ಅಬುಧಾಬಿ, ಸೆ. 28: ಪಂಜಾಬ್ ತಂಡದ ದುರದೃಷ್ಟ ಮತ್ತು ರೋಚಕ ಹೋರಾಟಗಳ ಸರಣಿ ಈ ಐಪಿಎಲ್ನಲ್ಲಿ ಮುಂದುವರಿದಿದೆ. ಹಾಗೆಯೇ, ಮುಂಬೈ ಇಂಡಿಯನ್ಸ್ ತಂಡದ ಸತತ ಸೋಲುಗಳ ಸರಣಿಯೂ ಮುರಿದಿದೆ. ಇಂದು ಮುಕ್ತಾಯಗೊಂಡ 2021ರ ಐಪಿಎಲ್ನ 41ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಹ್ಯಾಟ್ರಿಕ್ ಸೋಲುಗಳ ಬಳಿಕ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ. ಕಳಪೆ ಪ್ರದರ್ಶನದ ಮೂಲಕ ಮುಂಬೈಗೆ ತಲೆನೋವಾಗಿದ್ದ ಅದರ ಮಿಡಲ್ ಆರ್ಡರ್ ಯುಎಇಯಲ್ಲಿ ಮೊದಲ ಬಾರಿಗೆ ತಂಡಕ್ಕೆ ಜಯ ದೊರಕಿಸಿಕೊಟ್ಟಿದೆ. ಗೆಲ್ಲಲು 136 ರನ್ಗಳ ಗುರಿಯನ್ನು ಮುಂಬೈ ತಂಡ ಎಸೆತ ಬಾರಿ ಇರುವಂತೆ ತಲುಪಿದೆ. ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೆ ಏರಿದೆ. ಪಂಜಾಬ್ ತಂಡ 6ನೇ ಸ್ಥಾನಕ್ಕೆ ಕುಸಿದಿದೆ.
ಇವತ್ತಿನ ಮುಂಬೈ ಗೆಲುವಿಗೆ ಸೌರಭ್ ತಿವಾರಿ ಪ್ರಮುಖವಾಗಿ ರೂವಾರಿಯಾಗಿದ್ದಾರೆ. ಕಳಪೆ ಫಾರ್ಮ್ನಲ್ಲಿದ್ದ ಇಶಾನ್ ಕಿಶನ್ ಬದಲಿಗೆ ತಿವಾರಿಗೆ ಅವಕಾಶ ಕೊಡಲಾಗಿತ್ತು. ಅದನ್ನ ಸರಿಯಾಗಿ ಬಳಸಿಕೊಂಡ ಅವರು 45 ರನ್ ಗಳಿಸಿ ಮುಂಬೈ ಇಂಡಿಯನ್ಸ್ ಚೇಸಿಂಗ್ ಹಾದಿ ಸುಗಮವಾಗುವಂತೆ ಮಾಡಿದರು. ಕಳೆದ ಪಂದ್ಯದಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಇವತ್ತು ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಅವರು ಮತ್ತು ಕೀರಾನ್ ಪೊಲಾರ್ಡ್ 5ನೇ ವಿಕೆಟ್ಗೆ ಒಳ್ಳೆಯ ಜೊತೆಯಾಟದಲ್ಲಿ ಭಾಗಿಯಾದರು. ಇಬ್ಬರೂ ಸೇರಿ ಮುಂಬೈ ತಂಡವನ್ನ ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.
ಇದಕ್ಕೂ ಮುನ್ನ, ದೊಡ್ಡ ಬೌಂಡರಿ, ನಿಧಾನಗತಿ ಪಿಚ್ ಇರುವ ಅಬುಧಾಬಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಸಮಾಧಾನಕರ ಎನಿಸುವ ಮೊತ್ತ ಕಲೆಹಾಕಿತು. ಏಡನ್ ಮಾರ್ಕ್ರಮ್, ದೀಪಕ್ ಹೂಡ, ಕೆಎಲ್ ರಾಹುಲ್ ಅವರಿಂದ ಒಂದಷ್ಟು ರನ್ಗಳು ಹರಿದುಬಂದ ಹಿನ್ನೆಲೆಯಲ್ಲಿ ಪಂಜಾಬ್ ತಂಡ ಪೈಪೋಟಿ ನೀಡಬಲ್ಲಂಥ 135 ರನ್ ಸ್ಕೋರ್ ಗಳಿಸಿತು. ಮುಂಬೈನ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿ ಪಂಜಾಬ್ ಬ್ಯಾಟರ್ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಪೊಲಾರ್ಡ್ ಒಂದೇ ಓವರ್ನಲ್ಲಿ 2 ವಿಕೆಟ್ ಕಿತ್ತು ಪಂಜಾಬ್ ತಂಡವನ್ನ ನಡುಗಿಸಿದರು. ಟ್ರೆಂಟ್ ಬೌಲ್ಟ್ ತುಸು ದುಬಾರಿ ಎನಿಸಿದರೂ ಉಳಿದ ಬೌಲರ್ಗಳ ಎಕನಾಮಿ ರೇಟ್ ಉತ್ತಮವಾಗಿಯೇ ಇತ್ತು. ಪಂಜಾಬ್ ತಂಡ ಸಾಧಾರಣ ಮೊತ್ತ ಕಲೆಹಾಕಲು ಅದರ ಮುಂದುವರಿದ ಬ್ಯಾಟಿಂಗ್ ವೈಫಲ್ಯ ಕಾರಣವಾಯಿತು.
ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮತ್ತು ನಿಕೋಲಾಸ್ ಪೂರನ್ ಅವರು ಮತ್ತೆ ವಿಫಲರಾಗಿದ್ದಾರೆ. ಮಯಂಕ್ ಅಗರ್ವಾಲ್ ಬದಲು ಬಂದ ಮಂದೀಪ್ ಸಿಂಗ್ ಅವರು 15 ರನ್ ಗಳಿಸಿದರು. ಏಡನ್ ಮರ್ಕ್ರಮ್ 42 ರನ್ ಗಳಿಸಿದ್ದು ಅತ್ಯಧಿಕ ಸ್ಕೋರ್ ಎನಿಸಿತು. ಆದರೆ, ಬ್ಯಾಟಿಂಗ್ನಲ್ಲಿ ಸಮಸ್ಯೆ ಎದುರಿಸುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಈ ಸಾಧಾರಣ ಸವಾಲನ್ನ ಸರಿಯಾಗಿ ಎದುರಿಸುತ್ತದೆಯೇ ಎಂಬುದು ಪ್ರಶ್ನೆ. ಆದರೆ, ವಾತಾವರಣದ ತೇವಾಂಶದ ಕಾರಣ ದ್ವಿತೀಯಾರ್ಧದಲ್ಲಿ ಬೌಲಿಂಗ್ ತುಸು ಕಷ್ಟವೆನಿಸುತ್ತದೆ. ಹೀಗಾಗಿ, ಮುಂಬೈ ಚೇಸಿಂಗ್ ಎತ್ತ ಸಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಪತ್ನಿಗೆ ರೋಮ್ಯಾಂಟಿಕ್ ಮೆಸೇಜ್ ಹಾಕಿದ ಆರ್ಸಿಬಿ ಆಟಗಾರ; ಇನ್ಸ್ಟಾಗ್ರಾಮ್ನಲ್ಲಿ 11 ಲಕ್ಷ ಲೈಕ್ಸ್
ತಂಡಗಳು:
ಪಂಜಾಬ್ ಕಿಂಗ್ಸ್ ತಂಡ: ಕೆಎಲ್ ರಾಹುಲ್, ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಾಸ್ ಪೂರನ್, ದೀಪಕ್ ಹೂಡ, ಏಡನ್ ಮರ್ಕ್ರಂ, ಹರ್ಪ್ರೀತ್ ಬ್ರಾರ್, ನೇಥನ್ ಎಲಿಸ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್.
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ಕ್ವಿಂಟನ್ ಡೀಕಾಕ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಕೃಣಾಲ್ ಪಾಂಡ್ಯ, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ನೇಥನ್ ಕೌಲ್ಟರ್ ನೈಲ್, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
ಸ್ಕೋರು ವಿವರ:
ಪಂಜಾಬ್ ಕಿಂಗ್ಸ್ 20 ಓವರ್ 135/6
(ಏಡನ್ ಮರ್ಕ್ರಮ್ 42, ದೀಪಕ್ ಹೂಡ 28, ಕೆಎಲ್ ರಾಹುಲ್ 21, ಮಂದೀಪ್ ಸಿಂಗ್ 15 ರನ್ – ಕೀರಾನ್ ಪೊಲಾರ್ಡ್ 8/2, ಜಸ್ಪ್ರೀತ್ ಬುಮ್ರಾ 24/2)
ಮುಂಬೈ 19 ಓವರ್ 137/4
(ಸೌರಭ್ ತಿವಾರಿ 45, ಕ್ವಿಂಟನ್ ಡೀಕಾಕ್ 27, ಹಾರ್ದಿಕ್ ಪಾಂಡ್ಯ ಅಜೇಯ 40, ಕೀರಾನ್ ಪೊಲಾರ್ಡ್ ಅಜೇಯ 15 ರನ್ – ರವಿ ಬಿಷ್ಣೋಯ್ 25/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ