IPL 2021, KKR vs PBKS: ಕೆಕೆಆರ್ ಮಣಿಸಿದ ಪಂಜಾಬ್; ಅರ್ಧಶತಕ ಗಳಿಸಿ ನಿರ್ಣಾಯಕ ಆಟವಾಡಿದ ಕೆ.ಎಲ್. ರಾಹುಲ್!

ಇನ್ನೇನು ಗೆಲುವಿನ ದಡ ಮುಟ್ಟಿಸಬೇಕು ಎನ್ನುವಷ್ಟರಲ್ಲಿ 67 ರನ್​ ಕಲೆ ಹಾಕಿದ್ದ ಕೆ.ಎಲ್ ರಾಹುಲ್ ಅವರು ವೆಂಕಟೇಶ್ ಅಯ್ಯರ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಕ್ರೀಸ್​ನಲ್ಲಿದ್ದ ಶಾರುಖ್ ಖಾನ್​ 22 ರನ್​ ಗಳಿಸುವ ಮೂಲಕ ಇನ್ನು ಮೂರು ಎಸೆತಗಳು ಬಾಕಿ ಇರುವಂತೆ ತಂಡವನ್ನು ಗೆಲುವಿನ ಪಟ್ಟಿ ದಾಟಿಸಿದರು.

ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದ ಪಂಜಾಬ್

ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದ ಪಂಜಾಬ್

 • Share this:
  ದುಬೈ (ಅಕ್ಟೋಬರ್​ 01); ಇಂದು ನಡೆದ ಕೆಕೆಆರ್ ಮತ್ತು ಪಂಜಾಬ್​ ನಡುವಿನ ಪಂದ್ಯದಲ್ಲಿ ಪಂಜಾಬ್​  ಗೆದ್ದು ಬೀಗಿದೆ. ತಂಡದ ನಾಯಕ ಕೆ.ಎಲ್. ರಾಹುಲ್ ಅವರ ಅದ್ಬುತ ಆಟದ ನೆರವಿನೊಂದಿಗೆ ಪಂಜಾಬ್ ತಂಡ ಐದು ವಿಕೆಟ್​ಗಳ ಗೆಲುವನ್ನು ದಾಖಲಿಸಿದೆ. ಇದರೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ ಮೇಲಕ್ಕೆ ಜಿಗಿದಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್​ಗಳ ಗುರಿಯನ್ನು ಪಂಜಾಬ್​ಗೆ ನೀಡಿತು. ಕೆಕೆಆರ್ ಆರಂಭಿಕ ಎಡಗೈ ಯುವ ಆಟಗಾರ ವೆಂಕಟೇಶ್ ಅಯ್ಯರ್ ಅವರ ಅರ್ಧಶತಕ (67)  ರಾಹುಲ್ ತ್ರಿಪಾಠಿ (34 ರನ್)  ಹಾಗೂ ಕೊನೆಯ ಹಂತದಲ್ಲಿ ನಿತೀಶ್ ರಾಣಾ ಕೂಡ 34 ರನ್ ಕಲೆ ಹಾಕುವ ಮೂಲಕ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು. ಪಂಜಾಬ್ ಪರ ಆರ್ಷ್ ದೀಪ್ ಸಿಂಗ್ ಮೂರು ಹಾಗೂ ರವಿ ಬಿಷ್ಣೋಯಿ ಎರಡು ವಿಕೆಟ್ ಪಡೆದು ಮಿಂಚಿದರು. 

  ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಉತ್ತಮ ಆಟ

  ವೆಂಕಟೇಶ್ ಅಯ್ಯರ್ 67 ರನ್, 49 ಎಸೆತ, ಬೌಂಡರಿ 9, ಹಾಗೂ 1 ಸಿಕ್ಸ್ ಬಾರಿಸಿದರು. ಶುಭಮನ್ ಗಿಲ್ ಕೇವಲ 7 ಎದುರಿಸಿ 7 ರನ್ ಕಲೆ ಹಾಕಿದರು. ರಾಹುಲ್ ತ್ರಿಪಾಠಿ ಅವರು ಅಯ್ಯರ್ ಅವರಿಗೆ ಉತ್ತಮ ಸಾಥ್ ನೀಡಿದರು. 26 ಎಸೆತ ಎದುರಿಸಿದ ತ್ರಿಪಾಠಿ 3 ಬೌಂಡರಿ ಹಾಗೂ 1 ಸಿಕ್ಸ್​ರ್​ನೊಂದಿಗೆ 34 ರನ್ ಕಲೆ ಹಾಕಿದರು. ಇನ್ನು ನಿತೀಶ್ ರಾಣಾ ಕೂಡ 31 ರನ್ 18 ಎಸೆತ, 2 ಬೌಂಡರಿ, 2 ಸಿಕ್ಸ್ ಬಾರಿಸಿದರು. ಇವಾನ್ ಮಾರ್ಗನ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಅತ್ತ ಹೆಜ್ಜೆ ಹಾಕಿದರು. ದಿನೇಶ್ ಕಾರ್ತಿಕ್ ಕೂಡ 11 ರನ್ ಗಳಿಸಲಷ್ಟೇ ಶಕ್ತರಾದರು. ಟಿಮ್ ಸಿಫೀರ್ಟ್ 2 ಹಾಗೂ ಸುನೀಲ್ ನರೆನ್ ಔಟಾಗದೆ 3 ಗಳಿಸಿದರು. ಒಟ್ಟು 20 ಓವರ್​ಗಳಿಗೆ 7 ವಿಕೆಟ್ ಗಳಿದುಕೊಂಡು ಕೆಕೆಆರ್ 165 ರನ್​ ಕಲೆ ಹಾಕಿತು.

  ಇದನ್ನು ಓದಿ: IPL 2021 Playoffs- ಐಪಿಎಲ್ ಪ್ಲೇ ಆಫ್​ಗೆ ಯಾವೆಲ್ಲಾ ತಂಡಗಳು ಪ್ರವೇಶಿಸುತ್ತವೆ? ಇಲ್ಲಿದೆ ಲೆಕ್ಕಾಚಾರ

  ಗುರಿ ಬೆನ್ನತ್ತಿದ ಪಂಜಾಬ್ ತಂಡ

  ಬಳಿಕ ಕೆಕೆಆರ್ ನೀಡಿದ ಗುರಿಯನ್ನು ಬೆನ್ನತ್ತಿ ಬಂದ ಪಂಜಾಬ್​​ ಪರ ಆರಂಭಿಕರಾಗಿ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಆಗಮಿಸಿದರು. ಆರಂಭದಲ್ಲಿ ಬಿರುಸಾಗಿ ಆಟವಾಡುವ ಮೂಲಕ ಕೆಕೆಆರ್ ಬೌಲರ್​ಗಳ ಬೆವರಿಳಿಸಿದರು. ಐದು ಓವರ್​ಗಳಲ್ಲಿ ಇಬ್ಬರು ಸೇರಿ 50 ರನ್​ಗಳನ್ನು ಕಲೆ ಮಾಡಿದರು. ಉತ್ತಮವಾಗಿ ಜೊತೆಯಾಟ ಆಡಿ ತಂಡದ ಮೊತ್ತ 70 ರನ್​ ಇದ್ದಾಗ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಮಯಾಂಕ್ ಅಗರ್ವಾಲ್ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ನಡೆದರು. ಅವರು ಅಷ್ಟರಲ್ಲಾಗಲೇ 40 ರನ್ ಕಲೆ ಹಾಕಿದ್ದರು. ನಂತರ ಕ್ರಿಸ್​ಗೆ ಬಂದ ನಿಕೋಲಸ್ ಪೂರನ್​ ಸಹ 12 ರನ್​ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು. ಆಗ ತಂಡದ ಮೊತ್ತ 103 ಇತ್ತು. ಚೆನ್ನಾಗಿ ಆಡುತ್ತಿದ್ದ ಆಡನ್ ಮಾರ್ಕರಂ ಅವರು 18 ರನ್​ ಗಳಿಸಿದ್ದಾಗ ಸುನೀಲ್ ನರೇನ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇವರ ನಂತರ ಬಂದ ದೀಪಕ್ ಹೂಡಾ ಕೇವಲ 4 ಎಸೆತ ಎದುರಿಸಿ 3 ರನ್ ಕಲೆ ಹಾಕಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಮುಖ ಹಾಕಿದರು. ಇನ್ನೇನು ಗೆಲುವಿನ ದಡ ಮುಟ್ಟಿಸಬೇಕು ಎನ್ನುವಷ್ಟರಲ್ಲಿ 67 ರನ್​ ಕಲೆ ಹಾಕಿದ್ದ ಕೆ.ಎಲ್ ರಾಹುಲ್ ಅವರು ವೆಂಕಟೇಶ್ ಅಯ್ಯರ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಕ್ರೀಸ್​ನಲ್ಲಿದ್ದ ಶಾರುಖ್ ಖಾನ್​ 22 ರನ್​ ಗಳಿಸುವ ಮೂಲಕ ಇನ್ನು ಮೂರು ಎಸೆತಗಳು ಬಾಕಿ ಇರುವಂತೆ ತಂಡವನ್ನು ಗೆಲುವಿನ ಪಟ್ಟಿ ದಾಟಿಸಿದರು. ಇದರೊಂದಿಗೆ ಪಂಜಾಬ್ ಕೆಕೆಆರ್ ತಂಡದ ವಿರುದ್ಧ ರೋಚಕ ಗೆಲುವನ್ನು ದಾಖಲಿಸಿತು.
  Published by:HR Ramesh
  First published: