ನನ್ನ ಬಾಲ್​ನಲ್ಲಿ ಸ್ಪೀಡ್ ಇಲ್ಲ, ಸ್ಪಿನ್, ಸ್ವಿಂಗ್ ಇಲ್ಲ, ಆದರೆ, ನಂಗೆ ತಲೆ ಇದೆ ಎಂದ ಸ್ಟಾರ್ ಬೌಲರ್

Kieron Pollard- ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಕೀರಾನ್ ಪೊಲಾರ್ಡ್ ತಮ್ಮ ಬೌಲಿಂಗ್​ನಲ್ಲಿ ವೇಗ ಇಲ್ಲವೆಂಬ ಟೀಕೆಗೆ ಉತ್ತರ ನೀಡಿದ್ಧಾರೆ. ನನ್ನ ಬಾಲ್​ನಲ್ಲಿ ಸ್ಪೀಡ್, ಸ್ಪಿನ್, ಸ್ವಿಂಗ್ ಇರಲ್ಲ, ಆದರೆ, ನಂಗೆ ತಲೆ ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ಧಾರೆ.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

 • Cricketnext
 • Last Updated :
 • Share this:
  ದುಬೈ, ಸೆ. 29: ವೆಸ್ಟ್ ಇಂಡೀಸ್ ತಂಡದಲ್ಲಿ ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಕ್ರಿಕೆಟಿಗರಿದ್ಧಾರೆ. ವಿಶ್ವದ ಯಾವುದೇ ಟಿ20 ತಂಡಕ್ಕೂ ಇವರಿಗೆ ಬೇಡಿಕೆ ಇದೆ. ಅಂತೆಯೇ, ಕ್ರಿಸ್ ಗೇಲ್ (Chris Gayle), ಕೀರಾನ್ ಪೊಲಾರ್ಡ್ (Kieron Pollard), ಆಂಡ್ರೆ ರಸೆಲ್ (Andre Russel), ಸುನೀಲ್ ನರೈನ್ (Sunil Narine), ಎವಿನ್ ಲೆವಿಸ್ (Evin Lewis) ಮೊದಲಾದ ಆಟಗಾರರು ಅನೇಕ ದೇಶಗಳ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಾರೆ. ಟಿ20 ಕ್ರಿಕೆಟ್​ನಲ್ಲಿ ಕ್ರಿಸ್ ಗೇಲ್ ಅವರನ್ನ ಮೀರಿಸುವವರು ಮತ್ತೊಬ್ಬರಿಲ್ಲ. ಈಗೇನೋ ಅವರು ಕಳೆಗುಂದಿದ್ಧಾರೆ. ಆದರೆ, ಅವರು ಗಳಿಸಿರುವ ಶತಕ, ರನ್ ಯಾರಿಂದಲೂ ದಾಟಲು ಸಾಧ್ಯವಿಲ್ಲವೇನೋ, ಅಂತೆಯೇ, ಕೀರಾನ್ ಪೊಲಾರ್ಡ್ (Kieron Pollard) ಕೂಡ ಟಿ20 ಕ್ರಿಕೆಟ್​ನಲ್ಲಿ ತಮ್ಮದೇ ಛಾಪು ಮೂಡಿಸಿದವರು. ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದ ಪೊಲಾರ್ಡ್ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಆಲ್​ರೌಂಡ್ ಆಟ ಪ್ರದರ್ಶಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

  ಕೀರಾನ್ ಪೊಲಾರ್ಡ್ ಅವರು ಈ ವೇಳೆ ಅಪರೂಪದ ಮೈಲಿಗಲ್ಲು ಕೂಡ ಮುಟ್ಟಿದರು. ಟಿ20 ಕ್ರಿಕೆಟ್​ನಲ್ಲಿ 300 ವಿಕೆಟ್ ಹಾಗೂ 10 ಸಾವಿರ ರನ್ ಎರಡನ್ನೂ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿದರು. ಈ ಬಗ್ಗೆ ಮಾತನಾಡಿದ ಅವರು, “ಈ ದಾಖಲೆ ಬಹಳ ಮುಖ್ಯ” ಎಂದು ಬಣ್ಣಿಸಿದರು. “ನನಗೆ ಅವಕಾಶ ಸಿಕ್ಕಾಗೆಲ್ಲಾ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತೇನೆ. ತಂಡಕ್ಕೆ ಏನು ಅಗತ್ಯವೋ ಅದನ್ನ ಕೊಡಲು ನನಗೆ ಖುಷಿಯಾಗುತ್ತದೆ. ಕೆಎಲ್ ರಾಹುಲ್ ಅವರ ವಿಕೆಟ್ ನನ್ನ ಪಾಲಿಗೆ 300ನೇ ವಿಕೆಟ್ ಆಗಿದ್ದು ಸಂತಸ ಹೆಚ್ಚಿಸಿತು. ಈ 300 ವಿಕೆಟ್ ಮೈಲಿಗಲ್ಲು ನಿಜಕ್ಕೂ ವಿಶೇಷವಾದುದು” ಎಂದು ಪೊಲಾರ್ಡ್ ಹೇಳಿದರು.

  ಕೀರಾನ್ ಪೊಲಾರ್ಡ್ ವೇಗದ ಬೌಲರ್ ಆದರೂ ಆ ದೇಶದ ಸಾಂಪ್ರದಾಯಿಕ ದೈತ್ಯ ವೇಗಿಗಳಂತಲ್ಲ. ವಿಂಡೀಸ್ ಬೌಲರ್​ಗಳೆಂದರೆ ವೇಗವಾಗಿ ಬಾಲ್​ಗಳನ್ನ ಉಗುಳುವ ರಕ್ಕಸರೆಂದೇ ಮನಸಿಗೆ ತೋರುತ್ತದೆ. ಪೊಲಾರ್ಡ್ ಇದಕ್ಕೆ ತುಸು ಭಿನ್ನ. ಇವರ ಬೌಲಿಂಗ್​ನಲ್ಲಿ ವೇಗ ಇರುವುದಿಲ್ಲ, ಆದರೆ, ವೇರಿಯೇಶನ್ ಇರುತ್ತದೆ. ಈ ಬಗ್ಗೆ ಮಾತನಾಡಿದ ಪೊಲಾರ್ಡ್, “ನನ್ನ ಬೌಲಿಂಗ್​ನಲ್ಲಿ ವೇಗ ಇಲ್ಲ, ಸ್ಪಿನ್ ಇಲ್ಲ, ಸ್ವಿಂಗ್ ಕೂಡ ಆಗುವುದಿಲ್ಲ. ಆದರೆ, ನನಗೆ ಸ್ವಲ್ಪಮಟ್ಟಿಗೆ ತಲೆ ಇದೆ” ಎಂದು ತಿಳಿಸುತ್ತಾರೆ.

  ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ 2 ವಿಕೆಟ್ ಪಡೆದಿದ್ದರು. ಆದರೆ, ಅವರಿಗೆ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿದ್ದು ಕೇವಲ 2 ಓವರ್ ಮಾತ್ರ. ಇದು ಸಾಕಷ್ಟು ಅಚ್ಚರಿ ಮೂಡಿಸಿತು. ಈ ಬಗ್ಗೆ ಮಾಧ್ಯಮದವರು ಪೊಲಾರ್ಡ್ ಅವರಿಗೆ, ಇನ್ನೊಂದು ಓವರ್ ಬೌಲ್ ಮಾಡಬೇಕೆನಿಸಿತ್ತಾ ಎಂದು ಕೇಳಿದಾಗ, “ಅಗತ್ಯ ಇದ್ದಿದ್ದರೆ ರೋಹಿತ್ ಶರ್ಮಾ ನನಗೆ ಇನ್ನೊಂದು ಓವರ್ ಬೌಲ್ ಮಾಡುವಂತೆ ಚೆಂಡನ್ನು ಕೊಡುತ್ತಿದ್ದರು. ಆದರೆ, ಕೆಲವೊಮ್ಮೆ ನೀವು ಉತ್ತಮ ಸ್ಥಿತಿಯಲ್ಲಿದ್ಧಾಗಲೇ ಓಟ ನಿಲ್ಲಿಸಬೇಕಾಗುತ್ತದೆ” ಎಂದು ಉತ್ತರಿಸಿದರು.

  ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಅವರು ಪಡೆದ ಎರಡು ವಿಕೆಟ್​ಗಳು ಬಿಗ್ ವಿಕೆಟ್ಸ್ ಆಗಿದ್ದವು. ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಅವರನ್ನ ಬಲಿತೆಗೆದುಕೊಂಡಿದ್ದರು. ಗೆಲ್ಲಲು 136 ರನ್ ಗುರಿಯನ್ನ ಬೆನ್ನತ್ತುವಾಗ ಮುಂಬೈ ತಂಡ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್​ಗೆ ಬಂದ ಪೊಲಾರ್ಡ್ 7 ಬಾಲ್​ನಲ್ಲಿ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅವರ ಈ ಆಟಕ್ಕೆ ಪಂದ್ಯ ಪುರುಷೋತ್ತಮ ಗೌರವ ಸಿಕ್ಕಿತು.

  ಇದನ್ನೂ ಓದಿ: MS Dhoni- ಎಂಎಸ್ ಧೋನಿಗೆ ಇದೇ ಕೊನೆಯ ಐಪಿಎಲ್ ಟೂರ್ನಿಯಾ? ಮಾಜಿ ಕ್ರಿಕೆಟಿಗರೊಬ್ಬರ ಅನುಮಾನ

  “ತಂಡಕ್ಕೆ ಎರಡು ಪಾಯಿಂಟ್ ಪಡೆಯುವುದು ಮುಖ್ಯ. ಚೇಸಿಂಗ್ ಮಾಡಲು 19 ಓವರ್ ಬೇಕಾಯಿತು. ಆದರೆ, ಅದಕ್ಕಿಂತ ನಮಗೆ 2 ಪಾಯಿಂಟ್ ಬಂದಿದ್ದೇ ಹೆಚ್ಚು ಮುಖ್ಯ. ಈ ಗೆಲುವು ಮುಂಬೈ ಇಂಡಿಯನ್ಸ್ ತಂಡದ ಡ್ರೆಸಿಂಗ್ ರೂಮ್​ನಲ್ಲಿ ಉತ್ಸಾಹ ಮೂಡಿಸಿದೆ” ಎಂಬುದು ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಅವರ ಅನಿಸಿಕೆ.

  ಮುಂಬೈ ಇಂಡಿಯನ್ಸ್ ತಂಡ ಯುಎಇಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವು ಪಡೆದಿದೆ. ಹ್ಯಾಟ್ರಿಕ್ ಸೋಲುಗಳ ಬಳಿಕ ಗೆಲುವಿನ ನಗೆ ಬೀರಿದೆ. ಪಾಯಿಂಟ್ ಟೇಬಲ್​ನಲ್ಲಿ ಐದನೇ ಸ್ಥಾನಕ್ಕೇರಿದೆ. ಅಕ್ಟೋಬರ್ 2ರಂದು ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಸೆಣಸಲಿದೆ. 11 ಪಂದ್ಯಗಳಿಂದ 10 ಅಂಕ ಹೊಂದಿರುವ ಮುಂಬೈ ತಂಡಕ್ಕೆ ಈ ಪಂದ್ಯವೂ ಬಹಳ ಮಹತ್ವದ್ದಾಗಿದೆ.
  Published by:Vijayasarthy SN
  First published: