ಕ್ರಿಕೆಟ್ ಅಂಗಳದ ಆಕ್ರಮಣಕಾರಿ ಆಟಗಾರನೆಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಐಪಿಎಲ್-2020 ನಲ್ಲಿ ಹಲವು ಬಾರಿ ಕೋಪ ನೆತ್ತಿಗೇರಿಸಿಕೊಂಡಿದ್ದರು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ಮನ್ ಮನೀಶ್ ಪಾಂಡೆ ಅವರನ್ನು ಕೆಣಕ್ಕಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಇದಷ್ಟೇ ಅಲ್ಲ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಚ್ ರಿಕಿ ಪಾಂಟಿಂಗ್ ಜೊತೆಗೂ ಮಾತಿನ ಚಕಮಕಿ ನಡೆದಿತ್ತು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಳಗ ಕೊಹ್ಲಿ ಪಡೆಯನ್ನು 59 ರನ್ಗಳಿಂದ ಮಣಿಸಿತ್ತು. ಎರಡನೇ ಪಂದ್ಯದಲ್ಲೂ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ ಈ ಎರಡು ಪಂದ್ಯಗಳ ಸಂದರ್ಭಗಳಲ್ಲಿ ಮಾತಿನ ಚಕಮಕಿ ಮಾತ್ರ ಕಂಡು ಬಂದಿರಲಿಲ್ಲ. ಆದರೆ ಇದೇ ಪಂದ್ಯದ ವೇಳೆ ರಿಕಿ ಪಾಂಟಿಂಗ್ ಹಾಗೂ ಕೊಹ್ಲಿ ಕಿತ್ತಾಡಿಕೊಂಡಿದ್ದರು ಎಂಬ ವಿಷಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಆರ್. ಅಶ್ವಿನ್ ತಿಳಿಸಿದ್ದಾರೆ.
ಆರ್ಸಿಬಿ- ಡೆಲ್ಲಿ ನಡುವಣ 2ನೇ ಪಂದ್ಯದ ವೇಳೆ ಓಡುವ ಸಂದರ್ಭದಲ್ಲಿ ನನಗೆ ಬೆನ್ನು ನೋವು ಉಂಟಾಗಿತ್ತು. ಹೀಗಾಗಿ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಎಂಆರ್‌ಐ ಸ್ಕ್ಯಾನಿಂಗ್ ಮಾಡಿದಾಗ ನರಗಳು ಎಳೆದುಕೊಂಡಿರುವುದು ಕಂಡು ಬಂದಿತ್ತು. ಹೀಗಾಗಿ ಬೌಲಿಂಗ್ ಮುಗಿದ ಬಳಿಕ ಸ್ಟ್ರಾಟಜಿಕ್ ಟೈಮ್‌ಔಟ್ ವೇಳೆ ನಾನು ಅಂಗಳದಿಂದ ಹೊರ ನಡೆದೆ. ನಾನು ಮೈದಾನ ಬಿಟ್ಟಿರುವುದನ್ನು ಆರ್ಸಿಬಿ ನಾಯಕ ಕೊಹ್ಲಿ ಪ್ರಶ್ನಿಸಿದರು ಎಂದು ಅಶ್ವಿನ್ ಚಿಟ್ ಚಾಟ್ವೊಂದರಲ್ಲಿ ತಿಳಿಸಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಅಷ್ಟು ಬೇಗ ಸುಮ್ಮನಿರುವವರಲ್ಲ. ಸ್ಟ್ರಾಟಜಿಕ್ ಟೈಮ್‌ಔಟ್ ಆಗಿದ್ದರಿಂದ ಅವರು ಕೂಡ ಮೈದಾನದಲ್ಲಿದ್ದರು. ಇದೇ ವೇಳೆ ಕೊಹ್ಲಿ ಜೊತೆ ವಾಗ್ವಾದಕ್ಕಿಳಿದರು. ಪರಸ್ಪರ ಕೆಲ ಮಾತುಗಳನ್ನು ಹೇಳಿದರು. ನಾವು ಆ ರೀತಿಯಲ್ಲ ಎಂದು ಆರ್ಸಿಬಿ ನಾಯಕನಿಗೆ ಉತ್ತರ ನೀಡಿದ್ದರು. ಇದೆಲ್ಲವೂ ಕ್ಷಣದಲ್ಲಿ ನಡೆದಿತ್ತು ಎಂದು ಅಶ್ವಿನ್ ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ