HOME » NEWS » Ipl » MUMBAI INDIANS COACH MAHELA JAYAWARDENE GIVES REASON BEHIND GETTING ARJUN TENDULKAR SNVS

Arjun Tendulkar –ಅರ್ಜುನ್ ತೆಂಡೂಲ್ಕರ್ ಖರೀದಿಸಲು ಸಚಿನ್ ಪ್ರಭಾವ ಕಾರಣವಾ? ಜಹೀರ್, ಜಯವರ್ದನೆ ಹೇಳಿದ್ದಿದು

ಅರ್ಜುನ್ ತೆಂಡೂಲ್ಕರ್​ನ ಹೆಗಲಿಗೆ ಅಪ್ಪನ ಹೆಸರಿನ ಭಾರ ಏರಿದೆ. ಇದರ ಜೊತೆಯೇ ಸಾಗುತ್ತಾ ಅತ್ಯುನ್ನತ ಮಟ್ಟದಲ್ಲಿ ಆಡುವಷ್ಟು ಪ್ರತಿಭೆ ತನ್ನಲ್ಲಿ ಇದೆ ಎಂಬುದನ್ನು ಸಾಬೀತು ಮಾಡುವ ಜವಾಬ್ದಾರಿ ಅವರಿಗೆ ಇದೆ ಎಂದು ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ದನೆ ಮತ್ತು ಜಹೀರ್ ಖಾನ್ ಹೇಳುತ್ತಾರೆ.

cricketnext
Updated:February 19, 2021, 2:54 PM IST
Arjun Tendulkar –ಅರ್ಜುನ್ ತೆಂಡೂಲ್ಕರ್ ಖರೀದಿಸಲು ಸಚಿನ್ ಪ್ರಭಾವ ಕಾರಣವಾ? ಜಹೀರ್, ಜಯವರ್ದನೆ ಹೇಳಿದ್ದಿದು
ಅರ್ಜುನ್ ತೆಂಡೂಲ್ಕರ್
  • Cricketnext
  • Last Updated: February 19, 2021, 2:54 PM IST
  • Share this:
ಮುಂಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅಚ್ಚರಿ ಹುಟ್ಟಿಸಿದ ಅನೇಕ ಖರೀದಿಗಳಲ್ಲಿ ಅರ್ಜುನ್ ತೆಂಡೂಲ್ಕರ್ ಅವರದ್ದೂ ಒಂದು. ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರನ್ನ ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂ ಮೂಲಬೆಲೆಗೇ ಖರೀದಿ ಮಾಡಿತು. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಅಷ್ಟೇನೂ ಗಮನ ಸೆಳೆಯುವಂಥ ಪ್ರದರ್ಶನ ನೀಡದ ಅರ್ಜುನ್ ತೆಂಡೂಲ್ಕರ್ ಅವರು ಹರಾಜು ಪಟ್ಟಿಗೆ ಆಯ್ಕೆಯಾಗಿದ್ದೇ ಅಚ್ಚರಿ ಎಂಬಂತೆ ಈ ಮುಂಚೆ ಅನೇಕರು ಹುಬ್ಬೇರಿಸಿದ್ದರು. ಈಗ ಮುಂಬೈ ಇಂಡಿಯನ್ಸ್ ತಂಡ ಈತನನ್ನು ಖರೀದಿಸಿದ್ದು ಫಿಕ್ಸಿಂಗ್ ಎಂದೇ ಅನೇಕರು ಟೀಕಿಸಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಕಾರ್ಯಾಚರಣೆ ನಿರ್ದೇಶಕ ಜಹೀರ್ ಖಾನ್ ಮತ್ತು ಕೋಚ್ ಮಹೇಲಾ ಜಯವರ್ದನೆ ಅವರು ಈ ಆರೋಪಗಳನ್ನ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅವರ ಕ್ರಿಕೆಟ್ ಪ್ರತಿಭೆಗಳನ್ನ ಪರಿಗಣಿಸಿಯೇ ಖರೀದಿ ಮಾಡಲಾಗಿದೆ ಎಂದು ಅವರುಗಳು ಸ್ಪಷ್ಟಪಡಿಸಿದ್ಧಾರೆ.

“ಅರ್ಜುನ್ ಅವರನ್ನ ತಂಡಕ್ಕೆ ಸೇರಿಸಿಕೊಂಡಿರುವುದು ನಿಜಕ್ಕೂ ಸ್ವಾಗತಾರ್ಹ. ಕಳೆದ ಕೆಲ ವರ್ಷಗಳಲ್ಲಿ ಅವರು ನೆಟ್ ಬೌಲರ್ ಆಗಿ ಬಹಳ ಪರಿಶ್ರಮಪಟ್ಟಿದ್ಧಾರೆ. ಯುಎಇಯಲ್ಲಿ ನಿಜಕ್ಕೂ ಶ್ರಮ ಹಾಕಿದ್ದಾರೆ” ಎಂದು ನಿನ್ನೆ ಹರಾಜು ಪ್ರಕ್ರಿಯೆ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ತಿಳಿಸಿದರು.

“ನಾವು ಪ್ರತಿಭೆಯನ್ನ ಪರಿಗಣಿಸಿಯೇ ಆಯ್ಕೆ ಮಾಡಿದ್ದು. ತಂದೆ ಸಚಿನ್ ಹೆಸರು ಅರ್ಜುನ್ ಜೊತೆಗೆ ಅಂಟಿಕೊಂಡಿರುವುದು ಹೌದು. ಆದರೆ, ಅರ್ಜುನ್ ತೆಂಡೂಲ್ಕರ್ ಅದೃಷ್ಟಕ್ಕೆ ಈತ ಬ್ಯಾಟ್ಸ್​ಮನ್ ಆಗದೇ ಬೌಲರ್ ಆಗಿದ್ದಾರೆ. ಅರ್ಜುನ್​ ಎಂಥ ಬೌಲರ್ ಎಂದು ಸಚಿನ್ ಹೆಮ್ಮೆ ಪಡಬಹುದು” ಎಂದು ಮಾಜಿ ಶ್ರೀಲಂಕಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಡ ಆದ ಮಹೇಲಾ ಹೇಳಿದರು.

ಇದನ್ನೂ ಓದಿ: IPL - ಆರ್​ಸಿಬಿಯಲ್ಲಿ ನೆಟ್ ಬೌಲರ್ ಆಗಿದ್ದ ಈ ಟೆಂಪೋ ಡ್ರೈವರ್​ನ ಮಗ ಈಗ ಒಳ್ಳೆಯ ಮೊತ್ತಕ್ಕೆ ಸೇಲ್

“ಮುಂಬೈ ಪರ ಆಡಲು ಪ್ರಾರಂಭಿಸುತ್ತಿರುವ ಅರ್ಜುನ್ ತೆಂಡೂಲ್ಕರ್​ಗೆ ಇದು ಕಲಿಕಾ ಅವಕಾಶವಾಗಿದೆ. ಆಟದ ಮರ್ಮಗಳನ್ನ ಕಲಿಯುತ್ತಾ ಅವರು ಬೆಳೆಯುತ್ತಾರೆ. ಅವರು ಕಿರಿಯ ವಯಸ್ಸಿನವರಾದರೂ ನಿಶ್ಚಿತ ಗುರಿ ಇರುವ ವ್ಯಕ್ತಿ. ಅವರಿಗೆ ಹೆಚ್ಚು ಒತ್ತಡ ಹೇರದೆ ಆಟದಲ್ಲಿ ಪ್ರಗತಿ ಸಾಧಿಸಲು ಸ್ವಲ್ಪ ಕಾಲಾವಕಾಶ ಕೊಡಬೇಕಾಗುತ್ತದೆ. ಆ ಕೆಲಸವನ್ನ ನಾವು ಮಾಡುತ್ತೇವೆ” ಎಂಬುದು ಭಾರತ ಕ್ರಿಕೆಟ್ ತಂಡದ ಮಾಣಿಕ್ಯ ಸಚಿನ್ ತೆಂಡೂಲ್ಕರ್ ಅವರ ಮಗನ ಬಗ್ಗೆ ಮುಂಬೈ ಕೋಚ್ ಅವರ ಅನಿಸಿಕೆ.

ಇದೇ ಅಭಿಪ್ರಾಯವನ್ನೂ ಜಹೀರ್ ಖಾನ್ ವ್ಯಕ್ತಪಡಿಸಿದ್ದಾರೆ. “ಅರ್ಜುನ್ ತೆಂಡೂಲ್ಕರ್​ನ ಹೆಗಲಿಗೆ ಅಪ್ಪನ ಹೆಸರಿನ ಭಾರ ಇದೆ. ಆದರೆ ಜೀವನದಲ್ಲಿ ಅದೆಲ್ಲವೂ ಇದ್ದದ್ದೇ. ಆದರೆ, ನಮ್ಮ ತಂಡದಲ್ಲಿ ಒಳ್ಳೆಯ ಪ್ರತಿಭೆಗಳು ಬಂದಿದ್ದಾರೆ. ಅವರಲ್ಲಿ ಅರ್ಜುನ್ ಕೂಡ ಒಬ್ಬರು. ನೆಟ್​ನಲ್ಲಿ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದು ಬೌಲಿಂಗ್ ಕ್ಷೇತ್ರದ ಕೆಲ ಟ್ರಿಕ್​ಗಳನ್ನ ಕಲಿಸಿಕೊಟ್ಟಿದ್ದೇನೆ. ಅರ್ಜುನ್ ಒಬ್ಬ ಪರಿಶ್ರಮಿ ಹುಡುಗನಾಗಿದ್ದು, ಕಲಿಯುವ ತುಡಿತ ಹೊಂದಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಸಂಕೇತ” ಎಂದು ಮುಂಬೈ ಇಂಡಿಯನ್ಸ್​ನ ಕ್ರಿಕೆಟ್ ವ್ಯವಹಾರದ ನಿರ್ದೇಶಕರಾಗಿರುವ ಜಹೀರ್ ಹೇಳಿದ್ದಾರೆ.

ಇದನ್ನೂ ಓದಿ: IPL 2021 Full squads: ಐಪಿಎಲ್ ಹರಾಜಿನ ನಂತರ ಪ್ರತಿ ತಂಡ ಹೀಗಿದೆ..!22 ವರ್ಷದ ಅರ್ಜುನ್ ತೆಂಡೂಲ್ಕರ್ ಆಲ್​ರೌಂಡರ್ ಆದರೂ ಅವರು ಪ್ರಮುಖವಾಗಿ ಎಡಗೈ ವೇಗದ ಬೌಲರ್ ಆಗಿದ್ಧಾರೆ. ವಯೋಮಿತಿ ಕ್ರಿಕೆಟ್ ಟೂರ್ನಿಗಳಿಂದ ಬೆಳೆದು ಬಂದು ಮುಂಬೈ ರಾಜ್ಯ ಕ್ರಿಕೆಟ್ ತಂಡದಲ್ಲೂ ಸ್ಥಾನ ಪಡೆದಿರುವ ಅರ್ಜುನ್ ತೆಂಡೂಲ್ಕರ್ ಅವರಿಗೆ ಈಗ ಇಡೀ ವಿಶ್ವದ ದೃಷ್ಟಿ ಸೆಳೆಯಲು ಐಪಿಎಲ್​ನ ವೇದಿಕೆ ಸಿಕ್ಕಿದೆ. ಇದನ್ನು ಬಳಸಿ ತನ್ನಲ್ಲಿ ಪ್ರತಿಭೆಯನ್ನ ಸಾಬೀತುಪಡಿಸುವ ಹೊಣೆಗಾರಿಕೆ ಈಗ ಅವರ ಹೆಗಲಿಗೇರಿದೆ. ಜಹೀರ್ ಖಾನ್ ಕೂಡ ಇದೇ ಮಾತನ್ನ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈನ ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದರ ಪಂದ್ಯದಲ್ಲಿ 31 ಎಸೆತದಲ್ಲಿ 77 ರನ್ ಚಚ್ಚಿದ್ದಲ್ಲದೆ 41 ರನ್ನಿತ್ತು 3 ವಿಕೆಟ್ ಕೂಡ ಪಡೆದು ಆಲ್​ರೌಂಡ್ ಪ್ರದರ್ಶನ ನೀಡಿದ್ದರು. ಇತರ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ದೊಡ್ಡ ಸ್ಕೋರ್​ಗಳನ್ನ ಗಳಿಸದಿದ್ದರೂ ಹಲವು ಪಂದ್ಯಗಳಲ್ಲಿ ತಂಡಕ್ಕೆ ಉತ್ತಮ ಕೊಡುಗೆಗಳನ್ನ ನೀಡಿ ಟೀಮ್ ಮ್ಯಾನ್ ಎನಿಸಿದ್ಧಾರೆ.
Published by: Vijayasarthy SN
First published: February 19, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories