news18-kannada Updated:November 2, 2020, 5:24 PM IST
Suryakumar Yadav
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿತ್ತು. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ಲಭಿಸಿರಲಿಲ್ಲ. ಇದರ ಬೆನ್ನಲ್ಲೇ ಹಲವು ದಿಗ್ಗಜ ಕ್ರಿಕೆಟಿಗರು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲೂ ಆರ್ಸಿಬಿ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದ್ದ ಸೂರ್ಯನ ಆಟಕ್ಕೆ ಮನಸೋತು, ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ತಾಳ್ಮೆಯಿಂದ ಇರಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರು.
ರಣಜಿ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ 2018ರ ಆವೃತ್ತಿಯಲ್ಲಿ 512, 2019ರಲ್ಲಿ 424 ಹಾಗೂ ಪ್ರಸಕ್ತ ಸೀಸನ್ನಲ್ಲಿ 374 ರನ್ಗಳನ್ನು ಕಲೆ ಹಾಕಿದ್ದಾರೆ. ಹೀಗಾಗಿ ಈ ಬಾರಿ ಸೂರ್ಯಕುಮಾರ್ ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಇದೀಗ ಮತ್ತೊಮ್ಮೆ ರವಿಶಾಸ್ತ್ರಿ ಯುವ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಸೂರ್ಯಕುಮಾರ್ ಯಾದವ್ ಸೇರಿದಂತೆ 3 ರಿಂದ 4 ಆಟಗಾರರು ಭಾರತದ ತಂಡದ ಕದ ತಟ್ಟುತ್ತಿದ್ದಾರೆ. ಅವರಿಗೆ ಖಂಡಿತವಾಗಿಯೂ ಅವಕಾಶ ಸಿಗಲಿದೆ. ಆದರೆ ಅಲ್ಲಿಯವರೆಗೂ ತಾಳ್ಮೆಯಿಂದ ಉತ್ತಮ ಪ್ರದರ್ಶನ ಮುಂದುವರೆಸಬೇಕು ಎಂದು ಟೀಮ್ ಇಂಡಿಯಾ ಕೋಚ್ ತಿಳಿಸಿದ್ದಾರೆ.
ಏಕೆಂದರೆ ಸದ್ಯ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ. ಅವರು ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ಸದ್ಯ ತಂಡದಲ್ಲಿ ಸ್ಥಾನ ಪಡೆಯುವುದು ಅಷ್ಟೊಂದು ಸುಲಭವಲ್ಲ ಎಂದು ರವಿ ಶಾಸ್ತ್ರಿ ತಿಳಿಸಿದರು.
ಇನ್ನು ದೇಶಿ ಕ್ರಿಕೆಟ್ನಲ್ಲಿ ಪ್ರಿಯಾಂಕ್ ಪಾಂಚಲ್ ಹಾಗೂ ಅಭಿಮನ್ಯು ಈಶ್ವರನ್ ಸ್ಥಿರ ಪ್ರದರ್ಶನದ ಹೊರತಾಗಿಯೂ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಪ್ರತಿಕ್ರಿಯಿಸಿದ ಶಾಸ್ತ್ರಿ, ಯುವ ಆಟಗಾರರು ತಾಳ್ಮೆಯಿಂದ ಕಾಯಬೇಕು. ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಾರೂ ಕೂಡ ನಿರಾಸೆಗೆ ಒಳಗಾಗದೆ ಸಕರಾತ್ಮಕವಾಗಿ ಯೋಚಿಸಬೇಕು. ಅವಕಾಶ ಸಿಗುತ್ತೆ, ಅದನ್ನು ಉಪಯೋಗಿಸಿಕೊಳ್ಳಲು ರೆಡಿಯಾಗಿರಬೇಕು ಎಂದು ಕಿವಿಮಾತು ಹೇಳಿದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
Published by:
zahir
First published:
November 2, 2020, 5:24 PM IST