PBKS vs SRH: ಪಂಜಾಬ್ ವಿರುದ್ದ ಸನ್​ರೈಸರ್ಸ್​ ಹೈದರಾಬಾದ್​​ಗೆ ಭರ್ಜರಿ ಜಯ

ಉಭಯ ತಂಡಗಳು ಇದುವರೆಗೆ 17 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 12 ಬಾರಿ ಗೆಲುವು ದಾಖಲಿಸಿದರೆ, ಪಂಜಾಬ್ 5 ಬಾರಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

PBKS vs SRH

PBKS vs SRH

 • Share this:
  ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ವಿರುದ್ದ ಸನ್​ರೈಸರ್ಸ್ ಹೈದರಾಬಾದ್​ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎಸ್​ಆರ್​ಹೆಚ್ ತಂಡ ಜಯದ ಖಾತೆ ತೆರೆದಿದೆ.

  ಪಂಜಾಬ್ ಕಿಂಗ್ಸ್ ನೀಡಿದ 121 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಬಾದ್ ತಂಡವು ಉತ್ತಮ ಆರಂಭ ಪಡೆಯಿತು. ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ವಾರ್ನರ್ ಮೊದಲ 3 ಓವರ್​ನಲ್ಲಿ 27 ರನ್​ ಕಲೆಹಾಕಿದರು. ಅಲ್ಲದೆ ಪವರ್​ಪ್ಲೇನ ಸಂಪೂರ್ಣ ಲಾಭ ಪಡೆದ ಈ ಜೋಡಿ 6 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 50 ಕ್ಕೆ ತಂದು ನಿಲ್ಲಿಸಿದರು.

  ಮೊದಲ ವಿಕೆಟ್​ಗೆ 73 ರನ್​ಗಳ ಜೊತೆಯಾಟವಾಡಿದ ಈ ಸನ್​ರೈಸರ್ಸ್​ ಆರಂಭಿಕರು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇದೇ ವೇಳೆ ಫ್ಯಾಬಿಯನ್ ಅಲೆನ್ ಎಸೆತದಲ್ಲಿ ಡೇವಿಡ್ ವಾರ್ನರ್ (37) ವಿಕೆಟ್ ಒಪ್ಪಿಸಿದರು.

  ಆದರೆ ಮತ್ತೊಂಡೆದ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ 56 ಎಸೆತಗಳಲ್ಲಿ 63 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಹಾಗೆಯೇ ಕೇನ್ ವಿಲಿಯಮ್ಸನ್ (16) ಉತ್ತಮ ಸಾಥ್ ನೀಡಿದರು. ಪರಿಣಾಮ ಸನ್​ರೈಸರ್ಸ್​ ಹೈದರಾಬಾದ್ ತಂಡ 18.4 ಓವರ್​ನಲ್ಲಿ 121 ರನ್​ಗಳ ಗುರಿ ಮುಟ್ಟಿತು.

  ಇದಕ್ಕೂ ಮುನ್ನ  ಟಾಸ್ ಗೆದ್ದ ಪಂಜಾಬ್ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪಂಜಾಬ್​ಗೆ ಬಿರುಸಿನ ಆರಂಭ ಒದಗಿಸಲಾಗಲಿಲ್ಲ. ಮೊದಲ ಮೂರು ಓವರ್​ನಲ್ಲಿ ಈ ಜೋಡಿ 15 ರನ್​ ಕಲೆಹಾಕಿತು. ಆದರೆ 4ನೇ ಓವರ್​ನ ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ (4) ಭುವನೇಶ್ವರ್ ಕುಮಾರ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

  ಈ ವೇಳೆ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಕೂಡ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್​ 32 ರನ್​ಗಳಿಸಲಷ್ಟೇ ಶಕ್ತರಾದರು. ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ ರಶೀದ್ ಖಾನ್ ಹಿಡಿದ ಅದ್ಭುತ ಕ್ಯಾಚ್​ಗೆ ಮಯಾಂಕ್ ಅಗರ್ವಾಲ್ (22) ಬಲಿಯಾದರು. ಇನ್ನು ನಿಕೋಲಸ್ ಪೂರನ್​ (0) ಅವರನ್ನು ರನೌಟ್ ಮಾಡುವ ಮೂಲಕ 3ನೇ ವಿಕೆಟ್ ಪತನಕ್ಕೆ ರಶೀದ್ ಖಾನ್ ಕಾರಣರಾದರು.

  9ನೇ ಓವರ್​ ಎಸೆದ ರಶೀದ್ ಖಾನ್ ಕ್ರಿಸ್ ಗೇ;ಲ್ (15) ವಿಕೆಟ್ ಪಡೆದು ಸನ್​ರೈಸರ್ಸ್​ ಹೈದರಾಬಾದ್​ಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಇನ್ನು ತಂಡದ ಮೊತ್ತ 63 ಆಗಿದ್ದ ವೇಳೆ ದೀಪಕ್ ಹೂಡ (13) ಅಭಿಷೇಕ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.

  14ನೇ ಓವರ್​ನಲ್ಲಿ ಮುನ್ನುಗ್ಗಿ ಬಾರಿಸಲು ಯತ್ನಿಸಿದ ಹೆನ್ರಿಕ್ ಮೊಯಿಸಸ್ (14) ಸ್ಟಂಪ್ ಔಟ್ ಆಗಿ ಹೊರ ನಡೆದರು. ಇನ್ನು ಫ್ಯಾಬಿಯೆನ್ ಅಲೆನ್ 6 ರನ್​ಗಳಿಸಿ ಖಲೀಲ್ ಅಹ್ಮದ್​ಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿಯಾಗಿ ಸನ್​ರೈಸರ್ಸ್​ ಬೌಲರುಗಳನ್ನು ದಂಡಿಸಿದ್ದ ಶಾರುಖ್ ಖಾನ್ (22) 19ನೇ ಓವರ್​ನಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಮುರುಗನ್ ಅಶ್ವಿನ್ (9) 9ನೇ ವಿಕೆಟ್​ ಆಗಿ ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದರು.

  ಅಂತಿಮವಾಗಿ ಪಂಜಾಬ್ ಕಿಂಗ್ಸ್ 19.4 ಓವರ್​ನಲ್ಲಿ ಸರ್ವಪತನ ಕಾಣುವ ಮೂಲಕ 120 ರನ್​ ಕಲೆಹಾಕಿತು. ಸನ್​ರೈಸರ್ಸ್​ ಹೈದರಾಬಾದ್ ಪರ ಖಲೀಲ್ ಅಹ್ಮದ್ 4 ಓವರ್​ನಲ್ಲಿ 21 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅಭಿಷೇಕ್ ಶರ್ಮಾ 24 ರನ್​ ನೀಡಿ 2 ವಿಕೆಟ್ ಪಡೆದರು.

  PBKS vs SRH Playing 11: ಪಂಜಾಬ್ ತಂಡದಲ್ಲಿ 3 ಬದಲಾವಣೆ: ಉಭಯ ತಂಡಗಳು ಹೀಗಿವೆ

  ಉಭಯ ತಂಡಗಳು ಇದುವರೆಗೆ 17 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 12 ಬಾರಿ ಗೆಲುವು ದಾಖಲಿಸಿದರೆ, ಪಂಜಾಬ್ 5 ಬಾರಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಸನ್​ರೈಸರ್ಸ್ ಹೈದರಾಬಾದ್ ಮೇಲುಗೈ ಹೊಂದಿದೆ.
  Published by:zahir
  First published: