ಇಂದಿನ ಪಂದ್ಯ ಪಂಜಾಬ್ ಕಿಂಗ್ಸ್ ವರ್ಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎನ್ನುದಕ್ಕಿಂತ ಕ್ರಿಸ್ ಗೇಲ್ ವರ್ಸಸ್ ಗ್ಲೆನ್ ಮ್ಯಾಕ್ಸ್ವೆಲ್ ಆಗಿ ಮಾರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣ ಈ ಇಬ್ಬರು ಆಟಗಾರರು ತಮ್ಮ ಮಾಜಿ ತಂಡದ ವಿರುದ್ದ ಆಡುತ್ತಿರುವುದು. ಕ್ರಿಸ್ ಗೇಲ್ ಆರ್ಸಿಬಿ ಪರ 7 ವರ್ಷ ಆಡಿದ ಬಳಿಕ ಪಂಜಾಬ್ ಪಾಲಾದರೆ, ಮ್ಯಾಕ್ಸ್ವೆಲ್ ಪಂಜಾಬ್ ಪರ 5 ವರ್ಷ ಆಡಿದ್ದರು. ಇದೀಗ ಇಬ್ಬರೂ ಆಟಗಾರರು ತಮ್ಮ ಹಳೆಯ ತಂಡದ ವಿರುದ್ದವೇ ಅಬ್ಬರಿಸಲು ಸಜ್ಜಾಗಿದ್ದಾರೆ.
ಈ ಇಬ್ಬರು ಆಟಗಾರರನ್ನು ಈ ಹಿಂದಿನ ಫ್ರಾಂಚೈಸಿಗಳು ಕಳಪೆ ಫಾರ್ಮ್ ಕಾರಣದಿಂದ ಕೈಬಿಟ್ಟಿದ್ದರು. 2017ರ ಬಳಿಕ ಗೇಲ್ರನ್ನು ಆರ್ಸಿಬಿ ಕೈಬಿಟ್ಟಿತ್ತು. ಆ ಬಳಿಕ ಪಂಜಾಬ್ ಪಾಲಾಗಿರುವ ಗೇಲ್ ಇದುವರೆಗೆ ಆರ್ಸಿಬಿ ವಿರುದ್ದ 4 ಪಂದ್ಯಗಳನ್ನು ಆಡಿದ್ದಾರೆ. ಆರ್ಸಿಬಿ ವಿರುದ್ದ ಮೊದಲ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 18 ರನ್ ಮಾತ್ರಗಳಿಸಿದ್ದರು. ಆದರೆ 2ನೇ ಬಾರಿ ಮುಖಾಮುಖಿಯಾದಾಗ ಅಕ್ಷರಶಃ ಅಬ್ಬರಿಸಿದ್ದರು. ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ ಗೇಲ್ 5 ಭರ್ಜರಿ ಸಿಕ್ಸರ್, 10 ಬೌಂಡರಿಗಳೊಂದಿಗೆ ಕೇವಲ 64 ಎಸೆತಗಳಲ್ಲಿ ಅಜೇಯ 99 ರನ್ ಬಾರಿಸಿದ್ದರು.
ಆರ್ಸಿಬಿ ವಿರುದ್ದದ ಮೂರನೇ ಪಂದ್ಯದಲ್ಲಿ ಗೇಲ್ ಕೇವಲ 10 ಎಸೆತಗಳಲ್ಲಿ 23 ರನ್ಗಳಿಸಿ ಔಟಾಗಿದ್ದರು. ಆದರೆ ಕಳೆದ ಸೀಸನ್ನಲ್ಲಿ ಮತ್ತೊಮ್ಮೆ ಆರ್ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ 5 ಭರ್ಜರಿ ಸಿಕ್ಸರ್ನೊಂದಿಗೆ ಅರ್ಧಶತಕ ಬಾರಿಸಿ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮತ್ತೊಮ್ಮೆ ಆರ್ಸಿಬಿ-ಪಂಜಾಬ್ ಮುಖಾಮುಖಿಯಾಗುತ್ತಿದೆ. ರಾಯಲ್ ಚಾಲೆಂಜರ್ಸ್ ವಿರುದ್ದ ಅಬ್ಬರಿಸಲು ಪಂಜಾಬ್ ಕಿಂಗ್ಸ್ನ ಅಸಲಿ ಕಿಂಗ್ ಸಜ್ಜಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ