HOME » NEWS » Ipl » PBKS VS CSK LIVE SCORE IPL 2021 CHENNAI SUPER KINGS WON BY 6 WICKETS ZP

PBKS vs CSK: ಕಿಂಗ್ಸ್​ ಕದನದಲ್ಲಿ ಚೆನ್ನೈ ತಂಡ ಸೂಪರ್ ಕಿಂಗ್ಸ್​..!

ಪ್ರಮುಖ 4 ವಿಕೆಟ್​ ಕಳೆದುಕೊಂಡ ಪರಿಣಾಮ ಪಂಜಾಬ್ ಕಿಂಗ್ಸ್ ಪವರ್​ಪ್ಲೇನಲ್ಲಿ ಕೇವಲ 26 ರನ್​ಗಳಿಸಲಷ್ಟೇ ಶಕ್ತರಾದರು. ಇದಾದ ಬಳಿಕ 7ನೇ ಓವರ್​ ಎಸೆದ ದೀಪಕ್ ಚಹರ್ ದೀಪಕ್ ಹೂಡಾ (10) ವಿಕೆಟ್ ಪಡೆಯುವ ಮೂಲಕ ಮತ್ತೊಂದು ಆಘಾತ ನೀಡಿದರು.

news18-kannada
Updated:April 16, 2021, 10:44 PM IST
PBKS vs CSK: ಕಿಂಗ್ಸ್​ ಕದನದಲ್ಲಿ ಚೆನ್ನೈ ತಂಡ ಸೂಪರ್ ಕಿಂಗ್ಸ್​..!
csk
  • Share this:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್​ ಲೀಗ್​ನ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್​ಗೆ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಪಂಜಾಬ್ ನೀಡಿದ 107 ರನ್​ಗಳ ಸುಲಭ ಗುರಿಯನ್ನು ಸಿಎಸ್​ಕೆ 15.4 ಓವರ್​ನಲ್ಲಿ ತಲುಪುವ ಮೂಲಕ ಐಪಿಎಲ್ 14ನೇ ಸೀಸನ್​ನ ಮೊದಲ ಜಯ ತನ್ನದಾಗಿಸಿಕೊಂಡಿತು.

ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಸಿಎಸ್​ಕೆ ತಂಡಕ್ಕೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ನಿಧಾನಗತಿಯ ಆರಂಭ ಒದಗಿಸಿದರು. ಅಲ್ಲದೆ ಮೊದಲ ವಿಕೆಟ್​ಗೆ 24 ರನ್​ ಪೇರಿಸಿದರು. ಈ ವೇಳೆ ದಾಳಿಗಿಳಿದ ಅರ್ಷದೀಪ್ ಸಿಂಗ್ ರುತುರಾಜ್ (5) ವಿಕೆಟ್ ಪಡೆಯುವ ಮೂಲಕ ಪಂಜಾಬ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಪವರ್​ಪ್ಲೇ ಮುಕ್ತಾಯದ ವೇಳೆಗೆ ಸಿಎಸ್​ಕೆ 32 ರನ್​ಗಳಿಸಿತು.

ಈ ಹಂತದಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಮೊಯೀನ್ ಅಲಿ ಹಾಗೂ ಫಾಫ್ ಡುಪ್ಲೆಸಿಸ್​ 9 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು. ಅಲ್ಲದೆ 2ನೇ ವಿಕೆಟ್​ಗೆ 45 ಎಸೆತಗಳಲ್ಲಿ 66 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಮುರುಗನ್ ಅಶ್ವಿನ್ ಎಸೆತದಲ್ಲಿ ಭರ್ಜರಿ ಉತ್ತರ ನೀಡಲು ಮುಂದಾದ ಮೊಯೀನ್ ಅಲಿ ಬೌಂಡರಿ ಲೈನ್​ನಲ್ಲಿದ್ದ ಶಾರುಖ್ ಖಾನ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ 31 ಎಸೆತಗಳಲ್ಲಿ  1 ಸಿಕ್ಸ್​ 7 ಬೌಂಡರಿಗಳನ್ನು ಒಳಗೊಂಡ ಮೊಯೀನ್ ಅಲಿ ಅವರ 46 ರನ್​ಗಳ ಇನಿಂಗ್ಸ್ ಅಂತ್ಯಗೊಂಡಿತು.

ಕೊನೆಯ 6 ಓವರ್​ಗಳಲ್ಲಿ ಸಿಎಸ್​ಕೆಗೆ ಗೆಲ್ಲಲು ಕೇವಲ 10 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಮೊಹಮ್ಮದ್ ಶಮಿ ಸುರೇಶ್ ರೈನಾ (8) ಅವರ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಅಂಬಾಟಿ ರಾಯುಡು(0)ಗೂ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಶಮಿ ಗಮನ ಸೆಳೆದರು. 16ನೇ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಸ್ಯಾಮ್ ಕರನ್ ಚೆನ್ನೈ ತಂಡವನ್ನು 4 ವಿಕೆಟ್ ನಷ್ಟಕ್ಕೆ 107 ರನ್​ಗಳ ಗುರಿ ತಲುಪಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ 33 ಎಸೆತಗಳಲ್ಲಿ 36 ರನ್ ಬಾರಿಸಿ ಅಜೇಯರಾಗುಳಿದರು. ಪಂಜಾಬ್ ಪರ 4 ಓವರ್​ನಲ್ಲಿ 21 ರನ್​ ನೀಡಿ 2 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಯಶಸ್ವಿ ಬೌಲರ್ ಎನಿಸಿಕೊಂಡರು. ಚೆನ್ನೈ ಪರ 200ನೇ ಪಂದ್ಯವಾಡಿದ ಮಹೇಂದ್ರ ಸಿಂಗ್ ಧೋನಿ ಗೆಲುವಿನ ನಗೆ ಬೀರಿದರು.



ಇದಕ್ಕೂ ಮುನ್ನ ಟಾಸ್ ಗೆದ್ದ  ಮಹೇಂದ್ರ ಸಿಂಗ್ ಧೋನಿ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ಪಂಜಾಬ್ ಕಿಂಗ್ಸ್​ ತಂಡಕ್ಕೆ ದೀಪಕ್ ಚಹರ್ ಮೊದಲ ಓವರ್​ನಲ್ಲೇ ಶಾಕ್ ನೀಡಿದರು. ಮೊದಲ ಓವರ್​ನ 4 ಎಸೆತದಲ್ಲಿ ಮಯಾಂಕ್ ಅಗರ್ವಾಲ್ (0) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಿಎಸ್​ಕೆಗೆ ಮೊದಲ ಯಶಸ್ಸು ತಂದುಕೊಟ್ಟರು.

ತಂಡದ ಮೊತ್ತ 15 ಆಗಿದ್ದ ವೇಳೆ ರವೀಂದ್ರ ಜಡೇಜಾ ಮಾಡಿದ ಅತ್ಯುತ್ತಮ ಫೀಲ್ಡಿಂಗ್​ಗೆ ಕೆಎಲ್ ರಾಹುಲ್ (5) ರನೌಟ್ ಆಗಿ ಹೊರನಡೆದರು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಅತ್ಯಾದ್ಭುತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿಯುವ ಮೂಲಕ ಪಂಜಾಬ್ 3ನೇ ವಿಕೆಟ್ ಪತನಕ್ಕೆ ಜಡೇಜಾ ಕಾರಣರಾದರು. ಇನ್ನು ಬಂದ ವೇಗದಲ್ಲೇ ಕ್ಯಾಚ್ ನೀಡಿ ಶೂನ್ಯದೊಂದಿಗೆ ನಿಕೋಲಸ್ ಪೂರನ್ ನಿರ್ಗಮಿಸಿದರು.

ಪ್ರಮುಖ 4 ವಿಕೆಟ್​ ಕಳೆದುಕೊಂಡ ಪರಿಣಾಮ ಪಂಜಾಬ್ ಕಿಂಗ್ಸ್ ಪವರ್​ಪ್ಲೇನಲ್ಲಿ ಕೇವಲ 26 ರನ್​ಗಳಿಸಲಷ್ಟೇ ಶಕ್ತರಾದರು. ಇದಾದ ಬಳಿಕ 7ನೇ ಓವರ್​ ಎಸೆದ ದೀಪಕ್ ಚಹರ್ ದೀಪಕ್ ಹೂಡಾ (10) ವಿಕೆಟ್ ಪಡೆಯುವ ಮೂಲಕ ಮತ್ತೊಂದು ಆಘಾತ ನೀಡಿದರು.  4 ಓವರ್​ ಬೌಲಿಂಗ್ ಮಾಡಿದ ಚಹರ್ ಕೇವಲ 13 ರನ್​ ನೀಡಿದ 4 ವಿಕೆಟ್ ಉರುಳಿಸಿ ಮಿಂಚಿದರು.

6ನೇ ವಿಕೆಟ್​​ಗೆ ಜೊತೆಯಾದ ಶಾರುಖ್ ಖಾನ್ ಹಾಗೂ ಜೈ ರಿಚರ್ಡ್ಸನ್ ಎಚ್ಚರಿಕೆಯ ಆಟವಾಡಿದರು. ಪರಿಣಾಮ 10 ಓವರ್​ ಮುಕ್ತಾಯದ ವೇಳೆ ಪಂಜಾಬ್ ಮೊತ್ತ 48ಕ್ಕೆ ಬಂದು ನಿಂತಿತು. ಅಲ್ಲದೆ 11ನೇ ಓವರ್​ನಲ್ಲಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು. ಇದೇ ವೇಳೆ ಮೊಯೀನ್ ಅಲಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಜೈ ರಿಚರ್ಡ್ಸನ್ (15) ಕ್ಲೀನ್ ಬೌಲ್ಡ್ ಆದರು.

ಈ ಹಂತದಲ್ಲಿ ಜೊತೆಯಾದ ಮುರುಗನ್ ಅಶ್ವಿನ್ ಶಾರುಖ್ ಖಾನ್​ಗೆ ಸಾಥ್ ನೀಡಿದರು. ಅದರಂತೆ ಒಂದೊಂದೇ ರನ್​ ಕಲೆಹಾಕುತ್ತಾ ಹೋದ ಈ ಜೋಡಿ 16 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 81ಕ್ಕೆ ತಲುಪಿಸಿದರು. 7ನೇ ವಿಕೆಟ್​ಗೆ 30 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಆಸರೆಯಾದರು. ಆದರೆ 17ನೇ ಓವರ್​ನಲ್ಲಿ ದಾಳಿಗಿಳಿದ ಡ್ವೇನ್ ಬ್ರಾವೊ ಮುರುಗನ್ ಅಶ್ವಿನ್ (6) ವಿಕೆಟ್ ಪಡೆಯುವ ಮೂಲಕ 7ನೇ ವಿಕೆಟ್ ಉರುಳಿಸಿದರು.

ಪಂಜಾಬ್ ಕಿಂಗ್ಸ್ 100 ರನ್​ ಪೂರೈಸಲು 19 ಓವರ್​ಗಳನ್ನು ತೆಗೆದುಕೊಂಡಿತು. ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್ ಕರನ್​ಗೆ ವಿಕೆಟ್ ಒಪ್ಪಿಸಿ ಶಾರುಖ್ ಖಾನ್ (47) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. 2ನೇ ಎಸೆತದಲ್ಲಿ ಯಾವುದೇ ರನ್​ ಇಲ್ಲ. ಮೂರನೇ ಎಸೆತದಲ್ಲಿ ಶಮಿ 2 ರನ್​ ಬಾರಿಸಿದರು. 4ನೇ ಎಸೆತದಲ್ಲಿ  ಮತ್ತೆ ರನ್. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ ಎಸೆತದಲ್ಲಿ 1 ರನ್​ಗಳಿಸುವುದರೊಂದಿಗೆ ಪಂಜಾಬ್ ಇನಿಂಗ್ಸ್​ 106 ರನ್​ಗಳೊಂದಿಗೆ ಅಂತ್ಯವಾಯಿತು. ಸಿಎಸ್​ಕೆ ಪರ ದೀಪಕ್ ಚಹರ್ 4 ವಿಕೆಟ್ ಉರುಳಿಸಿ ಮಿಂಚಿದರು.
Published by: zahir
First published: April 16, 2021, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories