Rohith Sharma| ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಗೆಲುವು ಅಷ್ಟು ಸುಲಭವಲ್ಲ ಎಂಬ ಅರಿವು ನಮಗಿದೆ; ರೋಹಿತ್​ ಶರ್ಮಾ

ಕೋಲ್ಕತ್ತಾ ನೈಟ್​ ರೈಸರ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಉತ್ತಮ ದಾಖಲೆಯನ್ನು ಹೊಂದಿದೆ. ಆದರೂ, ಪಂದ್ಯದಲ್ಲಿ ಗೆಲ್ಲಬೇಕು ಎಂದು ನಿರ್ದಿಷ್ಟ ದಿನದಂದು ಅತ್ಯುತ್ತಮ ಪ್ರದರ್ಶನ ನೀಡಬೇಕು. ಪ್ರತಿ ಪಂದ್ಯವನ್ನೂ ಹೊಸದಾಗಿಯೇ ಆರಂಭಿಸಬೇಕು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ರೋಹಿತ್ ಶರ್ಮಾ.

ರೋಹಿತ್ ಶರ್ಮಾ.

 • Share this:
  ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್​ ರೈಡರ್ಸ್​ (Kolkatta Night Riders) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡ ಮುಖಾಮುಖಿಯಾಗುತ್ತಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ರೋಹಿತ್ ಶರ್ಮಾ (Rohit Sharma) ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್ ಶರ್ಮಾ ಈ ಪಂದ್ಯದ ಬಗ್ಗೆ ಮಾತನಾಡಿದ್ದು, "ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ. ಇಯಾನ್ ಮಾರ್ಗನ್ (Eoin Morgan) ನೇತೃತ್ವದಲ್ಲಿ ಕೆಕೆಆರ್​ ತಂಡ ಬಲಿಷ್ಠವಾಗಿದೆ. ಅಲ್ಲದೆ, ಆರ್​ಸಿಬಿ (RCB) ವಿರುದ್ಧದ ಗೆಲುವು ಕೆಕೆಆರ್ (KKR) ತಂಡಕ್ಕೆ ಮತ್ತಷ್ಟು ಆತ್ಮ ವಿಶ್ವಾಸವನ್ನು ತುಂಬಿರುತ್ತದೆ. ಹೀಗಾಗಿ ಮುಂಬೈ ಆಟಗಾರರು ಇಂದು ಸಾಕಷ್ಟು ಪರಿಶ್ರಮ ಪಡಬೇಕಿದೆ" ಎಂದು ತಿಳಿಸಿದ್ದಾರೆ.
  "ಕೋಲ್ಕತ್ತಾ ನೈಟ್​ ರೈಸರ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಉತ್ತಮ ದಾಖಲೆಯನ್ನು ಹೊಂದಿದೆ. ಆದರೂ, ಪಂದ್ಯದಲ್ಲಿ ಗೆಲ್ಲಬೇಕು ಎಂದು ನಿರ್ದಿಷ್ಟ ದಿನದಂದು ಅತ್ಯುತ್ತಮ ಪ್ರದರ್ಶನ ನೀಡಬೇಕು. ಪ್ರತಿ ಪಂದ್ಯವನ್ನೂ ಹೊಸದಾಗಿಯೇ ಆರಂಭಿಸಬೇಕು. ಹೀಗಾಗಿ ಪ್ರಾಮಾಣಿಕವಾಗಿ ನಾವು ಹಿಂದಿನ ದಾಖಲೆಗಳನ್ನು ನಂಬುವುದಿಲ್ಲ. ಏಕೆಂದರೆ ಟಿ 20 ಯಲ್ಲಿ ಏನಾಗುತ್ತದೆ ಎಂಬುದು ನಿರ್ದಿಷ್ಟ ದಿನದ ಮೇಲೆ ಅವಲಂಬಿತವಾಗಿರುತ್ತದೆ. ಆ ದಿನ ನೀವು ಅತ್ಯುತ್ತಮವಾಗಿರಬೇಕು" ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

  ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಸೋಲಿನ ಬಗ್ಗೆಯೂ ಮನ ಬಿಚ್ಚಿರುವ ರೋಹಿತ್ ಶರ್ಮಾ, "ಕೇವಲ 157 ರನ್​ಗಳನ್ನು ಬೆನ್ನಟ್ಟುವಾಗಿ ಪ್ರತಿಯೊಬ್ಬ ಬ್ಯಾಟ್ಸ್​ಮನ್​ ಸಹ ತನ್ನ ಪಾಲು ಏನು? ಎಂಬುದನ್ನು ಅರಿತು ಬ್ಯಾಟ್ ಮಾಡಬೇಕು. ಕೊನೆಯವರೆಗೆ ಸ್ಕ್ರೀಸ್​ನಲ್ಲಿದ್ದು, ಪಂದ್ಯವನ್ನು ಗೆಲ್ಲಿಸಿಕೊಡಬೇಕು. ಆದರೆ, ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಮುಂಬೈ ಸೋಲಲು ಬ್ಯಾಟ್ಸ್​ಮನ್​ಗಳ ನೀರಸ ಪ್ರದರ್ಶನವೇ ಕಾರಣ" ಎಂದು ತಿಳಿಸಿದ್ದಾರೆ.

  ಇದೇ ಸಂದರ್ಭದಲ್ಲಿ ತಂಡದ ವೇಗದ ಬೌಲರ್​ ಆಡಮ್ ಮಿಲ್ನೆ ಬಗ್ಗೆಯೂ ಮಾತನಾಡಿರುವ ರೋಹಿತ್ ಶರ್ಮಾ, "ಆಡಮ್ ಮಿಲ್ನೆ ನಿಜವಾಗಿಯೂ ಅತ್ಯಂತ ವೇಗವಾಗಿ ಬಾಲ್ ಎಸೆಯುತ್ತಿದ್ದಾರೆ. ಈ ಐಪಿಎಲ್​ ಟೂರ್ನಿ ಅವರಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಉತ್ತಮವಾಗಿ ಬೌಲ್​ ಮಾಡುವ ನಿರೀಕ್ಷೆ ಇದೆ" ಎಂದಿದ್ದಾರೆ.

  ಬಲಿಷ್ಠವಾಗಿದೆ ಕೆಕೆಆರ್​:

  ಇತರೆ ತಂಡಗಳಿಗೆ ಹೋಲಿಕೆ ಮಾಡಿದರೆ ಕೋಲ್ಕತ್ತಾ ನೈಟ್​ ರೈಡರ್ಸ್​ ಬಲಿಷ್ಠವಾಗಿಯೇ ಇದೆ. ಆರಂಭಿಕರಾಗಿ ಶುಭ್ಮನ್ ಗಿಲ್, ನಿತೀಶ್ ರಾಣಾ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಇಯಾನ್ ಮಾರ್ಗನ್, ತ್ರಿಪಾಠಿ, ದಿನೇಶ್ ಕಾರ್ತಿಕ್ ಯಾವುದೇ ಸಂದರ್ಭದಲ್ಲಿ ತಂಡಕ್ಕೆ ನೆರವಾಗಬಲ್ಲ ಬ್ಯಾಟ್ಸ್​ಮನ್​ಗಳಾದರೆ, ಕೊನೆಯಲ್ಲಿ ಆ್ಯಂಡ್ರೆ ರಸೆಲ್ ತಮ್ಮ ಭರ್ಜರಿ ಹೊಡೆತಗಳ ಮೂಲಕ ರನ್ ರೇಟ್​ ಏರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

  ಇನ್ನೂ ಬೌಲಿಂಗ್ ವಿಭಾಗದಲ್ಲಿ ಒಂದೆಡೆ ಪ್ರಸಿದ್ಧ ಕೃಷ್ಣ ವೇಗದ ಬೌಲಿಂಗ್​ನಲ್ಲಿ ಕಮಾಲ್ ಮಾಡುತ್ತಿದ್ದರೆ, ತಂಡದಲ್ಲಿ ಇಬ್ಬರು ಮಿಸ್ಟ್ರಿ ಸ್ಪಿನ್ನರ್​ಗಳಾದ ವರುಣ್ ಚಕ್ರವರ್ತಿ ಮತ್ತು ಸುನೀಲ್ ನರೈನ್ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ಕಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಲ್ಲದೆ, ಶಿವಮ್ ಮಾವಿ ಮತ್ತು ಆ್ಯಂಡ್ರೆ ರಸೆಲ್ ಸಹ ಉತ್ತಮ ಬೌಲಿಂಗ್ ಲಯದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಹೇಗೆ ನೋಡಿದರೂ ಎಲ್ಲಾ ರೀತಿಯಲ್ಲೂ ಕೆಕೆಆರ್​ ಬಲಿಷ್ಠ ತಂಡ ಹೌದು. ಆದರೆ, ಪಂದ್ಯದ ವೇಳೆ ಆಟಗಾರರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.

  ಲಯಕ್ಕೆ ಮರಳುತ್ತಾ ಮುಂಬೈ?

  ರನ್ನಿಂಗ್ ಚಾಂಪಿಯನ್ ಮುಂಬೈ ಈ ಆವೃತ್ತಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದೆ. ಸಿಎಸ್​ಕೆ ವಿರುದ್ಧ ಕೇವಲ 156 ರನ್​ಗಳ ಗುರಿಯನ್ನು ಬೆನ್ನಟ್ಟಲಾಗದೆ ಸೋಲನುಭವಿಸಿದ್ದು ಸಾಮಾನ್ಯವಾಗಿ ತಂಡದ ಆತ್ಮವಿಶ್ವಾಸವನ್ನು ಕದಡಿದೆ. ಕಳೆದ ಪಂದ್ಯದಲ್ಲಿ ರೋಹಿತ್​ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಗೆ ರೆಸ್ಟ್​ ನೀಡಲಾಗಿತ್ತು. ಮುಂಬೈ ಸೋಲಿಗೆ ಇದೂ ಒಂದು ಪ್ರಮುಖ ಕಾರಣವಾಗಿತ್ತು. ಆದರೆ, ಇಂದಿನ ಪಂದ್ಯಕ್ಕೆ ಇಬ್ಬರೂ ಲಭ್ಯರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: RCB problems- ಕೆಕೆಆರ್ ಎದುರು ಆರ್​ಸಿಬಿ ತಂಡ ಸೋತಿದ್ದು ಯಾಕೆ? ಬ್ರಿಯನ್ ಲಾರಾ ಕೊಟ್ಟ ಕಾರಣಗಳಿವು

  ಇನ್ನೂ ಆರಂಭಿಕರಾಗಿ ಕ್ವಿಂಟನ್ ಡಿಕಾಕ್ ಫಾರ್ಮ್​ನಲ್ಲಿದ್ದಾರೆ. ತಂಡಕ್ಕೆ ಉತ್ತಮ ಆರಂಭ ನೀಡುತ್ತಾರೆ. ಆದರೆ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸದೆ ಇರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್​ ಯಾದವ್, ಇಶಾನ್ ಕಿಶನ್, ಕಿರೋನ್ ಪೊಲಾರ್ಡ್​ ಪಾರ್ಮ್​ಗೆ ಮರಳಿದರೆ ಎಂತಹ ಪಂದ್ಯವನ್ನೂ ಬದಲಿಸುವ ಶಕ್ತಿ ಇರುವ ಆಟಗಾರರು. ಆದರೆ, ಈ ಎಲ್ಲಾ ಬ್ಯಾಟ್ಸ್​ಮನ್​ಗಳು ಇಂದು ಮತ್ತೆ ಫಾರ್ಮ್ ಮರಳುತ್ತಾರ? ಎಂಬುದು ಪ್ರಶ್ನೆ.

  ಇದನ್ನೂ ಓದಿ: DC vs SRH- ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ ನಿರಾಯಾಸ ಗೆಲುವು; ಮತ್ತೆ ಅಗ್ರಸ್ಥಾನಕ್ಕೇರಿದ ಪಂತ್ ಪಡೆ

  ಇನ್ನೂ ಬೌಲಿಂಗ್ ವಿಭಾಗದಲ್ಲಿ ನಂ.1 ಬೌಲರ್​ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್​ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ರಾಹುಲ್ ಚಾಹರ್​ ಲೆಗ್​ ಸ್ಪಿನ್ ನಿಜಕ್ಕೂ ಪರಿಣಾಮಕಾರಿಯಾಗಿದೆ. ಸಿಎಸ್​ಕೆ ಎದುರಿನ ಪಂದ್ಯದಲ್ಲಿ ಮುಂಬೈ ಬೌಲಿಂಗ್ ಪರಿಣಾಮಕಾರಿಯಾಗಿಯೇ ಇತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಎದುರುನೋಡಲಾಗುತ್ತಿದೆ. ಒಟ್ಟಾರೆ ಇಂದಿನ ಪಂದ್ಯ ಇಬ್ಬರ ಪಾಲಿಗೂ ನಿರ್ಣಾಯವಾಗಿದ್ದು, ಕ್ರಿಕೆಟ್ ಪ್ರೇಮಿಗಳ ನಡುವೆ ಕುತೂಹಲ ಮೂಡಿಸಿದೆ.
  Published by:MAshok Kumar
  First published: