ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ಗೆ 132 ರನ್ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ಗೆ ಆರಂಭಿಕ ಆಘಾತ ನೀಡುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಯಿತು. 2ನೇ ಓವರ್ನ ಅಂತಿಮ ಎಸೆತದಲ್ಲಿ ದೀಪಕ್ ಹೂಡಾ ಕ್ವಿಂಟನ್ ಡಿಕಾಕ್ (3) ವಿಕೆಟ್ ಪಡೆಯುವ ಮೂಲಕ ಮೊದಲ ಯಶಸ್ಸು ತಂದುಕೊಟ್ಟರು. ಈ ವೇಳೆ ಕ್ರೀಸ್ಗೆ ಆಗಮಿಸಿದ ಇಶಾನ್ ಕಿಶನ್ ಕೂಡ ರನ್ಗಳಿಸಲು ಪರದಾಡಿದರು. ಮೊದಲ 6 ಓವರ್ನಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ರನ್ನು ಸಂಪೂರ್ಣವಾಗಿ ನಿಯಂತ್ರಿಸಿದ ಪಂಜಾಬ್ ಬೌಲರ್ಗಳು ನೀಡಿದ್ದ ಕೇವಲ 21 ರನ್ ಮಾತ್ರ.
ಪವರ್ಪ್ಲೇ ಮುಕ್ತಾಯದ ಬೆನ್ನಲ್ಲೇ ರವಿ ಬಿಷ್ಣೋಯ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಇಶಾನ್ ಕಿಶನ್ (6) ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ರೋಹಿತ್-ಸೂರ್ಯಕುಮಾರ್ ಯಾದವ್ ರನ್ಗತಿಯನ್ನು ತುಸು ಹೆಚ್ಚಿಸಿದರು. ಪರಿಣಾಮ ಮೊದಲ 10 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತ 49ಕ್ಕೆ ಬಂದು ನಿಂತಿತು.
ಇನ್ನು 40 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ 14 ಓವರ್ ವೇಳೆಗೆ ತಂಡದ ಮೊತ್ತವನ್ನು 88ಕ್ಕೆ ತಂದು ನಿಲ್ಲಿಸಿದರು. 16ನೇ ಓವರ್ನಲ್ಲಿ ಮುಂಬೈ ಸ್ಕೋರ್ ನೂರರ ಗಡಿ ದಾಟಿತು. 17ನೇ ಓವರ್ನಲ್ಲಿ ರವಿ ಬಿಷ್ಣೋಯ್, ಸೂರ್ಯಕುಮಾರ್ ಯಾದವ್ (33) ಅವರ ವಿಕೆಟ್ ಪಡೆದರು. ಇದರೊಂದಿಗೆ 3ನೇ ವಿಕೆಟ್ನ 79 ರನ್ಗಳ ಜೊತೆಯಾಟ ಅಂತ್ಯವಾಯಿತು.
ಮೊಹಮ್ಮದ್ ಶಮಿ ಎಸೆದ 18ನೇ ಓವರ್ನಲ್ಲಿ ಬೌಂಡರಿ ಲೈನ್ ಫ್ಯಾಬಿಯನ್ ಅಲೆನ್ ಹಿಡಿದ ಅದ್ಭುತ ಕ್ಯಾಚ್ಗೆ ರೋಹಿತ್ ಶರ್ಮಾ ಔಟಾದರು. ಇದಕ್ಕೂ ಮುನ್ನ ಹಿಟ್ಮ್ಯಾನ್ 52 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿಗಳೊಂದಿಗೆ 63 ರನ್ ಬಾರಿಸಿದ್ದರು. 19ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ 11 ರನ್ ನೀಡಿದರೂ ಹಾರ್ದಿಕ್ ಪಾಂಡ್ಯ (1) ವಿಕೆಟ್ ಪಡೆದರು.
ಅಂತಿಮ ಓವರ್ನಲ್ಲಿ 6 ರನ್ ನೀಡಿ ಒಂದು ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ ಮುಂಬೈ ಇಂಡಿಯನ್ಸ್ ಮೊತ್ತವನ್ನು 6 ವಿಕೆಟ್ಗೆ 131 ಕ್ಕೆ ನಿಯಂತ್ರಿಸಿದರು. ಪಂಜಾಬ್ ಪರ ಶಮಿ ಹಾಗೂ ರವಿ ಬಿಷ್ಣೋಯ್ 2 ವಿಕೆಟ್ ಪಡೆದು ಮಿಂಚಿದರು.
ಎರಡೂ ತಂಡಗಳು ಈಗಾಗಲೇ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಪಂಜಾಬ್ ಕಿಂಗ್ಸ್ ಸತತ ಮೂರು ಸೋಲನುಭವಿಸಿದೆ. ಅತ್ತ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಮುಂಬೈ ಇಂಡಿಯನ್ಸ್ 4 ರಲ್ಲಿ 2 ಗೆಲುವು ದಾಖಲಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಶರಣಾಗಿರುವ ರೋಹಿತ್ ಪಡೆ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ 14 ಬಾರಿ ಗೆಲುವು ದಾಖಲಿಸಿದೆ. ಆದರೆ ಬಲಿಷ್ಠ ಮುಂಬೈಗೆ ಪೈಪೋಟಿ ನೀಡಿರುವ ಪಂಜಾಬ್ 12 ಬಾರಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಸೀಸನ್ನ 2 ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಸಾಧಿಸಿರುವುದು ವಿಶೇಷ. ಹಾಗೆಯೇ ಕೊನೆಯ 5 ಮುಖಾಮುಖಿಯಲ್ಲಿ ಪಂಜಾಬ್ ಮುಂಬೈ ವಿರುದ್ದ 2 ಬಾರಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈಗೆ ಪಂಜಾಬ್ ಕಡೆಯಿಂದ ಕಠಿಣ ಪೈಪೋಟಿ ಎದುರಾಗಲಿದೆ ಎಂದೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ