Virat Kohli: ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಮತ್ತೊಂದು ಶಾಕ್; ಆರ್ಸಿಬಿ ನಾಯಕನಿಗೆ 12 ಲಕ್ಷ ರೂಪಾಯಿ ದಂಡ!
ನಿನ್ನೆ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕನಿಗೆ ಶಾಕ್ ಮೇಲೆ ಶಾಕ್ ಉಂಟಾಗಿದೆ. ಹೀನಾಯ ಸೋಲು ಕಂಡ ಬೆನ್ನಲ್ಲೇ ಐಪಿಎಲ್ ಮಂಡಳಿ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ನಿನ್ನೆ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸೋತಿದೆ. ವಿರಾಟ್ ಕೊಹ್ಲಿ ನೀಡಿದ ಕಳಪೆ ಪ್ರದರ್ಶನಕ್ಕೆ ಅವರ ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹೀಗಿರುವಾಗಲೇ ವಿರಾಟ್ ಕೊಹ್ಲಿಗೆ ಶಾಕ್ ಎದುರಾಗಿದೆ. ಪಂಜಾಬ್ ವಿರುದ್ಧ ನಿಧಾನ ಗತಿಯ ಆಟ ಆಡಿದ್ದಕ್ಕೆ ಐಪಿಎಲ್ ಮಂಡಳಿ ಬರೋಬ್ಬರಿ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಬಗ್ಗೆ ಪ್ರೆಸ್ ರಿಲೀಸ್ ಬಿಡುಗಡೆ ಮಾಡಿರುವ ಐಪಿಎಲ್, "ಈ ಆವೃತ್ತಿಯಲ್ಲಿ ಕೊಹ್ಲಿ ತಂಡ ಮಾಡಿದ ಮೊದಲನೇ ತಪ್ಪು ಇದಾಗಿದೆ. ಅವರು ನಿಧಾನಗತಿಯಲ್ಲಿ ಆಟವಾಡಿದ್ದಕ್ಕೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ," ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಿನ್ನೆಯ ಪಂದ್ಯದಲ್ಲಿ ಪಂಜಾಬ್ ನಾಯಕ ರಾಹುಲ್, 83 ರನ್ ಕಲೆ ಹಾಕಿ ಶತಕ ಸಮೀಸಿದ್ದರು. ಈ ವೇಳೆ ಅವರು ಸಿಕ್ಸ್ ಬಾರಿಸಲು ಮುಂದಾದರು. ಆದರೆ ಚೆಂಡು ಕೊಹ್ಲಿ ಬಳಿ ಹೋಗಿತ್ತು. ಸುಲಭ ಕ್ಯಾಚನ್ನು ಕೊಹ್ಲಿ ಕೈ ಚೆಲ್ಲಿದ್ದರು. ರಾಹುಲ್ 89 ರನ್ ಗಳಿಸಿದ್ದ ವೇಳೆಯೂ ಇದೇ ಪುನರಾವರ್ತನೆ ಆಯಿತು. ಜೀವದಾನ ಪಡೆದ ಕೆಎಲ್ ರಾಹುಲ್, ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಸ್ಟೇನ್ ಅವರ 19ನೇ ಓವರ್ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಸಿಕ್ಸ್ ಹಾಗೂ ಫೋರ್ ಬಾರಿಸಿ 62 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ ಈ ಓವರ್ನಲ್ಲಿ ಒಟ್ಟು 26 ರನ್ ಕಲೆಹಾಕಿದರು. ಕೊನೆಯ ಓವರ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 23 ರನ್ ಬಾಚಿದ ರಾಹುಲ್ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಕೊಹ್ಲಿ ಜೀವದಾನ ನೀಡದೇ ಇದ್ದಿದ್ದರೆ ರಾಹುಲ್ ಸೆಂಚುರಿಯನ್ನು ಬಾರಿಸುತ್ತಿರಲಿಲ್ಲ. ತಂಡದ ಮೊತ್ತ 200 ಗಡಿ ದಾಟುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೊಹ್ಲಿ ಬ್ಯಾಟಿಂಗ್ ನಲ್ಲಿ ಕೇವಲ ಒಂದು ರನ್ ಬಾರಿಸಿದ್ದರು.