ನವದೆಹಲಿ, ಸೆ. 23: ಭಾರತದ ಅತ್ಯುತ್ತಮ ಸ್ಪಿನ್ ಬೌಲರ್ ಎಂದೇ ಪರಿಗಣಿತವಾಗಿರುವ ಆರ್ ಅಶ್ವಿನ್ (R Ashwin) ಅವರು ಐಪಿಎಲ್ನಲ್ಲಿ ಯಾಕೋ ತಮ್ಮ ಬೌಲಿಂಗ್ನಲ್ಲಿ ಮೊನಚು ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ (Sunrisers Hyderabad) ವಿರುದ್ಧ ಅವರು ಬೌಲಿಂಗ್ ಮಾಡಿದ ರೀತಿಗೆ ವೀರೇಂದ್ರ ಸೆಹ್ವಾಗ್ (Virender Sehwag) ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಅರ್ ಅಶ್ವಿನ್ ಬಹಳ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ವಿಕೆಟ್ ಸಿಗುತ್ತಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅಶ್ವಿನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ 2.5 ಓವರ್ ಬೌಲ್ ಮಾಡಿ 22 ರನ್ನಿತ್ತರು. ಟಿ20 ಕ್ರಿಕೆಟ್ನಲ್ಲಿ ಇದು ಉತ್ತಮ ಬೌಲಿಂಗ್ ಎನಿಸಿದರೂ ಅಶ್ವಿನ್ಗೆ ಒಂದೂ ವಿಕೆಟ್ ಬೀಳಲಿಲ್ಲ. ವೀರೇಂದ್ರ ಸೆಹ್ವಾಗ್ ಪ್ರಕಾರ ಇದಕ್ಕೆ ಕಾರಣ ಅಶ್ವಿನ್ ಅವರ ಅನವಶ್ಯಕ ಪ್ರಯೋಗಶೀಲತೆಯೇ ಆಗಿದೆ.
ತಮಿಳುನಾಡಿನ ಆರ್ ಅಶ್ವಿನ್ ಮೂಲತಃ ಆಫ್ ಸ್ಪಿನ್ನರ್. ಆದರೆ, ಆಫ್ ಸ್ಪಿನ್ನಿಂಗ್ ಎಸೆತಗಳಿಗಿಂತ ಅವರು ಬೇರೆ ರೀತಿಯ ವೈವಿಧ್ಯಮಯ ಎಸೆತಗಳನ್ನ ಬೌಲ್ ಮಾಡುತ್ತಿದ್ದಾರೆ. ಟಿ20ಯಂಥ ಚುಟುಕು ಕ್ರಿಕೆಟ್ ಮಾದರಿಗೆ ತಮ್ಮ ಬೌಲಿಂಗ್ ಅನ್ನು ಹೊಂದಿಕೆ ಮಾಡಿಕೊಳ್ಳುವ ಸಲುವಾಗಿ ಅಶ್ವಿನ್ ವಿಭಿನ್ನ ಪ್ರಯೋಗಗಳನ್ನ ಮಾಡುತ್ತಿರುವಂತೆ ಮೇಲ್ನೋಟಕ್ಕೆ ತೋರುತ್ತದೆ. ವೀರೇಂದ್ರ ಸೆಹ್ವಾಗ್, ಆಶೀಶ್ ನೆಹ್ರಾ ಮೊದಲಾದವರೂ ಈ ಅಭಿಪ್ರಾಯವನ್ನು ಅನುಮೋದಿಸುತ್ತಾರೆ. ಎಂ ಎಸ್ ಧೋನಿ ಅವರು ಭಾರತ ತಂಡದಲ್ಲಿ ಇದ್ದಾಗ ಅಶ್ವಿನ್ ಅವರಿಗೆ ಹೆಚ್ಚಿನ ಪ್ರಯೋಗ ಮಾಡಲು ಅವಕಾಶ ಕೊಡುತ್ತಿರಲಿಲ್ಲವಂತೆ. ಹಾಗೆಯೇ ಅಶ್ವಿನ್ ಅವರು ಬೌಲಿಂಗ್ನಲ್ಲಿ ಪ್ರಯೋಗ ಮಾಡಲು ಅವರಿಗಿರುವ ಭಯವೇ ಕಾರಣ ಎನ್ನುತ್ತಾರೆ ಸೆಹ್ವಾಗ್.
ಅಶ್ವಿನ್ಗೆ ಕಾಡುತ್ತಿದೆಯಂತೆ ಭಯ:
“ಆಫ್ ಸ್ಪಿನ್ ಬೌಲ್ ಮಾಡಿದರೆ ಯಾರು ಬೇಕಾದರೂ ಬೌಂಡರಿ, ಸಿಕ್ಸರ್ ಭಾರಿಸಬಲ್ಲರು ಎಂಬ ಭಾವನೆ ಆರ್ ಅಶ್ವಿನ್ ಅವರಲ್ಲಿ ಬೇರೂರಿದೆ. ಈ ಭಯದಿಂದಾಗಿಯೇ ಅವರು ಬೌಲಿಂಗ್ನಲ್ಲಿ ಪ್ರಯೋಗಗಳನ್ನ ಮಾಡಲು ಮುಂದಾಗುತ್ತಿದ್ಧಾರೆ. ಎಂಎಸ್ ಧೋನಿ ವಿಕೆಟ್ ಕೀಪಿಂಗ್ ಮಾಡುವಾಗ ಅಶ್ವಿನ್ಗೆ ಪ್ರಯೋಗ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಒಬ್ಬ ಬ್ಯಾಟರ್ ನಿಮ್ಮ ಬೌಲಿಂಗ್ನಲ್ಲಿ ಸಿಕ್ಸರ್ ಭಾರಿಸಬಲ್ಲನೆಂದರೆ ಆತನ ವಿಕೆಟ್ ಕೀಳುವ ಅವಕಾಶವೂ ಇರುತ್ತದೆ ಎಂಬುದನ್ನು ಬೌಲರ್ ಅರ್ಥ ಮಾಡಿಕೊಳ್ಳಬೇಕಾಗುತ್ತದೆ” ಎಂದು ಕ್ರಿಕ್ ಬಜ್ ವೆಬ್ ಸೈಟ್ಗೆ ನೀಡಿದ ಸಂದರ್ಶನದಲ್ಲಿ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಅಶ್ವಿನ್ ಹೆಚ್ಚು ರನ್ ನೀಡದೇ ಹೋದರೂ ವಿಕೆಟ್ ಪಡೆಯಬಲ್ಲಂಥ ಎಸೆತಗಳನ್ನ ಹಾಕಲೇ ಇಲ್ಲ. ಆಫ್ ಸ್ಪಿನ್ನರ್ ಆಗಿರುವ ಅಶ್ವಿನ್ ಅವರು ಹೆಚ್ಚು ಆಫ್ ಸ್ಪಿನ್ ಬಾಲ್ ಹಾಕಿದ್ದು ಕಾಣಲೇ ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ಸೆಹ್ವಾಗ್, ಅಶ್ವಿನ್ ಒಬ್ಬ ಹಿರಿಯ ಬೌಲರ್ ಆಗಿ ವಿಕೆಟ್ ಪಡೆಯುವ ಹೊಣೆಗಾರಿಕೆ ಹೊಂದಿರುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: Venkatesh Iyer- ಹೊಸ ಕೆಕೆಆರ್ ಸ್ಟಾರ್ ವೆಂಕಟೇಶ್ ಅಯ್ಯರ್ ವಿಶ್ವದಾಖಲೆ ವೀರ; ಒಂದು ಪರಿಚಯ
“ಅವರು ಬೌಲಿಂಗ್ ಮಾಡುವ ರೀತಿ ನೋಡಿದರೆ ಬ್ಯಾಟರ್ ಅನ್ನ ಔಟ್ ಮಾಡುವ ಅವಕಾಶ ತೀರಾ ಕಡಿಮೆ ಇದ್ದಂತೆ ತೋರುತ್ತದೆ. ಅವರು ಆಫ್ ಸ್ಪಿನ್ ಎಸೆತಗಳನ್ನ ಹಾಕಿದರೆ ಬ್ಯಾಟರನ್ನು ಬೌಲ್ಡ್ ಔಟ್ ಅಥವಾ ಎಲ್ಬಿಡಬ್ಲ್ಯೂ ಔಟ್ ಆಗುವ ಸಾಧ್ಯತೆ ಇರುತ್ತದೆ” ಎಂದು ವೀರೂ ಹೇಳಿದ್ಧಾರೆ.
ಬ್ಯಾಟ್ಸ್ಮನ್ನಿಂದ ಹೊಡೆಸಿಕೊಳ್ಳುವ ಭಯದಲ್ಲಿ ಆರ್ ಅಶ್ವಿನ್ ಆಫ್ ಸ್ಪಿನ್ ಬದಲು ಬೇರೆ ಪ್ರಯೋಗ ಮಾಡುತ್ತಿದ್ದಾರೆಂಬ ವೀರೂ ಅಭಿಪ್ರಾಯಕ್ಕೆ ಆಶಿಶ್ ನೆಹ್ರಾ ಸಹಮತ ವ್ಯಕ್ತಪಡಿಸಿದ್ಧಾರೆ. ಅಶ್ವಿನ್ಗೆ ಸಾಕಷ್ಟು ಅನುಭವ ಇದೆ. ಆದರೆ, ಅವರಿಂದ ಆಫ್ ಸ್ಪಿನ್ನರ್ ನಮಗೆ ಕಾಣಲೇ ಇಲ್ಲ. ಅವರಿಗೆ ಬ್ಯಾಟರ್ ಕೈಲಿ ಹೊಡೆಸಿಕೊಂಡಿಬಿಡುವ ಭಯ ಇದ್ದಂತಿದೆ ಎಂಬುದು ನೆಹ್ರಾ ಅನಿಸಿಕೆ.
ಆರ್ ಅಶ್ವಿನ್ ಅವರು ತಮ್ಮ ಬೌಲಿಂಗ್ ಬತ್ತಳಿಕೆಯಲ್ಲಿ ಆಫ್ ಸ್ಪಿನ್ ಜೊತೆಗೆ ಕೇರಂ ಬಾಲ್ ಇತ್ಯಾದಿ ಅಸ್ತ್ರಗಳನ್ನ ಹೊಂದಿದ್ದಾರೆ. ಇವೆಲ್ಲವೂ ಬ್ಯಾಟ್ಸ್ಮನ್ ಹೆಚ್ಚು ಶಾಟ್ಗಳನ್ನ ಹೊಡೆಯಲು ಸಾಧ್ಯವಾಗದಂತೆ ಕಟ್ಟಿಹಾಕಬಲ್ಲ ಎಸೆತಗಳಾಗಿವೆ. ಶುದ್ಧ ಆಫ್ ಸ್ಪಿನ್ನಿಂಗ್ ಎಸೆತಗಳು ಬ್ಯಾಟರ್ಗೆ ಶಾಟ್ ಹೊಡೆಯಲು ಪ್ರೇರೇಪಣೆ ನೀಡುತ್ತವೆ. ಆ ಮೂಲಕ ಬ್ಯಾಟ್ಸ್ಮನ್ ಶಾಟ್ ಹೊಡೆಯುವಾಗ ತಪ್ಪು ಮಾಡಿ ವಿಕೆಟ್ ಒಪ್ಪಿಸುವ ಅವಕಾಶ ದಟ್ಟವಾಗಿರುತ್ತದೆ. ಆದರೆ, ಅಶ್ವಿನ್ ಅವರು ಆಫ್ ಸ್ಪಿನ್ ಎಸೆತಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲದಿರುವುದು ಅವರ ಬೌಲಿಂಗ್ ಮೊನಚು ಕುಂದಿದಂತೆ ಕಾಣುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ