ಇಂಡಿಯನ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ನಿಂದ ರೋಚಕ ಜಯ ಸಾಧಿಸಿದೆ. ಆರ್ಸಿಬಿ ನೀಡಿದ 172 ರನ್ಗಳ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 170 ರನ್ಗಳಿಸಲಷ್ಟೇ ಶಕ್ತರಾದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಪವರ್ಪ್ಲೇನಲ್ಲೇ ಆರ್ಸಿಬಿಗೆ ಆಘಾತ ನೀಡಿತು. 3ನೇ ಓವರ್ನ ಅಂತಿಮ ಎಸೆತದಲ್ಲಿ ವಿರಾಟ್ ಕೊಹ್ಲಿ (12) ಯನ್ನು ಕ್ಲೀನ್ ಬೌಲ್ಡ್ ಮಾಡಿ ಅವೇಶ್ ಖಾನ್ಗೆ ಡೆಲ್ಲಿಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಇಶಾಂತ್ ಶರ್ಮಾ ಎಸೆತದಲ್ಲಿ ದೇವದತ್ ಪಡಿಕ್ಕಲ್ (17) ಕೂಡ ಬೌಲ್ಡ್ ಆಗಿ ಹೊರನಡೆದರು.
ಈ ಹಂತದಲ್ಲಿ ಜೊತೆಗೂಡಿದ ಗ್ಲೆನ್ ಮ್ಯಾಕ್ಸ್ವೆಲ್-ರಜತ್ ಪಾಟಿದಾರ್ 30 ರನ್ಗಳ ಜೊತೆಯಾಟವಾಡಿದರು. ಆದರೆ ತಂಡದ ಮೊತ್ತ 60 ರನ್ ಆಗಿದ್ದ ವೇಳೆ ಗ್ಲೆನ್ ಮ್ಯಾಕ್ಸ್ವೆಲ್ (25) ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಎಬಿ ಡಿವಿಲಿಯರ್ಸ್ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದ ರಜತ್ ಪಾಟಿದಾರ್ 22 ಎಸೆತಗಳಲ್ಲಿ 31 ರನ್ ಬಾರಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಎಬಿ ಡಿವಿಲಿಯರ್ಸ್ ತಂಡದ ರನ್ಗತಿಯನ್ನು ಹೆಚ್ಚಿಸುತ್ತಾ ಹೋದರು. ಅದರಂತೆ 35 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ ಅರ್ಧಶತಕ ಪೂರೈಸಿ ಎಬಿಡಿ ಬ್ಯಾಟ್ ಮೇಲೆಕ್ಕೆತ್ತಿದರು. ಈ ನಡುವೆ ಕೇವಲ 6 ರನ್ಗಳಿಸಿ ವಾಷಿಂಗ್ಟನ್ ಸುಂದರ್ ರಬಾಡಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಮಾರ್ಕಸ್ ಸ್ಟೋಯಿನಿಸ್ ಎಸೆದ 20ನೇ ಓವರ್ನಲ್ಲಿ 3 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಎಬಿ ಡಿವಿಲಿಯರ್ಸ್ ತಂಡದ ಮೊತ್ತವನ್ನು 171ಕ್ಕೆ ತಂದು ನಿಲ್ಲಿಸಿದರು. ಅಂತಿಮವಾಗಿ ಅಜೇಯರಾಗಿ ಉಳಿದ ಎಬಿಡಿ ಕೇವಲ 42 ಎಸೆತಗಳಲ್ಲಿ 5 ಸಿಡಿಲಬ್ಬರದ ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 75 ರನ್ ಬಾರಿಸಿದರು.
ಆರ್ಸಿಬಿ ನೀಡಿದ 172 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆರ್ಸಿಬಿ ಯಶಸ್ವಿಯಾಯಿತು. 3ನೇ ಓವರ್ನಲ್ಲಿ ಶಿಖರ್ ಧವನ್ ವಿಕೆಟ್ ಪಡೆಯುವ ಮೂಲಕ ಕೈಲ್ ಜೇಮಿಸನ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸ್ಟೀವ್ ಸ್ಮಿತ್ಗೆ ಮೊಹಮ್ಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಈ ಹಂತದಲ್ಲಿ ಜೊತೆಗೂಡಿದ ಪೃಥ್ವಿ ಶಾ-ರಿಷಭ್ ಪಂತ್ ಪವರ್ಪ್ಲೇನಲ್ಲಿ ತಂಡದ ಮೊತ್ತವನ್ನು 43ಕ್ಕೆ ತಂದು ನಿಲ್ಲಿಸಿದರು. 8ನೇ ಓವರ್ ವೇಳೆ ಬೌಲಿಂಗ್ನಲ್ಲಿ ಬದಲಾವಣೆ ಮಾಡಿದ ಕೊಹ್ಲಿ ಹರ್ಷಲ್ ಪಟೇಲ್ಗೆ ಕೈಗೆ ಚೆಂಡು ನೀಡಿದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ 2ನೇ ಎಸೆತದಲ್ಲಿ ಪೃಥ್ವಿ ಶಾ ವಿಕೆಟ್ ಪಡೆಯುವ ಮೂಲಕ ಹರ್ಷಲ್ ಆರ್ಸಿಬಿಯ 3ನೇ ಯಶಸ್ಸಿಗೆ ಕಾರಣರಾದರು. ಈ ಹಂತದಲ್ಲಿ ಜೊತೆಗೂಡಿದ ಪಂತ್ ಹಾಗೂ ಮಾರ್ಕಸ್ ಸ್ಟೋಯಿನಿಸ್ 45 ರನ್ಗಳ ಜೊತೆಯಾಟ ಆಡಿದರು.
17 ಎಸೆತಗಳಲ್ಲಿ 22 ಬಾರಿಸಿದ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಸ್ಟೋಯಿನಿಸ್ ವಿಕೆಟ್ ಪಡೆಯುವ ಮೂಲಕ ಹರ್ಷಲ್ ಪಟೇಲ್ ಆರ್ಸಿಬಿಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಈ ವೇಳೆ ಕ್ರೀಸ್ಗೆ ಇಳಿದ ಹೆಟ್ಮೆಯರ್ ಭರ್ಜರಿ ಸಿಕ್ಸರ್ ಸಿಡಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮೊತ್ತ 15ನೇ ಓವರ್ನಲ್ಲಿ ನೂರರ ಗಡಿದಾಟಿತು. ಕೊನೆಯ 5 ಓವರ್ನಲ್ಲಿ ಡೆಲ್ಲಿಗೆ ಗೆಲ್ಲಲು 61 ರನ್ಗಳು ಬೇಕಿತ್ತು.
ಈ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಹೆಟ್ಮೆಯರ್ ಕೇವಲ 23 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ಗಳೊಂದಿಗೆ ಅರ್ಧಶತಕ ಪೂರೈಸಿದರು. ಅಲ್ಲದೆ ಕೈಲ್ ಜೇಮಿಸನ್ ಒಂದೇ ಓವರ್ನಲ್ಲಿ ಡೆಲ್ಲಿ 21 ರನ್ ಬಾಚಿಕೊಂಡಿತು. 19ನೇ ಓವರ್ನಲ್ಲಿ ಹರ್ಷಲ್ ಪಟೇಲ್ 11 ರನ್ ನೀಡಿದರು. ಕೊನೆಯ ಓವರ್ನಲ್ಲಿ 14 ರನ್ಗಳು ಬೇಕಿತ್ತು.
ಮೊಹಮ್ಮದ್ ಸಿರಾಜ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ 1 ರನ್. 2ನೇ ಎಸೆತದಲ್ಲಿ 1 ರನ್. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ 2 ರನ್. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಬೇಕಿತ್ತು. 5ನೇ ಎಸೆತದಲ್ಲಿ ಬೌಂಡರಿ. ಕೊನೆಯ ಎಸೆತದಲ್ಲಿ 6 ರನ್ ಬೇಕಿತ್ತು. ರಿಷಭ್ ಪಂತ್ ಬೌಂಡರಿ ಬಾರಿಸಿದರು. ಇದರೊಂದಿಗೆ ಆರ್ಸಿಬಿ 1 ರನ್ನಿಂದ ರೋಚಕ ಜಯ ಸಾಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ