾಠಿಗೆ ಕ್ಯಾಚ್ ನೀಡಿ ದೇವದತ್ ಪಡಿಕ್ಕಲ್(25) ನಿರ್ಗಮಿಸಿದರು. ಈ ವೇಳೆ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ 4 ರನ್​ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.

ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸಿ-ಎಬಿಡಿ ಕೆಕೆಆರ್​ ಬೌಲರುಗಳ ಬೆಂಡೆತ್ತಿದರು. ಪರಿಣಾಮ ಆರ್​ಸಿಬಿ 15 ಓವರ್​ ಮುಕ್ತಾಯದ ವೇಳೆ ತಂಡದ ಮೊತ್ತ 134ಕ್ಕೆ ಬಂದು ನಿಂತಿತು. ತಂಡದ ಮೊತ್ತ 148 ಆಗಿದ್ದ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಕ್ಯಾಚ್ ನೀಡಿದ ಮ್ಯಾಕ್ಸ್​ವೆಲ್ ತಮ್ಮ ಬಿರುಸಿನ ಇನಿಂಗ್ಸ್ ಅಂತ್ಯಗೊಳಿಸಿದರು. ಇದಕ್ಕೂ ಮುನ್ನ ಮ್ಯಾಕ್ಸ್​ವೆಲ್ 49 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 9 ಸೂಪರ್ ಬೌಂಡರಿಗಳೊಂದಿಗೆ 78 ರನ್​ಗಳನ್ನು ಚಚ್ಚಿದ್ದರು.

ಮ್ಯಾಕ್ಸ್​ವೆಲ್ ನಿರ್ಗಮನದ ಬೆನ್ನಲ್ಲೇ ಎಬಿಡಿ ಅಬ್ಬರ ಶುರು ಮಾಡಿದರು. ಅದರಂತೆ ಕೇವಲ 27 ಎಸೆತಗಳಲ್ಲಿ ಎಬಿಡಿ ಹಾಫ್ ಸೆಂಚುರಿ ಪೂರೈಸಿದರು. ಈ ಹಂತದಲ್ಲಿ ಎಬಿಡಿಗೆ ಸಾಥ್ ನೀಡಿದ ಕೈಲ್ ಜೇಮಿಸನ್ ಕೂಡ ಸಿಕ್ಸ್-ಫೋರ್​ಗಳನ್ನು ಬಾರಿಸಿ ಮಿಂಚಿದರು. ಪರಿಣಾಮ 19 ಓವರ್ ಮುಕ್ತಾಯದ ವೇಳೆ ಆರ್​ಸಿಬಿ ಸ್ಕೋರ್ 183ಕ್ಕೇರಿತು.

ಆಂಡ್ರೆ ರಸೆಲ್ ಎಸೆದ ಕೊನೆಯ ಓವರ್​ನ ಮೊದಲ 2 ಎಸೆತದಲ್ಲಿ ಎಬಿಡಿ ಫೋರ್-ಸಿಕ್ಸ್ ಸಿಡಿಸಿದರು. 3ನೇ ಎಸೆತದಲ್ಲಿ 2 ರನ್+ವೈಡ್. ನಾಲ್ಕನೇ ಎಸೆತದಲ್ಲಿ ಬೌಂಡರಿ. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 6ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಎಬಿಡಿ ತಂಡದ ಮೊತ್ತವನ್ನು 204 ಕ್ಕೆ ತಂದು ನಿಲ್ಲಿಸಿದರು. ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್​ ಕೇವಲ 34 ಎಸೆತಗಳಲ್ಲಿ 3 ಸಿಕ್ಸ್, 9 ಬೌಂಡರಿಗಳೊಂದಿಗೆ ಅಜೇಯ 78 ರನ್​ ಬಾರಿಸಿದರು. ಕೆಕೆಆರ್ ಪರ 4 ಓವರ್​ನಲ್ಲಿ 39 ರನ್​ 2 ವಿಕೆಟ್ ಪಡೆದ ವರುಣ್ ಚಕ್ರವರ್ತಿ ಯಶಸ್ವಿ ಬೌಲರ್ ಎನಿಸಿಕೊಂಡರು.

IPL 2021 Rcb vs Kkr playing 11: ಆರ್​ಸಿಬಿ ತಂಡದಲ್ಲಿ 1 ಬದಲಾವಣೆ: ಎರಡು ತಂಡಗಳು ಹೀಗಿವೆ

ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್​ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ 13 ಬಾರಿ ವಿಜಯದ ನಗೆ ಬೀರಿದೆ.
Published by: zahir
First published: April 18, 2021, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories