ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧದ ಐಪಿಎಲ್ ಪಂದ್ಯದ ವೇಳೆ ನಡೆದ ನೋ ಬಾಲ್ ವಿವಾದ (No Ball Controversy) ಚರ್ಚೆಗೆ ಗ್ರಾಸವಾಗಿದೆ. ಶುಕ್ರವಾರ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 223 ರನ್ ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 36 ರನ್ ಅಗತ್ಯವಿತ್ತು. ಅದರಂತೆ ರೋವ್ಮನ್ ಪೊವೆಲ್ ಅವರು ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ನಂತರ ಮೂರನೇ ಎಸೆತವನ್ನು ಒಬೆಡ್ ಮೆಕಾಯ್ ಅವರು ಫುಲ್ ಟಾಸ್ ಹಾಕಿದರು. ಈ ಎಸೆತದಲ್ಲಿಯೂ ರೋವ್ಮನ್ ಪೊವೆಲ್ ಸಿಕ್ಸರ್ (Sixer) ಬಾರಿಸಿದರು. ಆದರೆ, ಚೆಂಡು ಸೊಂಟದ ಮೇಲಿದ್ದ ಕಾರಣ ಅದು ನೋ ಬಾಲ್ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟೀಮ್ ಮ್ಯಾನೇಜ್ಮೆಂಟ್ ವಾದಕ್ಕಿಳಿಯಿತು. ಪೆವಿಲಿಯನ್ನಲ್ಲಿ ರಿಷಭ್ ಪಂತ್ (Rishabh Pant) ಅಲ್ಲಿಂದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಡೆಲ್ಲಿ ಕೋಚ್ ಮೈದಾನಕ್ಕೆ ಬಂದು ಅಂಪೈರ್ ಜೊತೆ ವಾದಕ್ಕೆ ಇಳಿದಿದ್ದರು.
ರಿಷಭ್ ಪಂತ್ಗೆ 1.15 ಕೋಟಿ ರೂ ದಂಡ
ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಇನಿಂಗ್ಸ್ನ ಕೊನೆಯ ಓವರ್ನ ಮೂರನೇ ಎಸೆತವು ನೋಬಾಲ್ ಆಗಿತ್ತು ಎಂದು ಡಗೌಟ್ನಲ್ಲಿ ಕೂತಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಸಹ ಆಟಗಾರ ಶಾರ್ದೂಲ್ ಠಾಕೂರ್ ಆಗ್ರಹಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಮೈದಾನಕ್ಕೆ ತೆರಳಿ ತೀರ್ಪನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದರು. ಇದು ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಡೆಲ್ಲಿ ನಾಯಕ ರಿಷಭ್ ಪಂತ್ಗೆ ಪಂದ್ಯದ ಸಂಭಾವನೆಯ 100% ಅಂದರೆ 1.15 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ.
ಕೋಚ್ ಪ್ರವೀಣ್ ಆಮ್ರೆಗೆ ಒಂದು ಪಂದ್ಯ ನಿಷೇಧ!
ಶಾರ್ದೂಲ್ ಠಾಕೂರ್ಗೆ ಪಂದ್ಯದ ಸಂಭಾವನೆಯ 50% ದಂಡ ವಿಧಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದ ಸಹಾಯಕ ಕೋಚ್ ಪ್ರವೀಣ್ ಆಮ್ರೆಗೆ ಪಂದ್ಯದ ಸಂಭಾವನೆಯ 100% ದಂಡ ಹಾಗೂ ಒಂದು ಪಂದ್ಯದ ಮಟ್ಟಿಗೆ ನಿಷೇಧ ಹೇರಲಾಗಿದೆ. ಅಂಪೈರ್ ನೋಬಾಲ್ ತೀರ್ಪು ನೀಡಲು ನಿರಾಕರಿಸಿದ ಕೂಡಲೇ ಕೋಪಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ತಮ್ಮ ತಂಡದ ಸಹಾಯಕ ತರಬೇತುದಾರ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ಗಳ ಜತೆ ಚರ್ಚಿಸಲು ಕಳುಸಿದ್ದರು. ಹೀಗೆ ಏಕಾಏಕಿ ಮೈದಾನಕ್ಕೆ ಧಾವಿಸಿದ ಪ್ರವೀಣ್ ಆಮ್ರೆಗೆ ಇದೀಗ ಒಂದು ಪಂದ್ಯ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: W, W, 1, 4, W, W ಆಂಡ್ರೆ ರಸೆಲ್ 'ಮಿಸೈಲ್'ಗೆ ಪತರುಗುಟ್ಟಿದ ಗುಜರಾತ್ ಟೈಟನ್ಸ್!
ಅಂಪೈರ್ಗಳ ತಪ್ಪು ತಡೆಯಲು ಡಿಆರ್ಎಸ್ ಜಾರಿ!
ಅಂಪೈರಿಂಗ್ ವಿಚಾರದಲ್ಲಿ ಕೆಲವೊಮ್ಮೆ ತಪ್ಪುಗಳಾಗುವುದು ಸಹಜ. ವಿಶೇಷವಾಗಿ ಆನ್-ಫೀಲ್ಡ್ ಅಂಪೈರ್ಗಳ ವಿಷಯಕ್ಕೆ ಬಂದಾಗ ಅವರು ನೈಜ ಸಮಯದಲ್ಲಿ ನಮ್ಮಂತೆಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದಾಗ ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ, ಇದನ್ನು ತಡೆಯಲು ಡಿಆರ್ಎಸ್ ಜಾರಿಗೆ ತರಲಾಗಿದೆ. ಇದಲ್ಲದೇ ಈ ಬಾರಿಯ ಐಪಿಎಲ್ನಲ್ಲಿ ಪ್ರತಿ ತಂಡಕ್ಕೆ ಇನ್ನಿಂಗ್ಸ್ಗೆ ಎರಡು ಬಾರಿ ಡಿಆರ್ಎಸ್ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಬಟ್ಲರ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿ, ಕೊಹ್ಲಿ ಸಾಧನೆಯನ್ನೂ ಹಿಂದಿಕ್ತಾರಾ ಜೋಸ್ ಬಟ್ಲರ್?
ರಿಷಭ್ ಪಂತ್ ಐಪಿಎಲ್ನ ಎರಡನೆ ಹಂತದ ಪ್ರಮಾದ ಎಸಗಿರುವುದರಿಂದಾಗಿ ಅವರಿಗೆ ಪಂದ್ಯದ ಸಂಭಾವನೆಯ 100% ದಂಡ ವಿಧಿಸಲಾಗಿದೆ. ಇನ್ನು ಐಪಿಎಲ್ ಆಡಳಿತ ಮಂಡಳಿಯು ವಿಧಿಸಿದ ಶಿಕ್ಷೆಯನ್ನು ರಿಷಭ್ ಪಂತ್ ಒಪ್ಪಿಕೊಂಡಿದ್ದಾರೆ. ಮುಂದೆ ಈ ರೀತಿಯ ತಪ್ಪು ಮಾಡದಂತೆ ಎಚ್ಚರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ