RCB vs DC- ದುಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಬೆಂಗಳೂರಿಗರ ಸವಾಲು

IPL 2021, Match 56, Bangalore vs Delhi match at Dubai: ಚೆನ್ನೈ ಜೊತೆ ನೆಟ್ ರನ್ ರೇಟ್​ನಲ್ಲಿ ಅಗಾಧ ವ್ಯತ್ಯಾಸ ಇರುವ ಬೆಂಗಳೂರು ತಂಡ ಎರಡನೇ ಸ್ಥಾನಕ್ಕೇರುವ ಅವಕಾಶ ತೀರಾ ಕಡಿಮೆ ಇದೆ. ಹೀಗಾಗಿ, ಇವತ್ತು ಡೆಲ್ಲಿ ಮತ್ತು ಬೆಂಗಳೂರಿನ ನಡುವಿನ ಕದನ ನಾಮಕಾವಸ್ತೆಯದ್ದಾಗಿದೆ ಅಷ್ಟೇ.

ಆರ್​ಸಿಬಿ

ಆರ್​ಸಿಬಿ

 • Share this:
  ದುಬೈ, ಅ. 8: ಇಂದು ಏಕಕಾಲದಲ್ಲಿ ನಡೆಯುತ್ತಿರುವ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವೂ ಒಂದು. ಇನ್ನೊಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಬಹುದಾ ಎಂಬ ಅತಿ ಸಣ್ಣ ಕುತೂಹಲ ಇದೆ. ಆದರೆ, ಆರ್​ಸಿಬಿ ಮತ್ತು ಡೆಲ್ಲಿ ತಂಡಗಳು ಈಗಾಗಲೇ ಪ್ಲೇ ಆಫ್ ಖಚಿತಪಡಿಸಿಕೊಂಡಿವೆ. ಸ್ಥಾನಗಳೂ ಫಿಕ್ಸ್ ಆಗಿವೆ. ಹೀಗಾಗಿ ಡೆಲ್ಲಿ ಬೆಂಗಳೂರು ಕಾದಾಟ ಕೇವಲ ನಾಮಕಾವಸ್ತೆಯಾಗಿದೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ನಗಣ್ಯವೆನಿಸಿದರೂ ಬೆಂಗಳೂರು ಮತ್ತು ಡೆಲ್ಲಿ ತಂಡಗಳಿಗೆ ಇದು ಪೂರ್ವಬಾವಿ ಪರೀಕ್ಷೆ ಇದ್ದಂತೆ. ಪ್ಲೇ ಆಫ್​ನಲ್ಲಿ ಈ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ ತಾಲೀಮು ನಡೆಸುವ ಅವಕಾಶ ಇದೆ.

  ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿ ಕೂತಿದೆ. ಅದು ಸೋತರೂ ಅಗ್ರಸ್ಥಾನ ಅಲುಗಾಡದು. ಬೆಂಗಳೂರು ತಂಡ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ. ಅದು ಗೆದ್ದರೂ ಎರಡನೇ ಸ್ಥಾನಕ್ಕೇರುವ ಸಾಧ್ಯತೆ ಇಲ್ಲ. ಯಾಕೆಂದರೆ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಬೆಂಗಳೂರು ನಡುವೆ ಇರುವ ನೆಟ್ ರನ್ ರೇಟ್ ವ್ಯತ್ಯಾಸ ಬರೋಬ್ಬರಿ 0.614 ಇದೆ. ಇಷ್ಟು ದೊಡ್ಡ ರನ್ ರೇಟ್ ಅಂತರವನ್ನು ಒಂದೇ ಪಂದ್ಯದಲ್ಲಿ ಹಿಂದಿಕ್ಕುವುದು ಬಹುತೇಕ ಅಸಾಧ್ಯದ ಮಾತು. ಹೀಗಾಗಿ, ಬೆಂಗಳೂರು ತಂಡಕ್ಕೆ ಮೂರನೇ ಸ್ಥಾನ ಫಿಕ್ಸ್ ಆಗಿದೆ. ಪ್ಲೇ ಆಫ್​ನಲ್ಲಿ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯದಲ್ಲಿ ಆಡುವುದು ಅನಿವಾರ್ಯ.

  ಬಲಾಢ್ಯ ಬೆಂಗಳೂರು: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ್ದು ಬಿಟ್ಟರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತ್ತೀಚೆಗೆ ಬಹಳ ಪ್ರಬಲ ತಂಡವಾಗಿ ಹೊರಹೊಮ್ಮಿದೆ. ಗ್ಲೆನ್ ಮ್ಯಾಕ್ಸ್​ವೆಲ್ ಅವರು ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಖಡಕ್ಕಾಗಿ ನಿಂತಿದ್ದಾರೆ. ಟಾಪ್​ನಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ಭರತ್ ಉತ್ತಮವಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಡೇನಿಯಲ್ ಕ್ರಿಸ್ಟಿಯನ್ ಅವರ ಬ್ಯಾಟಿಂಗ್ ವೈಫಲ್ಯ ಆರ್​ಸಿಬಿಗೆ ಚಿಂತೆಗೀಡು ಮಾಡಿದೆ. ಎಬಿ ಡೀವಿಲಿಯರ್ಸ್ ಅವರೂ ರನ್ ಗಳಿಸಲು ಪರದಾಡುತ್ತಿದ್ದಾರೆ. ಆದರೆ, ಎಬಿಡಿ ಯಾವ ಸಂದರ್ಭದಲ್ಲೂ ಫಾರ್ಮ್ ಮರಳಿ ಕಂಡುಕೊಳ್ಳುವ ಛಾತಿ ಹೊಂದಿದ್ದಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಶಹಬಾಜ್ ಅಹ್ಮದ್ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲರು.
  POINTS TABLE:
  ಇನ್ನು, ಆರ್​ಸಿಬಿಯ ಬೌಲಿಂಗ್ ದಾಳಿ ಅದ್ಭುತವಾಗಿದೆ. ಹರ್ಷಲ್ ಪಟೇಲ್ ಈ ಐಪಿಎಲ್​ನ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ. ಯುಜವೇಂದ್ರ ಚಹಲ್ ಕೂಡ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ದುಬಾರಿ ಎನಿಸಿರುವ ಜಾರ್ಜ್ ಗಾರ್ಟನ್ ಬದಲು ಕೈಲ್ ಜೇಮೀಸನ್ ಅಥವಾ ವನಿಂದು ಹಸರಂಗ ಅವರು ಆಡುವ ಸಾಧ್ಯತೆ ಇದೆ. ಮುಂದೆ ಎಲಿಮಿನೇಟರ್ ಪಂದ್ಯ ಶಾರ್ಜಾದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಲಂಕಾದ ಸ್ಪಿನ್ನರ್ ಹಸರಂಗ ಅವರನ್ನೇ ಇವತ್ತಿನ ಪಂದ್ಯದಲ್ಲಿ ಆಡಿಸಿ ಸಾಣೆ ಹಿಡಿಯುವ ಕೆಲಸ ಆಗಬಹುದು.

  ಇದನ್ನೂ ಓದಿ: MI vs SRH- ಸನ್​ರೈಸರ್ಸ್ ಟಾಸ್ ಗೆದ್ದರೂ ಮುಂಬೈ ಔಟ್; ಕಾತರದಲ್ಲಿ ಇತರ ಪ್ಲೇ ಆಫ್ ಪ್ರವೇಶಿಗರು

  ಡೆಲ್ಲಿ ತಂಡಕ್ಕೂ ಕೆಲ ಸಮಸ್ಯೆಗಳು:

  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಬಲಿಷ್ಠವಾಗೇನೋ ಇದೆ. ಆದರೆ, ಕೆಲ ಆಟಗಾರರು ಫಾರ್ಮ್​ನಲ್ಲಿಲ್ಲ. ಶ್ರೇಯಸ್ ಅಯ್ಯರ್ ಲಯದಲ್ಲಿದ್ದಂತಿದ್ದರೂ ರನ್ ಗಳಲಿಸಲಾಗದೇ ಸುಲಭವಾಗಿ ಔಟಾಗುತ್ತಿದ್ದಾರೆ. ರಿಷಭ್ ಪಂತ್ ಅವರಿಂದ ನಿರೀಕ್ಷಿತ ಆಟ ಬಂದಿಲ್ಲ. ರಿಪಲ್ ಪಟೇಲ್ ಅವರು ಇನ್ನೂ ಸಿಡಿಯಬೇಕಿದೆ. ಆದರೆ, ಡೆಲ್ಲಿಯ ಬೌಲಿಂಗ್ ಪಡೆ ಚೆನ್ನಾಗಿದೆ. ಅವೇಶ್ ಖಾನ್ ಅವರು ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಹರ್ಷಲ್ ಪಟೇಲ್​ಗಿಂತ ತುಸು ಹಿಂದಿದ್ದಾರೆ. ಆನ್ರಿಕ್ ನೋರ್ಟಿಯಾ ಅವರದ್ದು ಮಾರಕ ಬೌಲಿಂಗ್ ದಾಳಿ. ಕಗಿಸೋ ರಬಡ ಯಾವತ್ತಿದ್ದರೂ ಬ್ಯಾಟರ್ಸ್​ಗೆ ಸಿಂಹ ಸ್ವಪ್ನವೇ.

  ತಂಡಗಳು:

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡೀವಿಲಿಯರ್ಸ್, ಡೇನಿಯಲ್ ಕ್ರಿಸ್ಟಿಯನ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್, ಮೊಹಮ್ಮದ್ ಸಿರಾಜ್.

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರಿಪಲ್ ಪಟೇಲ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಅವೇಶ್ ಖಾನ್, ಆನ್ರಿಕ್ ನೋರ್ಟಿಯಾ.
  Published by:Vijayasarthy SN
  First published: