ಕೊರೋನಾಂತಕದ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಭರದಿಂದ ಸಾಗುತ್ತಿದೆ. ಅತ್ತ ಕೆಲ ಆಟಗಾರರು ಈಗಾಗಲೇ ಕೊರೋನಾ ಕಾರಣದಿಂದ ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಆದರೆ ಐಪಿಎಲ್ ಮುಕ್ತಾಯದ ಬಳಿಕ ಕೂಡ ನ್ಯೂಜಿಲೆಂಡ್ ಕ್ರಿಕೆಟಿಗರು ತವರಿಗೆ ಮರಳುವುದು ಅನುಮಾನ. ಇದಕ್ಕೆ ಒಂದು ಕಾರಣ ಕೋವಿಡ್ ಕಾರಣದಿಂದ ನ್ಯೂಜಿಲೆಂಡ್ ಭಾರತದೊಂದಿಗಿನ ವಿಮಾನಯಾನವನ್ನು ಸ್ಥಗಿತಗೊಳಿಸಿರುವುದು. ಇನ್ನೊಂದು ಕಾರಣ ಬಯೋಬಬಲ್ ಪೊಟ್ರೊಕಾಲ್. ಹೌದು, ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಭಾರತ-ನ್ಯೂಜಿಲೆಂಡ್ ನಡುವೆ ಇಂಗ್ಲೆಂಡ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ನಡೆಯಲಿದೆ.
ಒಂದು ವೇಳೆ ಬಯೋಬಬಲ್ನಿಂದ ಹೊರಗುಳಿದರೆ ನ್ಯೂಜಿಲೆಂಡ್ ಆಟಗಾರರು ಮತ್ತೆ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ನ್ಯೂಜಿಲೆಂಡ್ಗೆ ಪ್ರಯಾಣಿಸುವುದು ಅನುಮಾನ. ಅಲ್ಲದೆ ಭಾರತದಿಂದಲೇ ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್ಗೆ ಪ್ರಯಾಣಿಸಲಿದ್ದಾರೆ. ಐಪಿಎಲ್ನಲ್ಲಿ ಹತ್ತು ನ್ಯೂಜಿಲೆಂಡ್ ಆಟಗಾರರಿದ್ದು, ಇವರಲ್ಲಿ ಬಹುತೇಕರು ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಕೈಲ್ ಜೇಮಿಸನ್ ಮತ್ತು ಮಿಚೆಲ್ ಸ್ಯಾಂಟ್ನರ್. ಈ ನಾಲ್ವರು ಭಾರತದ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವುದು ಬಹುತೇಕ ಖಚಿತ.
ಈ ಬಗ್ಗೆ ಮಾತನಾಡಿರುವ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಸಂಘದ ಮುಖ್ಯ ಕಾರ್ಯನಿರ್ವಾಹಕ ಹೀತ್ ಮಿಲ್ಸ್, "ಅವರು ಐಪಿಎಲ್ ಆಡುತ್ತಿರುವ ಕಿವೀಸ್ ಆಟಗಾರರು ನ್ಯೂಜಿಲೆಂಡ್ಗೆ ಮರಳಿದರೆ ಎರಡು ವಾರಗಳ ಕಾಲ ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಎಲ್ಲಾ ಆಟಗಾರರು ರೌಂಡ್ ರಾಬಿನ್ ಸುತ್ತಿನವರೆಗೂ ಅವರು ಭಾರತದಲ್ಲಿ ಇರಲಿದ್ದಾರೆ. ಅದರ ನಂತರ ಕೊನೆಯ ಸುತ್ತಿನವರೆಗೂ ಹೋಗಬಹುದು. ಆ ಬಳಿಕ ನ್ಯೂಜಿಲೆಂಡ್ಗೆ ಮರಳಲು ಹೆಚ್ಚಿನ ವಿಮಾನಗಳು ಇಲ್ಲದಿದ್ದರೆ, ಹಿಂದಿರುಗಲು ಸಾಧ್ಯವಾಗುವುದಿಲ್ಲ. ನಾವು ಈಗಾಗಲೇ ಬಿಸಿಸಿಐ ಮತ್ತು ಐಸಿಸಿಯೊಂದಿಗೆ ಈ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬಯೋ ಬಬಲ್ನಲ್ಲಿ ಆಟಗಾರರು ಸುರಕ್ಷಿತ ಭಾವನೆ ಹೊಂದಿದ್ದಾರೆ. ಹೋಟೆಲ್ನಲ್ಲಿ ನಾಲ್ಕು ತಂಡಗಳಿವೆ. ಅಲ್ಲದೆ ಹೋಟೆಲ್ ಲಾಕ್ ಡೌನ್ ಮಾಡಲಾಗಿದೆ. ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗುವಾಗ, ಭದ್ರತಾ ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ಅನುಸರಿಸಲಾಗುತ್ತಿದೆ. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟಿಗರು ಭಾರತದಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಹೀತ್ ಮಿಲ್ಸ್ ತಿಳಿಸಿದ್ದಾರೆ.
ಭಾರತ-ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಜೂನ್ 18 ರಂದು ನಡೆಯಲಿದ್ದು, ಈ ಅಗ್ರ ತಂಡಗಳ ಕದನಕ್ಕಾಗಿ 15 ಮಂದಿಯ ಟೀಮ್ ಇಂಡಿಯಾವನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ