ಶಾರ್ಜಾ, ಅ. 11: ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿಯುವ ಗಟ್ಟಿಯಾದ ಕನಸು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಕೆಆರ್ ಇಂದು ದೊಡ್ಡ ತೊಡರಗಾಲು ಹಾಕುತ್ತಿದೆ. ಇಂದು ಬೆಂಗಳೂರು ಮತ್ತು ಕೋಲ್ಕತಾ ತಂಡಗಳ ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದು ಈ ಐಪಿಎಲ್ನ ಮೊದಲ ನಾಕೌಟ್ ಮ್ಯಾಚ್ ಎಂದರೂ ತಪ್ಪಲ್ಲ. ನಿನ್ನೆ ಪ್ಲೇ ಆಫ್ನಲ್ಲಿ ಮೊದಲ ಕ್ವಾಲಿಫಯರ್ ಮ್ಯಾಚ್ ನಡೆದರೂ ಅದರಲ್ಲಿ ಸೋತ ತಂಡ ಡೆಲ್ಲಿ ತಂಡಕ್ಕೆ ಎರಡನೇ ಕ್ವಾಲಿಫಯರ್ನಲ್ಲಿ ಆಡುವ ಅವಕಾಶ ಇದೆ. ಆದರೆ, ಇವತ್ತಿನ ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಔಟ್. ಇದೊಂದು ರೀತಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಂತಿದೆ. ಎರಡೂ ತಂಡಗಳು ಕೆಲ ಗಂಭೀರ ಸಮಸ್ಯೆ ಹಾಗು ಹಲವು ಸಕಾರಾತ್ಮಕ ಅಂಶಗಳ ಸಮೇತ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುತ್ತಿವೆ.
ಕೋಲ್ಕತಾ ನೈಟ್ ರೈಡರ್ಸ್ ತಂಡ ಭಾರತದಲ್ಲಿ ನಡೆದ ಟೂರ್ನಿಯ ಮೊದಲಾರ್ಧ ಭಾಗದಲ್ಲಿ ನಿರಾಸೆಯ ಪ್ರದರ್ಶನ ನೀಡಿತ್ತು. ಆದರೆ, ಯುಎಇಯಲ್ಲಿ ನಡೆದ ಏಳು ಪಂದ್ಯಗಳ ಪೈಕಿ ಐದರನ್ನ ಗೆಲುವು ಸಾಧಿಸಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಕಳೆದ ಎರಡು ಋತುಗಳಲ್ಲಿ ಕಡಿಮೆ ನೆಟ್ ರನ್ ರೇಟ್ನಿಂದಾಗಿಯೇ ಪ್ಲೇ ಆಫ್ನಿಂದ ವಂಚಿತವಾಗಿದ್ದ ಕೋಲ್ಕತಾ ಈ ಬಾರಿ ಕೆಲ ಪಂದ್ಯಗಳಲ್ಲಿ ದೊಡ್ಡ ಗೆಲುವು ದಾಖಲಿಸಿ ರನ್ ರೇಟ್ ಉತ್ತಮಪಡಿಸಿಕೊಂಡಿತ್ತು. ಹೀಗಾಗಿ, ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಎರಡು ಪಂದ್ಯದಲ್ಲಿ ಪುಟಿದೆದ್ದು ಭಾರೀ ಗೆಲುವುಗಳನ್ನ ಕಂಡರೂ ಕೆಕೆಆರ್ ರನ್ ರೇಟ್ ಅನ್ನು ಸರಿಗಟ್ಟಲು ಆಗಲಿಲ್ಲ.
ಇನ್ನೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಡೀ ಟೂರ್ನಿಯಲ್ಲಿ ಬಹುತೇಕ ಸ್ಥಿರ ಪ್ರದರ್ಶನ ನೀಡಿದೆ. ಯುಎಇಯಲ್ಲಿ ಆರಂಭದಲ್ಲಿ ಸತತವಾಗಿ ಕೆಲ ಪಂದ್ಯಗಳನ್ನ ಸೋತರೂ ನಂತರ ಬೆಂಗಳೂರಿಗರು ಲಯ ಕಂಡುಕೊಂಡಿದ್ದರು. ಭಾರತದಲ್ಲಿ ಬಹುತೇಕ ಪಂದ್ಯಗಳನ್ನ ಗೆದ್ದಿತ್ತು. ಹೀಗಾಗಿ, ಯುಎಇಯಲ್ಲಿ ನಡೆದ ಏಳು ಪಂದ್ಯಗಳ ಪೈಕಿ ಮೂರರಲ್ಲಿ ಸೋತರೂ ಅದರ ಪ್ಲೇ ಆಫ್ ಸ್ಥಾನ ಅಬಾಧಿತವಾಗಿತ್ತು. ಸನ್ ರೈಸರ್ಸ್ ಹೈದರಾಬಾದ್ ಎದುರು ಸೋಲದಿದ್ದಿದ್ದರೆ ಲೀಗ್ನ ಮೊದಲೆರಡು ಸ್ಥಾನಗಳಲ್ಲಿ ಆರ್ಸಿಬಿ ಹೆಸರು ಇರುತ್ತಿತ್ತು. ಈ ಎಲಿಮಿನೇಟರ್ ಪಂದ್ಯದಲ್ಲಿ ಅಡುವ ಪ್ರಮೇಯ ಬರುತ್ತಿರಲಿಲ್ಲ.
ಕೆಕೆಆರ್ ತಂಡದ ಶಕ್ತಿ: ಯುಎಇಯಲ್ಲಿ ತಂಡ ಫೀನಿಕ್ಸ್ನಂತೆ ಮೇಲೆದ್ದು ಅನೇಕ ಪಂದ್ಯಗಳಲ್ಲಿ ಜಯಭೇರಿ ಭಾರಿಸಿದೆ. ಗೆಲುವಿನ ಲಯ ಸಖತ್ತಾಗಿದೆ. ಅಗತ್ಯ ಸಂದರ್ಭದಲ್ಲಿ ತಂಡದ ಆಟಗಾರರು ಸಮರ್ಥ ಪ್ರದರ್ಶನ ತೋರುತ್ತಿದ್ದಾರೆ. ಅಂದರೆ ನಾಕೌಟ್ ಪಂದ್ಯದಂಥ ಒತ್ತಡದ ಸನ್ನಿವೇಶದಲ್ಲಿ ಕೆಕೆಆರ್ ಬಳಿ ಪುಟಿದೇಳುವ ಆಟಗಾರರಿದ್ದಾರೆ ಎನ್ನುವುದು ಅದರ ಬಹುದೊಡ್ಡ ಸಕಾರಾತ್ಮಕ ಅಂಶ. ಬ್ಯಾಟಿಂಗ್ನಲ್ಲಿ ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಪ್ರಮುಖ ಆಧಾರವಾಗಿದ್ದಾರೆ. ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ, ಸುನೀಲ್ ನರೈನ್, ಲಾಕೀ ಫರ್ಗ್ಯೂಸನ್ ಮತ್ತು ಶಿವಮ್ ಮಾವಿ ಅವರಂಥ ಮಾರಕ ಬೌಲರ್ಸ್ ಪಡೆ ಕೆಕೆಆರ್ ಬಳಿ ಇದೆ.
ಇದನ್ನೂ ಓದಿ: MS Dhoni's Match Winning Knock| ಡೆಲ್ಲಿ ವಿರುದ್ಧ ಗೆಲುವಿನ ಆಟ, Dhoni is Back ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂತಸ!
ಕೆಕೆಆರ್ ತಂಡದ ದೌರ್ಬಲ್ಯ: ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಇತ್ತೀಚೆಗೆ ತಲೆದೋರಿದ ಪ್ರಮುಖ ದೌರ್ಬಲ್ಯ ಎಂದರೆ ಅದರ ನಾಯಕತ್ವ. ಇಯಾನ್ ಮಾರ್ಗನ್ ಅವರ ನಾಯಕತ್ವದ ಬಗ್ಗೆ ಬಹಳಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಅವರು ರನ್ ಗಳಿಸಲು ಪರದಾಡುತ್ತಿದ್ಧಾರೆ. ಜೊತೆಗೆ ಆನ್ಫೀಲ್ಡ್ನಲ್ಲಿ ಅವರು ನಾಯಕನಾಗಿ ಆಟಗಾರರಿಗೆ ದಿಗ್ದರ್ಶನ ಕೊಡಲು ವಿಫಲರಾಗುತ್ತಿರುವುದು ಕಂಡುಬಂದಿದೆ. ಹಾಗೆಯೇ, ಆಂಡ್ರೆ ರಸೆಲ್ ಅವರ ಲಭ್ಯತೆ ಇನ್ನೂ ಖಚಿತವಾಗಿಲ್ಲ. ಅವರು ಆಡಿದರೂ ಅವರ ಫಾರ್ಮ್ ಹೇಗಿದೆ ಎಂಬುದು ಸ್ಪಷ್ಟವಿಲ್ಲ.
ಬೆಂಗಳೂರು ತಂಡದ ಶಕ್ತಿ: ಯುಎಇಯಲ್ಲಿ ನಡೆದ ಕೊನೆಯ ಐದು ಪಂದ್ಯಗಳಲ್ಲಿ ಆರ್ಸಿಬಿ ನಾಲ್ಕರಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ. ದೇವದತ್ ಪಡಿಕ್ಕಲ್ ಹೆಚ್ಚೂಕಡಿಮೆ ಟಾಪ್ ಆರ್ಡರ್ನಲ್ಲಿ ಸ್ಥಿರತೆ ಕೊಟ್ಟಿದ್ಧಾರೆ. ಗ್ಲೆನ್ ಮ್ಯಾಕ್ಸ್ವೆಲ್ ಅವರು ಬೆಂಗಳೂರು ತಂಡದ ಬ್ಯಾಟಿಂಗ್ನ ದೊಡ್ಡ ಬೆನ್ನೆಲುಬು. ಇದರ ಜೊತೆಗೆ ಕೆಎಸ್ ಭರತ್ ಅವರೂ ಮ್ಯಾಚ್ ಫಿನಿಶರ್ ಆಗಿಯೂ ಪರಿವರ್ತಿತಗೊಂಡಿದ್ದಾರೆ. ಬೆಂಗಳೂರು ತಂಡದ ಬೌಲಿಂಗ್ ಕೂಡ ಬಹಳ ಶಕ್ತಿಯುತವಾಗಿದೆ. ಹರ್ಷಲ್ ಪಟೇಲ್ ಈ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ರೇಸ್ನಲ್ಲಿ ಮುಂಚೂಣಿಯಲ್ಲಿದ್ಧಾರೆ. ಯುಜವೇಂದ್ರ ಚಹಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಉತ್ತಮವಾಗಿ ಬೌಲಿಮಗ್ ಮಾಡುತ್ತಿದ್ದಾರೆ. ಡ್ಯಾನಿಯಲ್ ಕ್ರಿಸ್ಟಿಯನ್ ಮತ್ತು ಜಾರ್ಜ್ ಗಾರ್ಟನ್ ತಮ್ಮ ಸ್ಲೋ ಎಸೆತಗಳಿಂದ ಪರಿಣಾಮಕಾರಿ ಬೌಲರ್ ಎನಿಸಿದ್ದಾರೆ. ಶಹಬಾಜ್ ಅಹ್ಮದ್ ಅವರೂ ಉತ್ತಮ ಬೌಲರ್. ವಿರಾಟ್ ಕೊಹ್ಲಿ ಹೆಚ್ಚು ರನ್ ಗಳಿಸದಿದ್ದರೂ ಕ್ಯಾಪ್ಟನ್ ಆಗಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.
ಆರ್ಸಿಬಿ ದೌರ್ಬಲ್ಯ: ವಿರಾಟ್ ಕೊಹ್ಲಿ ಹೆಚ್ಚು ರನ್ ಗಳಿಸುತ್ತಿಲ್ಲ. ಆರ್ಸಿಬಿಯ ಬಹುದೊಡ್ಡ ಶಕ್ತಿ ಎನಿಸಿದ್ದ ಎಬಿ ಡೀವಿಲಿಯರ್ಸ್ ಒಮ್ಮೆಯೂ ಸಿಡಿದಿಲ್ಲ. ಅವರಿಗೆ ಆಡಲು ಸರಿಯಾದ ಕ್ರಮಾಂಕ ಸಿಗುತ್ತಿಲ್ಲ. ಡೇನಿಯಲ್ ಕ್ರಿಸ್ಟಿಯನ್ ಕೂಡ ಬ್ಯಾಟಿಂಗ್ನಲ್ಲಿ ವಿಫಲರಾಗುತ್ತಿದ್ದಾರೆ. ಇದು ಆರ್ಸಿಬಿಯ ಪ್ರಮುಖ ವೀಕ್ನೆಸ್ ಆಗಿದೆ. ಇತರ ಇನ್ಫಾರ್ಮ್ ಬ್ಯಾಟರ್ಸ್ ಜೊತೆಗೆ ಎಬಿಡಿ ಮತ್ತು ಕ್ರಿಸ್ಟಿಯನ್ ಇಬ್ಬರೂ ಸಿಡಿದುನಿಂತರೆ ಆರ್ಸಿಬಿಯನ್ನ ಕಟ್ಟಿಹಾಕುವುದು ಕಷ್ಟವೇ.
ಇದನ್ನೂ ಓದಿ: Devdutt Padikkal| ದೇವದತ್ ಪಡಿಕ್ಕಲ್ ಅನ್ನು ಧೋನಿಗೆ ಹೋಲಿಸಿ ಟ್ರೋಲ್ ಮಾಡಿದ ನೆಟ್ಟಿಗರು!
ತಂಡಗಳು:
ಕೆಕೆಆರ್ ಸಂಭಾವ್ಯ ತಂಡ: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ಆಂಡ್ರೆ ರಸೆಲ್/ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಲಾಕೀ ಫರ್ಗೂಸನ್, ವರುಣ್ ಚಕ್ರವರ್ತಿ, ಶಿವಂ ಮಾವಿ.
ಆರ್ಸಿಬಿ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡೀವಿಲಿಯರ್ಸ್, ಡ್ಯಾನಿಯಲ್ ಕ್ರಿಸ್ಟಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಶಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್.
ಪಂದ್ಯ ಆರಂಭ: ಸಂಜೆ 7:30ಕ್ಕೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ