ಭಾರತದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಬಹಳಷ್ಟು ಹುಡುಗಿಯರಿಗೆ ಅವರು ಫಸ್ಟ್ ಕ್ರಶ್, ಫಸ್ಟ್ ಲವ್. ಹುಡುಗರಿಗೆ ಇನ್ಸ್ಪಿರೇಶನ್. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರೂ ಈಗಲೂ ಎಂಎಸ್ ಧೋನಿಗೆ ಅಭಿಮಾನಿಗಳ ಸಂಖ್ಯೆ ತೀರಾ ತಗ್ಗಿಲ್ಲ. ಮೂರು ವರ್ಷದ ಹಿಂದಿನ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಈಗ ಸದ್ದು ಮಾಡುತ್ತಿದೆ. 2018ರ ಐಪಿಎಲ್ ಪಂದ್ಯದ ವೇಳೆ ಯುವತಿಯೊಬ್ಬಳು ಸ್ಟೇಡಿಯಂನಲ್ಲಿ ಬಹಿರಂಗವಾಗಿಯೇ ಧೋನಿಗೆ ಪ್ರೇಮ ನಿವೇದಿಸಿಕೊಂಡ ಘಟನೆ ಅದರು. ಆಗ ಸ್ಟೇಡಿಯಂನಲ್ಲಿ ಎಂ ಎಸ್ ಧೋನಿ ಅವರ ಪತ್ನಿ ಸಾಕ್ಷಿ ಅವರೂ ಈ ಘಟನೆಗೆ ಸಾಕ್ಷಿಯಾಗಿದ್ದರು. ಆದರೆ, ಆ ಯುವತಿ ಧೋನಿ ಬಳಿ ಹೋಗಿ ಪ್ರೊಪೋಸ್ ಮಾಡಲಿಲ್ಲ ಅಷ್ಟೇ. ಧೋನಿ ಮೇಲೆ ತನಗಿರುವ ಲವ್ ಅನ್ನು ತಿಳಿಸುವ ಪ್ಲೆಕಾರ್ಡ್ ಹಿಡಿದು ಆಕೆ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತಿದ್ದಳು. ಆ ಒಂದು ಫೋಟೋ ಬಹಳ ಜನಪ್ರಿಯವಾಗಿತ್ತು. ಅನೇಕ ಮಂದಿ ಯುವತಿಯರ ಧೋನಿ ಪ್ರೇಮವನ್ನು ಬಹಿರಂಗ ಮಾಡಿತ್ತು.
ಏನು ಬರೆದಿದ್ದಳು ಪೋಸ್ಟರ್ನಲ್ಲಿ?: “ಕ್ಷಮಿಸಿ, ನನ್ನ ಭವಿಷ್ಯದ ಸಂಗಾತಿ. ಎಂ ಎಸ್ ಧೋನಿ ಯಾವತ್ತಿದ್ದರೂ ನನ್ನ ಮೊದಲ ಲವ್. ಐ ಲವ್ ಯೂ ಮಾಹಿ” ಎಂದು ಆ ಯುವತಿ ಪ್ಲೆಕಾರ್ಡ್ನಲ್ಲಿ ಬರೆದು ಹಿಡಿದು ನಿಂತಿದ್ದಳು. ಸ್ಟೇಡಿಯಂನಲ್ಲಿ ಆಕೆಯ ಪ್ರೇಮ ನಿವೇದನೆಯನ್ನ ಅದೆಷ್ಟು ಮಂದಿ ನೋಡಿದರೋ ಗೊತ್ತಿಲ್ಲ, ಆದರೆ, ಸ್ವತಃ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ- ಐಸಿಸಿಯವರ ಕಣ್ಣಿಗೆ ಈಕೆ ಬಿದ್ದಿದ್ದಾಳೆ. ಈಕೆಯ ಫೋಟೋವನ್ನು ಐಸಿಸಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿತು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಭಾರೀ ವೈರಲ್ ಆಗಿತ್ತು. ಅನೇಕ ಮಹಿಳೆಯರು ತಮಗೂ ಧೋನಿ ಮೇಲೆ ಇರುವ ಪ್ರೀತಿಯನ್ನ ಬಹಿರಂಗಪಡಿಸಿದರು. ಧೋನಿ ಮೇಲೆ ನಮಗೂ ಲವ್ ಆಗಿದೆ ಎಂದು ಹಲವರು ಹೇಳಿದರು.
ಮೋದಿ ಬಿಟ್ಟರೆ ಧೋನಿಗೇ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್:
ಎಂಎಸ್ ಧೋನಿ ತನ್ನ ನಾಯಕತ್ವದಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಾಗಿನಿಂದ ಅಭಿಮಾನಿಗಳ ಮಹಾಪೂರವನ್ನೇ ಸಂಪಾದಿಸಿದ್ದಾರೆ. ಅವರು ಮಾಡುವ ಸ್ಟೈಲ್ಗಳೆಲ್ಲವೂ ಟ್ರೆಂಡ್ ಸೆಟ್ಟರ್ ಆಗುತ್ತಿದ್ದವು. ಕಳೆದ ವರ್ಷ ನಡೆಸಲಾದ ಒಂದು ಸಮೀಕ್ಷೆ ಪ್ರಕಾರ (YouGov Survey) ಭಾರತದಲ್ಲಿ ನರೇಂದ್ರ ಮೋದಿ ನಂತರ ಅತೀ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸುವ ಭಾರತೀಯ ಎಂದರೆ ಅದು ಎಂಎಸ್ ಧೋನಿ ಅಂತೆ.
ಧೋನಿ ಕ್ಯಾಪ್ಟನ್ ಆಗಿ ಬಹಳ ಕೂಲ್ ಕೂಲ್. ಹಾಗೆಯೇ, ವಿಕೆಟ್ ಕೀಪರ್ ಆಗಿ ಅವರ ಅಲರ್ಟ್ನೆಸ್ ಎಂಥವರನ್ನೂ ಬೆಕ್ಕಸ ಬೆರಗಾಗಿಸುವಂಥದ್ದು. ಈಗ ಲಯ ಕಳೆದುಕೊಂಡಿದ್ದಾರಾದರೂ ಅವರ ಉಚ್ಛ್ರಾಯ ಸ್ಥಿತಿಯಲ್ಲಿ ಧೋನಿಯನ್ನ ವಿಕೆಟ್ ಹಿಂದೆ ನೋಡುವುದೇ ಬಲು ಸೊಗಸು. ಹಾಗೆಯೇ, ಚೇಸಿಂಗ್ ವೇಳೆ ಧೋನಿ ಕ್ರೀಸ್ನಲ್ಲಿ ಇದ್ದರೆಂದರೆ ಗೆಲುವು ಅಸಾಧ್ಯ ಎಂಬ ಪದ ಯಾರ ಬಾಯಲ್ಲೂ ಸುಳಿಯುತ್ತಿರಲಿಲ್ಲ. ಅಷ್ಟರಮಟ್ಟಿಗೆ ಚೇಸಿಂಗ್ ಸ್ಪೆಷಲಿಸ್ಟ್ ಆಗಿದ್ದವರು ಅವರು. ಹೀಗಾಗಿ, ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಅವರು ಆರಾಧ್ಯ ದೈವವೇ.
ಇದನ್ನೂ ಓದಿ: Ziva Dhoni Prays for CSK's Win| ಸಿಎಸ್ಕೆ ಗೆಲುವಿಗಾಗಿ ಜೀವಾ ಧೋನಿ ಪ್ರಾರ್ಥನೆ; ನೆಟ್ಟಿಗರಿಂದ ಪ್ರೀತಿಯ ಸುರಿಮಳೆ!
ದೂರದೂರುಗಳಿಂದ ಬಂದ ಅಭಿಮಾನಿಗಳು:
ಅನೇಕ ಜನರು ಧೋನಿಯನ್ನ ಒಮ್ಮೆ ಕಣ್ತುಂಬಿಕೊಳ್ಳಲೆಂದೇ ದೂರದೂರುಗಳಿಂದ ಬರುತ್ತಾರೆ. ಅವರ ಹುಟ್ಟೂರು ರಾಂಚಿಗೆ ಬಂದು ಧೋನಿಯನ್ನ ಭೇಟಿ ಆಗಲೆಂದು ಅನೇಕ ಮಂದಿ ಬಂದು ಹೋಗುತ್ತಾರೆ. ಎರಡು ತಿಂಗಳ ಹಿಂದೆ ಹರಿಯಾಣ ರಾಜ್ಯದಿಂದ 18 ವರ್ಷದ ಅಜಯ್ ಗಿಲ್ ಎಂಬ ಯುವಕ ಹತ್ತಲ್ಲ ಇಪ್ಪತ್ತಲ್ಲ 1,400 ಕಿಮೀ ದೂರ ನಡೆದುಕೊಂಡೇ ರಾಂಚಿಗೆ ಬಂದಿದ್ದ. ವೃತ್ತಿಯಲ್ಲಿ ಕ್ಷೌರಿಕನಾಗಿದ್ದ ಈ ಹುಡುಗ ನೋಡಲು ಎಂಎಸ್ ಧೋನಿಯಂತೆಯೇ ಸ್ಟೈಲ್ ಮಾಡಿಕೊಂಡಿದ್ದ. 16 ದಿನಗಳ ಕಾಲ ನಡೆದುಕೊಂಡೇ ರಾಂಚಿಗೆ ಬಂದಿದ್ದ ಈತ ರಾಂಚಿಯಲ್ಲಿ ಧೋನಿಗಾಗಿ ಕಾಯುತ್ತಿದ್ಧಾಗ ಜನರು ಈತನ ಧೋನಿ ಸ್ಟೈಲ್ಗೆ ಮಾರು ಹೋಗಿದ್ದರು. ಧೋನಿ ಐಪಿಎಲ್ನಲ್ಲಿ ಆಡುತ್ತಿದ್ದರಿಂದ ಧೋನಿ ಭೇಟಿ ಸಾಧ್ಯವಾಗದೇ ಆತ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಹೋಗಬೇಕಾಯಿತು.
ಹಾಗೆಯೇ, ಕಳೆದ ತಿಂಗಳು ಛತ್ತೀಸ್ಗಡದ ರಾಯಪುರ್ನಿಂದ ವಿವಾಹಿತ ವ್ಯಕ್ತಿಯೊಬ್ಬ ಕೂಡ ಧೋನಿಯನ್ನ ಭೇಟಿ ಮಾಡಿ ಮಾತನಾಡಿಸಲೆಂದೇ ರಾಂಚಿಗೆ ಬಂದಿದ್ದ. ತನ್ನ ಹೆಂಡತಿ ಬಯ್ದರೂ ಕೇಳದೇ ಬಂದಿದ್ದ ಈತ ಧೋನಿ ವಾಪಸ್ಸು ಬರುವವರೆಗೂ ರಾಂಚಿಯಲ್ಲೇ ಇರುವುದಾಗಿ ಹಠ ತೊಟ್ಟು ಬೀಡುಬಿಟ್ಟಿದ್ದಾನಂತೆ. ಅಂಥ ಕಟ್ಟರ್ ಅಭಿಮಾನಿ ಬಳಗ ಧೋನಿಯದ್ದು.
ಮಹೇಂದ್ರ ಸಿಂಗ್ ಧೋನಿ 2010ರಲ್ಲಿ ಸಾಕ್ಷಿ ಅವರನ್ನ ವರಿಸಿದರು. 2015ರಲ್ಲಿ ಅವರಿಗೆ ಮುದ್ದಾದ ಹೆಣ್ಣುಮಗಳು ಝೀವಾ ಜನಿಸಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ