HOME » NEWS » Ipl » PBKS VS DC HIGHLIGHTS DHAWAN GUIDES DELHI TO COMFORTABLE 7 WICKET WIN OVER PUNJAB ZP

PBKS vs DC: ಮಯಾಂಕ್ ಹೋರಾಟ ವ್ಯರ್ಥ: ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ

ಏಕಾಂಗಿ ಪ್ರದರ್ಶನ ನೀಡಿದ್ದ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೇವಲ 58 ಎಸೆತಗಳನ್ನು ಎದುರಿಸಿದ ಕನ್ನಡಿಗ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 99 ರನ್​ ಬಾರಿಸಿದರು.

news18-kannada
Updated:May 2, 2021, 11:37 PM IST
PBKS vs DC: ಮಯಾಂಕ್ ಹೋರಾಟ ವ್ಯರ್ಥ: ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ
shikar dhawan
  • Share this:
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್​ ಆರಂಭಿಸಿದ ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ಪಂಜಾಬ್ ತಂಡದ ಹಂಗಾಮಿ ನಾಯಕ ಮಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ ಪ್ರಭ್ ಸಿಮ್ರಾನ್ ಸಿಂಗ್ ಕೇವಲ 12 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಗೇಲ್ (13) ರಬಾಡ ಎಸೆತಕ್ಕೆ ಬೌಲ್ಡ್ ಆದರು. ಇನ್ನು ಚೊಚ್ಚಲ ಐಪಿಎಲ್ ಪಂದ್ಯವಾಡಿದ ಡೇವಿಡ್ ಮಲಾನ್ 26 ರನ್​ಗಳೊಂದಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.

ಆದರೆ ಮತ್ತೊಂದೆಡೆ ಏಕಾಂಗಿ ಪ್ರದರ್ಶನ ನೀಡಿದ್ದ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೇವಲ 58 ಎಸೆತಗಳನ್ನು ಎದುರಿಸಿದ ಕನ್ನಡಿಗ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 99 ರನ್​ ಬಾರಿಸಿ ತಂಡದ ಮೊತ್ತವನ್ನು ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 166 ಕ್ಕೆ ತಂದು ನಿಲ್ಲಿಸಿದರು. ಡೆಲ್ಲಿ ಪರ ಕಗಿಸೋ ರಬಡಾ 3 ವಿಕೆಟ್ ಕಬಳಿಸಿ ಮಿಂಚಿದರು.

ಈ ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಪವರ್​ಪ್ಲೇನಲ್ಲಿ ಮೊದಲ ವಿಕೆಟ್​ಗೆ 63 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಹರ್ಪ್ರೀತ್ ಬ್ರಾರ್ ಎಸೆತದಲ್ಲಿ ಪೃಥ್ವಿ (39) ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಆ ಬಳಿಕ ಜೊತೆಯಾದ ಸ್ಮಿತ್ ಹಾಗೂ ಧವನ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು. ಇನ್ನು 24 ರನ್​ಗಳಿಸಿ ಸ್ಟೀವ್ ಸ್ಮಿತ್ ಹೊರನಡೆದರೂ, ಅದಾಗಲೇ ತಂಡದ ಮೊತ್ತ 13ನೇ ಓವರ್​ನಲ್ಲಿ ನೂರರ ಗಡಿದಾಟಿತ್ತು.

47 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 69 ಬಾರಿಸಿದ ಶಿಖರ್ ಧವನ್ 17.4 ಓವರ್​ನಲ್ಲಿ ತಂಡವನ್ನು 167 ರನ್​ಗಳ ಗುರಿಮುಟ್ಟಿಸಿದರ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.
Published by: zahir
First published: May 2, 2021, 11:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories