• ಹೋಂ
 • »
 • ನ್ಯೂಸ್
 • »
 • IPL
 • »
 • R Ashwin- ನಾನು ಕ್ರಿಕೆಟ್​ಗೆ ಕಳಂಕವಾ?: ಓವರ್ ಥ್ರೋ ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟ ಆರ್ ಅಶ್ವಿನ್

R Ashwin- ನಾನು ಕ್ರಿಕೆಟ್​ಗೆ ಕಳಂಕವಾ?: ಓವರ್ ಥ್ರೋ ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟ ಆರ್ ಅಶ್ವಿನ್

ಆರ್ ಅಶ್ವಿನ್ ಮತ್ತು ಮಾರ್ಗನ್ ಮಧ್ಯೆ ನಡೆದ ಜಗಳದ ಒಂದು ದೃಶ್ಯ

ಆರ್ ಅಶ್ವಿನ್ ಮತ್ತು ಮಾರ್ಗನ್ ಮಧ್ಯೆ ನಡೆದ ಜಗಳದ ಒಂದು ದೃಶ್ಯ

Overthrow Incident- ನನ್ನನ್ನ ನಾನು ರಕ್ಷಿಸಿಕೊಳ್ಳಬೇಕೆಂದು ನನ್ನ ಗುರುಗಳು ಮತ್ತು ತಂದೆ ತಾಯಿ ಹೇಳಿಕೊಟ್ಟಿದ್ಧಾರೆ. ನಾನು ಮಾಡಿದ್ದರಲ್ಲಿ ತಪ್ಪೇನಿದೆ. ಮಾರ್ಗನ್ ಹೇಳಿದಂತೆ ನಾನು ಕ್ರಿಕೆಟ್ಗೆ ಕಳಂಕ ತರುವಂಥದ್ದು ಏನೂ ಮಾಡಿಲ್ಲ ಎಂದು ಆರ್ ಅಶ್ವಿನ್ ಹೇಳಿದ್ಧಾರೆ.

 • Cricketnext
 • 4-MIN READ
 • Last Updated :
 • Share this:

  ಮೊನ್ನೆ (ಸೆ. 28) ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡದ ಆರ್ ಅಶ್ವಿನ್ ಮತ್ತು ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಮಧ್ಯೆ ವಾಗ್ಯುದ್ಧವಾದ ಘಟನೆಯಾಗಿತ್ತು. ಆ ಮಾತಿನ ಸಮರಕ್ಕೆ ಕಾರಣ ಏನೆಂದು ಮರುದಿನ ಕೆಕೆಆರ್ ಆಟಗಾರ ದಿನೇಶ್ ಕಾರ್ತಿಕ್ ವಿವರಿಸಿ ತಿಳಿಸಿದ್ದರು. ಇದೀಗ ಆರ್ ಅಶ್ವಿನ್ ಅವರೇ ಇಂದು ಖುದ್ದಾಗಿ ಈ ಬಗ್ಗೆ ಮೌನ ಮುರಿದಿದ್ಧಾರೆ. ತನ್ನ ಆಟಕ್ಕೆ ಕಳಂಕ ಎಂದು ಇಯಾನ್ ಮಾರ್ಗನ್ ಮಾಡಿರುವ ಹೀಯಾಳಿಕೆಗೆ ಅಶ್ವಿನ್ ತಿರುಗೇಟು ಕೊಟ್ಟಿದ್ಧಾರೆ. ಈ ಬಗ್ಗೆ ಸರಣಿ ಟ್ವೀಟ್​ಗಳನ್ನ ಮಾಡಿರುವ ಅಶ್ವಿನ್ ತಮ್ಮ ಅಂದಿನ ವರ್ತನೆಯನ್ನ ಸಮರ್ಥಿಸಿಕೊಂಡಿದ್ದಾರೆ.


  ಘಟನೆ ಆಗಿದ್ದೇನು?: ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುವಾಗ ಕ್ರೀಸ್​ನಲ್ಲಿ ಆರ್ ಅಶ್ವಿನ್ ಮತ್ತು ನಾಯಕ ರಿಷಭ್ ಪಂತ್ ಇದ್ದರು. ಒಂದು ರನ್ ಓಡಿದ ಬಳಿಕ ಫೀಲ್ಡರ್ ಎಸೆದ ಚೆಂಡು ರಿಷಭ್ ಪಂತ್ ಅವರ ದೇಹಕ್ಕೆ ತಾಗಿ ಬೇರೆಡೆ ಹೋಯಿತು. ಆಗ ಅಶ್ವಿನ್ ಅವರು ಇನ್ನೊಂದು ರನ್​ಗಾಗಿ ಓಡಲು ಶುರು ಮಾಡಿದ್ದರು. ಆ ವೇಳೆ, ಕೆಕೆಆರ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಅವರು ಅಶ್ವಿನ್ ಅವರಿಗೆ ನೀವು ಕ್ರೀಡೆಗೆ ಕಳಂಕ ಇದ್ದ ಹಾಗೆ (You are disgraceful) ಎಂದು ಟೀಕಿಸಿದ್ದರು. ಇದಕ್ಕೆ ಅಶ್ವಿನ್ ಅವರೂ ಖಾರವಾಗಿ ಅಂದೇ ಪ್ರತಿಕ್ರಿಯಿಸಿದ್ದರು. ಟಿಮ್ ಸೌಥಿ ಕೂಡ ಅಶ್ವಿನ್ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲೇ ಇದ್ದ ಕೆಕೆಆರ್ ತಂಡದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದರು.


  ಆಟದ ನಿಯಮದ ಪ್ರಕಾರ ಆರ್ ಅಶ್ವಿನ್ ಅವರು ಆ ರೀತಿಯ ಓವರ್ ಥ್ರೋಗೆ ಹೆಚ್ಚುವರಿ ರನ್ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕ್ರಿಕೆಟ್​ನಲ್ಲಿ ಕೆಲವೊಂದು ಅಂಶಗಳು ಅಘೋಷಿತವಾಗಿಯೇ ಪಾಲನೆಯಾಗುತ್ತವೆ. ಫೀಲ್ಡರ್ ಎಸೆದ ಚೆಂಡು ಬ್ಯಾಟ್ಸ್​ಮನ್​ಗೆ ತಾಗಿ ಹೋದರೆ ಬ್ಯಾಟ್ಸ್​ಮನ್​ಗಳು ಹೆಚ್ಚುವರಿ ರನ್​ಗೆ ಓಡುವುದಿಲ್ಲ. ಆ ರೀತಿ ದೇಹ ತಾಗಿ ಚಿಮ್ಮಿದ ಚೆಂಡು ಬೌಂಡರಿ ಗೆರೆ ಮುಟ್ಟಿದರೆ ಅದು ಫೋರ್ ಎಂದು ಅಂಪೈರ್ ಡಿಕ್ಲೇರ್ ಮಾಡುತ್ತಾರೆಯೇ ಹೊರತು ಬ್ಯಾಟರ್​ಗಳು ಹೆಚ್ಚುವರಿ ರನ್​ಗೆ ಪ್ರಯತ್ನಿಸುವುದೇ ಇಲ್ಲ. ಆದರೆ, ಇಲ್ಲಿ ಆರ್ ಅಶ್ವಿನ್ ಅವರು ಇಂಥ ಸಂದರ್ಭದಲ್ಲಿ ಹೆಚ್ಚುವರಿ ರನ್ ಓಡಲು ಪ್ರಯತ್ನಿಸಿದ್ದು ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್ ಅವರನ್ನ ಕೆರಳಿಸಿದೆ.


  ಇದಕ್ಕೆ ಸರಣಿ ಟ್ವೀಟ್​​ಗಳ ಮೂಲಕ ಆರ್ ಅಶ್ವಿನ್ ಖುದ್ದಾಗಿ ಸ್ಪಷ್ಟೀಕರಣ ನೀಡಿದ್ಧಾರೆ. “ಫೀಲ್ಡರ್ ಥ್ರೋ ಎಸೆಯುವುದನ್ನು ನೋಡಿದ ಕ್ಷಣದಲ್ಲಿ ನಾನು ರನ್ ಓಡಲು ತಿರುಗಿದೆ. ಆ ಬಾಲು ರಿಷಭ್ ಅವರಿಗೆ ತಾಗಿತು ಎಂದು ನನಗೆ ಗೊತ್ತಿಲ್ಲ. ಒಂದು ವೇಳೆ ನಾನು ನೋಡಿದ್ದರೆ ರನ್​ಗೆ ಓಡುತ್ತಿದ್ದೆನಾ? ಖಂಡಿತ ಆಗಲೂ ನಾನು ಓಡಿರುತ್ತಿದ್ದೆ. ಮಾರ್ಗನ್ ಹೇಳಿದ ಹಾಗೆ ನಾನು ಕಳಂಕಿತನಾ? ಖಂಡಿತಾ ಇಲ್ಲ” ಎಂದು ಮೊದಲ ಟ್ವೀಟ್​ನಲ್ಲೇ ತಮ್ಮ ನಿಲುವನ್ನು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.


  “ನಾನು ಅಂದು ಜಗಳ ಮಾಡಿದೆನಾ? ಇಲ್ಲ, ನನ್ನ ಹಕ್ಕಿಗಾಗಿ ನಿಂತಿದ್ದೆ. ಹೀಗೆ ಮಾಡಬೇಕೆಂದು ನನ್ನ ಗುರುಗಳು ಮತ್ತು ಪೋಷಕರು ನನಗೆ ಹೇಳಿಕೊಟ್ಟಿದ್ದಾರೆ. ನೀವು ಕೂಡ ನಿಮ್ಮ ಮಕ್ಕಳಿಗೆ ಇದನ್ನೇ ಹೇಳಿಕೊಡಿ” ಎಂದು ಅಶ್ವಿನ್ ತಿಳಿಹೇಳಿದ್ಧಾರೆ.

  “ಮಾರ್ಗನ್ ಅಥವಾ ಸೌಥೀ ಅವರು ತಮ್ಮ ಕ್ರಿಕೆಟ್ ಜಗತ್ತಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಗೆ ಬೇಕಾದರೂ ನಿರ್ಣಯಿಸಿಕೊಳ್ಳಲಿ. ಆದರೆ, ಇದೇ ನೈತಿಕತೆ ಎಂದು ನಿರ್ಧರಿಸಿ, ನಿಂದನಾತ್ಮಕ ಪದ ಬಳಕೆ ಮಾಡುವ ಹಕ್ಕು ಹೊಂದಿರುವುದಿಲ್ಲ.


  ”ಜನರು ಈ ಘಟನೆಯನ್ನ ಚರ್ಚಿಸುತ್ತಿರುವುದು, ಹಾಗೂ ಯಾರು ಒಳ್ಳೆಯ ವ್ಯಕ್ತಿ ಯಾರು ಕೆಟ್ಟ ವ್ಯಕ್ತಿ ಎಂದು ಅಭಿಪ್ರಾಯಗಳನ್ನ ನೀಡುತ್ತಿರುವುದು ಇನ್ನೂ ಅಚ್ಚರಿ ಮೂಡಿಸಿದೆ.


  “ಕ್ರಿಕೆಟ್ ಜೆಂಟಲ್​ಮ್ಯಾನ್ ಗೇಮ್ ಎಂದು ನಂಬುವವರಿಗೆ ಈ ವಿಚಾರಗಳನ್ನ ತಿಳಿಸುತ್ತೇನೆ: ಈ ಆಟದ ಮೂಲಕ ತಮ್ಮ ವೃತ್ತಿಜೀವನ ನಡೆಸುತ್ತಿರುವ ವಿವಿಧ ವಿಚಾರಗಳಿರುವ ಕೋಟ್ಯಂತರ ಕ್ರಿಕೆಟಿಗರು ನಮ್ಮಲ್ಲಿದ್ದಾರೆ. ಕೆಟ್ಟ ಓವರ್ ಥ್ರೋನಿಂದ ಒಂದು ಹೆಚ್ಚುವರಿ ರನ್ ತೆಗೆದುಕೊಂಡರೆ ಅದು ಅವರ ವೃತ್ತಿಜೀವನಕ್ಕೆ ಅನುಕೂಲವಾಗುತ್ತದೆ. ನಾನ್-ಸ್ಟ್ರೈಕರ್ ಕ್ರೀಸ್​ನಿಂದ ಹೊರಗೆ ಬಂದರೆ ಒಬ್ಬ ಬೌಲರ್​ನ ವೃತ್ತಿಜೀವನಕ್ಕೇ ಮಾರಕವಾಗಬಹುದು ಎಂಬುದನ್ನ ಆಟಗಾರರಿಗೆ ತಿಳಿಸಿಕೊಡಿ. ನೀವು ರನ್ ಓಡಲು ನಿರಾಕರಿಸಿದರೆ ಅಥವಾ ನಾನ್-ಸ್ಟ್ರೈಕರ್​ಗೆ ಕೇವಲ ವಾರ್ನ್ ಮಾತ್ರ ಮಾಡಿದರೆ ನೀವು ಒಳ್ಳೆಯ ವ್ಯಕ್ತಿ ಆಗುತ್ತೀರಿ ಎಂದು ಹೇಳಿ ಅವರನ್ನ ಗೊಂದಲಕ್ಕೀಡು ಮಾಡಬೇಡಿ. ನೀವು ಒಳ್ಳೆಯವರೋ ಕೆಟ್ಟವರೋ ಎಂದು ಬಣ್ಣಿಸುವ ಜನರು ಈಗಾಗಲೇ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ.


  ಮೈದಾನದಲ್ಲಿ ನಿಮ್ಮ ತನು ಮನವನ್ನು ಧಾರೆ ಎರೆದು, ಆಟದ ನಿಯಮಗಳ ಪ್ರಕಾರವೇ ಆಡಿ. ಆಟ ಮುಗಿದ ಮೇಲೆ ಹಸ್ತಲಾಘವ ಮಾಡಿ. ಇದೇ ಗೇಮ್ ಸ್ಪಿರಿಟ್ ಎಂಬುದು ನನಗೆ ಗೊತ್ತಿರುವ ಸತ್ಯ” ಎಂದು ಆರ್ ಅಶ್ವಿನ್ ಮಾರ್ಮಿಕವಾಗಿ ಹೇಳಿದ್ಧಾರೆ.


  ಆರ್ ಅಶ್ವಿನ್ ಅವರು ಈ ಹಿಂದೆಯೂ ಇಂಥ ಕೆಲ ಘಟನೆಗಳಲ್ಲಿ ಕೆಲ ಟೀಕಾಕಾರರ ದಾಳಿಗೆ ತುತ್ತಾಗಿದ್ದಿದೆ. ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕಿಂಗ್ ಎಂಡ್​ನಲ್ಲಿದ್ದ ಬ್ಯಾಟ್ಸ್​ಮನ್ ಕ್ರೀಸ್​ನಿಂದ ಹೊರಗೆ ಬಂದಾಗ ಆರ್ ಅಶ್ವಿನ್ ಬೇಲ್ ಎಗರಿಸಿ ಔಟ್ ಮಾಡಿದ್ದಿದೆ. ಮೇಲೆ ಹೇಳಿದ ಓವರ್ ಥ್ರೋ ರೀತಿಯಲ್ಲೇ ನಾನ್ ಸ್ಟ್ರೈಕರ್ ರನೌಟ್ ಕೂಡ ಆಟಗಾರರಲ್ಲಿ ಅಘೋಷಿತವಾಗಿ ನಿಷಿದ್ಧವಿದೆ. ನಿಯಮದ ಪ್ರಕಾರ ಆ ರೀತಿ ನಾನ್ ಸ್ಟ್ರೈಕರ್ ಬ್ಯಾಟರ್ ಅನ್ನು ಔಟ್ ಮಾಡಬಹುದು. ಅಶ್ವಿನ್ ಆ ಕೆಲಸ ಮಾಡಿದ್ದಕ್ಕೆ ಸಾಕಷ್ಟು ಟೀಕೆಗಳನ್ನ ಕೇಳಿದ್ಧಾರೆ.

  Published by:Vijayasarthy SN
  First published: