Umran Malik- ನಟರಾಜನ್ ಸ್ಥಾನಕ್ಕೆ ನೆಟ್ ಬೌಲರ್ಗೆ ಅವಕಾಶ ಕೊಟ್ಟ ಹೈದರಾಬಾದ್ ಸನ್ರೈಸರ್ಸ್
Jammu Kashmir pacer Umran Malik- ಜಮ್ಮು ಮತ್ತು ಕಾಶ್ಮೀರ ರಾಜ್ಯದ ಉಮ್ರಾನ್ ಮಲಿಕ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ನೆಟ್ ಬೌಲರ್ ಆಗಿ ಯುಎಇಗೆ ತೆರಳಿದ್ದರು. ನಟರಾಜನ್ ಅವರಿಗೆ ಕೋವಿಡ್ ಇರುವ ಹಿನ್ನೆಲೆಯಲ್ಲಿ ತಂಡದಲ್ಲಿ ಆಡುವ ಯೋಗ ಅವರಿಗೆ ಒದಗಿಬಂದಿದೆ.
ಹೈದರಾಬಾದ್, ಸೆ. 24: ಐಪಿಎಲ್ ಅಂಕಪಟ್ಟಿಯಲ್ಲಿ ತಳದಲ್ಲಿರುವ ಹೈದರಾಬಾದ್ ಸನ್ ರೈಸರ್ಸ್ ತಂಡ (Sunrisers Hyderabad) ಸಂಕಷ್ಟದಲ್ಲಿದೆ. ಜೊತೆಗೆ ಹಲವು ಆಟಗಾರರ ಅನುಪಸ್ಥಿತಿಯೂ ಕಾಡುತ್ತಿದೆ. ತಂಡದ ಪ್ರಮುಖ ವೇಗದ ಬೌಲರ್ ಟಿ ನಟರಾಜನ್ (T Natarajan) ಅವರು ಕೋವಿಡ್ ಸೋಂಕಿಗೊಳಗಾಗಿ ಕ್ವಾರಂಟೈನ್ನಲ್ಲಿದ್ದಾರೆ. ಅವರ ಸ್ಥಾನಕ್ಕೆ ತಾತ್ಕಾಲಿಕವಾಗಿ ಉಮ್ರಾನ್ ಮಲಿಕ್ ಅವರನ್ನ ಹೈದರಾಬಾದ್ ತಂಡದಲ್ಲಿ ಅವಕಾಶ ಕೊಡಲಾಗಿದೆ. ಜಮ್ಮು ಕಾಶ್ಮೀರ ರಾಜ್ಯದ ವೇಗದ ಬೌಲರ್ ಆಗಿರುವ ಉಮ್ರಾನ್ ಮಲಿಕ್ (Umran Malik) ಅವರು ಸನ್ ರೈಸರ್ಸ್ ಹೈದರಾಬಾದ್ನ ನೆಟ್ ಬೌಲರ್ ಕೂಡ ಆಗಿದ್ದಾರೆ. ಕಾಶ್ಮೀರ ರಾಜ್ಯದ ಪರ ಅವರು ಒಂದು ಟಿ20 ಪಂದ್ಯವನ್ನ ಮಾತ್ರ ಆಡಿದ್ದಾರೆ. ಕೆಲ ಲಿಸ್ಟ್ ಎ ಪಂದ್ಯಗಳಲ್ಲೂ ಆಡಿದ ಅನುಭವ ಹೊಂದಿದ್ಧಾರೆ. ರಣಜಿಯಲ್ಲಿ ಆಡಿಲ್ಲದ ಒಬ್ಬ ಆಟಗಾರನಿಗೆ ಹೈದರಾಬಾದ್ ಅವಕಾಶ ಕೊಟ್ಟು ಅಚ್ಚರಿ ಗೊಳಿಸಿದೆ.
ಟಿ ನಟರಾಜನ್ ಅವರು ಕೋವಿಡ್-19 ನಿಂದ ಚೇತರಿಸಿಕೊಳ್ಳುವವರೆಗೂ ಉಮ್ರಾನ್ ಮಲಿಕ್ ಅವರು ತಂಡದಲ್ಲಿ ಇರುತ್ತಾರೆ. ಐಪಿಎಲ್ ನಿಯಮದ ಪ್ರಕಾರ ಮೂಲ ಆಟಗಾರ ಮರಳುವವರೆಗೂ ಅಲ್ಪಾವಧಿ ಬದಲೀ ಆಟಗಾರನನ್ನ ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ಇದೆ. ಹೀಗಾಗಿ, ನಟರಾಜನ್ ಅವರು ವಾಪಸ್ ಬರುವವರೆಗೂ ಉಮ್ರಾನ್ ಬೌಲರ್ ಅವರು ಕೆಲ ಪಂದ್ಯಗಳನ್ನ ಹೈದರಾಬಾದ್ ಪರ ಆಡುವ ನಿರೀಕ್ಷೆ ಇದೆ.
ಸೆ. 22ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಟಿ ನಟರಾಜನ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಅವರ ಜೊತೆ ವಿಜಯ್ ಶಂಕರ್ ಸೇರಿದಂತೆ ಇನ್ನೂ ಆರು ಮಂದಿಯನ್ನ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಐಪಿಎಲ್ನಲ್ಲಿ ಇದೂವರೆಗೂ ಒಂದು ಪಂದ್ಯ ಮಾತ್ರ ಗೆದ್ದಿದೆ. ಎಂಟು ಪಂದ್ಯಗಳ ಪೈಕಿ ಏಳು ಪಂದ್ಯಗಳನ್ನ ಸೋತಿದೆ. ಯುಎಇಯಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಅದು ಹೀನಾಯ ಸೋಲನುಭವಿಸಿದೆ. ನಾಕೌಟ್ ಹಂತ ತಲುಪುವ ಅವಕಾಶ ಬಹುತೇಕ ಮುಚ್ಚಿದೆ. ಸೆ. 25, ಅಂದರೆ ನಾಳೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಪಂಜಾಬ್ ಕಿಂಗ್ಸ್ ತಂಡದ ಸವಾಲು ಇದೆ. ಪಂಜಾಬ್ ಕಿಂಗ್ಸ್ ತಂಡವೂ ಅಂಕಪಟ್ಟಿಯಲ್ಲಿ ತಳದಲ್ಲಿದೆ. ಆದರೆ 6 ಅಂಕಗಳನ್ನ ಹೊಂದಿರುವ ಪಿಬಿಕೆಎಸ್ಗೆ ನಾಕೌಟ್ ತಲುಪುವ ಅವಕಾಶ ಇನ್ನೂ ಇದೆ. ನಾಳೆಯ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಅವರಿಗೆ ಆಡಲು ಅವಕಾಶ ಸಿಗುವ ನಿರೀಕ್ಷೆ ಇದೆ. ಜಮ್ಮು ಕಾಶ್ಮೀರ ರಾಜ್ಯ ತಂಡದ ಪರ ನಾಲ್ಕು ವಿಕೆಟ್ಗಳನ್ನ ಪಡೆದಿರುವ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರಿಗೆ ತಮ್ಮ ಪ್ರತಿಭೆಯನ್ನ ದೊಡ್ಡ ವೇದಿಕೆಯಲ್ಲಿ ಜಾಹೀರುಗೊಳಿಸುವ ಸುವರ್ಣಾವಕಾಶವಂತೂ ಸಿಕ್ಕಿದೆ.
ಐಪಿಎಲ್ನಲ್ಲಿ ಈ ಹಿಂದೆ ಅನೇಕ ಎಲೆಮರೆಕಾಯಿಯಂಥ ಆಟಗಾರರು ಅನಾವರಣಗೊಂಡಿದ್ದಿದೆ. ರಾಜ್ಯ ತಂಡದಲ್ಲಿ ಆಡದೇ ಇರುವ ಆಟಗಾರರು ಐಪಿಎಲ್ನ ದೊಡ್ಡ ವೇದಿಕೆಯಲ್ಲಿ ಆರ್ಭಟಿಸಿ ಗಮನ ಸೆಳೆದಿದ್ದಿದೆ. ಜಗದೀಶ್ ಸುಚಿತ್, ಕಾರ್ಯಪ್ಪ ಮೊದಲಾದ ಕರ್ನಾಟಕದ ಕ್ರಿಕೆಟಿಗರು ಐಪಿಎಲ್ ಮೂಲಕ ಹೆಸರುವಾಸಿಯಾಗಿದ್ಧಾರೆ. ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಆಟಗಾರರಿಗೆ ನೇರವಾಗಿ ಐಪಿಎಲ್ ತಂಡಗಳ ಗಮನ ಸೆಳೆಯುವ ಅವಕಾಶವಂತೂ ಇದೆ. ಹಾಗೆಯೇ, ತಮಿಳುನಾಡಿನ ಕ್ರಿಕೆಟ್ ಲೀಗ್ ಮೂಲಕ ಬೆಳಕಿಗೆ ಬಂದಿರುವ ಆಟಗಾರರಿದ್ದಾರೆ. ಅಂಥವರಲ್ಲಿ ಮೊಹಮ್ಮದ್ ಅಜರುದ್ದೀನ್ ಕೂಡ ಒಬ್ಬರು. ಸ್ಫೋಟಕ ಬ್ಯಾಟರ್ ಆಗಿರುವ ಅಜರುದ್ದೀನ್ ಅವರು ಆರ್ಸಿಬಿಯಲ್ಲಿ ಆಡುತ್ತಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ