ದುಬೈ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಕರ್ನಾಟಕದ ಕೆಎಲ್ ರಾಹುಲ್ ಅವರು ಈ ಐಪಿಎಲ್ನಲ್ಲಿ ಗಳಿಸಿರುವ 626 ರನ್ಗಳ ಮೊತ್ತ ಈಗಲೂ ನಂಬರ್ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸದಿದ್ದರೂ ಕೆಎಲ್ ರಾಹುಲ್ ಅವರು ಪರ್ಪಲ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲೇ ಇದ್ದಾರೆ. ಅದೃಷ್ಟ ಇದ್ದರೆ ಆರೆಂಜ್ ಕ್ಯಾಪ್ ಕೆಎಲ್ ರಾಹುಲ್ ಅವರಿಗೆಯೇ ಸಿಗುವ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಶಿಖರ್ ಧವನ್ ಕೇವಲ 36 ರನ್ ಗಳಿಸಿದರು. ಇದರೊಂದಿಗೆ ಧವನ್ ಅವರ ಒಟ್ಟಾರೆ ಸ್ಕೋರು 607ಕ್ಕೆ ಏರಿದೆ. ಆರೆಂಜ್ ಕ್ಯಾಪ್ ರೇಸ್ನಲ್ಲಿ ಅವರು ಎರಡನೇ ಸ್ಥಾನಕ್ಕೆ ಏರಿದ್ದಾರೆ. ಆದರೆ, ಡೆಲ್ಲಿ ತಂಡ ಕೆಕೆಆರ್ ವಿರುದ್ಧ ಸೋತು ನಿರ್ಗಮಿಸಿದ ಹಿನ್ನೆಲೆಯಲ್ಲಿ ಧವನ್ ಅವರು ಆರೆಂಜ್ ಕ್ಯಾಪ್ ರೇಸ್ನಿಂದಲೂ ನಿರ್ಗಮಿಸಿದ್ದಾರೆ.
ಋತುರಾಜ್ಗೆ ಹೆಚ್ಚಿನ ಅವಕಾಶ: ಈಗ ಕೆಎಲ್ ರಾಹುಲ್ ಅವರನ್ನ ರೇಸ್ನಲ್ಲಿ ಹಿಂದಿಕ್ಕಲು ಅವಕಾಶ ಇರುವುದು ಇಬ್ಬರಿಗೆ ಮಾತ್ರವೇ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಋತುರಾಜ್ ಗಾಯಕ್ವಾಡ್ ಮತ್ತು ಫ್ಯಾಫ್ ಡುಪ್ಲೆಸಿ ಅವರಿಬ್ಬರಿಗೆ ಚಾನ್ಸ್ ಇದೆ. ಅದರಲ್ಲೂ ಋತುರಾಜ್ ಅವರಿಗೆ ಹೆಚ್ಚು ಅವಕಾಶ ಇದೆ. 603 ರನ್ ಗಳಿಸಿರುವ ಋತುರಾಜ್ ಗಾಯಕ್ವಾಡ್ ಅವರು ಅ. 15ರಂದು ನಡೆಯುವ ಫೈನಲ್ ಪಂದ್ಯದಲ್ಲಿ 24 ರನ್ ಗಳಿಸಿದರೆ ನಂಬರ್ ಒನ್ ಸ್ಥಾನಕ್ಕೇರುತ್ತಾರೆ.
ಇನ್ನು, ಫ್ಯಾಫ್ ಡುಪ್ಲೆಸಿ ಅವರು 547 ರನ್ ಹೊಂದಿದ್ದಾರೆ. ಫೈನಲ್ನಲ್ಲಿ ಅವರು ಇನ್ನೂ 80 ರನ್ ಗಳಿಸಿದರೆ ಕೆಎಲ್ ರಾಹುಲ್ ದಾಖಲೆಯನ್ನ ದಾಟಿ ಹೋಗಬಹುದು. ಹೀಗಾಗಿ, ಕೆಕೆಆರ್ ಮತ್ತು ಸಿಎಸ್ಕೆ ನಡುವಿನ ಫೈನಲ್ ಕದನದಲ್ಲಿ ಆರೆಂಜ್ ಕ್ಯಾಪ್ ಯಾರ ಪಾಲಾಗುತ್ತದೆ ಎಂದು ನಿರ್ಣಯಿಸಲು ಸಾಧ್ಯ.
ಹರ್ಷಲ್ ಪಟೇಲ್ಗೆ ಪರ್ಪಲ್ ಕ್ಯಾಪ್:
ಇನ್ನು, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆವರಿಗೆ ನೀಡುವ ಪರ್ಪಲ್ ಕ್ಯಾಪ್ ಈ ಬಾರಿ ಆರ್ಸಿಬಿ ಬೌಲರ್ ಹರ್ಷಲ್ ಪಟೇಲ್ ಅವರ ಪಾಲಾಗುವುದು ನಿಶ್ಚಿತವಾಗಿದೆ. 32 ವಿಕೆಟ್ ಗಳಿಸಿರುವ ಹರ್ಷಲ್ ಕ್ಯಾಪ್ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಬಹಳ ಮುಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಕೇವಲ 24 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ಧಾರೆ. ಎರಡನೇ ಕ್ವಾಲಿಫಯರ್ಗೆ ಮುಂಚೆ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಹರ್ಷಲ್ ಪಟೇಲ್ ಅವರನ್ನ ಹಿಂದಿಕ್ಕುವ ಸಾಧ್ಯತೆ ಇದ್ದದ್ದು ಅವೇಶ್ ಖಾನ್ ಅವರಿಗೆ ಮಾತ್ರವೇ. ಆದರೆ, ಖಾನ್ಗೆ ಬಿದ್ದದ್ದು ಒಂದೇ ವಿಕೆಟ್. ಈಗ ಚೆನ್ನೈ ಮತ್ತು ಕೋಲ್ಕತಾ ತಂಡದ ಯಾವ ಬೌಲರ್ ಕೂಡ ಒಂದು ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರ ವಿಕೆಟ್ ಮೊತ್ತವನ್ನ ದಾಟಿ ಹೋಗುವ ಸಾಧ್ಯತೆ ಹೊಂದಿಲ್ಲ. ಹೀಗಾಗಿ, ಹರ್ಷಲ್ ಪಟೇಲ್ ಅವರಿಗೆ ಪರ್ಪಲ್ ಕ್ಯಾಪ್ ನಿಶ್ಚಿತವಾಗಿದೆ.
ಇದನ್ನೂ ಓದಿ: KKR vs DC- Qualifier2: ಕೆಕೆಆರ್-ಡೆಲ್ಲಿ ಸೂಪರ್ ಥ್ರಿಲ್ಲರ್ ಮ್ಯಾಚ್; ಫೈನಲ್ಗೆ ಕೋಲ್ಕತಾ
ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಗಿಸೋ ರಬಡ 30 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗಿಟ್ಟಿಸಿದ್ದರು. ಡ್ವೇನ್ ಬ್ರಾವೋ ಎರಡು ಬಾರಿ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ ಕೂಡ ಎರಡು ಬಾರಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಬೌಲರ್ವೊಬ್ಬ ಪರ್ಪಲ್ ಕ್ಯಾಪ್ ಪಡೆಯುತ್ತಿರುವುದು ಇದೇ ಮೊದಲು.
ಆರೆಂಜ್ ಕ್ಯಾಪ್ ದಾಖಲೆಗಳು:
ಇನ್ನು, ಆರೆಂಜ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಕೆಎಲ್ ರಾಹುಲ್ ಅವರು ಕಳೆದ ವರ್ಷದ ಐಪಿಎಲ್ನಲ್ಲಿ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಈ ಬಾರಿಯೂ ಅವರು ಗೆದ್ದರೆ ಕ್ರಿಸ್ ಗೇಲ್ ಅವರ ದಾಖಲೆ ಸರಿಗಟ್ಟುತ್ತಾರೆ. ಕ್ರಿಸ್ ಗೇಲ್ 2011 ಮತ್ತು 2012ರ ಸೀಸನ್ನಲ್ಲಿ ಆರ್ಸಿಬಿಯಲ್ಲಿದ್ದಾಗ ಎರಡು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದರು.
ಒಂದು ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. 2016ರ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 973 ರನ್ಗಳನ್ನ ಗಳಿಸಿ ಆರೆಂಜ್ ಕ್ಯಾಪ್ ಜಯಿಸಿದ್ದರು. ನಮ್ಮ ಕನ್ನಡಿಗ ರಾಬಿನ್ ಉತ್ತಪ್ಪ ಅವರು 2014ರಲ್ಲಿ 660 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ