Brian Lara to RCB- ಈ ಮೂರು ಆಟಗಾರರನ್ನ ಉಳಿಸಿಕೊಳ್ಳಿ: ಆರ್​ಸಿಬಿಗೆ ಬ್ರಿಯಾನ್ ಲಾರಾ ಸಲಹೆ

IPL Auction 2022- ಮುಂದಿನ ಐಪಿಎಲ್ ಸೀಸನ್ಗಾಗಿ ಇದೇ ಡಿಸೆಂಬರ್ ತಿಂಗಳಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ವೇಳೆ ಆರ್​ಸಿಬಿ ಉಳಿಸಿಕೊಳ್ಳಬಹುದಾದ ಮೂವರು ಬ್ಯಾಟರ್ಸ್ ಯಾರೆಂದು ಬ್ರಿಯಾನ್ ಲಾರಾ ಅಂದಾಜಿಸಿದ್ದಾರೆ.

ಆರ್​ಸಿಬಿ ತಂಡ

ಆರ್​ಸಿಬಿ ತಂಡ

 • Share this:
  ದುಬೈ, ಅ. 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಂಡ ಈ ಬಾರಿಯೂ ಕಪ್ ಎತ್ತಿಹಿಡಿಯದೇ ಹೋದರೂ ಗಮನ ಸೆಳೆಯುವಂಥ ಪ್ರದರ್ಶನವನ್ನಂತೂ ನೀಡಿದೆ. ಪ್ಲೇ ಆಫ್ ತಲುಪಿ ವೀರೋಚಿತ ಸೋಲುಂಡು ನಿರ್ಗಮಿಸಿದೆ. ಈ ನಡುವೆ ಆರ್​ಸಿಬಿ ತಂಡದ ಕೆಲ ಆಟಗಾರರು ಅದ್ಭುತ ಆಟದ ಮೂಲಕ ಛಾಪು ಮೂಡಿಸಿರುವುದಂತೂ ಹೌದು. ಟೂರ್ನಿ ಮುಕ್ತಾಯಕ್ಕೆ ಎರಡು ಪಂದ್ಯಗಳು ಮಾತ್ರ ಬಾಕಿ ಇವೆ. ಮುಂದಿನ ವರ್ಷದ ಐಪಿಎಲ್​ಗೆ ವಿವಿಧ ತಂಡಗಳು ಗಮನ ಹರಿಸಲು ತೊಡಗಿವೆ. ಡಿಸೆಂಬರ್ ತಿಂಗಳಲ್ಲಿ ಆಟಗಾರರ ಹರಾಜು ನಡೆಯಲಿದ್ದು, ಯಾವ ಆಟಗಾರರನ್ನ ಉಳಿಸಿಕೊಳ್ಳಬೇಕು, ಯಾರ್ಯಾರನ್ನ ರಿಲೀಸ್ ಮಾಡಬೇಕು ಎಂಬ ಯೋಚನೆ ಮತ್ತು ಗೊಂದಲದಲ್ಲಿ ಎಂಟು ತಂಡಗಳು ಇವೆ. ಈ ಬಾರಿ ಒಳ್ಳೆಯ ತಂಡ ಕಟ್ಟಿಕೊಂಡಿದ್ದ ಆರ್​ಸಿಬಿಯ ಮುಂದಿನ ಹೆಜ್ಜೆ ಏನಿರಬಹುದು? ಅಲ್ಲದೇ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವುದಾಗಿಯೂ ಹೇಳಿದ್ದಾರೆ. ಅವರನ್ನ ಬಿಟ್ಟು ಆರ್​ಸಿಬಿ ತಂಡ ಕಟ್ಟುತ್ತಾ? ಮಾಜಿ ಕೆರಿಬಿಯನ್ ಕ್ರಿಕೆಟಿಗ ಹಾಗೂ ವಿಶ್ವದಾಖಲೆ ವೀರ ಬ್ರಿಯಾನ್ ಲಾರಾ ಅವರು ಆರ್​ಸಿಬಿ ತಂಡಕ್ಕೆ ಒಂದಷ್ಟು ಸಲಹೆ ನೀಡಿದ್ಧಾರೆ.

  ಬೆಂಗಳೂರು ತಂಡ ಕೆಲ ಬ್ಯಾಟುಗಾರರನ್ನ ಉಳಿಕೊಳ್ಳುವುದೇ ಆದಲ್ಲಿ ಈ ಮೂವರನ್ನ ಪರಿಗಣಿಸಿ ಎಂದಿದ್ದಾರೆ. ಆರ್​ಸಿಬಿ ರೀಟೇನ್ ಮಾಡಿಕೊಳ್ಳಬಹುದಾದ ಆ ಮೂವರು ಬ್ಯಾಟರ್ಸ್ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ದೇವದತ್ ಪಡಿಕ್ಕಲ್. “ಆರ್​ಸಿಬಿ ಮ್ಯಾನೇಜ್ಮೆಂಟ್​ನವರು ಕೆಲ ಕಠಿಣ ನಿರ್ಧಾರಗಳನ್ನ ಕೈಗೊಳ್ಳಬೇಕು. ಮ್ಯಾಕ್ಸ್​​ವೆಲ್ ಅವರು ತಂಡಕ್ಕೆ ಆಗಮಿಸಿ ಕೋಚ್ ಮಾತುಗಳಿಗೆ ಕಿವಿಗೊಡುತ್ತಿದ್ದಾರೆ. ಅವರಿಂದ ಇದ್ದ ನಿರೀಕ್ಷೆಯನ್ನ ಅವರು ಪೂರ್ಣಗೊಳಿಸಿದ್ಧಾರೆ” ಎಂದು ಆಸ್ಟ್ರೇಲಿಯಾ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಬಗ್ಗೆ ಬ್ರಿಯಾನ್ ಲಾರಾ ಹೇಳಿದ ಮಾತು. ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ ಮ್ಯಾಕ್ಸ್​​ವೆಲ್ ಅವರನ್ನ ಆರ್​ಸಿಬಿ ಬರೋಬ್ಬರಿ 14.25 ಕೋಟಿ ರೂ ಕೊಟ್ಟು ಖರೀದಿ ಮಾಡಿತ್ತು. ಆದರೆ, ಆ ಬೆಲೆಗೆ ತಕ್ಕಂಥ ಆಟವನ್ನ ಮ್ಯಾಕ್ಸ್​ವೆಲ್ ಆಡಿದ್ದಾರೆ.

  ಕ್ರಿಸ್ ಗೇಲ್ ಅವರಿಂದಲೇ ಆಗುತ್ತಿಲ್ಲ, ಎಬಿಡಿಯಿಂದ ಆಗುತ್ತಾ?:

  ಇನ್ನು, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರನ್ನೂ ಆರ್​ಸಿಬಿ ಉಳಿಸಿಕೊಳ್ಳಬೇಕು ಎನ್ನುವ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಎಬಿ ಡೀವಿಲಿಯರ್ಸ್ ಅವರನ್ನ ಕೈಬಿಡುವುದು ಒಳ್ಳೆಯದು ಎಂದಿದ್ಧಾರೆ. ಎಬಿಡಿ ಸೂಪರ್ ಸ್ಟಾರ್ ಇರಬಹುದು. ಆದರೆ, ಐಪಿಎಲ್ ಬಿಟ್ಟು ಬೇರೆ ಯಾವುದೇ ಕ್ರಿಕೆಟ್ ಅನ್ನು ಅವರು ಆಡುತ್ತಿಲ್ಲ. ಈ ಐಪಿಎಲ್​ನಲ್ಲಿ 15 ಪಂದ್ಯದಲ್ಲಿ ಎಬಿಡಿ 313 ರನ್ ಗಳಿಸಿದ್ದಾರೆ. ಆದರೆ, ಯುಎಇಯಲ್ಲಿ ನಡೆದ ಪಂದ್ಯಗಳಲ್ಲಿ ಅವರದ್ದು ತೀರಾ ನಿರಾಶಾದಾಯಕ ಪ್ರದರ್ಶನವಾಗಿದೆ ಎಂಬುದು ಲಾರಾ ಅಭಿಮತ.

  ಇದನ್ನೂ ಓದಿ: T20 World Cup- ಟಿ20 ವಿಶ್ವಕಪ್​ಗೆ ಮುನ್ನ ಇವತ್ತಿನಿಂದ 16 ಅಭ್ಯಾಸ ಪಂದ್ಯಗಳು; ಇಲ್ಲಿದೆ ವೇಳಾಪಟ್ಟಿ

  “ರನ್ ಗಳಿಸದ ಹಾಗೂ ವಯಸ್ಸು ಹೆಚ್ಚಾಗುತ್ತಿರುವ ಎಬಿ ಡೀವಿಲಿಯರ್ಸ್ ಅವರನ್ನ ನೀವು ಯಾಕೆ ಉಳಿಸಿಕೊಳ್ಳುತ್ತೀರಿ? ಇಡೀ ವರ್ಷದಲ್ಲಿ ಆರು ವಾರ ಮಾತ್ರ ಕ್ರಿಕೆಟ್ ಆಡುತ್ತಾರೆ. ಐಪಿಎಲ್ ಬಂದಾಗೆಲ್ಲಾ ಅವರು ಹಿಂದಿನ ರೀತಿಯಲ್ಲೇ ಸೂಪರ್ ಆಟ ಆಡುತ್ತಾರೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಮೇಲಾಗಿ ಅವರಿಗೆ ವಯಸ್ಸು ಕಡಿಮೆ ಆಗುತ್ತಿಲ್ಲ. 42 ವರ್ಷದ ಕ್ರಿಸ್ ಗೇಲ್ ಇಡೀ ವರ್ಷ ಲೀಗ್ ಮೇಲೆ ಲೀಗ್​ಗಳಲ್ಲಿ ಆಡುತ್ತಲೆ ಇರುತ್ತಾರೆ. ಆದರೂ ಕೂಡ ಅವರು ರನ್ ಗಳಿಸಲು ಪರದಾಡುತ್ತಿದ್ದಾರೆ” ಎಂದು ತಮ್ಮ ದೇಶದ ಕ್ರಿಕೆಟಿಗನ ಉದಹಾರಣೆ ಸಮೇತ ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ಧಾರೆ.

  “ಈ ಟಿ20 ಕ್ರಿಕೆಟ್ ಅಷ್ಟು ಸುಲಭವಿಲ್ಲ. ಐಪಿಎಲ್ ವಿಶ್ವದಲ್ಲೇ ಅತ್ಯುತ್ತಮ ಟಿ20 ಕ್ರಿಕೆಟ್ ಲೀಗ್. ಅಟಗಾರರ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇದೆ” ಎಂದು ಲಾರಾ ಹೇಳಿದ್ದಾರೆ.

  ಇನ್ನು, ಆರ್​ಸಿಬಿಯ ಬ್ಯಾಟಿಂಗ್ ಲೈನಪ್​ನಲ್ಲಿ ದೇವದತ್ ಪಡಿಕ್ಕಲ್, ಮ್ಯಾಕ್ಸ್​ವೆಲ್ ಜೊತೆಗೆ ಗಮನ ಸೆಳೆಯುವ ಪ್ರದರ್ಶನ ನೀಡಿದ್ದು ಕೆಎಸ್ ಭರತ್. ಈ ವಿಕೆಟ್ ಕೀಪರ್ ಬ್ಯಾಟರ್ ಅನ್ನು ಆರ್​ಸಿಬಿ ಉಳಿಸಿಕೊಂಡರೂ ಅಚ್ಚರಿ ಇಲ್ಲ. ಹಾಗೆಯೇ, ಬೌಲಿಂಗ್​ನಲ್ಲಿ ಹರ್ಷಲ್ ಪಟೇಲ್, ಯುಜವೇಂದ್ರ ಚಹಲ್ ಅವರದ್ದು ಅದ್ಭುತ ಆಟ. ಸಿರಾಜ್ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಈ ಮೂವರಲ್ಲಿ ಆರ್​ಸಿಬಿ ಯಾರನ್ನ ಉಳಿಸಿಕೊಳ್ಳುತ್ತೆ ಎಂಬುದು ಕುತೂಹಲ. ಹಾಗೆಯೇ, ಆರ್​ಸಿಬಿ ತಂಡ ಮುಂದಿನ ಸೀಸನ್​ಗೆ ಹೊಸ ನಾಯಕನಿಗೆ ಹುಡುಕಾಡಬೇಕಿದೆ. ಆರ್​ಸಿಬಿಗೆ ಯಾರಾಗ್ತಾರೆ ಹೊಸ ನಾಯಕ ಎಂಬ ಕುತೂಹಲವೂ ಇದೆ.
  Published by:Vijayasarthy SN
  First published: