ಕೊರೋನಾ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇತ್ತ ಎಲ್ಲಾ ವಿದೇಶಿ ಆಟಗಾರರು ತವರಿಗೆ ತೆರಳಲು ಮುಂದಾಗಿದ್ದಾರೆ. ಇದಾಗ್ಯೂ ಕೇನ್ ವಿಲಿಯಮ್ಸನ್ ಸೇರಿದಂತೆ ಐಪಿಎಲ್ 2021 ರಲ್ಲಿ ಭಾಗವಹಿಸಿದ ನ್ಯೂಜಿಲೆಂಡ್ನ ಕ್ರಿಕೆಟಿಗರು ಮೇ 10 ರವರೆಗೆ ಭಾರತದಲ್ಲಿಯೇ ಉಳಿಯಲಿದ್ದಾರೆ. ಭಾರತದಿಂದ ನ್ಯೂಜಿಲೆಂಡ್ ವಿಮಾನಯಾನವನ್ನು ಸ್ಥಗಿತಗೊಳಿಸಿದ್ದು, ಹೀಗಾಗಿ ಪರ್ಯಾಯ ಮಾರ್ಗದ ಹುಡುಕಾಟದಲ್ಲಿದೆ ಕಿವೀಸ್ ಆಟಗಾರರು. ಆದರೆ ಅತ್ತ ಇಂಗ್ಲೆಂಡ್ಗೆ ಭಾರತದಿಂದ ವಿಮಾನಯಾನವಿದ್ದರೂ, ಯುಕೆ ನಾಗರೀಕರಿಗೆ ಮಾತ್ರ ಅನುಮತಿಸಲಾಗಿದೆ. ಫ್ರ್ಯಾಂಚೈಸ್ನ ಚಾರ್ಟರ್ಡ್ ವಿಮಾನದ ಮೂಲಕ ತವರಿಗೆ ವಾಪಾಸಾಗುವ ಸಾಧ್ಯತೆಯಿದೆ ಎಂದು ನ್ಯೂಜಿಲೆಂಡ್ ಪ್ಲೇಯರ್ಸ್ ಅಸೋಸಿಯೇಶನ್ ಮುಖ್ಯಸ್ಥ ಹೀತ್ ಮಿಲ್ಸ್ ತಿಳಿಸಿದ್ದಾರೆ.
ಸದ್ಯ ಭಾರತದಲ್ಲಿ ವಿಲಿಯಮ್ಸನ್ ಅವರಲ್ಲದೆ, ಟ್ರೆಂಟ್ ಬೋಲ್ಟ್, ಕೈಲ್ ಜೇಮಿಸನ್, ಮಿಚೆಲ್ ಸೆಂಟ್ನರ್, ಕ್ರಿಸ್ ಡೊನಾಲ್ಡ್ಸನ್ (ತರಬೇತುದಾರ), ಟಾಮಿ ಸಿಮ್ಸೆಕ್ (ಫಿಸಿಯೋ), ಲಾಕಿ ಫರ್ಗುಸನ್, ಜಿಮ್ಮಿ ನೀಶಮ್, ಫಿನ್ ಅಲೆನ್ ಸೇರಿದಂತೆ ಹಲವು ಆಟಗಾರಿದ್ದಾರೆ. ಇವರಲ್ಲಿ ಕೆಲವರು ಜೂನ್ 2 ರಿಂದ ಇಂಗ್ಲೆಂಡ್ ವಿರುದ್ದ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಅದಕ್ಕೂ ಮುನ್ನ ಈಗ ತವರಿಗೆ ತಲುಪುದು ಸವಾಲಾಗಿ ಪರಿಣಮಿಸಿದೆ.
ಇನ್ನು ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, ಕೆಕೆಆರ್ ಕೋಚ್ ಬ್ರೆಂಡನ್ ಮೆಕಲಮ್, ಕೈಲ್ ಮಿಲ್ಸ್, ಶೇನ್ ಬಾಂಡ್, ಮೈಕ್ ಹೆವ್ಸನ್, ಟಿಮ್ ಸಿಫೆರ್ಟ್, ಆಡಮ್ ಮಿಲ್ನೆ, ಸ್ಕಾಟ್ ಕುಗ್ಲೀನ್ ಮತ್ತು ಜೇಮ್ಸ್ ಪೇಮೆಂಟ್ ಕೂಡ ನ್ಯೂಜಿಲೆಂಡ್ಗೆ ಮರಳಬೇಕಿದೆ. ಹೀಗಾಗಿ ಇವರೆಲ್ಲರನ್ನು ಸೇರಿಸಿ ಒಂದೆರೆಡು ಫ್ರಾಂಚೈಸಿ ವಿಶೇಷ ಚಾರ್ಟರ್ಡ್ ಫ್ಲೈಟ್ ಮಾಡಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಬಿಸಿಸಿಐ ಜೊತೆ ಚರ್ಚೆ ನಡೆಸುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ನಾವು ಈ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ಹೀತ್ ಮಿಲ್ಸ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ