HOME » NEWS » Ipl » PBKS VS RCB PUNJAB KINGS WON BY 34 RUNS ZP

PBKS vs RCB: ರಾಯಲ್ ಚಾಲೆಂಜರ್ಸ್​​ಗೆ ಮಣ್ಣು ಮುಕ್ಕಿಸಿದ ಪಂಜಾಬ್ ಕಿಂಗ್ಸ್​

ಪಂಜಾಬ್ ನೀಡಿದ 180 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಆರ್​ಸಿಬಿಗೆ ಪವರ್​ಪ್ಲೇನಲ್ಲೇ ರಿಲೆ ಮೆರಿಡಿತ್ ಶಾಕ್ ನೀಡಿದರು. 3ನೇ ಓವರ್​ನಲ್ಲಿ ದೇವದತ್ ಪಡಿಕ್ಕಲ್​ (7) ಅನ್ನು ಕ್ಲೀನ್ ಬೌಲ್ಡ್ ಮಾಡಿ ಮೊದಲ ಯಶಸ್ಸು ತಂದುಕೊಟ್ಟರು.

news18-kannada
Updated:April 30, 2021, 11:14 PM IST
PBKS vs RCB: ರಾಯಲ್ ಚಾಲೆಂಜರ್ಸ್​​ಗೆ ಮಣ್ಣು ಮುಕ್ಕಿಸಿದ ಪಂಜಾಬ್ ಕಿಂಗ್ಸ್​
pbks vs rcb
  • Share this:
ಅಹಮದಾಬಾದ್​ನಲ್ಲಿ ನಡೆದ ಐಪಿಎಲ್​ನ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ದ ಪಂಜಾಬ್ ಕಿಂಗ್ಸ್​ 34 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಪಂಜಾಬ್ ನೀಡಿದ 180 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಆರ್​ಸಿಬಿ ಅಂತಿಮವಾಗಿ 8 ವಿಕೆಟ್ ಕಳೆದುಕೊಂಡು 145 ರನ್​ಗಳಿಸಲಷ್ಟೇ ಶಕ್ತರಾದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಆದರೆ ಅತ್ತ ಪಂಜಾಬ್ ಕಿಂಗ್ಸ್ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 19 ಆಗಿದ್ದ ವೇಳೆ ಪ್ರಭ್​ಸಿಮ್ರಾನ್ ಸಿಂಗ್ (7) ಕೈಲ್ ಜೇಮಿಸನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ಹಂತದಲ್ಲಿ ರಾಹುಲ್ ಜೊತೆಗೂಡಿದ ಗೇಲ್ ಆರಂಭದಿಂದಲೇ ಅಬ್ಬರಿಸಿದರು.

ಅದರಲ್ಲೂ ಕೈಲ್ ಜೇಮಿಸನ್​ ಎಸೆದ ಪವರ್​ನ 6ನೇ ಓವರ್​ನಲ್ಲಿ ಸತತ ನಾಲ್ಕು ಬೌಂಡರಿ ಬಾರಿಸಿದರು. ಅಲ್ಲದೆ ಗೇಲ್ ಆ ಓವರ್​ನಲ್ಲಿ ಒಟ್ಟು 5 ಫೋರ್​ಗಳೊಂದಿಗೆ 20 ರನ್ ಕಲೆಹಾಕಿದರು. ಇದರ ಬೆನ್ನಲ್ಲೇ ಚಹಲ್ ಎಸೆದ 7ನೇ ಓವರ್​ನಲ್ಲಿ 2 ಭರ್ಜರಿ ಸಿಕ್ಸರ್​ನೊಂದಿಗೆ ಗೇಲ್ 14 ರನ್ ಚಚ್ಚಿದರು. ಅಲ್ಲದೆ ಕೆಎಲ್ ರಾಹುಲ್ ಜೊತೆಗೂಡಿ ಕೇವಲ 28 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದರು. ಆದರೆ ಡೇನಿಯಲ್ ಸ್ಯಾಮ್ಸ್​ ಎಸೆದ ಶಾಟ್​ ಬಾಲ್​ನ್ನು ಹೊಡೆಯಲು ಮುಂದಾದ ಗೇಲ್ ವಿಕೆಟ್ ಕೀಪರ್​ಗೆ ಸುಲಭ ಕ್ಯಾಚ್ ನೀಡಿದರು. ಈ ವೇಳೆಗಾಗಲೇ ಗೇಲ್ ಕೇವಲ 24 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್​​ನೊಂದಿಗೆ 46 ರನ್ ಬಾರಿಸಿದ್ದರು. ಅಲ್ಲದೆ ರಾಹುಲ್ ಜೊತೆಗೂಡಿ 43 ಎಸೆತಗಳಲ್ಲಿ 80 ರನ್​ಗಳ ಅಮೂಲ್ಯ ಜೊತೆಯಾಟವಾಡಿ ತಂಡವನ್ನು ಸುಸ್ಥಿತಿಯಲ್ಲಿ ತಂದು ನಿಲ್ಲಿಸಿದ್ದರು.

ಗೇಲ್ ನಿರ್ಗಮನದ ಬೆನ್ನಲ್ಲೇ 35 ಎಸೆತಗಳಲ್ಲಿ ಕೆಎಲ್ ರಾಹುಲ್ ಅರ್ಧಶತಕ ಪೂರೈಸಿದರು. ಆದರೆ ಈ ವೇಳೆ ಕ್ರೀಸ್​ಗೆ ಆಗಮಿಸಿದ್ದ ನಿಕೋಲಸ್ ಪೂರನ್ ಜೇಮಿಸನ್ ಎಸೆತದಲ್ಲಿ ಕ್ಯಾಚ್ ನೀಡಿ ಶೂನ್ಯದೊಂದಿಗೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ದೀಪಕ್ ಹೂಡ (5) ಶಹಬಾಜ್​ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಆಗಮಿಸಿದ ಶಾರುಖ್ ಖಾನ್ ಚಹಲ್​​ಗೆ ಕ್ಲೀನ್ ಬೌಲ್ಡ್​ ಆಗಿ ಬಂದ ವೇಗದಲ್ಲೇ ಹಿಂತಿರುಗಿದರು. ಸತತ ವಿಕೆಟ್ ಉರುಳಿಸಿ ಆರ್​ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಪರಿಣಾಮ ಮೊದಲ 10 ಓವರ್​ನಲ್ಲಿ 91 ರನ್ ಬಾರಿಸಿದ್ದ ಪಂಜಾಬ್ ತಂಡ 17 ಓವರ್​ ಮುಕ್ತಾಯದ ವೇಳೆಗೆ ಕಲೆಹಾಕಿದ್ದು ಕೇವಲ 132 ರನ್​ ಮಾತ್ರ. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಕೆಎಲ್ ರಾಹುಲ್ ಹರ್ಷಲ್ ಪಟೇಲ್ ಎಸೆದ ಒಂದೇ ಓವರ್​ನಲ್ಲಿ ಒಂದು ಸಿಕ್ಸ್ ಹಾಗೂ 2 ಬೌಂಡರಿಗಳೊಂದಿಗೆ 18 ರನ್ ಚಚ್ಚಿದರು. ಅದರಂತೆ 18ನೇ ಓವರ್ ಮುಕ್ತಾಯದ ವೇಳೆಗೆ ಪಂಜಾಬ್ ಮೊತ್ತ 150ಕ್ಕೆ ಬಂದು ನಿಂತಿತು. ಆದರೆ ಸಿರಾಜ್ 19ನೇ ಓವರ್​ನಲ್ಲಿ ನೀಡಿದ್ದು ಕೇವಲ 7 ರನ್ ಮಾತ್ರ.

ಹರ್ಷಲ್ ಪಟೇಲ್ ಎಸೆದ 20ನೇ ಓವರ್​ನ ಮೊದಲ ಎಸೆತದಲ್ಲಿ ಹರ್ಪ್ರೀತ್ ಬ್ರಾರ್ ಸಿಂಗಲ್ ತೆಗೆದರೆ, 2ನೇ ಎಸೆತದಲ್ಲಿ ರಾಹುಲ್ ಭರ್ಜರಿ ಬೌಂಡರಿ ಬಾರಿಸಿದರು. 3ನೇ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದರು. 4ನೇ ಎಸೆತದಲ್ಲಿ ಮತ್ತೊಂದು ಬೌಂಡರಿ. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ ಹರ್ಪ್ರೀತ್ ಬ್ರಾರ್ ಸಿಕ್ಸ್ ಸಿಡಿಸುವ ಮೂಲಕ ಪಂಜಾಬ್ ಕೊನೆಯ ಓವರ್​ನಲ್ಲಿ 22 ರನ್​ ಕಲೆಹಾಕಿತು. ಅದರಂತೆ ಪಂಜಾಬ್ ಕಿಂಗ್ಸ್​ ತಂಡದ ಮೊತ್ತ 20 ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 179ಕ್ಕೆ ಬಂದು ನಿಂತಿತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ 57 ಎಸೆತಗಳಲ್ಲಿ 5 ಸಿಕ್ಸ್, 7 ಬೌಂಡರಿಗಳೊಂದಿಗೆ ಅಜೇಯ 91 ರನ್ ಬಾರಿಸಿ ಮಿಂಚಿದರು.

ಪಂಜಾಬ್ ನೀಡಿದ 180 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಆರ್​ಸಿಬಿಗೆ ಪವರ್​ಪ್ಲೇನಲ್ಲೇ ರಿಲೆ ಮೆರಿಡಿತ್ ಶಾಕ್ ನೀಡಿದರು. 3ನೇ ಓವರ್​ನಲ್ಲಿ ದೇವದತ್ ಪಡಿಕ್ಕಲ್​ (7) ಅನ್ನು ಕ್ಲೀನ್ ಬೌಲ್ಡ್ ಮಾಡಿ ಮೊದಲ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಜೊತೆಗೂಡಿದ ರಜತ್ ಪಾಟಿದಾರ್ ಕೊಹ್ಲಿಯೊಂದಿಗೆ ಎಚ್ಚರಿಕೆಯ ಆಟವಾಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಆರ್​ಸಿಬಿ ಗಳಿಸಿದ್ದು 36 ರನ್​ ಮಾತ್ರ.ಆದರೆ 6 ಓವರ್​ ಬಳಿಕ ರನ್​ ಗತಿ ಹೆಚ್ಚಿಸಿದ ಕೊಹ್ಲಿ ಸಿಕ್ಸ್, ಫೋರ್​ಗಳ ಮೂಲಕ ಗಮನ ಸೆಳೆದರು. ಅದರಂತೆ 8ನೇ ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತ 50ರ ಗಡಿಗೆ ಬಂದು ನಿಂತಿತು. ಈ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ಪಂಜಾಬ್ ಮೊದಲ 10 ಓವರ್​ನಲ್ಲಿ ಆರ್​ಸಿಬಿ ಮೊತ್ತವನ್ನು 62ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

11ನೇ ಓವರ್​ನ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ (35) ಕ್ಲೀನ್ ಬೌಲ್ಡ್ ಮಾಡಿದ ಹರ್ಪ್ರೀತ್ ಬ್ರಾರ್, ಮರು ಎಸೆತದಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ (0) ಪೆವಿಲಿಯನ್ ಕಡೆ ಕಳುಹಿಸಿದರು. ಈ ವೇಳೆ ಕಣಕ್ಕಿಳಿದ ಎಬಿ ಡಿವಿಲಿಯರ್ಸ್​ (3) ಅವರೂ ಕೂಡ ಹರ್ಪ್ರೀತ್ ಬ್ರಾರ್​ಗೆ ವಿಕೆಟ್ ಒಪ್ಪಿಸಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಪಂಜಾಬ್ ಬೌಲರುಗಳ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.

ತಂಡದ ಮೊತ್ತ 91 ರನ್​ ಆಗಿದ್ದ ವೇಳೆ ರಜತ್ ಪಾಟಿದಾರ್ (31) ಜೋರ್ಡನ್​ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಶಹಬಾಜ್ (8) ಕೂಡ ತಮ್ಮ ಇನಿಂಗ್ಸ್​ ಅಂತ್ಯಗೊಳಿಸಿದರು. ರವಿ ಬಿಷ್ಣೋಯ್ ಎಸೆದ ಮರು ಎಸೆತದಲ್ಲೇ ಡೇನಿಯಲ್ ಸ್ಯಾಮ್ಸ್ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ 16 ಓವರ್​ನಲ್ಲಿ 96 ರನ್​ ಗಳಿಸಿ ಆರ್​ಸಿಬಿ 7 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಗೂಡಿದ ಕೈಲ್ ಜೇಮಿಸನ್ ಹಾಗೂ ಹರ್ಷಲ್ ಪಟೇಲ್ (31) 23 ಎಸೆತಗಳಲ್ಲಿ 48 ರನ್​ಗಳ ಜೊತೆಯಾಟವಾಡಿದರು. ಇದಾಗ್ಯೂ ಆರ್​ಸಿಬಿ ತಂಡ 8 ವಿಕೆಟ್ ಕಳೆದುಕೊಂಡು ಅಂತಿಮವಾಗಿ 145 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ 34 ರನ್​ಗಳ ಭರ್ಜರಿ ಜಯ ಸಾಧಿಸಿತು. ಪಂಜಾಬ್ ಕಿಂಗ್ಸ್ ಪರ ಹರ್ಪ್ರೀತ್ ಬ್ರಾರ್ 4 ಓವರ್​ನಲ್ಲಿ 19 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು.
Published by: zahir
First published: April 30, 2021, 11:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories