IPL Auction- ಮುಂದಿನ ವರ್ಷದಿಂದ ಐಪಿಎಲ್ ಆಟಗಾರರ ಹರಾಜು ಇರೋಲ್ಲವಾ? ಇಲ್ಲಿದೆ ಮಾಹಿತಿ

Voice against IPL Players Auction: ಐಪಿಎಲ್ ಹರಾಜು ಪ್ರಕ್ರಿಯೆ ಈಗ ಸಂದರ್ಭೋಚಿತವಾಗಿ ಉಳಿದಿಲ್ಲ. ಅದನ್ನು ನಿಲ್ಲಿಸಿ ಫ್ರಾಂಚೈಸಿಗಳಿಗೆ ತಮ್ಮದೇ ರೀತಿಯಲ್ಲಿ ತಂಡ ಕಟ್ಟಲು ಅನುವು ಮಾಡಿಕೊಡಬೇಕು ಎಂದು ಕೆಲ ಫ್ರಾಂಚೈಸಿಗಳು ಕೂಗೆಬ್ಬಿಸಿವೆ.

ಐಪಿಎಲ್ ಹರಾಜು ವ್ಯವಸ್ಥೆ

ಐಪಿಎಲ್ ಹರಾಜು ವ್ಯವಸ್ಥೆ

  • Share this:
    ಬೆಂಗಳೂರು, ಡಿ. 02: ಐಪಿಎಲ್ ಕ್ರಿಕೆಟ್ ಟೂರ್ನಿ (Indian Premier League) ಎಷ್ಟು ಧೂಮ್ ಧಮಾಕವೋ, ಅದರ ಆಟಗಾರರ ಹರಾಜು ಪ್ರಕ್ರಿಯೆಯೂ (IPL Auction Process) ಬಲು ರೋಚಕ. ಒಬ್ಬೊಬ್ಬ ಆಟಗಾರನಿಗೆ ವಿವಿಧ ತಂಡಗಳು ನಡೆಸುವ ಬಿಡ್ (biddig for players) ಬಹಳ ಕುತೂಹಲ ಮೂಡಿಸುತ್ತದೆ. ಕೆಲವೊಮ್ಮೆ ಸ್ಟಾರ್ ಆಟಗಾರ ಹರಾಜಿಗೆ ಬಂದಾಗ ಆತನನ್ನು ಕೇಳುವವರೇ ಇರುವುದಿಲ್ಲ. ನೋಡುಗರಿಗೆ ಇದು ಸೋಜಿಗ ಎನಿಸುತ್ತದೆ. ಆದರೆ, ವಿವಿಧ ತಂಡಗಳ ಲೆಕ್ಕಾಚಾರ, ರಣತಂತ್ರ ಬಹಳ ವಿಭಿನ್ನವಾಗಿರುತ್ತದೆ. ಯಾವ ತಂಡ ಯಾವ ಆಟಗಾರನ ಮೇಲೆ ಕಣ್ಣಿಟ್ಟಿರುತ್ತದೆ ಎಂಬುದು ಆ ತಂಡಕ್ಕೆ ಮಾತ್ರ ಗೊತ್ತಿರುತ್ತದೆ. ಅಷ್ಟರಮಟ್ಟಿಗೆ ಐಪಿಎಲ್ ಅಕ್ಷನ್ ರೋಚಕ ಎನ್ನುವುದರಲ್ಲಿ ಸಂಶಯ ಇಲ್ಲ.

    ಐಪಿಎಲ್ 2022ಗೆ ಈ ತಿಂಗಳು ಆಟಗಾರರ ಹರಾಜು ಪ್ರಕ್ರಿಯೆ ಇದೆ. ಆದರೆ, ಇದೇ ಕೊನೆಯ ಐಪಿಎಲ್ ಆಕ್ಷನ್ ಆಗಬಹುದು ಎಂಬ ಸುದ್ದಿ ಇದೆ. ಅಂದರೆ, ಮುಂದಿನ ವರ್ಷದಿಂದ ಐಪಿಎಲ್ ಹರಾಜು ಪ್ರಕ್ರಿಯೆಯನ್ನೇ ನಿಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲ ಐಪಿಎಲ್ ಫ್ರಾಂಚೈಸಿಗಳಿಂದಲೇ ಹರಾಜಿಗೆ ಅಪಸ್ವರ ವ್ಯಕ್ತವಾಗುತ್ತಿದೆ. ಕರ್ನಾಟಕ ಮೂಲದ ಇಬ್ಬರು ಐಪಿಎಲ್ ತಂಡಗಳ ಮಾಲಿಕರು ಧ್ವನಿ ಎತ್ತಿದ್ದಾರೆ. ಐಪಿಎಲ್ ಹರಾಜು ಈಗ ಪ್ರಯೋಜನಕಾರಿಯಾಗಿ ಉಳಿದಿಲ್ಲ. ತಂಡಗಳ ಬೆಳವಣಿಗೆ ಅದು ಪೂರಕವಾಗಿಲ್ಲ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಮಾಲಿಕ ಪಾರ್ತ್ ಜಿಂದಾಲ್ ಅಭಿಪ್ರಾಯಪಟ್ಟಿದ್ಧಾರೆ.

    ಇದಕ್ಕೆ ಪೂರಕವೆಂಬಂತೆ ಮೊನ್ನೆ ಕೆ ಶ್ರೀನಿವಾಸ ರಾವ್ ಎಂಬುವವರು ಟ್ವೀಟ್ ಮಾಡಿ, ಈ ಬಾರಿ ನಡೆಯಲಿರುವುದು ಕೊನೆಯ ಐಪಿಎಲ್ ಹರಾಜಾಗಬಹುದು. ಮುಂದಿನ ವರ್ಷದಿಂದ ಯಾವ ಹರಾಜು ನಡೆಯುವುದು ಅನುಮಾನ. ಇನ್ಮುಂದೆ ಫ್ರಾಂಚೈಸಿಗಳು ತಮಗೆ ಬೇಕಾದ ರೀತಿಯಲ್ಲಿ ತಂಡವನ್ನ ರಚಿಸಿಕೊಳ್ಳಬಹುದು ಎಂದಿದ್ದಾರೆ.


    ಈಗಿರುವ ವ್ಯವಸ್ಥೆ ಹೇಗೆ?:

    ಈಗಿರುವ ಐಪಿಎಲ್ ವ್ಯವಸ್ಥೆಯಲ್ಲಿ ಒಂದು ತಂಡ ಸೀಸನ್ ಆರಂಭಕ್ಕೆ ಮುನ್ನ ನಿರ್ದಿಷ್ಟ ಸಂಖ್ಯೆಯ ಆಟಗಾರರನ್ನ ಮಾತ್ರ ಉಳಿಸಿಕೊಳ್ಳಬಹುದು. ಇನ್ನುಳಿದ ಆಟಗಾರರನ್ನ ರಿಲೀಸ್ ಮಾಡಬೇಕಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಬೇರೆ ಬೇರೆ ತಂಡಗಳ ಜೊತೆ ಸ್ಪರ್ಧೆಗಿಳಿದು ಬಿಡ್ ಮೂಲಕ ಆಟಗಾರರನ್ನ ಖರೀದಿಸಬೇಕಾಗುತ್ತದೆ. ಈ ವ್ಯವಸ್ಥೆಯಲ್ಲಿ ಒಂದು ತಂಡಕ್ಕೆ ತನ್ನದೇ ವೈಶಿಷ್ಟ್ಯತೆ ಎಂಬುದು ಉಳಿಯಲ್ಲ. ಒಂದು ಅಥವಾ ಎರಡು ವರ್ಷ ಕಷ್ಟಪಟ್ಟು ಆಟಗಾರರನ್ನು ತಂಡದಲ್ಲಿ ಸಂಯೋಜಿಸಿ ಅಣಿಗೊಳಿಸಿದ ಬಳಿಕ ಅವರನ್ನ ಮುಂದಿನ ವರ್ಷ ಕೈಬಿಡುವುದು ಎಷ್ಟು ಸರಿ? ಅವರ ಮೇಲೆ ತಂಡ ವ್ಯಯಿಸಿದ ಸಮಯ, ಶ್ರಮ ಎಲ್ಲವೂ ನೀರಿನ ಮೇಲೆ ಹೋಮ ಮಾಡಿದಂತಾಗುತ್ತದೆ ಎಂಬುದು ಕೆಲ ಫ್ರಾಂಚೈಸಿಗಳ ಅಳಲು.

    ಇದನ್ನೂ ಓದಿ: IPL Auction- ಐಪಿಎಲ್ ಹರಾಜಿನಲ್ಲಿ ಈ ಆಟಗಾರರಿಗೆ ಇದೆ ಭರ್ಜರಿ ಡಿಮ್ಯಾಂಡ್

    ಪರ್ಯಾಯ ಮಾರ್ಗಗಳೇನು?

    ಫುಟ್ಬಾಲ್ ಫ್ರಾಂಚೈಸಿಗಳಂತೆ ಐಪಿಎಲ್ ಫ್ರಾಂಚೈಸಿಗಳು ಅಕಾಡೆಮಿಗಳ ಮೇಲೆ ಹಣ ಹೂಡಿಕೆ ಮಾಡಿ ಯುವ ಪ್ರತಿಭೆಗಳನ್ನ ಬೆಳೆಸಬಹುದು. ಇತರ ತಂಡಗಳಲ್ಲಿರುವ ಆಟಗಾರರನ್ನ ಖರೀದಿಸುವುದಿದ್ದರೆ ಆ ಆಟಗಾರ ಮತ್ತು ಆತನ ತಂಡದ ಜೊತೆ ಸಂಧಾನ ನಡೆಸಿ ಖರೀದಿಸಬಹುದು. ಅಥವಾ ಲೋನ್ ಮೂಲಕ ಬೇರೆ ತಂಡದಿಂದ ಆಟಗಾರನನ್ನು ಎರವಲಿನ ರೀತಿ ಪಡೆದುಕೊಳ್ಳಬಹುದು.

    ಇದರಿಂದ ಫ್ರಾಂಚೈಸಿಗಳಿಗೆ ತಮಗೆ ಬೇಕಾದ ರೀತಿಯಲ್ಲಿ ತಂಡ ಕಟ್ಟಲು ಮತ್ತು ಆಟಗಾರರನ್ನ ಬಳಸಿಕೊಳ್ಳುವ ಸ್ವಾತಂತ್ರ್ಯ ಸಿಗುತ್ತದೆ ಎಂಬುದು ಇವರ ವಾದ.

    ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಿಲ್ಲಿಸಬೇಕೆಂಬ ಕೂಗಿಗೆ ಬಿಸಿಸಿಐ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ತಿಳಿದಿಲ್ಲ. ಎಲ್ಲಾ ಫ್ರಾಂಚೈಸಿಗಳು ಒಕ್ಕೊರಳಿನಿಂದ ಕೂಗು ಹಾಕಿದಾಗ ಬಿಸಿಸಿಐ ಸ್ಪಂದಿಸಲೇಬೇಕಾಗುತ್ತದೆ. ಹಾಗೊಂದು ವೇಳೆ ಆದಲ್ಲಿ ಮುಂದಿನ ವರ್ಷದಿಂದ ಐಪಿಎಲ್​ಗೆ ಹೊಸ ವ್ಯವಸ್ಥೆ ಬರಬಹುದು.
    Published by:Vijayasarthy SN
    First published: