• Home
 • »
 • News
 • »
 • ipl
 • »
 • RCB vs PBKS: ಆರ್​ಸಿಬಿ ವಿರುದ್ದ ಅಬ್ಬರಿಸಿದ ಕನ್ನಡಿಗ: ಕೊಹ್ಲಿ ಪಡೆಗೆ ಕಠಿಣ ಸವಾಲು ನೀಡಿದ ಪಂಜಾಬ್ ಕಿಂಗ್ಸ್​

RCB vs PBKS: ಆರ್​ಸಿಬಿ ವಿರುದ್ದ ಅಬ್ಬರಿಸಿದ ಕನ್ನಡಿಗ: ಕೊಹ್ಲಿ ಪಡೆಗೆ ಕಠಿಣ ಸವಾಲು ನೀಡಿದ ಪಂಜಾಬ್ ಕಿಂಗ್ಸ್​

KL Rahul

KL Rahul

KL Rahul: ಪರಿಣಾಮ ಮೊದಲ 10 ಓವರ್​ನಲ್ಲಿ 91 ರನ್ ಬಾರಿಸಿದ್ದ ಪಂಜಾಬ್ ತಂಡ 17 ಓವರ್​ ಮುಕ್ತಾಯದ ವೇಳೆಗೆ ಕಲೆಹಾಕಿದ್ದು ಕೇವಲ 132 ರನ್​ ಮಾತ್ರ.

 • Share this:

  ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​​ನ 26ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್​ ತಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ 180 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಆದರೆ ಅತ್ತ ಪಂಜಾಬ್ ಕಿಂಗ್ಸ್ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 19 ಆಗಿದ್ದ ವೇಳೆ ಪ್ರಭ್​ಸಿಮ್ರಾನ್ ಸಿಂಗ್ (7) ಕೈಲ್ ಜೇಮಿಸನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ಹಂತದಲ್ಲಿ ರಾಹುಲ್ ಜೊತೆಗೂಡಿದ ಗೇಲ್ ಆರಂಭದಿಂದಲೇ ಅಬ್ಬರಿಸಿದರು.


  ಅದರಲ್ಲೂ ಕೈಲ್ ಜೇಮಿಸನ್​ ಎಸೆದ ಪವರ್ ಪ್ಲೇನ 6ನೇ ಓವರ್​ನಲ್ಲಿ ಸತತ ನಾಲ್ಕು ಬೌಂಡರಿ ಬಾರಿಸಿದರು. ಅಲ್ಲದೆ ಗೇಲ್ ಆ ಓವರ್​ನಲ್ಲಿ ಒಟ್ಟು 5 ಫೋರ್​ಗಳೊಂದಿಗೆ 20 ರನ್ ಕಲೆಹಾಕಿದರು. ಇದರ ಬೆನ್ನಲ್ಲೇ ಚಹಲ್ ಎಸೆದ 7ನೇ ಓವರ್​ನಲ್ಲಿ 2 ಭರ್ಜರಿ ಸಿಕ್ಸರ್​ನೊಂದಿಗೆ ಗೇಲ್ 14 ರನ್ ಚಚ್ಚಿದರು. ಅಲ್ಲದೆ ಕೆಎಲ್ ರಾಹುಲ್ ಜೊತೆಗೂಡಿ ಕೇವಲ 28 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದರು. ಆದರೆ ಡೇನಿಯಲ್ ಸ್ಯಾಮ್ಸ್​ ಎಸೆದ ಶಾಟ್​ ಬಾಲ್​ನ್ನು ಹೊಡೆಯಲು ಮುಂದಾದ ಗೇಲ್ ವಿಕೆಟ್ ಕೀಪರ್​ಗೆ ಸುಲಭ ಕ್ಯಾಚ್ ನೀಡಿದರು. ಈ ವೇಳೆಗಾಗಲೇ ಗೇಲ್ ಕೇವಲ 24 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್​​ನೊಂದಿಗೆ 46 ರನ್ ಬಾರಿಸಿದ್ದರು. ಅಲ್ಲದೆ ರಾಹುಲ್ ಜೊತೆಗೂಡಿ 43 ಎಸೆತಗಳಲ್ಲಿ 80 ರನ್​ಗಳ ಅಮೂಲ್ಯ ಜೊತೆಯಾಟವಾಡಿ ತಂಡವನ್ನು ಸುಸ್ಥಿತಿಯಲ್ಲಿ ತಂದು ನಿಲ್ಲಿಸಿದ್ದರು.


  ಗೇಲ್ ನಿರ್ಗಮನದ ಬೆನ್ನಲ್ಲೇ 35 ಎಸೆತಗಳಲ್ಲಿ ಕೆಎಲ್ ರಾಹುಲ್ ಅರ್ಧಶತಕ ಪೂರೈಸಿದರು. ಆದರೆ ಈ ವೇಳೆ ಕ್ರೀಸ್​ಗೆ ಆಗಮಿಸಿದ್ದ ನಿಕೋಲಸ್ ಪೂರನ್ ಜೇಮಿಸನ್ ಎಸೆತದಲ್ಲಿ ಕ್ಯಾಚ್ ನೀಡಿ ಶೂನ್ಯದೊಂದಿಗೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ದೀಪಕ್ ಹೂಡ (5) ಶಹಬಾಜ್​ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಆಗಮಿಸಿದ ಶಾರುಖ್ ಖಾನ್ ಚಹಲ್​​ಗೆ ಕ್ಲೀನ್ ಬೌಲ್ಡ್​ ಆಗಿ ಬಂದ ವೇಗದಲ್ಲೇ ಹಿಂತಿರುಗಿದರು. ಸತತ ವಿಕೆಟ್ ಉರುಳಿಸಿ ಆರ್​ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.


  ಪರಿಣಾಮ ಮೊದಲ 10 ಓವರ್​ನಲ್ಲಿ 91 ರನ್ ಬಾರಿಸಿದ್ದ ಪಂಜಾಬ್ ತಂಡ 17 ಓವರ್​ ಮುಕ್ತಾಯದ ವೇಳೆಗೆ ಕಲೆಹಾಕಿದ್ದು ಕೇವಲ 132 ರನ್​ ಮಾತ್ರ. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಕೆಎಲ್ ರಾಹುಲ್ ಹರ್ಷಲ್ ಪಟೇಲ್ ಎಸೆದ ಒಂದೇ ಓವರ್​ನಲ್ಲಿ ಒಂದು ಸಿಕ್ಸ್ ಹಾಗೂ 2 ಬೌಂಡರಿಗಳೊಂದಿಗೆ 18 ರನ್ ಚಚ್ಚಿದರು. ಅದರಂತೆ 18ನೇ ಓವರ್ ಮುಕ್ತಾಯದ ವೇಳೆಗೆ ಪಂಜಾಬ್ ಮೊತ್ತ 150ಕ್ಕೆ ಬಂದು ನಿಂತಿತು. ಆದರೆ ಸಿರಾಜ್ 19ನೇ ಓವರ್​ನಲ್ಲಿ ನೀಡಿದ್ದು ಕೇವಲ 7 ರನ್ ಮಾತ್ರ.


  ಹರ್ಷಲ್ ಪಟೇಲ್ ಎಸೆದ 20ನೇ ಓವರ್​ನ ಮೊದಲ ಎಸೆತದಲ್ಲಿ ಹರ್ಪ್ರೀತ್ ಬ್ರಾರ್ ಸಿಂಗಲ್ ತೆಗೆದರೆ, 2ನೇ ಎಸೆತದಲ್ಲಿ ರಾಹುಲ್ ಭರ್ಜರಿ ಬೌಂಡರಿ ಬಾರಿಸಿದರು. 3ನೇ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದರು. 4ನೇ ಎಸೆತದಲ್ಲಿ ಮತ್ತೊಂದು ಬೌಂಡರಿ. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ ಹರ್ಪ್ರೀತ್ ಬ್ರಾರ್ ಸಿಕ್ಸ್ ಸಿಡಿಸುವ ಮೂಲಕ ಪಂಜಾಬ್ ಕೊನೆಯ ಓವರ್​ನಲ್ಲಿ 22 ರನ್​ ಕಲೆಹಾಕಿತು. ಅದರಂತೆ ಪಂಜಾಬ್ ಕಿಂಗ್ಸ್​ ತಂಡದ ಮೊತ್ತ 20 ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 179ಕ್ಕೆ ಬಂದು ನಿಂತಿತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ 57 ಎಸೆತಗಳಲ್ಲಿ 5 ಸಿಕ್ಸ್, 7 ಬೌಂಡರಿಗಳೊಂದಿಗೆ ಅಜೇಯ 91 ರನ್ ಬಾರಿಸಿ ಮಿಂಚಿದರು.

  Published by:zahir
  First published: